'ಸಸುರಾಲ್ ಸಿಮರ್' ನಟಿ ಸಾರಾ ಖಾನ್, ರಾಮಾಯಣ ಖ್ಯಾತಿಯ ಸುನಿಲ್ ಲಾಹಿರಿ ಅವರ ಪುತ್ರ ನಟ-ನಿರ್ಮಾಪಕ ಕ್ರಿಶ್ ಪಾಠಕ್ ಅವರನ್ನು ವಿವಾಹವಾಗಿದ್ದಾರೆ.
ಈ ದಂಪತಿ ಅಕ್ಟೋಬರ್ 6 ರಂದು ನ್ಯಾಯಾಲಯದಲ್ಲಿ ತಮ್ಮ ವಿವಾಹವನ್ನು ನೋಂದಾಯಿಸಿಕೊಂಡಿದ್ದರು. ಈಗ ಅವರು ಹಿಂದೂ ಮತ್ತು ಮುಸ್ಲಿಂ ಸಂಪ್ರದಾಯದಂತೆ ಅದ್ದೂರಿಯಾಗಿ ಮದುವೆಯನ್ನು ಆಚರಿಸಿಕೊಂಡಿದ್ದಾರೆ.
ಇಂದು ವಿವಾಹ ಮಹೋತ್ಸದ ಫೋಟೋಗಳನ್ನು ಸಾರಾ ತನ್ನ ಇನ್ಸ್ಟಾಗ್ರಾಮ್ ನಲ್ಲಿ ಹಂಚಿಕೊಂಡಿದ್ದಾರೆ. ಹಿಂದೂ ಸಂಪ್ರದಾಯದಂತೆ ನಡೆದ ಕಾರ್ಯಕ್ರಮದಲ್ಲಿ ನಟಿ ಕೆಂಪು ಕಸೂತಿಯ ಲೆಹೆಂಗಾವನ್ನು ಧರಿಸಿದ್ದರೆ, ಕ್ರಿಶ್ ಕಡುಗೆಂಪು ಬಣ್ಣದ ಶೆರ್ವಾನಿಯಲ್ಲಿ ಮಿಂಚಿದ್ದಾರೆ.
ಇನ್ನೂ ಮುಸ್ಲಿಂ ಸಂಪ್ರದಾಯದಂತೆ ನಡೆದ ಕಾರ್ಯಕ್ರಮದಲ್ಲಿ ಸಾರಾ ಖಾನ್, ಐವರಿ ಮತ್ತು ಚಿನ್ನ ಲೇಪಿತ ಅದ್ದೂರಿ ಉಡುಪನ್ನು ಧರಿಸಿದ್ದಾರೆ. ಕ್ರಿಶ್ ಕೂಡಾ ಇದೇ ರೀತಿಯ ಡ್ರೆಸ್ ಹಾಕಿಕೊಂಡಿದ್ದಾರೆ. "ಖುಬೂಲ್ ಹೈ ಸೆ ಸಾತ್ ಫೆರೇ ತಕ್. ನಮ್ಮ ಪ್ರೀತಿ ತನ್ನದೇ ಆದ ಕಥೆ ಬರೆದಿದೆ. ನಮ್ಮ ಎರಡೂ ಪ್ರಪಂಚಗಳು ಹೌದು ಎಂದು ಹೇಳಿವೆ ಎಂದು ಬರೆದುಕೊಂಡಿದ್ದಾರೆ.
ಈ ಹಿಂದೆ ಅಕ್ಟೋಬರ್ ನಲ್ಲಿ ವಿವಾಹ ಪ್ರಮಾಣ ಪತ್ರದ ಫೋಟೋವೊಂದನ್ನು ಸಾರಾ ಖಾನ್ ಇನ್ಸ್ಟಾದಲ್ಲಿ ಅಪ್ ಲೋಡ್ ಮಾಡಿದ್ದರು. ಎರಡು ಧರ್ಮಗಳು, ಒಂದು ಕಥೆ, ಅನಂತ ಪ್ರೀತಿ, ಸಹಿ ಸಹ ಹಾಕಲಾಗಿದೆ ಎಂದು ಬರೆದುಕೊಂಡಿದ್ದರು.