ನವದೆಹಲಿ: ಬಾಲಿವುಡ್ ಸೂಪರ್ ಸ್ಟಾರ್ ಸಲ್ಮಾನ್ ಖಾನ್ ಮತ್ತು ರಶ್ಮಿಕಾ ಮಂದಣ್ಣ ಅಭಿನಯದ 'ಸಿಕಂದರ್' ಚಿತ್ರ ಬಿಡುಗಡೆಯಾದ ಮೊದಲ ದಿನವೇ ವಿಶ್ವದಾದ್ಯಂತ ಬಾಕ್ಸ್ ಆಫೀಸ್‌ನಲ್ಲಿ ಭರ್ಜರಿ ಕಲೆಕ್ಷನ್ ಮಾಡಿದೆ ಎಂದು ನಿರ್ಮಾಪಕರು ತಿಳಿಸಿದ್ದಾರೆ.
ಎಆರ್ ಮುರುಗದಾಸ್ ನಿರ್ದೇಶನದ ಈ ಚಿತ್ರವನ್ನು ಸಾಜಿದ್ ನಾಡಿಯಾಡ್‌ವಾಲಾ ತಮ್ಮ ನಾಡಿಯಾಡ್‌ವಾಲಾ ಗ್ರ್ಯಾಂಡ್ಸನ್ ಎಂಟರ್‌ಟೈನ್‌ಮೆಂಟ್ ಬ್ಯಾನರ್ ಅಡಿಯಲ್ಲಿ ನಿರ್ಮಿಸಿದ್ದಾರೆ. ಚಿತ್ರವು ಮಾರ್ಚ್ 30ರಂದು ದೇಶದಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದೆ.
ಪತ್ರಿಕಾ ಪ್ರಕಟಣೆಯ ಪ್ರಕಾರ, ಈ ಚಿತ್ರವು ವಿಶ್ವದಾದ್ಯಂತ ಬಾಕ್ಸ್ ಆಫೀಸ್‌ನಲ್ಲಿ 54 ಕೋಟಿ ರೂ. ಗಳಿಸಿದೆ ಮತ್ತು ದೇಶೀಯ ಗಲ್ಲಾ ಪೆಟ್ಟಿಗೆಯಲ್ಲಿ 30.06 ಕೋಟಿ ರೂ. ಗಳಿಸಿದೆ ಎಂದು ತಿಳಿಸಿದ್ದಾರೆ.
ಫಿಲ್ಮ್ ಟ್ರೇಡ್ ಟ್ರ್ಯಾಕಿಂಗ್ ಪೋರ್ಟಲ್ Sacnilk ಪ್ರಕಾರ, ಈ ಚಿತ್ರವು ಬಿಡುಗಡೆಯಾದ ಮೊದಲ ದಿನ ದೇಶೀಯ ಗಲ್ಲಾಪೆಟ್ಟಿಗೆಯಲ್ಲಿ 26 ಕೋಟಿ ರೂ. ಗಳಿಸಿದೆ.
ಭಾನುವಾರ ಚಿತ್ರ ಬಿಡುಗಡೆಯಾಗುವ ಕೆಲವೇ ಗಂಟೆಗಳ ಮೊದಲು ಚಿತ್ರ ಆನ್‌ಲೈನ್‌ನಲ್ಲಿ ಸೋರಿಕೆಯಾಗಿದೆ ಎಂದು ವರದಿಯಾಗಿದೆ ಮತ್ತು ನಂತರ ಸುಮಾರು 600 ವೆಬ್‌ಸೈಟ್‌ಗಳಿಂದ ಚಿತ್ರವನ್ನು ತೆಗೆದುಹಾಕಲಾಗಿದೆ.
'ಸಿಕಂದರ್' ಚಿತ್ರದಲ್ಲಿ ಕಾಜಲ್ ಅಗರ್ವಾಲ್, ಸತ್ಯರಾಜ್, ಶರ್ಮಾನ್ ಜೋಶಿ, ಪ್ರತೀಕ್ ಬಬ್ಬರ್, ಅಂಜಿನಿ ಧವನ್ ಮತ್ತು ಜತಿನ್ ಸರ್ನಾ ಕೂಡ ನಟಿಸಿದ್ದಾರೆ.