ನವದೆಹಲಿ: ಬಾಲಿವುಟ್ ನಟ ಅಭಿಷೇಕ್ ಬಚ್ಚನ್ ಮತ್ತು ನಟಿ ಐಶ್ವರ್ಯಾ ರೈ ಅವರ ಸಂಬಂಧದ ಬಗ್ಗೆ ಕಳೆದ ಒಂದು ವರ್ಷದಿಂದ ಊಹಾಪೋಹಗಳು ವರದಿಯಾಗುತ್ತಲೇ ಇವೆ. ಹೀಗಿದ್ದರೂ, ಯಾವುದೇ ಸ್ಪಷ್ಟನೆ ನೀಡುವ ಗೋಜಿಗೆ ಹೋಗದ ನಟ ಅಭಿಷೇಕ್ ಇಧೀಗ ಮೌನ ಮುರಿದಿದ್ದು, ಅಂತಹ ತಪ್ಪು ಮಾಹಿತಿಯಿಂದಾಗಿ ತನ್ನ ಮತ್ತು ತನ್ನ ಕುಟುಂಬದ ಮೇಲೆ ಹೇಗೆ ಪರಿಣಾಮ ಬೀರಿತು ಎಂಬುದರ ಕುರಿತು ಮಾತನಾಡಿದ್ದಾರೆ.
'ಈ ಹಿಂದೆ, ನನ್ನ ಬಗ್ಗೆ ಹೇಳಲಾದ ಯಾವುದೇ ವಿಷಯಗಳು ನನ್ನ ಮೇಲೆ ಪರಿಣಾಮ ಬೀರಿರಲಿಲ್ಲ. ಆದರೆ ಇಂದು, ನನಗೆ ಒಂದು ಕುಟುಂಬವಿದೆ ಮತ್ತು ಅಂತಹ ವದಂತಿಗಳು ಕುಟುಂಬಕ್ಕೆ ಅಸಮಾಧಾನ ಉಂಟುಮಾಡುತ್ತದೆ. ನಾನು ಏನೇ ಸ್ಪಷ್ಟಪಡಿಸಿದರೂ, ಜನರು ಅದನ್ನು ತಮಗೆ ಬೇಕಾದಂತೆ ತಿರುಗಿಸುತ್ತಾರೆ. ಏಕೆಂದರೆ, ನಕಾರಾತ್ಮಕ ಸುದ್ದಿಗಳು ಬೇಗ ಮತ್ತು ಹೆಚ್ಚು ಮಾರಾಟವಾಗುತ್ತವೆ. ನೀವು ನಾನಾಗಲು ಸಾಧ್ಯವಿಲ್ಲ. ನೀವು ನನ್ನ ಜೀವನವನ್ನು ನಡೆಸಲು ಆಗುವುದಿಲ್ಲ. ನಾನು ಯಾರಿಗೆ ಉತ್ತರಿಸಬೇಕೋ ಅವರಿಗೆ ನನ್ನ ಪರವಾಗಿ ನೀವು ಉತ್ತರಿಸಬೇಕಾಗಿಲ್ಲ' ಎಂದು ನಟ ಇಟೈಮ್ಸ್‌ಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.
'ಇಂತಹ ನಕಾರಾತ್ಮಕತೆಯನ್ನು ಹೊರಹಾಕುವ ಜನರು ತಮ್ಮ ಆತ್ಮಸಾಕ್ಷಿಯೊಂದಿಗೆ ಬದುಕಬೇಕಾಗುತ್ತದೆ. ಅವರು ತಮ್ಮ ಆತ್ಮಸಾಕ್ಷಿಯೊಂದಿಗೆ ವ್ಯವಹರಿಸಬೇಕು ಮತ್ತು ತಮ್ಮ ಸೃಷ್ಟಿಕರ್ತನಿಗೆ ಉತ್ತರಿಸಬೇಕು. ನೋಡಿ, ಇದು ನನಗೆ ಮಾತ್ರ ಆಗುತ್ತಿಲ್ಲ. ಆದ್ದರಿಂದ ಇದು ನನ್ನ ಮೇಲೆ ಪರಿಣಾಮ ಬೀರುವುದಿಲ್ಲ. ಈ ಸ್ಥಳದ ಕಪಟತನ ಏನೆಂದು ನನಗೆ ತಿಳಿದಿದೆ. ಇದರಲ್ಲಿ ಕುಟುಂಬಗಳು ಭಾಗಿಯಾಗಿವೆ. ಟ್ರೋಲಿಂಗ್‌ನ ಈ ಹೊಸ ಪ್ರವೃತ್ತಿಗೆ ನಾನು ನಿಮಗೆ ಒಂದು ಉತ್ತಮ ಉದಾಹರಣೆಯನ್ನು ನೀಡುತ್ತೇನೆ' ಎಂದು ಅವರು ಹೇಳಿದರು.
ಅಭಿಷೇಕ್ ಬಚ್ಚನ್ ತಮ್ಮ ಸಾಮಾಜಿಕ ಮಾಧ್ಯಮ ಪೋಸ್ಟ್‌ವೊಂದಕ್ಕೆ ಮಾಡಿದ ಕೆಟ್ಟ ಕಮೆಂಟ್ ಬಗ್ಗೆ ಹೇಳಿದರು. ಅದರಿಂದ ಅವರಿಗೆ ತೀವ್ರ ನೋವುಂಟಾಯಿತು. ಇದರಿಂದ ಕೋಪಗೊಂಡ ಅವರ ಸ್ನೇಹಿತ ಸಿಕಂದರ್ ಖೇರ್, ತಮ್ಮ ವಿಳಾಸವನ್ನು ಸಾರ್ವಜನಿಕವಾಗಿ ಪೋಸ್ಟ್ ಮಾಡುವ ಮೂಲಕ ಪ್ರತಿಕ್ರಿಯಿಸಿದರು ಮತ್ತು ಟ್ರೋಲ್ ಮಾಡಿದವರು ನೇರವಾಗಿ ಅವರನ್ನು ಎದುರಿಸಲು ಸವಾಲೆಸೆದರು.
'ಕಂಪ್ಯೂಟರ್ ಪರದೆಯ ಹಿಂದೆ ಅತ್ಯಂತ ಅಸಹ್ಯಕರ ವಿಷಯಗಳನ್ನು ಬರೆಯುವುದು ತುಂಬಾ ಸುಲಭ. ನೀವು ಯಾರನ್ನೋ ನೋಯಿಸುತ್ತಿರುವಿರಿ ಎಂಬುದು ನಿಮಗೂ ತಿಳಿದಿರುತ್ತದೆ. ಅವರು ಎಷ್ಟೇ ದಪ್ಪ ಚರ್ಮದವರಾಗಿದ್ದರೂ, ಅದು ಅವರ ಮೇಲೆ ಪರಿಣಾಮ ಬೀರುತ್ತದೆ. ಯಾರಾದರೂ ನಿಮಗೆ ಹಾಗೆ ಮಾಡಿದರೆ ನೀವು ಅದನ್ನು ಇಷ್ಟಪಡುವಿರಾ?' ಎಂದು ನಟ ಹೇಳಿದರು.
'ನೀವು ಎಲ್ಲೋ ಕುಳಿತು ಇಂಟರ್ನೆಟ್‌ನಲ್ಲಿ ನನ್ನ ಬಗ್ಗೆ ಹೇಳುವುದಾದರೆ, ನೇರವಾಗಿ ಬಂದು ನನ್ನ ಎದುರಿಗೆ ಹೇಳಬೇಕೆಂದು ನಾನು ಸವಾಲೆಸೆಯುತ್ತೇನೆ. ಆದರೆ, ಆ ವ್ಯಕ್ತಿಗೆ ನನ್ನೆದುರಿಗೆ ಬಂದು ಹೇಳುವ ಧೈರ್ಯ ಎಂದಿಗೂ ಇರುವುದಿಲ್ಲ. ಯಾರಾದರೂ ಬಂದು ನನ್ನ ಎದುರಿಗೆ ಏನಾದರೂ ಹೇಳಿದರೆ, ಅವರಿಗೆ ದೃಢನಿಶ್ಚಯವಿದೆ ಎಂದು ನಾನು ಭಾವಿಸುತ್ತೇನೆ. ನಾನು ಅದನ್ನು ಗೌರವಿಸುತ್ತೇನೆ' ಎಂದು ಹೇಳಿದರು.
ಅಭಿಷೇಕ್ ಬಚ್ಚನ್ ಮುಂದಿನ 'ಕಾಳಿಧರ್ ಲಾಪಾಟ' ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಮಧುಮಿತಾ ನಿರ್ದೇಶನದ ಈ ಚಿತ್ರದಲ್ಲಿ ದೈವಿಕ್ ಭಾಗೇಲಾ ಮತ್ತು ಜೀಶನ್ ಅಯ್ಯೂಬ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಇದು ಜುಲೈ 4 ರಂದು ZEE5 ನಲ್ಲಿ ಬಿಡುಗಡೆಯಾಗಲಿದೆ.