ಇಂದು ಮಂಗಳವಾರ ಬೆಳಗ್ಗೆಯೇ ಬಾಲಿವುಡ್ ಹಿರಿಯ ನಟ ಧರ್ಮೇಂದ್ರ ಇನ್ನಿಲ್ಲ ಎಂಬ ಸುದ್ದಿ ಮಾಧ್ಯಮಗಳಲ್ಲೆಲ್ಲಾ ಹರಿದಾಡಿತು. ಆದರೆ ಅದು ಸುಳ್ಳು, ಅವರೀಗ ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಯಲ್ಲಿ ವೆಂಟಿಲೇಟರ್ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ, ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಸ್ವತಃ ಅವರ ಪುತ್ರಿ ಇಶಾ ಡಿಯೋಲ್ ಸೋಷಿಯಲ್ ಮೀಡಿಯಾ ಮೂಲಕ ಸ್ಪಷ್ಟನೆ ನೀಡಿದ್ದಾರೆ.
89 ವರ್ಷದ ಬಾಲಿವುಡ್ ಶೋಮ್ಯಾನ್ ಧರ್ಮೇಂದ್ರ ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಯಲ್ಲಿ ತೀವ್ರ ನಿಗಾ ಘಟಕದಲ್ಲಿ ಇರುವುದರಿಂದ ಅವರ ಆರೋಗ್ಯದ ಬಗ್ಗೆ ಸುಳ್ಳು ಸುದ್ದಿಗಳನ್ನು ಹರಡುವುದನ್ನು ನಿಲ್ಲಿಸುವಂತೆ ಮಾಧ್ಯಮಗಳನ್ನು ಒತ್ತಾಯಿಸಿದ್ದಾರೆ.
ಮಾಧ್ಯಮಗಳು ಅತಿರೇಕದ ಸುಳ್ಳು ಸುದ್ದಿಗಳನ್ನು ಹರಡುತ್ತಿವೆ. ನನ್ನ ತಂದೆ ಆರೋಗ್ಯ ಸ್ಥಿರವಾಗಿದ್ದು ಚೇತರಿಸಿಕೊಳ್ಳುತ್ತಿದ್ದಾರೆ. ನಮ್ಮ ಕುಟುಂಬದವರಿಗೆ ಗೌಪ್ಯತೆಯನ್ನು ಕಾಪಾಡಿಕೊಳ್ಳಲು ಅವಕಾಶ ನೀಡುವಂತೆ ನಾವು ವಿನಂತಿಸುತ್ತೇವೆ. ಅಪ್ಪನ ಶೀಘ್ರ ಚೇತರಿಕೆಗಾಗಿ ಪ್ರಾರ್ಥನೆ ಸಲ್ಲಿಸಿದ್ದಕ್ಕಾಗಿ ಧನ್ಯವಾದಗಳು" ಎಂದು ಇಶಾ ಇನ್‌ಸ್ಟಾಗ್ರಾಮ್‌ನಲ್ಲಿ ಬರೆದಿದ್ದಾರೆ.
ಹೇಮಮಾಲಿನಿ ಕಿಡಿ
ಧರ್ಮೇಂದ್ರ ಅವರ ಪತ್ನಿ, ನಟಿ-ರಾಜಕಾರಣಿ ಹೇಮಾ ಮಾಲಿನಿ ಕೂಡ ಹಿರಿಯ ನಟನ ಆರೋಗ್ಯದ ಬಗ್ಗೆ ಮಾಧ್ಯಮಗಳು ಬೇಜವಾಬ್ದಾರಿಯುತವಾಗಿ ವರ್ತಿಸಿವೆ ಎಂದು ಬೇಸರ ಮತ್ತು ಸಿಟ್ಟು ಹೊರಹಾಕಿದ್ದಾರೆ. ಧರ್ಮೇಂದ್ರ ಅವರ ಬಗ್ಗೆ ಬಂದಿರುವ ಸುದ್ದಿಗಳು ಕ್ಷಮಿಸಲು ಸಾಧ್ಯವಾಗದ್ದು! ಚಿಕಿತ್ಸೆಗೆ ಸ್ಪಂದಿಸುತ್ತಿರುವ ಮತ್ತು ಚೇತರಿಸಿಕೊಳ್ಳುತ್ತಿರುವ ವ್ಯಕ್ತಿಯ ಬಗ್ಗೆ ಜವಾಬ್ದಾರಿಯುತ ಮಾಧ್ಯಮಗಳು ಸುಳ್ಳು ಸುದ್ದಿಗಳನ್ನು ಹೇಗೆ ಹರಡಲು ಸಾಧ್ಯ? ಇದು ಅವರಿಗೆ ನೀವು ತೋರಿಸಿದ ಅತ್ಯಂತ ಅಗೌರವ ಮತ್ತು ಬೇಜವಾಬ್ದಾರಿ ವರ್ತನೆ. ದಯವಿಟ್ಟು ಕುಟುಂಬಕ್ಕೆ ನಮ್ಮ ಗೌಪ್ಯತೆಯ ಅಗತ್ಯಕ್ಕೆ ಸರಿಯಾದ ಗೌರವ ನೀಡಿ ಎಂದು ಹೇಮ ಮಾಲಿನಿ ಎಕ್ಸ್ ಪೋಸ್ಟ್ ನಲ್ಲಿ ಮನವಿ ಮಾಡಿಕೊಂಡಿದ್ದಾರೆ.
ಧರ್ಮೇಂದ್ರ ಅವರ ಸಾವಿನ ವರದಿಗಳನ್ನು ಕುಟುಂಬ ನಿರಾಕರಿಸುವ ಮುನ್ನ ರಕ್ಷಣಾ ಸಚಿವ ರಾಜನಾಥ್ ಸಿಂಗ್, ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮತ್ತು ಗೀತರಚನೆಕಾರ ಜಾವೇದ್ ಅಖ್ತರ್ ಸೇರಿದಂತೆ ಹಲವಾರು ಪ್ರಮುಖ ವ್ಯಕ್ತಿಗಳು ಎಕ್ಸ್ ಪೋಸ್ಟ್ ನಲ್ಲಿ ಸಂತಾಪ ಸೂಚಿಸಿದ್ದರು. ನಂತರವಷ್ಟೇ ಕುಟುಂಬಸ್ಥರ ಹೇಳಿಕೆ ಬಂದಿದೆ.
ಧರ್ಮೇಂದ್ರ ಅವರು ಹಲವಾರು ದಿನಗಳಿಂದ ದಕ್ಷಿಣ ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ. ಅವರ ಆರೋಗ್ಯ ಬಗ್ಗೆ ನಿನ್ನೆಯಷ್ಟೇ ಹೇಮಮಾಲಿನಿಯವರು ಪೋಸ್ಟ್ ಮಾಡಿದ್ದರು.
ಹೇಮ ಮಾಲಿನಿ, ಸನ್ನಿ ಡಿಯೋಲ್ ಮತ್ತು ಬಾಬಿ ಡಿಯೋಲ್ ಸೇರಿದಂತೆ ಇಡೀ ಡಿಯೋಲ್ ಕುಟುಂಬವು ಪ್ರಸ್ತುತ ಆಸ್ಪತ್ರೆಯಲ್ಲಿದೆ. ಸೂಪರ್‌ಸ್ಟಾರ್‌ಗಳಾದ ಸಲ್ಮಾನ್ ಖಾನ್ ಮತ್ತು ಶಾರುಖ್ ಖಾನ್ , ನಟ ಗೋವಿಂದ ಆಸ್ಪತ್ರೆಯಲ್ಲಿ ಕುಟುಂಬಸ್ಥರನ್ನು ಭೇಟಿ ಮಾಡಿದ್ದಾರೆ.