ದಕ್ಷಿಣ ಭಾರತದ ಚಿತ್ರೋದ್ಯಮದಲ್ಲಿ ಹಲವು ಪಾತ್ರಗಳಲ್ಲಿ ಅಭಿನಯಿಸಿರುವ ಖ್ಯಾತ ನಟ ಕಿಶೋರ್ ಅವರು ಪ್ರತಿಯೊಂದು ಪಾತ್ರದ ಮೂಲಕವೂ ಮಿಂಚುವ ಸಾಮರ್ಥ್ಯವನ್ನು ಹೊಂದಿದ್ದಾರೆ. ಅಪ್ಪಟ ಕನ್ನಡದ ಪ್ರತಿಭೆ ಕಿಶೋರ್ ಅವರು ಈಗಾಗಲೇ ಕನ್ನಡ, ತಮಿಳು ಮತ್ತು ತೆಲುಗು ಸಿನಿಮಾಗಳಲ್ಲಿ ಮಿಂಚಿದ್ದು, ಇದೀಗ ಬಾಲಿವುಡ್‌ನಲ್ಲೂ ತಮ್ಮ ಛಾಪು ಮೂಡಿಸಲು ಸಜ್ಜಾಗಿದ್ದಾರೆ.
ಕಿಶೋರ್ ಅಭಿನಯದ ಮೊದಲ ಬಾಲಿವುಡ್ ಸಿನಿಮಾ 'ಸಿಕಂದರ್' ಈದ್‌ಗೆ ಬಿಡುಗಡೆಯಾಗಲಿದ್ದು, ಈ ಸಿನಿಮಾದಲ್ಲಿ ಬಾಲಿವುಡ್ ಭಾಯಿಜಾನ್ ಸಲ್ಮಾನ್ ಖಾನ್ ನಾಯಕ ನಟನಾಗಿ ಅಭಿನಯಿಸಿದ್ದಾರೆ.
ಎ.ಆರ್. ಮುರುಗದಾಸ್ ನಿರ್ದೇಶನದ ಮತ್ತು ಸಾಜಿದ್ ನಾಡಿಯಾಡ್‌ವಾಲಾ ನಿರ್ಮಿಸಿರುವ ಸಿಕಂದರ್ ಚಿತ್ರದಲ್ಲಿ ರಶ್ಮಿಕಾ ಮಂದಣ್ಣ ನಾಯಕಿಯಾಗಿ ಮತ್ತು ಸತ್ಯರಾಜ್ ಖಳನಾಯಕನಾಗಿ ನಟಿಸಿದ್ದಾರೆ. ಇನ್ಸ್‌ಪೆಕ್ಟರ್ ಪ್ರಕಾಶ್ ಪಾತ್ರದಲ್ಲಿ ಕಿಶೋರ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
"ಇದು ಒಂದು ಸಣ್ಣ ಪಾತ್ರ ಮತ್ತು ನನಗೆ ಸಲ್ಮಾನ್ ಖಾನ್ ಹಾಗೂ ಸತ್ಯರಾಜ್ ಅವರೊಂದಿಗೆ ಪರದೆ ಹಂಚಿಕೊಳ್ಳುವ ಅವಕಾಶ ಸಿಕ್ಕಿದೆ. ಆದರೆ ಇಷ್ಟು ದೊಡ್ಡ ಕ್ಯಾನ್ವಾಸ್‌ನಲ್ಲಿ ಕೆಲಸ ಮಾಡುವುದು ಒಂದು ಒಳ್ಳೆಯ ಅನುಭವವಾಗಿತ್ತು" ಎಂದು ಅವರು ಹೇಳಿದ್ದಾರೆ.
ಕಿಶೋರ್ ಅವರು ಸಿಕಂದರ್ ಮೂಲಕ ಬಾಲಿವುಡ್‌ಗೆ ಪದಾರ್ಪಣೆ ಮಾಡುತ್ತಿದ್ದು, ಇದರ ಜೊತೆಗೆ ಇನ್ನೂ ಕೆಲವು ಹಿಂದಿ ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ಆದರೆ ಅವು ಇನ್ನೂ ಬಿಡುಗಡೆಯಾಗಬೇಕಿದೆ ಎಂದು ಅವರು ತಿಳಿಸಿದ್ದಾರೆ.
"ನಾನು ನವಾಜುದ್ದೀನ್ ಸಿದ್ದಿಕಿ ಅವರೊಂದಿಗೆ ಒಂದು ಹಿಂದಿ ಚಿತ್ರದಲ್ಲಿ ಕೆಲಸ ಮಾಡಿದ್ದೇನೆ. ಅದು ಪ್ರಸ್ತುತ ಪೋಸ್ಟ್-ಪ್ರೊಡಕ್ಷನ್‌ನಲ್ಲಿದೆ ಮತ್ತು ನನ್ನ ಬಳಿ ರೆಡ್ ಕಾಲರ್ ಎಂಬ ಇನ್ನೊಂದು ಸಿನಿಮಾ ಸಹ ಇದೆ. ಅದು ಶೀಘ್ರದಲ್ಲೇ ಬಿಡುಗಡೆಯಾಗಲಿದೆ." ಹಿಂದಿ ಸಿನಿಮಾವನ್ನು ಅಪ್ಪಿಕೊಳ್ಳುತ್ತಿದ್ದಂತೆ, ಕಿಶೋರ್ ಭಾರತೀಯ ಭಾಷೆಗಳಲ್ಲಿ ತಮ್ಮ ಪ್ರಯಾಣವು ಅತ್ಯಂತ ಶ್ರೀಮಂತವಾಗಿದೆ ಎಂದು ಒಪ್ಪಿಕೊಳ್ಳುತ್ತಾರೆ. "ನಾನು ಇನ್ನೂ ಮರಾಠಿ ಸಿನಿಮಾಕ್ಕೆ ಕಾಲಿಟ್ಟಿಲ್ಲ" ಎಂದು ಸಹ ಅವರು ಹೇಳಿದ್ದಾರೆ.
"ಸೆಟ್‌ನಲ್ಲಿ ತುಂಬಾ ಜನರಿದ್ದರೂ ಸಹ ಸಲ್ಮಾನ್ ಖಾನ್ ಪ್ರತಿದಿನ ಎಲ್ಲರನ್ನು ಭೇಟಿಯಾಗಿ ಆತ್ಮೀಯವಾಗಿ ಮಾತನಾಡುತ್ತಾರೆ. ಎಲ್ಲರಿಗೂ ನಿರಾಳತೆಯನ್ನುಂಟುಮಾಡುವ ಮಾರ್ಗ ಅವರಲ್ಲಿದೆ" ಎಂದು ಕಿಶೋರ್ ಹೇಳಿದ್ದಾರೆ.
"ಈ ಚಿತ್ರದಲ್ಲಿ ಕರ್ನಾಟಕದ ಕೆಲವು ಜನ ಕೆಲಸ ಮಾಡುತ್ತಿದ್ದಾರೆ ಮತ್ತು ನನ್ನ ಸಂದರ್ಶನ ನಡೆಸಿದ್ದ ಆರ್‌ಜೆ ಕೂಡ ಈ ಸಿನಿಮಾದ ಭಾಗವಾಗಿದ್ದಾರೆ. ಇದು ಸೆಟ್ ನಲ್ಲಿ ನನಗೆ ಮತ್ತಷ್ಟು ಆರಾಮದಾಯಕವೆನಿಸಿತು. ನನಗೆ ಕಿರಿಕ್ ಪಾರ್ಟಿಯ ರಶ್ಮಿಕಾ ಪರಿಚಯವಿತ್ತು ಮತ್ತು ಅವರೊಂದಿಗೆ ಹಲವು ಬಾರಿ ಮಾತನಾಡಿದ್ದೇನೆ" ಎಂದು ಕಿಶೋರ್ ನೆನಪಿಸಿಕೊಳ್ಳುತ್ತಾರೆ.
ಸಿಕಂದರ್‌ನಲ್ಲಿ ಕೆಲಸ ಮಾಡುವ ಮೂಲಕ ಬಾಲಿವುಡ್ ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬುದರ ಬಗ್ಗೆ ನಾನು ಮತ್ತಷ್ಟು ಆಳವಾಗಿ ತಿಳಿದುಕೊಳ್ಳಲು ಒಂದು ಅವಕಾಶ ಸಿಕ್ಕಿದು" ಎಂದು ಅವರು ಹೇಳಿದ್ದಾರೆ.