ಥಾಣೆ: ಬಾಲಿವುಡ್ ಹಿರಿಯ ನಟ ಅಚ್ಯುತ್ ಪೋತ್ದಾರ್ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. ಅವರಿಗೆ 91 ವರ್ಷ ವಯಸ್ಸಾಗಿತ್ತು.
ವಯೋಸಹಜ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದ ಅವರನ್ನು ಜ್ಯೂಪಿಟರ್ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಸೋಮವಾರ ಸಂಜೆ ಅಚ್ಯುತ್ ಪೋತ್ದಾರ್ ನಿಧನರಾದರು. ಅವರ ಅಂತ್ಯಸಂಸ್ಕಾರ ಮಂಗಳವಾರ ನಡೆಯಲಿದೆ ಎಂದು ಅವರ ಕುಟುಂಬದವರು ಹೇಳಿದ್ದಾರೆ.
ಸಿನಿಮಾ ನಟನೆಯ ಜೊತೆಗೆ ಹಿಂದಿ ಹಾಗೂ ಮರಾಠಿ ಧಾರಾವಾಹಿಗಳು ಮತ್ತು ಟಿವಿ ಕಾರ್ಯಕ್ರಮಗಳಲ್ಲಿ ಅವರ ನಟಿಸುತ್ತಿದ್ದರು. 1980ರಲ್ಲಿ ಆಕ್ರೋಶ್ ಹಿಂದಿ ಸಿನಿಮಾದ ಮೂಲಕ ಬಾಲಿವುಡ್ ಪ್ರವೇಶಿಸಿದರು. ಸಿನಿಮಾರಂಗಕ್ಕೆ ಪದಾರ್ಪಣೆ ಮಾಡಿದಾಗ ಅವರಿಗೆ 44 ವರ್ಷ ವಯಸ್ಸಾಗಿತ್ತು. ಪದವಿ ಪಡೆದಿದ್ದ ಅವರು ರೇವಾ ವಿಶ್ವವಿದ್ಯಾಲಯದಲ್ಲಿ ಕೆಲಕಾಲ ಪ್ರಾದ್ಯಾಪಕರಾಗಿದ್ದರು.
ಭಾರತೀಯ ಸೇನೆ ಹಾಗೂ ಇಂಡಿಯನ್ ಆಯಿಲ್ ಕಂಪನಿಯಲ್ಲೂ ಅವರು ಕೆಲಸ ಮಾಡಿದ್ದರು. 3 ಇಡಿಯಟ್ಸ್, ಅರ್ಧ ಸತ್ಯ, ತೇಜಾಬ್, ರಂಗೀಲಾ, ದಿಲ್ವಾಲೆ ಸೇರಿ ಮುಂತಾದ ಜನಪ್ರಿಯ ಸಿನಿಮಾಗಳಲ್ಲಿ ಅವರು ನಟಿಸಿದ್ದರು. ಆಮಿರ್ ಖಾನ್ ನಾಯಕತ್ವದ ‘3 ಈಡಿಯಟ್ಸ್’ ಚಿತ್ರದಲ್ಲಿ ಪ್ರೊಫೆಸರ್ ಪಾತ್ರ ನಿರ್ವಹಿಸಿದ್ದ ಅಚ್ಯುತ್ ಪೋತ್ದಾರ್, ‘ಕೆಹ್ನ ಕ್ಯಾ ಚಾಹ್ತೆ ಹೋ” ಸಂಭಾಷಣೆಯಿಂದ ಭಾರಿ ಜನಪ್ರಿಯರಾಗಿದ್ದರು.