ಅಲ್ಲು ಅರ್ಜುನ್ ಅವರ ಇತ್ತೀಚಿನ ಬ್ಲಾಕ್ಬಸ್ಟರ್ ಸಿನಿಮಾ 'ಪುಷ್ಪ 2' ಬಾಕ್ಸ್ ಆಫೀಸ್‌ನಲ್ಲಿ ಅಬ್ಬರದ ಓಟ ಮುಂದುವರಿಸಿದೆ. ಹಲವು ದಾಖಲೆಗಳನ್ನು ಮುರಿಯುತ್ತಿದೆ. ಹೀಗಿರುವಾಗ ಬಾಲಿವುಟ್ ನಟ ಅಮಿತಾಬ್ ಬಚ್ಚನ್, ತನ್ನನ್ನು ನಟ ಅಲ್ಲು ಅರ್ಜುನ್ ಅವರೊಂದಿಗೆ ಹೋಲಿಸಬೇಡಿ. ನಾನು ಕೂಡ ಅವರ ದೊಡ್ಡ ಅಭಿಮಾನಿ ಎಂದಿದ್ದಾರೆ.
ಕೌನ್ ಬನೇಗಾ ಕ್ರೋರ್‌ಪತಿ 16ರ ಸಂಚಿಕೆಯಲ್ಲಿ ಅಲ್ಲು ಅರ್ಜುನ್ ಬಗ್ಗೆ ಮೆಚ್ಚುಗೆಯನ್ನು ವ್ಯಕ್ತಪಡಿಸಿದರು. ಸ್ಪರ್ಧಿಯೊಬ್ಬರು ತಾನು ಇಬ್ಬರೂ ನಟರ ಅಭಿಮಾನಿ ಎಂದು ಪ್ರಸ್ತಾಪಿಸಿದಾಗ, ಅಲ್ಲು ಅರ್ಜುನ್ ಅವರು ಅದ್ಭುತ ಪ್ರತಿಭೆ ಮತ್ತು ಯಶಸ್ಸು ಅವರಿಗೆ ಸಿಕ್ಕಿದೆ. ಆದರೆ, ನನ್ನನ್ನು ಅವರಿಗೆ ಹೋಲಿಸಬೇಡಿ ಎಂದು ಮನವಿ ಮಾಡಿದ್ದಾರೆ.
ಹಿಂದೂಸ್ತಾನ್ ಟೈಮ್ಸ್ ವರದಿ ಪ್ರಕಾರ, ಅಮಿತಾಬ್ ಅವರು ನಟ ಅಲ್ಲು ಅರ್ಜುನ್ ಅವರನ್ನು ಹೊಗಳಿದ್ದಾರೆ ಮತ್ತು 'ಪುಷ್ಪ 2' ಚಿತ್ರ ವೀಕ್ಷಿಸುವಂತೆ ಪ್ರೇಕ್ಷಕರಿಗೆ ಒತ್ತಾಯಿಸಿದ್ದಾರೆ.
'ಅಲ್ಲು ಅರ್ಜುನ್ ಅದ್ಭುತ ಪ್ರತಿಭಾವಂತ ಕಲಾವಿದ ಮತ್ತು ಅವರ ಅರ್ಹತೆಗೆ ತಕ್ಕಂತೆ ಅವರಿಗೆ ಮನ್ನಣೆ ಸಿಕ್ಕಿದೆ. ನಾನು ಕೂಡ ಅವರ ದೊಡ್ಡ ಅಭಿಮಾನಿ. ಇತ್ತೀಚೆಗಷ್ಟೇ ಅವರ ಸಿನಿಮಾ ಬಿಡುಗಡೆಯಾಗಿದ್ದು, ಇನ್ನೂ ನೋಡಿಲ್ಲದಿದ್ದರೆ ಕೂಡಲೇ ಸಿನಿಮಾ ನೋಡಿ. ಆದರೆ, ನನ್ನನ್ನು ಅವರೊಂದಿಗೆ ಹೋಲಿಸಬೇಡಿ' ಎಂದು ಅಮಿತಾಬ್ ಬಚ್ಚನ್ ತಿಳಿಸಿದ್ದಾರೆ.
ಈ ಹಿಂದೆ, ನಟ ಅಲ್ಲು ಅರ್ಜುನ್ ಬಚ್ಚನ್ ಅವರು ಜೀವನ ಮತ್ತು ವೃತ್ತಿಜೀವನದ ಸ್ಫೂರ್ತಿ ಎಂದು ಉಲ್ಲೇಖಿಸಿದ್ದರು. ಇದಕ್ಕೆ ಪ್ರತಿಯಾಗಿ ಬಚ್ಚನ್ ತಮ್ಮ ಕೃತಜ್ಞತೆ ತಿಳಿಸಿದ್ದರು. ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿ, 'ಅಲ್ಲುಅರ್ಜುನ್ ಜೀ... ನಿಮ್ಮ ದೊಡ್ಡ ಮಾತುಗಳಿಂದ ನನ್ನ ಹೃದಯ ತುಂಬಿ ಬಂದಿದೆ. ನನ್ನ ಅರ್ಹತೆಗಿಂತ ಹೆಚ್ಚಿನದನ್ನು ನೀವು ನನಗೆ ಹೇಳಿದ್ದೀರಿ... ನಾವೆಲ್ಲರೂ ನಿಮ್ಮ ಕೆಲಸ ಮತ್ತು ಪ್ರತಿಭೆಗೆ ದೊಡ್ಡ ಅಭಿಮಾನಿಗಳು... ನೀವು ನಮ್ಮೆಲ್ಲರಿಗೂ ಸ್ಫೂರ್ತಿ ನೀಡುವುದನ್ನು ಮುಂದುವರಿಸಿರಿ... ನಿಮ್ಮ ನಿರಂತರ ಯಶಸ್ಸಿಗೆ ನನ್ನ ಪ್ರಾರ್ಥನೆ ಮತ್ತು ಹಾರೈಕೆಗಳು!' ಎಂದು ಬರೆದಿದ್ದರು.