ಟೀಂ ಇಂಡಿಯಾ ಮತ್ತು ಪಂಜಾಬ್ ಕಿಂಗ್ಸ್ ತಂಡದ ಲೆಗ್ ಸ್ಪಿನ್ನರ್ ಯುಜ್ವೇಂದ್ರ ಚಾಹಲ್ ಮತ್ತು ಪತ್ನಿ ಧನಶ್ರೀ ವರ್ಮಾ ವಿಚ್ಛೇದನ ಪಡೆಯುತ್ತಿದ್ದಾರೆ. ಒಂದು ತಿಂಗಳ ಹಿಂದೆ ಧನಶ್ರೀ ತನ್ನ ಗಂಡನ ಮನೆಯಿಂದ ಹೊರಹೋಗಿ ತನ್ನ ಪೋಷಕರ ಮನೆಗೆ ಹಿಂದಿರುಗಿದ್ದಾರೆ. ಇದೀಗ ಚಾಹಲ್ ಮತ್ತು ಧನಶ್ರೀ ಬೇರೆಯಾಗಿ ವಾಸಿಸುತ್ತಿದ್ದಾರೆ.
ದಂಪತಿ ತಮ್ಮ ಇನ್‌ಸ್ಟಾಗ್ರಾಂ ಖಾತೆಗಳಿಂದ ತಾವು ಒಟ್ಟಿಗಿದ್ದ ಎಲ್ಲ ಫೋಟೊಗಳನ್ನು ಅಳಿಸಿದ್ದಾರೆ. ಈ ಸುದ್ದಿಯ ನಡುವೆ, ಧನಶ್ರೀ ಪಂಜಾಬಿನ ಅಗ್ರಗಣ್ಯ ನಟ ಗಿಪ್ಪಿ ಗ್ರೆವಾಲ್ ಅವರೊಂದಿಗೆ ವಿಡಿಯೋದಲ್ಲಿ ಕಾಣಿಸಿಕೊಂಡಿದ್ದಾರೆ. ಇದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.
ಧನಶ್ರೀ ಅವರು 'ಶೂಟಿಂಗ್ ಮಾಡುವಾಗ ಅತ್ಯಂತ ಸಂತೋಷದಾಯಕ' ಎಂಬ ಶೀರ್ಷಿಕೆಯೊಂದಿಗೆ ವಿಡಿಯೋವನ್ನು ಪೋಸ್ಟ್ ಮಾಡಿದ್ದಾರೆ. ಈ ವಿಡಿಯೋಗೆ ಇದೀಗ 94 ಸಾವಿರಕ್ಕೂ ಅಧಿಕ ಲೈಕ್‌ಗಳು ಬಂದಿವೆ.
ಈ ವಿಡಿಯೋಗೆ ಬಳಕೆದಾರರು ತರಹೇವಾರಿ ಕಮೆಂಟ್ ಮಾಡಿದ್ದು, 'ಮೋಸ ಮಾಡುವಾಗ ಸಂತೋಷದಾಯಕ' ಎಂದು ಟ್ರೋಲ್ ಮಾಡಿದ್ದಾರೆ.
ಕಳೆದ ತಿಂಗಳು, ಚಾಹಲ್ ಅವರು ಧನಶ್ರೀ ವರ್ಮಾ ಅವರೊಂದಿಗಿನ ವೈವಾಹಿಕ ಜೀವನದ ಕುರಿತು ಪ್ರತಿಕ್ರಿಯಿಸುವುದನ್ನು ನಿಲ್ಲಿಸುವಂತೆ ಸಾಮಾಜಿಕ ಮಾಧ್ಯಮದಲ್ಲಿ ಅಭಿಮಾನಿಗಳಿಗೆ ವಿನಂತಿಸಿದ್ದರು. ಕೆಲವು ಸಾಮಾಜಿಕ ಮಾಧ್ಯಮ ಪೋಸ್ಟ್‌ಗಳು 'ನಿಜವಾಗಿರಬಹುದು ಅಥವಾ ಇಲ್ಲದಿರಬಹುದು'. ಇಂತಹ ವಿಷಯಗಳ ಕುರಿತು ಊಹಾಪೋಹಗಳನ್ನು ಹರಡುವುದನ್ನು ನಾನು ಗಮನಿಸಿದ್ದೇನೆ ಎಂದು ಹೇಳಿದರು.
'ಒಬ್ಬ ಮಗ, ಸಹೋದರ ಮತ್ತು ಸ್ನೇಹಿತನಾಗಿ, ಈ ಊಹಾಪೋಹಗಳಿಗೆ ಒಳಗಾಗಬೇಡಿ ಎಂದು ನಾನು ಎಲ್ಲರಿಗೂ ವಿನಂತಿಸುತ್ತೇನೆ. ಏಕೆಂದರೆ, ಇದು ನನಗೆ ಮತ್ತು ನನ್ನ ಕುಟುಂಬಕ್ಕೆ ಅಪಾರ ನೋವನ್ನುಂಟು ಮಾಡಿದೆ' ಎಂದು ತಮ್ಮ ಪೋಸ್ಟ್‌ನಲ್ಲಿ ಬರೆದಿದ್ದಾರೆ.
ಧನಶ್ರೀ ವರ್ಮಾ ಬಾಲಿವುಡ್‌ನ ಯಶಸ್ವಿ ನೃತ್ಯ ಸಂಯೋಜಕಿ ಮತ್ತು ಈ ಹಿಂದೆ ಟಾಪ್ ಸ್ಟಾರ್‌ಗಳೊಂದಿಗೆ ಸಾಕಷ್ಟು ಮ್ಯೂಸಿಕ್ ವೀಡಿಯೊಗಳಲ್ಲಿ ಕಾಣಿಸಿಕೊಂಡಿದ್ದಾರೆ.
ಈಮಧ್ಯೆ, ಚಾಹಲ್ ಮುಂದಿನ ತಿಂಗಳು ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2025ನೇ ಆವೃತ್ತಿಯಲ್ಲಿ ಭಾಗವಹಿಸಲು ಸಿದ್ಧರಾಗಿದ್ದಾರೆ. ಪಂಜಾಬ್ ಕಿಂಗ್ಸ್ ತಂಡವು ಅವರನ್ನು 18 ಕೋಟಿ ರೂ. ನೀಡಿ ಖರೀದಿಸಿದೆ.