ನವದೆಹಲಿ: ಖ್ಯಾತ ತಬಲಾ ವಾದಕ ಜಾಕೀರ್ ಹುಸೇನ್ ಅವರನ್ನು ಹೃದಯ ಸಮಸ್ಯೆಯ ಹಿನ್ನೆಲೆಯಲ್ಲಿ ಸ್ಯಾನ್ ಫ್ರಾನ್ಸಿಸ್ಕೋದಲ್ಲಿ ಆಸ್ಪತ್ರೆಗೆ ದಾಖಲಿಸಿದ್ದು ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಈ ಬಗ್ಗೆ ಜಾಕಿರ್ ಸ್ನೇಹಿತ ಹಾಗೂ ಕೊಳಲು ವಾದಕ ರಾಕೇಶ್ ಚೌರಾಸಿಯಾ ಮಾಹಿತಿ ನೀಡಿದ್ದಾರೆ.
ಅವರು ಅಸ್ವಸ್ಥರಾಗಿದ್ದು, ಪ್ರಸ್ತುತ ಐಸಿಯುನಲ್ಲಿ ದಾಖಲಾಗಿದ್ದಾರೆ ಎಂದು ರಾಕೇಶ್ ಚೌರಾಸಿಯಾ ತಿಳಿಸಿದ್ದಾರೆ. ಅವರ ಸ್ಥಿತಿಯ ಬಗ್ಗೆ ನಾವೆಲ್ಲರೂ ಚಿಂತಾಕ್ರಾಂತರಾಗಿದ್ದೇವೆ ಎಂದು ಹೇಳಿದರು. 73 ವರ್ಷದ ಅಮೆರಿಕನ್ ಸಂಗೀತಗಾರ ರಕ್ತದೊತ್ತಡ ಸಮಸ್ಯೆಯಿಂದ ಬಳಲುತ್ತಿದ್ದರು ಎಂದು ಉಸ್ತಾದ್ ಜಾಕಿರ್ ಹುಸೇನ್ ಅವರ ಆಪ್ತ ಮೂಲಗಳು ತಿಳಿಸಿವೆ.
ಹೃದಯ ಸಂಬಂಧಿ ಸಮಸ್ಯೆಯಿಂದ ಕಳೆದ ಒಂದು ವಾರದಿಂದ ಸ್ಯಾನ್ ಫ್ರಾನ್ಸಿಸ್ಕೋದ ಆಸ್ಪತ್ರೆಗೆ ದಾಖಲಾಗಿದ್ದರು. ಉಸ್ತಾದ್ ಜಾಕಿರ್ ಹುಸೇನ್ ಅವರ ತಂದೆ ಅಲ್ಲಾ ರಖಾ ಕೂಡ ಪ್ರಸಿದ್ಧ ತಬಲಾ ವಾದಕರಾಗಿದ್ದರು. ಪ್ರಸಿದ್ಧ ತಬಲಾ ವಾದಕ ಜಾಕೀರ್ ಹುಸೇನ್ ಅವರು ಪದ್ಮಶ್ರೀ, ಪದ್ಮಭೂಷಣ ಮತ್ತು ಪದ್ಮವಿಭೂಷಣ ಮುಂತಾದ ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ. ಅಷ್ಟೇ ಅಲ್ಲ, ಆಲ್-ಸ್ಟಾರ್ ಗ್ಲೋಬಲ್ ಕನ್ಸರ್ಟ್‌ನಲ್ಲಿ ಭಾಗವಹಿಸಲು ಮಾಜಿ ಅಧ್ಯಕ್ಷ ಬರಾಕ್ ಒಬಾಮರಿಂದ ಆಹ್ವಾನ ಪಡೆದ ಮೊದಲ ಭಾರತೀಯ ತಬಲಾ ವಾದಕ ಜಾಕಿರ್ ಹುಸೇನ್ ಆಗಿದ್ದಾರೆ.
ಮಹಾರಾಷ್ಟ್ರದ ರಾಜಧಾನಿ ಮುಂಬೈನಲ್ಲಿ 1951ರಲ್ಲಿ ಜನಿಸಿದ ಜಾಕೀರ್ ಹುಸೇನ್ ಕೇವಲ 3 ವರ್ಷ ವಯಸ್ಸಿನಲ್ಲೇ ತಬಲಾವನ್ನು ಅಭ್ಯಾಸ ಮಾಡಲು ಪ್ರಾರಂಭಿಸಿದರು. ಅಷ್ಟೇ ಅಲ್ಲ, 7ನೇ ವಯಸ್ಸಿಗೆ ಪರಿಣತೆ ಪಡೆದಿದ್ದು 11ನೇ ವಯಸ್ಸಿನಲ್ಲಿ ಜಾಕಿರ್ ಹುಸೇನ್ ವಿವಿಧ ಸ್ಥಳಗಳಲ್ಲಿ ತಮ್ಮ ಕಾರ್ಯಕ್ರಮಗಳನ್ನು ನೀಡಲು ಪ್ರಾರಂಭಿಸಿದರು.