ಬಾಲಿವುಡ್

ಹಿಂದಿ ಚಿತ್ರರಂಗದ ಹಿರಿಯ ನಟ-ನಿರ್ದೇಶಕ ಸತೀಶ್ ಕೌಶಿಕ್ ನಿಧನ

Sumana Upadhyaya

ನವದೆಹಲಿ: ಹಿರಿಯ ನಟ ಹಾಗೂ ಚಿತ್ರ ನಿರ್ದೇಶಕ ಸತೀಶ್ ಕೌಶಿಕ್ ಗುರುವಾರ ಬೆಳಗ್ಗೆ ಹೃದಯಾಘಾತದಿಂದ ನಿಧನರಾಗಿದ್ದಾರೆ.

ಅವರಿಗೆ 66 ವರ್ಷವಾಗಿತ್ತು. ಅವರ ನಿಧನದ ಸುದ್ದಿಯನ್ನು ಅವರ ಸ್ನೇಹಿತ ಹಾಗೂ ಖ್ಯಾತ ಚಿತ್ರನಟ ಅನುಪಮ್ ಖೇರ್ ದೃಢಪಡಿಸಿದ್ದಾರೆ.

ಅವರು ಇಂದು ಬೆಳಗ್ಗೆ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ಟ್ವೀಟ್ ಮಾಡಿ, ಈ ಜಗತ್ತಿನಲ್ಲಿ ಸಾವು ಅತ್ಯಂತ ಕಟ್ಟಕಡೆಯ ಸತ್ಯ ಎಂದು ನನಗೆ ಗೊತ್ತಿದೆ, ಆದರೆ ಈ ದಿನ ಬೆಳಗ್ಗೆ ನನ್ನ ಆಪ್ತ ಸ್ನೇಹಿತ ಸತೀಶ್ ಕೌಶಿಕ್ ನ ಸಾವಿನ ಬಗ್ಗೆ ಬರೆಯುತ್ತೇನೆ ಎಂದು ನಾನು ಕನಸಿನಲ್ಲಿ ಕೂಡ ಭಾವಿಸಿರಲಿಲ್ಲ. 45 ವರ್ಷಗಳ ನಮ್ಮ ಸ್ನೇಹಕ್ಕೆ ಹಠಾತ್ ಫುಲ್ ಸ್ಟಾಪ್ ಇಂದು ಬಿದ್ದಿದೆ. ಸತೀಶ್ ನೀನಿಲ್ಲದೆ ಜೀವನ ಹಿಂದಿನಂತೆ ಇರುವುದಿಲ್ಲ ಓಂ ಶಾಂತಿ ಎಂದು ಬರೆದುಕೊಂಡಿದ್ದಾರೆ.

ಸತೀಶ್ ಕೌಶಿಕ್ ಅವರು ತಮ್ಮ ಕೊನೆಯ ಟ್ವೀಟ್ ಆಗಿ ಅನುಪಮ್ ಖೇರ್ ಹುಟ್ಟುಹಬ್ಬಕ್ಕೆ ಶುಭಾಶಯ ತಿಳಿಸಿದ್ದರು. ಸತೀಶ್ ಕೌಶಿಕ್ ನಿಧನ ಸುದ್ದಿ ಕೇಳಿ ಹಲವರು ಸೋಷಿಯಲ್ ಮೀಡಿಯಾದಲ್ಲಿ ಸಂತಾಪ ಸೂಚಿಸಿದ್ದಾರೆ. 

1956ರ ಏಪ್ರಿಲ್ 13ರಂದು ಜನಿಸಿದ ಕೌಶಿಕ್ 1980ರ ದಶಕದಲ್ಲಿ ಸಿನಿಮಾ ವೃತ್ತಿ ಜೀವನವನ್ನು ಆರಂಭಿಸಿದರು. ಜಾನೆ ಬಿ ದೊ ಯಾರೊನ್ ಚಿತ್ರಕ್ಕೆ ಸಂಭಾಷಣೆ ಬರೆದಿದ್ದರು. ಶೇಖರ್ ಕಪೂರ್ ಅವರ ಮಿ.ಇಂಡಿಯಾ ಚಿತ್ರದಲ್ಲಿ ಅತ್ಯಂತ ಯಶಸ್ವಿ ಪಾತ್ರ ನಿರ್ವಹಿಸಿ ಮನೆಮಾತಾದರು. ನಂತರ ದೀವಾನ ಮಸ್ತಾನ, ರಾಮ್ ಲಖನ್, ಸಾಜನ್ ಚಲೆ ಸಸುರಾಲ್ ಮೊದಲಾದ ಜನಪ್ರಿಯ ಚಿತ್ರಗಳಲ್ಲಿ ನಟಿಸಿದ್ದರು.

ನಂತರ ಶ್ರೀದೇವಿಯವರ ಚಿತ್ರ ರೂಪ್ ಕಿ ರಾಣಿ, ಚೊರೊನ್ ಕ ರಾಜ, ಪ್ರೇಮ್ ಮೊದಲಾದ ಚಿತ್ರಗಳನ್ನು ನಿರ್ದೇಶಿಸಿದ್ದರೂ ಅವು ಬಾಕ್ಸ್ ಆಫೀಸ್ ನಲ್ಲಿ ಗೆಲ್ಲಲಿಲ್ಲ. ನಂತರ ನಿರ್ದೇಶಕರಾಗಿ ಅವರಿಗೆ ದೊಡ್ಡ ಹಿಟ್ , ಹೆಸರು ಕೊಟ್ಟ ಚಿತ್ರ ಹಮ್ ಆಪ್ ಕೆ ದಿಲ್ ಮೆ ರೆಹ್ತಾ ಹೈ.

SCROLL FOR NEXT