ಮುಂಬೈ: ತಮ್ಮ ರಿವಾಲ್ವರ್ ಮಿಸ್ ಫೈರ್ ಆಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿರುವ ಬಾಲಿವುಡ್ ನಟ ಗೋವಿಂದ ಅವರನ್ನು ಮುಂಬೈ ಅಪರಾಧ ವಿಭಾಗದ ಪೊಲೀಸರು ಘಟನೆಯ ಬಗ್ಗೆ ವಿಚಾರಣೆ ನಡೆಸಿದ್ದಾರೆ ಎಂದು ಅಧಿಕಾರಿಗಳು ಬುಧವಾರ ತಿಳಿಸಿದ್ದಾರೆ.
ಈ ಘಟನೆ ಬಗ್ಗೆ ಸ್ಥಳೀಯ ಪೊಲೀಸರು ತನಿಖೆ ನಡೆಸುತ್ತಿದ್ದು, ಮುಂಬೈ ಅಪರಾಧ ವಿಭಾಗ ಕೂಡ ಘಟನೆಯ ಬಗ್ಗೆ ವಿಚಾರಣೆ ಆರಂಭಿಸಿದೆ.
ಹಿರಿಯ ಪೊಲೀಸ್ ಇನ್ಸ್‌ಪೆಕ್ಟರ್ ದಯಾ ನಾಯಕ್ ನೇತೃತ್ವದ ಅಪರಾಧ ವಿಭಾಗದ ತಂಡ ಮಂಗಳವಾರ ಆಸ್ಪತ್ರೆಗೆ ಭೇಟಿ ನೀಡಿ ಘಟನೆಯ ಕುರಿತು ನಟನಿಂದ ಮಾಹಿತಿ ಪಡೆದಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಮಂಗಳವಾರ ಬೆಳಗ್ಗೆ ಗೋವಿಂದ ಅವರ ನಿವಾಸದಲ್ಲಿ ಈ ಘಟನೆ ನಡೆದಾಗ ಅವರು ಒಬ್ಬರೇ ಇದ್ದರು. ನಟ ಗೋವಿಂದ ಅವರು ವೆಬ್ಲಿ ಕಂಪನಿಯ ಪರವಾನಗಿ ಪಡೆದ ರಿವಾಲ್ವರ್ ಹೊಂದಿದ್ದು, ನಿನ್ನೆ ಆಕಸ್ಮಿಕವಾಗಿ ಫೈರ್ ಆಗಿ ಅವರ ಎಡ ಮೊಣಕಾಲಿಗೆ ಗುಂಡು ತಗುಲಿದೆ. ಹಳೆಯದಾಗಿರುವ ರಿವಾಲ್ವರ್ ಲಾಕ್ ಆಗದೇ ಇದ್ದುದರಿಂದ ಮಿಸ್ ಫೈರ್ ಆಗಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.
ಹೆಚ್ಚಿನ ತನಿಖೆಗಾಗಿ ನಟನ ರಿವಾಲ್ವರ್ ಅನ್ನು ಪೊಲೀಸ್ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ ಎಂದು ಅಧಿಕಾರಿಯೊಬ್ಬರು ಈ ಹಿಂದೆ ತಿಳಿಸಿದ್ದರು. ಆದರೆ ಈ ಸಂಬಂಧ ಇದುವರೆಗೆ ಯಾರೂ ದೂರು ದಾಖಲಿಸಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.