ಬಾಲಿವುಡ್ ಐಕಾನ್ ಸಲ್ಮಾನ್ ಖಾನ್ ಗೆ ಇಂದು ಡಿಸೆಂಬರ್ 27 ರಂದು 60ನೇ ವರ್ಷದ ಹುಟ್ಟುಹಬ್ಬ ಸಂಭ್ರಮ. ಕುಟುಂಬಸ್ಥರು, ಹಲವು ನಟ, ನಟಿಯರು, ಕ್ರಿಕೆಟಿಗರ ಜೊತೆ ಮುಂಬೈಯ ತಮ್ಮ ಫಾರ್ಮ್ ಹೌಸ್ ಪನ್ವೇಲ್ ನಲ್ಲಿ ಹುಟ್ಟುಹಬ್ಬವನ್ನು ಖುಷಿಯಿಂದ ಆಚರಿಸಿಕೊಂಡರು.
ಪನ್ವೇಲ್ ಫಾರ್ಮ್‌ಹೌಸ್‌ನಿಂದ ಹೊರಬಂದ ನಟ, ಹೊರಗೆ ನೆರೆದಿದ್ದ ಮಾಧ್ಯಮ ಸಿಬ್ಬಂದಿಯನ್ನು ಭೇಟಿ ಮಾಡಿದರು.
ಸಲ್ಮಾನ್ ಖಾನ್ ಪಾಪರಾಜಿಗಳೊಂದಿಗೆ ಹುಟ್ಟುಹಬ್ಬದ ಕೇಕ್ ಕತ್ತರಿಸಿ, ಹಂಚಿಕೊಂಡು ತಿಂದು ಖುಷಿಪಟ್ಟರು. ಸಂತೋಷದಿಂದ ಛಾಯಾಗ್ರಾಹಕರಿಗೆ ಫೋಸ್ ನೀಡಿದರು. ಅವರ ಮನೆಯ ಮುಂದೆ ಮಧ್ಯರಾತ್ರಿಯೇ ಸಾವಿರಾರು ಮಂದಿ ಜಮಾಯಿಸಿ ಹುಟ್ಟುಹಬ್ಬ ವಿಶ್ ಮಾಡಿದ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಸಲ್ಮಾನ್ ಖಾನ್ ಅವರ 60 ನೇ ಹುಟ್ಟುಹಬ್ಬದ ಸಂದರ್ಭದಲ್ಲಿ ಬಾಂದ್ರಾ-ವರ್ಲಿ ಸಮುದ್ರ ಸಂಪರ್ಕವು ದೀಪಾಲಂಕಾರದಿಂದ ಬೆಳಗಿತು.
ಬಾಲಿವುಡ್ ನಿಂದ ಆದಿತ್ಯ ರಾಯ್ ಕಪೂರ್, ರಾಕುಲ್ ಪ್ರೀತ್ ಸಿಂಗ್, ಹುಮಾ ಖುರೇಷಿ, ಸಂಜಯ್ ದತ್ ಸೇರಿದಂತೆ ಹಲವರು ಭಾಗಿಯಾಗಿದ್ದರು. ಸಲ್ಮಾನ್ ಅವರ ಕುಟುಂಬ ಸದಸ್ಯರು ಸಹ ಹಾಜರಿದ್ದರು. ಸಹೋದರ ಅರ್ಬಾಜ್ ಖಾನ್ ತಮ್ಮ ಪತ್ನಿ ಶುರಾ ಖಾನ್ ಅವರೊಂದಿಗೆ ಆಗಮಿಸಿದರೆ, ಸೋದರಳಿಯರಾದ ಅರ್ಹಾನ್ ಖಾನ್ ಮತ್ತು ನಿರ್ವಾನ್ ಖಾನ್ ಕೂಡ ಫಾರ್ಮ್ ಹೌಸ್ ಹೊರಗೆ ಕಾಣಿಸಿಕೊಂಡರು. ಸಹೋದರಿ ಅರ್ಪಿತಾ ಖಾನ್ ತಮ್ಮ ಪತಿ ಆಯುಷ್ ಶರ್ಮಾ ಅವರೊಂದಿಗೆ ಆಚರಣೆಯಲ್ಲಿ ಭಾಗವಹಿಸಿದ್ದರು.
ಸಂಜೆಗೆ ಇನ್ನಷ್ಟು ಮೆರುಗು ನೀಡಿದ್ದು, ನಟಿ ಟಬು, ಮಾಜಿ ಕ್ರಿಕೆಟ್ ನಾಯಕ ಎಂಎಸ್ ಧೋನಿ ಪತ್ನಿ ಸಾಕ್ಷಿ ಮತ್ತು ಮಗಳು ಝಿವಾ ಅವರೊಂದಿಗೆ ಬಂದಿದ್ದರು. ಸಲ್ಮಾನ್ ಅವರ ಪೋಷಕರು, ಹಿರಿಯ ಬರಹಗಾರ ಸಲೀಂ ಖಾನ್ ಕೂಡ ಹಾಜರಿದ್ದರು.
ಹುಟ್ಟುಹಬ್ಬದ ಸಂಭ್ರಮದ ಜೊತೆಗೆ, ಸಲ್ಮಾನ್ ಖಾನ್ ಅವರ ಮುಂಬರುವ ಚಿತ್ರ 'ಬ್ಯಾಟಲ್ ಆಫ್ ಗಾಲ್ವಾನ್' ಬಗ್ಗೆ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದು, ನಟ ತಮ್ಮ ಹುಟ್ಟುಹಬ್ಬದಂದು ಚಿತ್ರದ ಬಗ್ಗೆ ಪ್ರಮುಖ ಮಾಹಿತಿಯನ್ನು ಹಂಚಿಕೊಳ್ಳುವ ನಿರೀಕ್ಷೆಯಿದೆ.
ಅಪೂರ್ವ ಲಖಿಯಾ ನಿರ್ದೇಶನದ 'ಬ್ಯಾಟಲ್ ಆಫ್ ಗಾಲ್ವಾನ್' ನಿಜ ಜೀವನದ ಘಟನೆಗಳಿಂದ ಪ್ರೇರಿತವಾಗಿದೆ. ಸಲ್ಮಾನ್ ಖಾನ್ ಫಿಲ್ಮ್ಸ್ ಅಡಿಯಲ್ಲಿ ಅವರೇ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಇದರಲ್ಲಿ ಚಿತ್ರಾಂಗದಾ ಸಿಂಗ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.
ಸನ್ಮಾನ್ ಖಾನ್ ಚಿತ್ರರಂಗಕ್ಕೆ ಕಾಲಿಟ್ಟಿದ್ದು 1988ರಲ್ಲಿ. ‘ಬೀವಿ ಹೋ ತೋ ಐಸಿ’ ಚಿತ್ರದಿಂದ ಅವರು ಬಣ್ಣದ ಬದುಕು ಆರಂಭಿಸಿದರು. ಪ್ರತಿ ಚಿತ್ರಕ್ಕೆ 100 ಕೋಟಿ ರೂಪಾಯಿಗೂ ಅಧಿಕ ಸಂಭಾವನೆ ಪಡೆಯುತ್ತಾರೆ. ಸಲ್ಮಾನ್ ಖಾನ್ ಕೇವಲ ಸಿನಿಮಾಗಳಲ್ಲಿ ನಟಿಸುವುದಲ್ಲದೆ ತಮ್ಮದೇ ಆದ ನಿರ್ಮಾಣ ಸಂಸ್ಥೆಯನ್ನು ಹೊಂದಿದ್ದಾರೆ. ಈ ಕಂಪನಿಯ ಹೆಸರು ಸಲ್ಮಾನ್ ಖಾನ್ ಫಿಲ್ಮ್ಸ್ ಮತ್ತು ಇದು 2011 ರಲ್ಲಿ ಪ್ರಾರಂಭವಾಯಿತು. ಈ ನಿರ್ಮಾಣ ಸಂಸ್ಥೆ ಅನೇಕ ಬ್ಲಾಕ್‌ಬಸ್ಟರ್ ಚಿತ್ರಗಳನ್ನು ನಿರ್ಮಿಸಿದೆ.
ಸಲ್ಮಾನ್ ಖಾನ್ 3,000 ಕೋಟಿ ರೂಪಾಯಿಗಳ ಸಂಪತ್ತಿನ ಮಾಲೀಕರಾಗಿದ್ದಾರೆ. ಸಲ್ಮಾನ್ ಖಾನ್ ಚಲನಚಿತ್ರಗಳಲ್ಲಿ ಮಾತ್ರವಲ್ಲದೇ, ಟಿವಿಯಲ್ಲಿ ಪ್ರಸಿದ್ಧ ರಿಯಾಲಿಟಿ ಶೋ ಬಿಗ್ ಬಾಸ್‌ನ ಹಲವು ಸೀಸನ್‌ಗಳನ್ನು ಸಹ ನಡೆಸಿಕೊಟ್ಟಿದ್ದಾರೆ.
ಇದಲ್ಲದೆ, ಸಲ್ಮಾನ್ ಖಾನ್ ಅನೇಕ ಬ್ರಾಂಡ್‌ಗಳ ಜಾಹೀರಾತುಗಳಲ್ಲಿಯೂ ಕಾಣಿಸಿಕೊಳ್ಳುತ್ತಾರೆ. ಸಲ್ಮಾನ್ ಭಾರತ ಮತ್ತು ದುಬೈನ ಅನೇಕ ಸುಂದರ ಸ್ಥಳಗಳಲ್ಲಿ ಐಷಾರಾಮಿ ಆಸ್ತಿಗಳನ್ನು ಖರೀದಿಸಿದ್ದಾರೆ. ಸಲ್ಮಾನ್ ಚಲನಚಿತ್ರ ನಿರ್ಮಾಣದಿಂದ ಹಿಡಿದು ಫಿಟ್‌ನೆಸ್ ಮತ್ತು ಅನೇಕ ಬ್ರಾಂಡ್‌ಗಳವರೆಗೆ ಭಾರಿ ಹೂಡಿಕೆ ಮಾಡಿದ್ದಾರೆ.