ಮುಂಬೈ: ಗೋಲ್ಡ್ ಸ್ಕೀಮ್ ನಲ್ಲಿ ಹೂಡಿಕೆದಾರರಿಗೆ ವಂಚಿಸಿದ ಆರೋಪ ಮೇಲೆ ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಮತ್ತು ಅವರ ಪತಿ ರಾಜ್ ಕುಂದ್ರಾ ಹಾಗೂ ಇತರರ ವಿರುದ್ಧ ದಾಖಲಾಗಿರುವ ದೂರಿನ ಬಗ್ಗೆ ತನಿಖೆ ನಡೆಸುವಂತೆ ಮುಂಬೈ ನ್ಯಾಯಾಲಯವು ಪೊಲೀಸರಿಗೆ ನಿರ್ದೇಶಿಸಿದೆ.
ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ಎನ್‌ಪಿ ಮೆಹ್ತಾ ಅವರು ಮಂಗಳವಾರ ಹೊರಡಿಸಿದ ಆದೇಶದಲ್ಲಿ, ಕುಂದ್ರಾ ದಂಪತಿ ಮಾಲೀಕತ್ವದ ಸತ್ಯುಗ್ ಗೋಲ್ಡ್ ಪ್ರೈವೇಟ್ ಲಿಮಿಟೆಡ್, ಅದರ ಇಬ್ಬರು ನಿರ್ದೇಶಕರು ಮತ್ತು ಉದ್ಯೋಗಿಗಳು ವಂಚನೆ ಎಸಗಿರುವುದು "ಪ್ರಾಥಮಿಕ ತನಿಖೆಯಿಂದ ದೃಢವಾಗಿದೆ". ಹೀಗಾಗಿ ರಿದ್ಧಿ ಸಿದ್ಧಿ ಬುಲಿಯನ್ಸ್‌ನ ವ್ಯವಸ್ಥಾಪಕ ನಿರ್ದೇಶಕ ಪೃಥ್ವಿರಾಜ್ ಕೊಠಾರಿ ಅವರು ಸಲ್ಲಿಸಿರುವ ದೂರಿನ ಬಗ್ಗೆ ತನಿಖೆ ನಡೆಸುವಂತೆ ನ್ಯಾಯಾಲಯವು ಬಿಕೆಸಿ ಪೊಲೀಸ್ ಠಾಣೆಗೆ ಸೂಚಿಸಿದೆ.
ವಂಚನೆಗೆ ಸಂಬಂಧಿಸಿದಂತೆ ಭಾರತೀಯ ದಂಡ ಸಂಹಿತೆಯ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಶಿಲ್ಪಾ ಶೆಟ್ಟಿ ಹಾಗೂ ಅವರ ಪತಿ ವಿರುದ್ಧ ಎಫ್‌ಐಆರ್ ದಾಖಲಿಸುವಂತೆ ನ್ಯಾಯಾಧೀಶರು ಪೊಲೀಸರನ್ನು ಸೂಚಿಸಿದ್ದಾರೆ.
ಕುಂದ್ರಾ ದಂಪತಿ 2014 ರಲ್ಲಿ ಈ ಚಿನ್ನದ ಯೋಜನೆಯನ್ನು ಪ್ರಾರಂಭಿಸಿದ್ದಾರೆ. ಈ ಯೋಜನೆ ಅಡಿಯಲ್ಲಿ ಹೂಡಿಕೆ ಮಾಡಲು ಬಯಸುವ ಯಾರಾದರೂ ಅರ್ಜಿ ಸಲ್ಲಿಸುವ ಸಮಯದಲ್ಲಿ ರಿಯಾಯಿತಿ ದರದಲ್ಲಿ ಮುಂಗಡವಾಗಿ ಚಿನ್ನದ ಹಣವನ್ನು ಸಂಪೂರ್ಣವಾಗಿ ಪಾವತಿಸಬೇಕಾಗುತ್ತದೆ ಎಂದು ಕೊಠಾರಿ ಹೇಳಿದ್ದಾರೆ.