ಧುರಂಧರ್ ಚಿತ್ರದ ಭಾರಿ ಯಶಸ್ಸಿನಿಂದಾಗಿ ಅಕ್ಷಯ್ ಖನ್ನಾ ಇನ್ನು ಮುಂದೆ ದೃಶ್ಯಂ 3 ನಲ್ಲಿ ಕೆಲಸ ಮಾಡಲ್ಲ ಎಂದು ವರದಿಯಾಗಿದೆ.
ಧುರಂಧರ್’ ಸಿನಿಮಾದಲ್ಲಿ ಅಕ್ಷಯ್ ಖನ್ನಾ ರೆಹಮಾನ್ ಡಕಾಯಿತ್ ಎಂಬ ಪಾತ್ರ ಮಾಡಿದ್ದಾರೆ. ಇದು ವಿಲನ್ ಪಾತ್ರ. ಈ ಪಾತ್ರಕ್ಕಾಗಿ ಅವರು 2.5 ಕೋಟಿಯಿಂದ 3 ಕೋಟಿ ರೂಪಾಯಿ ತನಕ ಸಂಭಾವನೆ ಪಡೆದಿದ್ದರು ಎಂಬ ಮಾಹಿತಿ ಹರಿದಾಡುತ್ತಿದೆ. ‘ಧುರಂಧರ್’ ಸೂಪರ್ ಹಿಟ್ ಆಗಿದ್ದೇ ತಡ, ಅಕ್ಷಯ್ ಖನ್ನಾ ಅವರು ಏಕಾಏಕಿ ಸಂಭಾವನೆ ಹೆಚ್ಚಿಸಿಕೊಂಡಿದ್ದಾರೆ ಎನ್ನಲಾಗಿದೆ.
‘ದೃಶ್ಯಂ 3’ ಸಿನಿಮಾದಲ್ಲಿ ಅಕ್ಷಯ್ ಖನ್ನಾ ಅವರು ಒಂದು ಪಾತ್ರ ಮಾಡಬೇಕಿತ್ತು. ಆದರೆ ಈಗ ಅವರು ದೊಡ್ಡ ಮೊತ್ತದ ಸಂಭಾವನೆ ಕೇಳುತ್ತಿರುವುದರಿಂದ ನಿರ್ಮಾಪಕರಿಗೆ ಚಿಂತೆ ಶುರುವಾಗಿದೆ. ಅಲ್ಲದೇ, ಅಕ್ಷಯ್ ಖನ್ನಾ ಅವರು ತಮ್ಮ ಪಾತ್ರದ ಲುಕ್ ಕೂಡ ಬದಲಾಗಬೇಕು ಎಂದು ಹಠ ಹಿಡಿದಿದ್ದಾರಂತೆ. ಈ ವಿಚಾರದಲ್ಲಿ ಚಿತ್ರತಂಡದ ಜೊತೆ ಮಾತುಕಥೆ ನಡೆದು, ಸಫಲವಾಗದ ಪರಿಣಾಮ ಅವರು ಚಿತ್ರತಂಡದಿಂದ ಹೊರನಡೆದಿದ್ದಾರೆ ಎಂಬ ಸುದ್ದಿ ಹಬ್ಬಿದೆ.
ಈ ಸಂಬಂಧ ಚಿತ್ರತಂಡ ಇದುವರೆಗೂ ಯಾವುದೇ ಮಾಹಿತಿ ನೀಡಿಲ್ಲ. ಅಕ್ಷಯ್ ಖನ್ನಾ ಮತ್ತು ನಿರ್ಮಾಪಕರ ನಡುವಿನ ಮಾತುಕತೆಗಳು ಇನ್ನೂ ನಡೆಯುತ್ತಿವೆ ಮತ್ತು ಅವರ ನಿರ್ಗಮನದ ಬಗ್ಗೆ ಯಾವುದೇ ಅಧಿಕೃತ ದೃಢೀಕರಣ ಬಂದಿಲ್ಲ ಎಂಬ ಮಾತುಗಳು ಕೇಳಿ ಬರುತ್ತಿವೆ.