ಬಾಲಿವುಡ್

ವಂಚನೆ ಪ್ರಕರಣ: ಕೋರ್ಟ್ ಗೆ ಶರಣಾದ ಬಾಲಿವುಡ್ ನಟಿ ಅಮೀಶಾ ಪಟೇಲ್

Srinivasamurthy VN

ರಾಂಚಿ: ಚೆಕ್ ಬೌನ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಲಿವುಡ್ ನಟಿ ಅಮೀಶಾ ಪಟೇಲ್ ಅವರು ಶನಿವಾರ ರಾಂಚಿ ಸಿವಿಲ್ ನ್ಯಾಯಾಲಯಕ್ಕೆ ಶರಣಾಗಿದ್ದಾರೆ.

ಹಿರಿಯ ವಿಭಾಗದ ನ್ಯಾಯಾಧೀಶ ಡಿಎನ್ ಶುಕ್ಲಾ ಅವರು ನಟಿ ಅಮಿಶಾ ಪಟೇಲ್ ಅವರಿಗೆ ಜಾಮೀನು ಮಂಜೂರು ಮಾಡಿದ್ದು, ಜೂನ್ 21 ರಂದು ಮತ್ತೆ ಖುದ್ದು ನ್ಯಾಯಾಲಯಕ್ಕೆ ಹಾಜರಾಗುವಂತೆ ಸೂಚಿಸಿದ್ದಾರೆ. 2018 ರಲ್ಲಿ ಜಾರ್ಖಂಡ್ ಮೂಲದ ಚಲನಚಿತ್ರ ನಿರ್ಮಾಪಕ ಅಜಯ್ ಕುಮಾರ್ ಸಿಂಗ್ ನಟಿ ವಿರುದ್ಧ ವಂಚನೆ ಮತ್ತು ಚೆಕ್ ಬೌನ್ಸ್ ಪ್ರಕರಣ ದಾಖಲಿಸಿದ್ದರು. 

"ಈ ಹಿಂದೆ, ಈ ಪ್ರಕರಣದಲ್ಲಿ ನ್ಯಾಯಾಲಯವು ಅನೇಕ ಬಾರಿ ಕೋರ್ಟ್ ಸಮನ್ಸ್ ಜಾರಿ ಮಾಡಿತ್ತು. ಆದರೆ ವಟಿ ಅಮೀಶಾ ಅವರು ವಿಚಾರಣೆಗೆ ಹಾಜರಾಗಿರಲಿಲ್ಲ. ನಂತರ ನ್ಯಾಯಾಲಯ ಆಕೆಯ ವಿರುದ್ಧ ವಾರೆಂಟ್ ಜಾರಿ ಮಾಡಿತ್ತು' ಎಂದು ದೂರುದಾರರ ಪರ ವಕೀಲ ವಿಜಯ ಲಕ್ಷ್ಮಿ ಶ್ರೀವಾಸ್ತವ ಹೇಳಿದ್ದಾರೆ.

ದೂರಿನ ಪ್ರಕಾರ, ‘ದೇಸಿ ಮ್ಯಾಜಿಕ್’ ಶೀರ್ಷಿಕೆಯ ಸಿನಿಮಾ ನಿರ್ಮಾಣಕ್ಕಾಗಿ ಸಿಂಗ್ ಅವರು ನಟಿ ಅಮೀಶಾ ಪಟೇಲ್ ರ ಬ್ಯಾಂಕ್ ಖಾತೆಗೆ  2.5 ಕೋಟಿ ರೂಗಳನ್ನು ವರ್ಗಾಯಿಸಿದ್ದರು. ಆದರೆ, ಅಮೀಶಾ ಪಟೇಲ್ ನಂತರ ಚಿತ್ರ ನಿರ್ಮಾಣಕ್ಕೆ ಮುಂದಾಗಲಿಲ್ಲ. ಆಕೆ 2.50 ಕೋಟಿ ಚೆಕ್ ಕಳುಹಿಸಿದ್ದರೂ ಅದು ಬೌನ್ಸ್ ಆಗಿತ್ತು. ಹೀಗಾಗಿ ಈ ಪ್ರಕರಣ ಕೋರ್ಟ್ ಮೆಟ್ಟಿಲೇರಿತ್ತು. 

ಸನ್ನಿ ಡಿಯೋಲ್ ಸಹ ನಟಿಸಿರುವ 'ಗದರ್ 2' ಮೂಲಕ ಬೆಳ್ಳಿತೆರೆಗೆ ಪುನರಾಗಮನ ಮಾಡಲು ಸಿದ್ಧವಾಗಿರುವ ಸಮಯದಲ್ಲೇ ನಟಿ ಅಮೀಶಾ ಪಟೇಲ್ ಶರಣಾಗತಿ ಸುದ್ದಿ ಬಂದಿದೆ. ಜಾರ್ಖಂಡ್‌ನ ವಿಚಾರಣಾ ನ್ಯಾಯಾಲಯವು ನೀಡಿದ ಸಮನ್ಸ್‌ಗೆ ಸಂಬಂಧಿಸಿದಂತೆ ಪಟೇಲ್ ವಿರುದ್ಧದ ವಂಚನೆ ಮತ್ತು ಕ್ರಿಮಿನಲ್ ನಂಬಿಕೆಯ ಉಲ್ಲಂಘನೆಯ ಅಪರಾಧಕ್ಕಾಗಿ ಕ್ರಿಮಿನಲ್ ಮೊಕದ್ದಮೆಗಳನ್ನು ಆಗಸ್ಟ್ 2022 ರಲ್ಲಿ ಸುಪ್ರೀಂ ಕೋರ್ಟ್ ತಡೆದಿತ್ತು. ಆದಾಗ್ಯೂ, ನೆಗೋಷಿಯೇಬಲ್ ಇನ್‌ಸ್ಟ್ರುಮೆಂಟ್ಸ್ ಆಕ್ಟ್‌ನ ಸೆಕ್ಷನ್ 138 (ಚೆಕ್ ಬೌನ್ಸ್) ಅಡಿಯಲ್ಲಿ ಶಿಕ್ಷಾರ್ಹ ಅಪರಾಧಗಳ ಪ್ರಕ್ರಿಯೆಗಳು ಕಾನೂನಿನ ಪ್ರಕಾರ ಮುಂದುವರಿಯಬಹುದು ಎಂದು ಸುಪ್ರೀಂ ಕೋರ್ಟ್ ಹೇಳಿತ್ತು.
 

SCROLL FOR NEXT