ಮುಂಬೈ: ಇತ್ತೀಚಿಗಷ್ಟೇ ಬಾಲಿವುಡ್ ನಲ್ಲಿ ಡ್ರಗ್ ಮಾಫಿಯಾ ಸಕ್ರಿಯವಾಗಿದೆ ಎಂದು ಹೇಳಿಕೆ ನೀಡಿದ್ದ ಬಾಲಿವುಡ್ ಕ್ವೀನ್ ಕಂಗನಾ ರನೌತ್ ಅವರು, ನಟ 'ರಣವೀರ್ ಸಿಂಗ್, ರಣಬೀರ್ ಕಪೂರ್, ಅಯಾನ್ ಮುಖರ್ಜಿ ಹಾಗೂ ವಿಕ್ಕಿ ಕೌಶಿಕ್ ಅವರು ಡ್ರಗ್ ಪರೀಕ್ಷೆಗೆ ತಮ್ಮ ರಕ್ತದ ಮಾದರಿಗಳನ್ನು ನೀಡಬೇಕು ಎಂದು ಕೇಳಿಕೊಂಡಿದ್ದಾರೆ.
ಸೆಲೆಬ್ರಿಟಿಗಳು ಡ್ರಗ್ಸ್ ಸೇವಿಸುವ ಬಗ್ಗೆ ನಟಿ ಕಂಗನಾ ರನೌತ್ ಇತ್ತೀಚಿಗೆ ಸಂದರ್ಶನವೊಂದರಲ್ಲಿ ಮಾತನಾಡಿ, ಬಾಲಿವುಡ್ ನ ಅನೇಕ ನಟರು ಡ್ರಗ್ಸ್ ಸೇವನೆಯಲ್ಲಿ ಭಾಗಿಯಾಗಿದ್ದಾರೆ ಎಂದು ಆರೋಪಿಸಿದ್ದರು. ಶೇ 99ರಷ್ಟು ಬಾಲಿವುಡ್ ನ ಖ್ಯಾತ ನಟರು ಮಾದಕ ದ್ರವ್ಯ ವ್ಯಸನಿಗಳಾಗಿದ್ದಾರೆ, ತನಿಖೆ ನಡೆಸಿದರೆ ಅನೇಕರ ಹೆಸರುಗಳು ಹೊರಬರುತ್ತೆ ಎಂದು ಆರೋಪಿಸಿದ್ದರು.
ಈ ಬಗ್ಗೆ ಇಂದು ಟ್ವೀಟ್ ಮಾಡಿರುವ ಕಂಗನಾ ಬಾಲಿವುಡ್ ನಲ್ಲಿ ಯಾರೆಲ್ಲ ಡ್ರಗ್ಸ್ ಸೇವಿಸುತ್ತಾರೆ ಎಂದು ಬಹಿರಂಗವಾಗಿ ಹೇಳಿದ್ದಾರೆ. ಹಲವು ನಟರು ರಕ್ತ ಪರೀಕ್ಷೆಗೆ ಒಳಗಾಗಬೇಕು, ಈ ಮೂಲಕ ತಮ್ಮ ವಿರುದ್ಧ ಕೇಳಿ ಬರುತ್ತಿರುವ ಆರೋಪಗಳಿಗೆ ಸ್ಪಷ್ಟನೆ ನೀಡಬೇಕು ಎಂದು ಒತ್ತಾಯಿಸಿದ್ದಾರೆ.
''ರಣ್ವೀರ್ ಸಿಂಗ್, ರಣ್ಬೀರ್ ಕಪೂರ್, ಅಯಾನ್ ಮುಖರ್ಜಿ, ವಿಕ್ಕಿ ಕೌಶಿಕ್ ಅವರು ಡ್ರಗ್ ಪರೀಕ್ಷೆಗೆ ತಮ್ಮ ರಕ್ತದ ಮಾದರಿ ನೀಡುವಂತೆ ಕೇಳಿಕೊಳ್ಳುತ್ತೇನೆ. ಅವರು ಕೊಕೇನ್ ವ್ಯಸನಿಗಳೆಂದು ವದಂತಿಗಳಿವೆ. ಈ ವದಂತಿಗಳಿಗೆ ಸ್ಪಷ್ಟನೆ ನೀಡಬೇಕು. ವ್ಯಸನಿಗಳು ಅಲ್ಲ ಎಂದು ಸಾಬೀತಾದರೆ ಲಕ್ಷಾಂತರ ಜನರನ್ನು ಪ್ರೇರೇಪಿಸಬಹುದು." ಎಂದು ಟ್ವೀಟ್ ಮಾಡಿ ಪ್ರಧಾನಮಂತ್ರಿ ಕಚೇರಿ ಖಾತೆಗೆ ಟ್ಯಾಗ್ ಮಾಡಿದ್ದಾರೆ.