ಮುಂಬೈ: ಬಾಲಿವುಡ್ ನ ಖ್ಯಾತ ನಟ ಮಹಾಭಾರತದ 'ಕರ್ಣ', ವಿಷ್ಣು ವಿಜಯ 'ಅಮಿತ್' ಪಾತ್ರಧಾರಿ ನಟ ಪಂಕಜ್ ಧೀರ್ (Pankaj Dheer) ಸಾವನ್ನಪ್ಪಿದ್ದಾರೆ. ಅವರಿಗೆ 68 ವರ್ಷ ವಯಸ್ಸಾಗಿತ್ತು.
ಜನಪ್ರಿಯ ಧಾರಾವಾಹಿ ‘ಮಹಾಭಾರತ’ದಲ್ಲಿ ಕರ್ಣನ ಪಾತ್ರ, ವಿಷ್ಣು ವಿಜಯ ಚಿತ್ರದ 'ಅಮಿತ್' ಪಾತ್ರಧಾರಿ ನಟ ಪಂಕಜ್ ಧೀರ್ ನಿಧನರಾಗಿದ್ದಾರೆ. ಪಂಕಜ್ ಧೀರ್ ಅವರು ಹಲವು ವರ್ಷಗಳಿಂದಲೂ ಕ್ಯಾನ್ಸರ್ ಸಮಸ್ಯೆಯಿಂದ ಬಳಲುತ್ತಿದ್ದರು. ಇತ್ತೀಚೆಗಷ್ಟೆ ಕ್ಯಾನ್ಸರ್ ಗಾಗಿ ಪ್ರಮುಖ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಆದರೆ ಚಿಕಿತ್ಸೆ ಫಲಿಸದೆ ಅವರು ಇಂದು ನಿಧನರಾಗಿದ್ದಾರೆ ಎಂದು ತಿಳಿದುಬಂದಿದೆ.
ನಟ ಪಂಕಜ್ ಧೀರ್ ಹಿಂದಿ, ತೆಲುಗು, ಕನ್ನಡ ಸೇರಿದಂತೆ ಹಲವು ಭಾಷೆಗಳ ಚಿತ್ರಗಳಲ್ಲಿ ನಟಿಸಿದ್ದಾರೆ. ವಿಶೇಷವೆಂದರೆ ವಿಷ್ಣುವರ್ಧನ್ ಜೊತೆಗೆ ಎರಡು ಕನ್ನಡ ಸಿನಿಮಾಗಳಲ್ಲಿ ನಟಿಸಿದ್ದು, ವಿಷ್ಣುವರ್ಧನ್ ಜೊತೆಗೆ ಬಾಲಿವುಡ್ ಸ್ಟಾರ್ ನಟ ಅಕ್ಷಯ್ ಕುಮಾರ್ ಸಹ ನಟಿಸಿದ್ದ ‘ವಿಷ್ಣು-ವಿಜಯ’ ಸಿನಿಮಾದಲ್ಲಿ ಪಂಕಜ್ ಧೀರ್ ಅಮಿತ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು.
ಅದಾದ ಬಳಿಕ 2005 ರಲ್ಲಿ ಬಿಡುಗಡೆ ಆದ ‘ವಿಷ್ಣುಸೇನ’ ಸಿನಿಮಾನಲ್ಲಿಯೂ ಸಹ ಡಿಸಿಪಿ ಸಮರ್ಜೀತ್ ಸಿಂಗ್ ಪಾತ್ರದಲ್ಲಿ ಪಂಕಜ್ ಧೀರ್ ನಟಿಸಿದ್ದಾರೆ. ಮಾತ್ರವಲ್ಲದೆ ಕನ್ನಡದ ಕಲ್ಟ್ ಕ್ಲಾಸಿಕ್ ಸಿನಿಮಾ ‘ಬರ’ ಸಿನಿಮಾನಲ್ಲಿಯೂ ಪಂಕಜ್ ನಟಿಸಿದ್ದಾರೆ.
ಪಂಕಜ್ ಧೀರ್ ಅವರು ಬಿಆರ್ ಚೋಪ್ರಾ ನಿರ್ದೇಶನದ ‘ಮಹಾಭಾರತ’ ಧಾರಾವಾಹಿಯಲ್ಲಿ ಕರ್ಣನ ಪಾತ್ರ ನಿರ್ವಹಿಸಿದ್ದರು. ಈ ಪಾತ್ರ ಅವರಿಗೆ ಹಿಂದಿ ಚಿತ್ರರಂಗದಲ್ಲಿ ಗಟ್ಟಿಯಾಗಿ ನೆಲೆಯೂರಲು ನೆರವಾಗಿತ್ತು. ಆ ಪಾತ್ರ ಅವರಿಗೆ ಭಾರಿ ದೊಡ್ಡ ಜನಪ್ರಿಯತೆ ತಂದಿತ್ತು.
ಅದಾದ ಬಳಿಕ ಅಷ್ಟೇ ಜನಪ್ರಿಯವಾದ ‘ಚಂದ್ರಕಾಂತ’ ಧಾರಾವಾಹಿಯಲ್ಲಿಯೂ ಸಹ ಪಂಕಜ್ ಧೀರ್ ನಟಿಸಿದ್ದರು. ‘ಸಸುರಾಲ್ ಸಿಮರ್ ಕಾ’, ‘ರಿಶ್ತೆ’, ‘ಕಾನೂನ್’, ‘ದೇವೋಂಕಾ ದೇವ್ ಮಹಾದೇವ್’ ಇನ್ನೂ ಹಲವಾರು ಜನಪ್ರಿಯ ಹಿಂದಿ ಧಾರಾವಾಹಿಗಳಲ್ಲಿ ಪಂಕಜ್ ಧೀರ್ ನಟಿಸಿದ್ದಾರೆ. 2024 ರಲ್ಲಿ ಪ್ರಸಾರ ಆರಂಭಿಸಿದ್ದ ‘ಧ್ರುವ ತಾರ’ ಪಂಕಜ್ ನಟಿಸಿದ್ದ ಕೊನೆಯ ಧಾರಾವಾಹಿಯಾಗಿತ್ತು.
ಪಂಕಜ್ ಧೀರ್ ಅವರ ಪುತ್ರ ನಿಕಿತಿನ್ ಧೀರ್ ಸಹ ನಟರಾಗಿದ್ದು ಹಿಂದಿ, ತೆಲುಗು, ಕನ್ನಡದ ಕೆಲ ಸಿನಿಮಾಗಳಲ್ಲಿ ವಿಲನ್ ಪಾತ್ರದಲ್ಲಿ ನಟಿಸಿದ್ದಾರೆ. ಕನ್ನಡದಲ್ಲಿ ಧ್ರುವ ಸರ್ಜಾ ನಟನೆಯ ‘ಮಾರ್ಟಿನ್’ ಸಿನಿಮಾದಲ್ಲಿ ನಿಕಿತಿನ್ ನಟಿಸಿದ್ದಾರೆ.