ಬಾಲಿವುಡ್

20 ವರ್ಷಗಳಿಂದ ಕ್ಯಾನೆ ಫಿಲ್ಮ್ ಫೆಸ್ಟಿವಲ್ ನಲ್ಲಿ ಐಶ್ವರ್ಯಾ ರೈ ಭಾಗಿ: ಸೋಫಿ ಕೌಚರ್ ಗೌನ್ ನಲ್ಲಿ ಮಿಂಚಿದ ಬಾಲಿವುಡ್ ಬ್ಯೂಟಿ!

Sumana Upadhyaya

ನವದೆಹಲಿ: ಬಾಲಿವುಡ್ ನಟಿ, ಮಾಜಿ ವಿಶ್ವಸುಂದರಿ ಐಶ್ವರ್ಯಾ ರೈ ಬಚ್ಚನ್ ಅವರು ಕ್ಯಾನೆ ಫಿಲ್ಮ್ ಫೆಸ್ಟಿವಲ್ ನಲ್ಲಿ ಮೊದಲ ದಿನ ಮಿನುಗುವ ಬೆಳ್ಳಿ ಬಣ್ಣದ ಕೌಚರ್ ಗೌನ್ ನಲ್ಲಿ ಕಾಣಿಸಿಕೊಂಡು ಅಚ್ಚರಿ ಮೂಡಿಸಿದರು. 

ಐಕಾನಿಕ್ ಫೆಸ್ಟಿವಲ್‌ನ 76ನೇ ಆವೃತ್ತಿ ನಾಲ್ಕು ದಿನಗಳ ಹಿಂದೆ ಆರಂಭವಾಗಿದ್ದು, ಬಾಲಿವುಡ್ ನ ಕೆಲವು ನಟಿಯರು ಭಾಗವಹಿಸಿದ್ದರು. ಕಳೆದ 21 ವರ್ಷಗಳಿಂದ ನಿಯಮಿತವಾಗಿ ಭಾಗವಹಿಸುತ್ತಾ ಬಂದಿರುವ ಐಶ್ವರ್ಯಾ, ನಿನ್ನೆ ಹಾಲಿವುಡ್ ಅನುಭವಿ ಹ್ಯಾರಿಸನ್ ಫೋರ್ಡ್ ಅವರ ಐದನೇ "ಇಂಡಿಯಾನಾ ಜೋನ್ಸ್" ಚಲನಚಿತ್ರ "ದಿ ಡಯಲ್ ಆಫ್ ಡೆಸ್ಟಿನಿ" ನ ಪ್ರಥಮ ಪ್ರದರ್ಶನದಲ್ಲಿ ಭಾಗವಹಿಸಿದ್ದರು.

49 ವರ್ಷದ ನೀಲಿ ಕಂಗಳ ಚೆಲುವೆ ಅಲ್ಯೂಮಿನಿಯಂ ತರಹದ ಗೌನ್ ಮತ್ತು ಸಿಂಚ್ಡ್ ಕಾರ್ಸೆಟ್ ಮತ್ತು ಅಲಂಕರಿಸಿದ ಹೂಡ್ ನ್ನು ಧರಿಸಿದ್ದರು. 

ನಿಧಾನವಾಗಿ ಕಾರಿನಿಂದಿಳಿದು ಹೆಜ್ಜೆಹಾಕುತ್ತಾ ನೋಡುಗರ ಕಡೆ ತುಂಟ ನಗೆ ಚೆಲ್ಲುತ್ತಾ ಕೈಬೀಸಿದರು. ಅಭಿಮಾನಿಗಳಿಗೆ ಹಸ್ತಾಕ್ಷರ ನೀಡಿದರು. ಕ್ಯಾಮರಾಗಳಿಗೆ ಫ್ಲೈಯಿಂಗ್ ಕಿಸ್ ನೀಡುತ್ತಾ ಫೋಸ್ ಕೊಟ್ಟರು. 

ಹಲವು ವರ್ಷಗಳಿಂದ ಕ್ಯಾನೆ ಫಿಲ್ಮ್ ಫೆಸ್ಟಿವಲ್‌ನಲ್ಲಿ ಭಾಗವಹಿಸುತ್ತಿರುವ ಐಶ್ವರ್ಯಾ, ಈ ವಾರದ ಆರಂಭದಲ್ಲಿ ಮಗಳು ಆರಾಧ್ಯ ಬಚ್ಚನ್ ಅವರೊಂದಿಗೆ ಫ್ರೆಂಚ್ ರಿವೇರಿಯಾಕ್ಕೆ ಆಗಮಿಸಿದ್ದರು.

ನಿರ್ದೇಶಕ ಮಣಿರತ್ನಂ ಅವರ ಎರಡು ಭಾಗಗಳಲ್ಲಿ ತಯಾರಾದ "ಪೊನ್ನಿಯಿನ್ ಸೆಲ್ವನ್" ಚಿತ್ರದಲ್ಲಿ ಐಶ್ವರ್ಯಾ ಪ್ರಮುಖ ಪಾತ್ರ ವಹಿಸಿದ್ದರು. 

ಈ ವರ್ಷ ಕ್ಯಾನೆ ಚಿತ್ರೋತ್ಸವದಲ್ಲಿ ಐಶ್ವರ್ಯಾ ಅಲ್ಲದೆ ಭಾರತದ ನಟಿಯರಾದ ಸಾರಾ ಆಲಿ ಖಾನ್, ಮೃಣಾಲ್ ಠಾಕೂರ್, ಊರ್ವಶಿ ರೌಟೇಲ, ಇಶಾ ಗುಪ್ತ ಮತ್ತು ಮೌನೀಶ್ ಚಿಲ್ಲರ್ ಕೂಡ ಭಾಗವಹಿಸಿದ್ದಾರೆ. ಚಿತ್ರೋತ್ಸವ ಮೇ 27ರವರೆಗೆ ಮುಂದುವರಿಯಲಿದೆ. 

ನಟಿಯರು ಗ್ಲಾಮರಸ್ ಆಗಿ ವಿಶೇಷವಾಗಿ ಡ್ರೆಸ್ ಮಾಡಿಕೊಂಡು ಬಂದು ಕ್ಯಾಮರಾಗಳಿಗೆ ಫೋಸ್ ಕೊಡುವುದು ಚಿತ್ರೋತ್ಸವದ ಪ್ರಮುಖ ಆಕರ್ಷಣೆಯಾಗಿರುತ್ತದೆ. 

SCROLL FOR NEXT