ನವದೆಹಲಿ: ಬಹುಬಾಷಾ ನಟಿ ರಶ್ಮಿಕಾ ಮಂದಣ್ಣ ಇತ್ತೀಚೆಗೆ ನೀಡಿದ ಸಂದರ್ಶನವೊಂದರಲ್ಲಿ ಮತ್ತೊಮ್ಮೆ ಅನಿಮಲ್ ಚಿತ್ರದ ವಿವಾದದ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. ಸಂದೀಪ್ ರೆಡ್ಡಿ ವಂಗಾ ನಿರ್ದೇಶನದ ಅನಿಮಲ್ ಚಿತ್ರ ಬಾಕ್ಸ್ ಆಫೀಸ್‌ನಲ್ಲಿ ಯಶಸ್ಸು ಕಂಡಿತು. ಆದರೆ, ಇಂಟರ್ನೆಟ್‌ನ ಒಂದು ಭಾಗವು ಪುರುಷತ್ವ ಮತ್ತು ಸ್ತ್ರೀದ್ವೇಷದ ಬಗ್ಗೆ ಟೀಕಿಸಿತು.
ಇತ್ತೀಚೆಗೆ ಮೋಜೋ ಸ್ಟೋರಿಯಲ್ಲಿ ಬರ್ಖಾ ದತ್ ಅವರೊಂದಿಗಿನ ಮಾತುಕತೆಯಲ್ಲಿ, ತೆರೆ ಮೇಲೆ ಧೂಮಪಾನ ಮಾಡುತ್ತೀರಾ ಎಂದು ಕೇಳಲಾಯಿತು. ತೆರೆ ಮೇಲೆ ಧೂಮಪಾನ ಮಾಡಲು ತಮಗೆ ಹಿಂಜರಿಕೆ ಇದ್ದರೂ, ಅವರು ಚಿತ್ರದಲ್ಲಿ ರಣಬೀರ್ ಕಪೂರ್ ಅವರ ಪಾತ್ರವನ್ನು ಸಮರ್ಥಿಸಿಕೊಂಡರು.
'ನಾನು ಸಿನಿಮಾವನ್ನು ಸಿನಿಮಾವಾಗಿಯೇ ನೋಡಿದೆ. ಒಬ್ಬ ನಾಯಕ ತೆರೆ ಮೇಲೆ ಧೂಮಪಾನ ಮಾಡುವಾಗ, ಅವನು ಇತರರ ಮೇಲೆ ಪ್ರಭಾವ ಬೀರುತ್ತಿದ್ದಾನೆ ಎಂದು ಜನರು ಹೇಳುತ್ತಾರೆ. ಆದರೆ, ಇಂದು ಸಮಾಜದಲ್ಲಿ ಧೂಮಪಾನ ಮಾಡುವುದು ತುಂಬಾ ಸಾಮಾನ್ಯವಾಗಿದೆ. ಯಾವುದೇ ರೀತಿಯಲ್ಲಿ ಪ್ರಭಾವಿತರಾಗಲು ನಾನು ಸಿನಿಮಾ ನೋಡುವುದಿಲ್ಲ. ವೈಯಕ್ತಿಕವಾಗಿ, ನಾನು ತೆರೆ ಮೇಲೆ ಎಂದಿಗೂ ಧೂಮಪಾನ ಮಾಡುವುದಿಲ್ಲ. ಆದರೆ, ಅದು ನನ್ನ ದೃಷ್ಟಿಕೋನ' ಎಂದರು.
'ನಾನು ಅನಿಮಲ್ ಚಿತ್ರದ ಭಾಗವಾಗಿದ್ದು, ಸಿನಿಮಾವನ್ನು ಸಿನಿಮಾದಂತೆ ನೋಡಿ ಎಂದು ನಾನು ಈಗಲೂ ಹೇಳುತ್ತೇನೆ. ನೀವು ಸಿನಿಮಾಗಳನ್ನು ನೋಡುವುದರಿಂದ ಪ್ರಭಾವಿತರಾಗುತ್ತೀರಿ ಎಂದರೆ, ನಿಮಗೆ ಒಪ್ಪುವಂತಹ ಚಿತ್ರಗಳನ್ನು ಮಾತ್ರ ನೋಡಿ. ಯಾರೂ ಯಾರನ್ನೂ ಯಾವುದೇ ಚಿತ್ರ ನೋಡಲು ಒತ್ತಾಯಿಸುವುದಿಲ್ಲ. ಹಾಗಿದ್ದಲ್ಲಿ, ಪ್ರತಿ ಚಿತ್ರವೂ ಬ್ಲಾಕ್‌ಬಸ್ಟರ್ ಆಗುತ್ತಿತ್ತು' ಎಂದು ರಶ್ಮಿಕಾ ಹೇಳಿದರು.
ಚಿತ್ರಕ್ಕೆ ಬಂದ ಪ್ರತಿಕ್ರಿಯೆಗೆ ಪ್ರತಿಕ್ರಿಯಿಸಿದ ರಶ್ಮಿಕಾ, 'ಮಾನವರು ಸಂಕೀರ್ಣರು. ಯಾರೂ ಸಂಪೂರ್ಣವಾಗಿ ಒಳ್ಳೆಯವರಲ್ಲ ಅಥವಾ ಸಂಪೂರ್ಣವಾಗಿ ಕೆಟ್ಟವರಲ್ಲ; ನಾವೆಲ್ಲರೂ ನ್ಯೂನತೆಗಳು ಮತ್ತು ಸಾಮರ್ಥ್ಯಗಳನ್ನು ಹೊಂದಿದ್ದೇವೆ. ಸಂದೀಪ್ ರೆಡ್ಡಿ ವಂಗಾ ತಮ್ಮ ಚಿತ್ರದಲ್ಲಿ ದೋಷಪೂರಿತ, ಭಾವನಾತ್ಮಕವಾಗಿ ಸಂಕೀರ್ಣವಾದ ಪಾತ್ರವನ್ನು ಸರಳವಾಗಿ ಚಿತ್ರಿಸಿದ್ದಾರೆ ಮತ್ತು ಅದರ ಅರ್ಥ ಅವರು ಕೆಟ್ಟ ನಡವಳಿಕೆಯನ್ನು ಉತ್ತೇಜಿಸುತ್ತಿದ್ದಾರೆ ಎಂದಲ್ಲ. ಅವರು ಮಾನವ ಸ್ವಭಾವದ ವಾಸ್ತವಿಕ ಭಾಗವನ್ನು ತೋರಿಸುತ್ತಿದ್ದಾರೆ' ಎಂದು ಹೇಳಿದರು.
'ಚಿತ್ರವು ಯಶಸ್ಸು ಕಂಡಿದ್ದರಿಂದ ಜನರು ಅದನ್ನು ಹೈಲೈಟ್ ಮಾಡಿದ್ದಾರೆಂದು ನನಗೆ ಅನ್ನಿಸುತ್ತದೆ. ಈ ಮಾತುಗಳಿಂದ ನಾನು ತೊಂದರೆಗೊಳಗಾಗಬೇಕಾಗಿಲ್ಲ. ನಾವು ಈ ಚಿತ್ರವನ್ನು ಮಾಡಿದ್ದೇವೆ. ಅದು ಕೆಲಸ ಮಾಡಿದೆ. ಜನರು ಅದನ್ನು ಇಷ್ಟಪಟ್ಟರು ಅಥವಾ ಇಷ್ಟಪಡಲಿಲ್ಲ ಎಂಬುದು ಅವರ ವೈಯಕ್ತಿಕ ವಿಷಯ. ಜನರು ನಿಜವಾಗಿಯೂ ಚಿತ್ರವನ್ನು ಚಿತ್ರವಾಗಿಯೇ ನೋಡಬೇಕು ಮತ್ತು ಈ ಪಾತ್ರ ಮಾಡಿದ್ದಕ್ಕಾಗಿ ನಟನನ್ನು ಜಡ್ಜ್ ಮಾಡಬಾರದು ನಿರ್ಣಯಿಸಬಾರದು. ಇದು ನಟನೆಯಷ್ಟೆ' ಎಂದರು.