ಮುಂಬೈ: ಹಿಂದೂಗಳ ಅದರಲ್ಲೂ ಉತ್ತರ ಭಾರತೀಯರ ಪವಿತ್ರ ಹಬ್ಬ ಹೋಳಿಯನ್ನು 'ಛಪ್ರಿಗಳ ಹಬ್ಬ ಎಂದು ಕರೆದ ಆರೋಪದ ಮೇಲೆ ಬಾಲಿವುಡ್ ನಿರ್ದೇಶಕಿ ಮತ್ತು ನೃತ್ಯ ಸಂಯೋಜಕಿ ಫರಾ ಖಾನ್ ವಿರುದ್ಧ ಮುಂಬೈನ ಖಾರ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.
ಫರಾ ಖಾನ್ ವಿರುದ್ಧ ದೂರು ದಾಖಲಿಸಿದ್ದು ಏಕೆ?
ಮೊನ್ನೆ ಫೆಬ್ರವರಿ 20 ರಂದು ಸೆಲೆಬ್ರಿಟಿ ಮಾಸ್ಟರ್‌ಶೆಫ್ ರಿಯಾಲಿಟಿ ಶೋನಲ್ಲಿ ನಡೆದ ಕಾರ್ಯಕ್ರಮದಲ್ಲಿ ಫರಾ ಖಾನ್ ಹೇಳಿರುವ ಮಾತು ಪ್ರಸಾರವಾದ ನಂತರ ಎಫ್ ಐಆರ್ ದಾಖಲಾಗಿದೆ, ಹಿಂದೂಸ್ತಾನಿ ಭಾವು ಎಂದೇ ಪ್ರಸಿದ್ಧರಾದ ವಿಕಾಶ್ ಫಟಕ್ ಅವರು ದೂರು ದಾಖಲಿಸಿದ್ದಾರೆ.
ಫರಾ ಖಾನ್ ‘ಧಾರ್ಮಿಕ ಭಾವನೆಗಳಿಗೆ ಅವಮಾನ ಮಾಡಿದ್ದಾರೆ’
ಫರಾ ಖಾನ್ ನೀಡಿರುವ ಹೇಳಿಕೆ ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ಅವಮಾನವಾಗಿದೆ ಎಂದು ನನ್ನ ಕಕ್ಷಿದಾರ ಹೇಳುತ್ತಾರೆ. ಪವಿತ್ರ ಹಬ್ಬವನ್ನು ವಿವರಿಸಲು ‘ಛಪ್ರಿಸ್’ ಎಂಬ ಪದವನ್ನು ಬಳಸುವುದು ಅತ್ಯಂತ ಅನುಚಿತವಾಗಿದೆ ಮತ್ತು ಕೋಮು ಉದ್ವಿಗ್ನತೆಯನ್ನು ಉಂಟುಮಾಡುವ ಸಾಧ್ಯತೆಯಿದೆ ಎಂದು ವಿಕಾಶ್ ಘಟಕ್ ಅವರ ವಕೀಲ ಕಾಶಿಫ್ ಖಾನ್ ದೇಶ್ ಮುಖ್ ತಿಳಿಸಿದ್ದಾರೆ.
ಈ ಬಗ್ಗೆ ಫರಾ ಖಾನ್ ಇನ್ನೂ ಪ್ರತಿಕ್ರಿಯೆ ನೀಡಿಲ್ಲ. ಅಡುಗೆ ಕಾರ್ಯಕ್ರಮದ ತೀರ್ಪುಗಾರರಲ್ಲಿ ಫರಾ ಖಾನ್ ಕೂಡ ಒಬ್ಬರು. ವಿಕಾಸ್ ಖನ್ನಾ ಮತ್ತು ರಣವೀರ್ ಬ್ರಾರ್ ಇತರ ಇಬ್ಬರು ತೀರ್ಪುಗಾರರಾಗಿದ್ದಾರೆ.
ಫರಾ ಖಾನ್ ನೃತ್ಯ ಸಂಯೋಜಕಿಯಾಗಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು. ಅವರು ಧೋಲ್ ಬಜ್ನೆ ಲಗಾ, ಚೈಯ್ಯ ಚೈಯ್ಯ, ಏಕ್ ಪಲ್ ಕಾ ಜೀನಾ, ಮತ್ತು ಇದಾರ್ ಚಲಾ ಮೈ ಉಧರ್ ಚಲಾ ಸೇರಿದಂತೆ ಪ್ರಸಿದ್ಧ ಹಾಡುಗಳಿಗೆ ನೃತ್ಯ ಸಂಯೋಜನೆ ಮಾಡಿದ್ದಾರೆ.
ಮೈ ಹೂ ನಾ (2004), ಓಂ ಶಾಂತಿ ಓಂ (2007), ತೀಸ್ ಮಾರ್ ಖಾನ್ (2010) ಮತ್ತು ಹ್ಯಾಪಿ ನ್ಯೂ ಇಯರ್ (2014) ನಂತಹ ಚಲನಚಿತ್ರಗಳನ್ನು ನಿರ್ದೇಶಿಸಿ ಫರಾ ಖಾನ್ ಹೆಸರು ಗಳಿಸಿದ್ದಾರೆ.