ಮುಂಬೈ: ಬ್ಯಾಕ್ ಟು ಬ್ಯಾಕ್ ಚಿತ್ರಗಳಿಂದ ಗೇಟ್ ಪಾಸ್ ಪಡೆದ ಬಾಲಿವುಡ್ ನಟಿ ದೀಪಿಕಾ ಪಡುಕೋಣೆಗೆ ಮತ್ತೊಂದು ಆಘಾತ ಎದುರಾಗಿದ್ದು, ಅವರ ಒಡೆತನದ ಉದ್ಯಮಕ್ಕೆ ಭಾರಿ ನಷ್ಟ ಎದುರಾಗಿದೆ.
ಹೌದು.. ಈ ಹಿಂದೆ ಸಂದೀಪ್ ರೆಡ್ಡಿ ವಂಗಾ ನಿರ್ದೇಶನದ ಸ್ಪಿರಿಟ್ ಚಿತ್ರ ಮತ್ತು ನಾಗ್ ಅಶ್ವಿನ್ ನಿರ್ದೇಶನದ ಕಲ್ಕಿ ಚಿತ್ರದಿಂದ ಹೊರ ಬಂದು ಭಾರಿ ಸುದ್ದಿಗೆ ಗ್ರಾಸವಾಗಿದ್ದ ಬಾಲಿವುಡ್ ನಟಿ ದೀಪಿಕಾ ಪಡುಕೋಣೆಗೆ ಇದೀಗ ಮತ್ತೊಂದು ಹಿನ್ನಡೆ ಎದುರಾಗಿದೆ. ದೀಪಿಕಾ ಒಡೆತನದ ಸ್ಕಿನ್ ಕೇರ್ ಸಂಸ್ಥೆ ಭಾರಿ ನಷ್ಟ ಉಂಟಾಗಿದ್ದು, ಇದು ದೀಪಿಕಾ ಪಡುಕೋಣೆಗೆ ತೀವ್ರ ಹಿನ್ನಡೆಯನ್ನುಂಟು ಮಾಡಿದೆ.
ನಟಿ ದೀಪಿಕಾ ಪಡುಕೋಣೆ ಒಡೆತನದ 82°E ಸ್ಕಿನ್‌ಕೇರ್ ಕಂಪನಿ ಭಾರಿ ನಷ್ಟ ಅನುಭವಿಸಿದ್ದು, ಆದರೂ, ವೆಚ್ಚ ಕಡಿತದಿಂದ ನಷ್ಟದ ಪ್ರಮಾಣ ಇಳಿಕೆಯಾಗಿದೆ. ದುಬಾರಿ ಉತ್ಪನ್ನಗಳು ಮತ್ತು ತೀವ್ರ ಸ್ಪರ್ಧೆಯಿಂದ ಕಂಪನಿ ಸವಾಲು ಎದುರಿಸುತ್ತಿದೆ.
ಮೂಲಗಳ ಪ್ರಕಾರ 2024ರಲ್ಲಿ ಕಂಪನಿ 21.2 ಕೋಟಿ ರೂಪಾಯಿ ಬಿಸ್ನೆಸ್ ಮಾಡಿತ್ತು. ಅದು ಈಗ 14.7 ಕೋಟಿ ರೂಪಾಯಿಗೆ ಇಳಿಕೆ ಆಗಿದೆ. ವಿಶೇಷ ಎಂದರೆ ನಷ್ಟದಲ್ಲೂ ಇಳಿಕೆ ಕಂಡಿದೆ. 2024ರಲ್ಲಿ 23 ಕೋಟಿ ನಷ್ಟ ಆದರೆ ಈ ವರ್ಷ 12.3 ಕೊಟಿ ರೂಪಾಯಿ ನಷ್ಟ ಆಗಿದೆ.
2024ರಲ್ಲಿ 82°E ಕಂಪನಿ 47 ಕೋಟಿ ರೂಪಾಯಿ ವೆಚ್ಚ ಮಾಡಿತ್ತು. ಈ ವರ್ಷ ಸಾಕಷ್ಟು ಕಾಸ್ಟ್ ಕಟಿಂಗ್ ಮಾಡಲಾಗಿದ್ದು, ಈ ಮೂಲಕ ಖರ್ಚನ್ನು 25 ಕೋಟಿಗೆ ಇಳಿಸಲಾಗಿದೆ. ಇದರಿಂದ ನಷ್ಟ ತಗ್ಗಿದೆ. 2024ರಲ್ಲಿ ಬ್ರ್ಯಾಂಡ್ಗೆ ಸಾಕಷ್ಟು ಮಾರ್ಕೆಟಿಂಗ್ ಮಾಡಲಾಗಿತ್ತು. ಇದನ್ನು 2025ರಲ್ಲಿ ಕಡಿಮೆ ಮಾಡಲಾಗಿದೆ.
ದುಬಾರಿ ಉತ್ಪನ್ನಗಳು
ದೀಪಿಕಾ ಅವರಿಗೆ ಸೋಶಿಯಲ್ ಮೀಡಿಯಾದಲ್ಲಿ ದೊಡ್ಡ ಅಭಿಮಾನಿ ಬಳಗ ಇದ್ದು, ಇದನ್ನು ಬಳಸಿಕೊಂಡು ಉತ್ಪನ್ನಗಳನ್ನು ಪ್ರಚಾರ ಮಾಡಿದ್ದರು. 82°E ಬ್ರ್ಯಾಂಡ್ನ ಉತ್ಪನ್ನಗಳು ಸಾಕಷ್ಟು ದುಬಾರಿಯಾಗಿವೆ ಎನ್ನಲಾಗುತ್ತಿದೆ. ಈ ಸಂಸ್ಥೆಗೆ ಸಾಕಷ್ಟು ದೊಡ್ಡ ಸ್ಪರ್ಧೆ ಇದ್ದು, ಇದೂ ಕೂಡ ಸಂಸ್ಥೆಯ ನಷ್ಟಕ್ಕೆ ಕಾರಣ ಎನ್ನಲಾಗಿದೆ.
MCA ಫೈಲಿಂಗ್‌ಗಳಲ್ಲಿ, ಕಂಪನಿಯು ವೆಚ್ಚಗಳನ್ನು ಕಡಿಮೆ ಮಾಡಲು ಪ್ರಮುಖ ಕಡಿತಗಳನ್ನು ಮಾಡುತ್ತಿದೆ ಎಂದು ಉಲ್ಲೇಖಿಸಿದೆ. ಹೇಳಿಕೆಯಲ್ಲಿ, "ಆದಾಯವನ್ನು ಹೆಚ್ಚಿಸಲು ಮತ್ತು ಲಾಭದಾಯಕ ದಾಖಲೆಯನ್ನು ಹೊಂದಲು ವೆಚ್ಚಗಳನ್ನು ಕಡಿಮೆ ಮಾಡಲು ಆಡಳಿತ ಮಂಡಳಿ ನಿರಂತರವಾಗಿ ಪ್ರಯತ್ನಗಳನ್ನು ತೆಗೆದುಕೊಳ್ಳುತ್ತಿದೆ" ಎಂದು ಹೇಳಲಾಗಿದೆ.
ಸಿನಿಮಾಗಳಿಂದ ಹೊರ ಹಾಕಲ್ಪಟ್ಟಿದ್ದ ನಟಿ
ಅಂದಹಾಗೆ ನಟಿ ದೀಪಿಕಾ ಪಡುಕೋಣೆ ಇತ್ತೀಚೆಗೆ ಹಲವು ಸಿನಿಮಾಗಳಿಂದ ಹೊರ ಹಾಕಲ್ಪಟ್ಟಿದ್ದರು. ಸಂದೀಪ್ ರೆಡ್ಡಿ ವಂಗಾ ನಿರ್ದೇಶನದ ಸ್ಪಿರಿಟ್ ಚಿತ್ರ ಮತ್ತು ನಾಗ್ ಅಶ್ವಿನ್ ನಿರ್ದೇಶನದ ಕಲ್ಕಿ ಚಿತ್ರದಿಂದ ಹೊರ ಬಂದು ಭಾರಿ ಸುದ್ದಿಗೆ ಗ್ರಾಸವಾಗಿದ್ದರು. ಚಿತ್ರತಂಡಗಳ ಈ ನಿರ್ಧಾರಕ್ಕೆ ಅವರ ಷರತ್ತುಗಳು ಕಾರಣ ಎಂದು ಹೇಳಲಾಗಿತ್ತು.
ದೀಪಿಕಾ ಪಡುಕೋಣೆ ಅವರು ದಿನಕ್ಕೆ 8 ಗಂಟೆ ಮಾತ್ರ ಕೆಲಸ ಮಾಡೋದಾಗಿ ಹೇಳಿದ್ದಾರೆ. ಈ ಕಾರಣದಿಂದಲೇ ಅವರು ‘ಸ್ಪಿರಿಟ್’ ಸಿನಿಮಾದಿಂದ ಹೊರಕ್ಕೆ ಬಂದರು. ಅಲ್ಲದೆ, ‘ಕಲ್ಕಿ 2898 ಎಡಿ’ ಸೀಕ್ವೆಲ್ನಿಂದಲೂ ಅವರು ದೂರ ಆಗಿದ್ದಾರೆ. ಇದು ಸಿನಿಮಾಗೆ ಸಾಕಷ್ಟು ಹಿನ್ನಡೆ ಉಂಟು ಮಾಡಿದೆ.