ಮುಂಬೈ: ಛತ್ರಪತಿ ಶಿವಾಜಿ ಮಹಾರಾಜ್ ಜೀವನಾಧಾರಿತ ಛಾವಾ ಚಿತ್ರದ ವೀಕ್ಷಣೆ ವೇಳೆ ಕ್ಷುಲ್ಲಕ ಜೋಕ್ ಮಾಡಿ ಗಹಗಹಿಸಿ ನಗುತ್ತಿದ್ದ ಐದು ಮಂದಿ ಕಿಡಿಗೇಡಿಗಳನ್ನು ಪ್ರೇಕ್ಷಕರೇ ಹಿಡಿದು ಕ್ಷಮೆ ಕೇಳಿಸಿರುವ ವಿಡಿಯೋ ವೈರಲ್ ಆಗುತ್ತಿದೆ.
ನವಿ ಮುಂಬೈನ ಕೋಪರ್ ಖೈರಾನೆ ಪ್ರದೇಶದಲ್ಲಿ ಈ ಘಟನೆ ವರದಿಯಾಗಿದ್ದು, ಇಲ್ಲಿನ ಬಾಲಾಜಿ ಮೂವಿಪ್ಲೆಕ್ಸ್ ಥಿಯೇಟರ್‌ನಲ್ಲಿ ವಿಕ್ಕಿ ಕೌಶಲ್ ಮತ್ತು ರಶ್ಮಿಕಾ ಮಂದಣ್ಣ ಅಭಿನಯದ ಛಾವಾ ಚಲನಚಿತ್ರ ಪ್ರದರ್ಶನದ ವೇಳೆ ಐದು ಮಂದಿ ಶಿವಾಜಿ ಕುರಿತು ಕ್ಷುಲ್ಲಕ ಜೋಕ್ ಮಾಡಿ ನಗಾಡಿದ್ದಾರೆ. ಈ ವೇಳೆ ಚಿತ್ರ ಮಂದಿರದಲ್ಲಿದ್ದ ಇತರೆ ಪ್ರೇಕ್ಷಕರು ಈ ಐದು ಮಂದಿಯ ವರ್ತನೆಗೆ ಆಕ್ಷೇಪ ಮಾಡಿದ್ದು ಶಿವಾಜಿ ಮಹಾರಾಜರ ಕುರಿತು ಕ್ಷುಲ್ಲಕ ಜೋಕ್ ಮಾಡದಂತೆ ಎಚ್ಚರಿಕೆ ನೀಡಿದ್ದಾರೆ.
ಈ ವೇಳೆ ಮಾತು ಕೇಳದ ಯುವಕರ ತಂಡ ಮಾತಿಗೆ ಮಾತು ಬೆಳೆಸಿದ್ದಾರೆ. ಇದೇ ಸಂದರ್ಭದಲ್ಲಿ ಚಿತ್ರಮಂದಿರದಲ್ಲಿದ್ದ ಮತ್ತಷ್ಟು ಪ್ರೇಕ್ಷಕರು ಯುವಕರ ವಿರುದ್ಧ ತಿರುಗಿಬಿದ್ದಿದ್ದು, ಯುವಕರನ್ನು ಪ್ರಶ್ನೆ ಮಾಡಿದ್ದಾರೆ. ಈ ವೇಳೆ ಇದು ನಿಮ್ಮ ಕರ್ಮಭೂಮಿ.. ಅನ್ನ ಅರಸಿ ಬಂದ ನೀವು ಇಲ್ಲಿನ ಸಂಸ್ಕೃತಿ ಮತ್ತು ನಂಬಿಕೆಗಳಿಗೆ ಗೌರವ ನೀಡಬೇಕು. ಈ ವೇಳೆ ಮೆತ್ತಗಾದ ಯುವಕರು ಕ್ಷಮೆ ಕೇಳುತ್ತೇವೆ ಎಂದು ಹೇಳಿದ್ದಾರೆ. ಆದರೆ ಇದಕ್ಕೆ ಒಪ್ಪದ ಇತರೆ ಪ್ರೇಕ್ಷಕರು ಚಿತ್ರಮಂದಿರದಲ್ಲೇ ಐವರನ್ನೂ ಮಂಡಿಯೂರಿಸಿ ಶಿವಾಜಿ ಮಹಾರಾಜರಿಗೆ ಜೈಕಾರ ಹಾಕಿ ಕ್ಷಮೆ ಕೇಳುವಂತೆ ಸೂಚಿಸಿದ್ದಾರೆ.
ಪ್ರೇಕ್ಷಕರ ಮಾತಿನಂತೆ ಯುವಕರು ಮಂಡಿಯೂರಿ ಕ್ಷಮೆ ಕೇಳಿದ್ದು ಮಾತ್ರವಲ್ಲದೇ ಶಿವಾಜಿ ಮಹಾರಾಜರಿಗೆ ಜೈಕಾರ ಹಾಕಿದ್ದಾರೆ. ಇವಿಷ್ಟೂ ಘಟನೆಯನ್ನು ಪ್ರೇಕ್ಷಕರೊಬ್ಬರು ಮೊಬೈಲ್ ನಲ್ಲಿ ಸೆರೆ ಹಿಡಿದಿದ್ದಾರೆ.
ಆಗಿದ್ದೇನು?
ಛಾವಾ ಚಿತ್ರದ ಅಂತಿಮ ಭಾಗದಲ್ಲಿ ಔರಂಗಜೇಬ್ ಮತ್ತು ಆತನ ಸೇನೆ ಸಂಭಾಜಿ ಮಹಾರಾಜರನ್ನು ಸೆರೆ ಹಿಡಿದು ಅವರ ಚರ್ಮ ಸುಲಿಯುವ ಸೀನ್ ಬರುತ್ತದೆ. ಇದನ್ನು ನೋಡಿ ಈ ಯುವಕರು ಕ್ಷುಲ್ಲಕ ಜೋಕ್ ಮಾಡಿ ಗಹಗಹಿಸಿ ನಕ್ಕಿದ್ದಾರೆ. ಇದೇ ಕಾರಣಕ್ಕೆ ಪ್ರೇಕ್ಷಕರು ಇವರನ್ನು ತೀವ್ರ ತರಾಟೆಗೆ ತೆಗೆದುಕೊಂಡು ಕ್ಷಮೆ ಯಾಚಿಸುವಂತೆ ಮಾಡಿದ್ದಾರೆ.