ಮುಂಬೈ: ಬಹುನಿರೀಕ್ಷಿತ ಅಜಯ್ ದೇವಗನ್ ಅಭಿನಯದ 'ಸಿಂಗಂ ಎಗೇನ್' ಚಿತ್ರದ ಬಿಡುಗಡೆ ದಿನಾಂಕವನ್ನು ಚಿತ್ರತಂಡ ಮುಂದೂಡಿದ್ದು, ಚಿತ್ರವನ್ನು ವೀಕ್ಷಿಸಲು ಅಭಿಮಾನಿಗಳು ಸ್ವಲ್ಪ ಸಮಯ ಕಾಯಬೇಕಾಗಿದೆ.
ನಟ ಅಜಯ್ ದೇವಗನ್ ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಚಿತ್ರ ಬಿಡುಗಡೆ ದಿನಾಂಕವನ್ನು ಮುಂದೂಡಿರುವ ಬಗ್ಗೆ ಪೋಸ್ಟರ್ ಹಂಚಿಕೊಂಡಿದ್ದಾರೆ.
ಪೋಸ್ಟರ್‌ನಲ್ಲಿ ಅಜಯ್ ದೇವಗನ್, ಕರೀನಾ ಕಪೂರ್, ಟೈಗರ್ ಶ್ರಾಫ್, ದೀಪಿಕಾ ಪಡುಕೋಣೆ, ಅಕ್ಷಯ್ ಕುಮಾರ್, ರಣವೀರ್ ಸಿಂಗ್, ಅರ್ಜುನ್ ಕಪೂರ್ ಮತ್ತು ಜಾಕಿ ಶ್ರಾಫ್ ಸೇರಿದಂತೆ ಎಲ್ಲ ಪ್ರಮುಖ ನಟರ ಹೆಸರುಗಳನ್ನು ಉಲ್ಲೇಖಿಸಲಾಗಿದೆ.
'ಸಿಂಗಂ ಎಗೇನ್ ಚಿತ್ರವು ಈ ವರ್ಷದ ದೀಪಾವಳಿಯಲ್ಲಿ ತೆರೆಗೆ ಬರಲಿದೆ' ಎಂದು ಪೋಸ್ಟ್‌ಗೆ ಶೀರ್ಷಿಕೆ ನೀಡಿದ್ದಾರೆ.
ಗುರುವಾರ, ತಮ್ಮ ಮುಂಬರುವ ಚಿತ್ರ 'ಔರಾನ್ ಮೇ ಕಹಾನ್ ದಮ್ ಥಾ' ಟ್ರೇಲರ್ ಬಿಡುಗಡೆ ಸಂದರ್ಭದಲ್ಲಿ, ನಟ ಅಜಯ್ 'ಸಿಂಗಮ್ ಎಗೇನ್' ಚಿತ್ರ ಬಿಡುಗಡೆ ವಿಳಂಬದ ಬಗ್ಗೆ ಸುಳಿವು ನೀಡಿದ್ದರು.
ಚಿತ್ರದ ಅಪ್‌ಡೇಟ್ ಬಗ್ಗೆ ಕೇಳಿದಾಗ, 'ನಮಗೆ ಇನ್ನೂ ಖಚಿತವಾಗಿಲ್ಲ ಏಕೆಂದರೆ ಅದರ ಕೆಲಸಗಳು ಇನ್ನೂ ನಡೆಯುತ್ತಿವೆ. ಅದು ಪೂರ್ಣಗೊಂಡಿಲ್ಲ. ಇನ್ನೂ ಸ್ವಲ್ಪ ಚಿತ್ರೀಕರಣ ಬಾಕಿ ಉಳಿದಿದೆ. ಹಾಗಾಗಿ ನಾವು ಈಗ ಏನನ್ನೂ ಹೇಳುವಂತಿಲ್ಲ. ಚಿತ್ರಕ್ಕೆ ಸಂಬಂಧಿಸಿದ ಎಲ್ಲ ಕೆಲಸಗಳು ಪೂರ್ಣಅಗೊಂಡ ಬಳಿಕ ನಾವು ನಿರ್ಧರಿಸುತ್ತೇವೆ' ಎಂದಿದ್ದರು.
ರೋಹಿತ್ ಶೆಟ್ಟಿ ನಿರ್ದೇಶನದ 'ಸಿಂಗಂ ಎಗೇನ್' ಚಿತ್ರವು ಸ್ವಾತಂತ್ರ್ಯ ದಿನದಂದು ಅಂದರೆ ಆಗಸ್ಟ್ 15 ರಂದು ಬಿಡುಗಡೆ ಮಾಡಲು ಈ ಮೊದಲು ನಿರ್ಧರಿಸಲಾಗಿತ್ತು. ಆದರೆ, ಆಗ ಅಲ್ಲು ಅರ್ಜುನ್ ನಟನೆಯ 'ಪುಷ್ಪ 2', ಜಾನ್ ಅಬ್ರಹಾಂ ಮತ್ತು ಶಾರ್ವರಿ ಅಭಿನಯದ 'ವೇದಾ' ಮತ್ತು ಅಕ್ಷಯ್ ಕುಮಾರ್ ಮತ್ತು ತಾಪ್ಸಿ ಪನ್ನು ಅವರ 'ಖೇಲ್ ಖೇಲ್ ಮೇ' ಸೇರಿದಂತೆ ಇತರ ಬಹುನಿರೀಕ್ಷಿತ ಚಿತ್ರಗಳು ಬಿಡುಗಡೆಯಾಗಲಿದ್ದು, ಘರ್ಷಣೆಯನ್ನು ತಪ್ಪಿಸಲು ಚಿತ್ರತಂಡ ಹೊಸ ಬಿಡುಗಡೆ ದಿನಾಂಕವನ್ನು ಘೋಷಿಸಿದೆ.
ಅಜಯ್ ದೇವಗನ್ ನಟನೆಯ ಸಿಂಗಂ ಸರಣಿಯ ಮೂರನೇ ಚಿತ್ರ ಇದಾಗಿದ್ದು, 2011ರಲ್ಲಿ ಸಿಂಗಂ ಸಿನಿಮಾ ತೆರೆಕಂಡಿತ್ತು. ನಂತರ ಸಿಂಗಮ್ ರಿಟರ್ನ್ಸ್ (2014) ನಲ್ಲಿ ಬಿಡುಗಡೆಯಾಗಿತ್ತು. ಈ ಚಿತ್ರದಲ್ಲಿ ಕರೀನಾ ಕಪೂರ್ ಮತ್ತು ರಣವೀರ್ ಸಿಂಗ್ ಮೊದಲ ಬಾರಿಗೆ ಒಟ್ಟಿಗೆ ತೆರೆಹಂಚಿಕೊಂಡಿದ್ದರು.