
ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ ರನ್ನು ಪ್ಯಾನ್ ಇಂಡಿಯಾ ಸ್ಟಾರ್ ಮಾಡಿದ ನಿರ್ದೇಶಕ ಪ್ರಶಾಂತ್ ನೀಲ್ ಕೆಜಿಎಫ್ ಚಾಪ್ಟರ್ 3 ಕುರಿತು ಕೊನೆಗೂ ದೊಡ್ಡ ಸಿಗ್ನಲ್ ನೀಡಿದ್ದಾರೆ ಎನ್ನಲಾಗುತ್ತಿದೆ.
ಹೌದು.. ಕನ್ನಡ ಸಿನಿಮಾರಂಗವನ್ನು ಭಾರತೀಯ ಸಿನಿರಂಗದಲ್ಲಿ ಮತ್ತೊಂದು ಹಂತಕ್ಕೇರಿಸಿದ್ದ ಕೆಜಿಎಫ್ ಚಿತ್ರದ ಮೂರನೇ ಭಾಗದ ಕುರಿತು ಮಹತ್ವದ ಮಾಹಿತಿ ದೊರೆತಿದ್ದು, ನಿರ್ದೇಶಕ ಪ್ರಶಾಂತ್ ನೀಲ್ ಕೊನೆಗೂ ಕೆಜಿಎಫ್ ಭಾಗ 3ರ ಕುರಿತು ದೊಡ್ಡ ಸುಳಿವು ನೀಡಿದ್ದಾರೆ ಎನ್ನಲಾಗಿದೆ.
ಈ ಹಿಂದೆ 'ಕೆಜಿಎಫ್ 2' ಸಿನಿಮಾ 2022ರ ಏಪ್ರಿಲ್ 14ರಂದು ರಿಲೀಸ್ ಆಗಿತ್ತು. ಈ ಸಿನಿಮಾದ ಕ್ಲೈಮ್ಯಾಕ್ಸ್ನಲ್ಲಿ ಪಾರ್ಟ್ 3 ಬಗ್ಗೆ ಅಪ್ಡೇಟ್ ನೀಡಲಾಗಿತ್ತು.
ಚಿತ್ರದ ಯಶಸ್ಸಿನ ಬಳಿಕ 'ಕೆಜಿಎಫ್ 3 ಸಿನಿಮಾ ಬಗ್ಗೆ ಇನ್ನು ಕೆಲವೇ ತಿಂಗಳಲ್ಲಿ ಅಪ್ಡೇಟ್ ಕೊಡ್ತೀವಿ'- 'ಹೊಂಬಾಳೆ ಫಿಲ್ಮ್ಸ್'ನ ವಿಜಯ್ ಕಿರಗಂದೂರು ಹೀಗೆ ಹೇಳಿಕೆ ನೀಡಿದ್ದರು. ಆದರೆ ಈ ಹೇಳಿಕೆ ಬಂದು ವರ್ಷಗಳೇ ಕಳೆದರೂ ಕೆಜಿಎಫ್ ಪಾರ್ಟ್ 3 ಬಗ್ಗೆ ಈ ವರೆಗೂ ಯಾವುದೇ ಮಾಹಿತಿ ಸಿಕ್ಕಿರಲಿಲ್ಲ.
ಚಿತ್ರದ ನಿರ್ದೇಶಕ ಪ್ರಶಾಂತ್ ನೀಲ್, ನಿರ್ಮಾಪಕ ವಿಜಯ್ ಕಿರಗಂದೂರ್ ಹಾಗೂ ನಟ ಯಶ್ ಎಲ್ಲರೂ ವಿವಿಧ ಚಿತ್ರಗಳಲ್ಲಿ ಬ್ಯುಸಿ ಆಗಿದ್ದಾರೆ. ಹೀಗಿರುವಾಗಲೇ 'ಕೆಜಿಎಫ್ 3 (KGF 3) ಫೈನಲ್ ಡ್ರಾಫ್ಟ್' ಎಂಬ ಪೋಸ್ಟರ್ ವೈರಲ್ ಆಗಿದೆ.
ನಿರ್ದೇಶಕ ಪ್ರಶಾಂತ್ ನೀಲ್ ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಿಂದ ಖಾಲಿ ಪೇಪರ್ ಮೇಲೆ ‘ಕೆಜಿಎಫ್ 3’ ಎಂದು ಬರೆದಿರುವ ಫೋಟೋನ ಹಾಕಲಾಗಿದೆ. ಇದಕ್ಕೆ, 'ಕೆಜಿಎಫ್ 3 ಫೈನಲ್ ಡ್ರಾಫ್ಟ್' ಎಂಬ ಕ್ಯಾಪ್ಶನ್ ನೀಡಲಾಗಿದೆ. ಅಲ್ಲದೆ 'ನೀವು ಕಾಯುತ್ತಿದ್ದೀರಾ' ಎಂಬ ಪ್ರಶ್ನೆಯನ್ನು ಕೂಡ ಕೇಳಲಾಗಿದೆ.
ಅಸಲಿಯತ್ತೇ ಬೇರೆ!
ನಿರ್ದೇಶಕ ಪ್ರಶಾಂತ್ ನೀಲ್ ಈ ಮೊದಲು ಸೋಶಿಯಲ್ ಮೀಡಿಯಾದಲ್ಲಿ ಆ್ಯಕ್ಟೀವ್ ಆಗಿದ್ದರು. ಸಿನಿಮಾ ಬಗ್ಗೆ ಅಪ್ಡೇಟ್ಗಳನ್ನು ನೀಡುತ್ತಿದ್ದರು. ಆದರೆ, ತೆಲುಗು ಚಿತ್ರರಂಗಕ್ಕೆ ಕಾಲಿಟ್ಟ ಬಳಿಕ ನಕಾರಾತ್ಮಕ ಕಮೆಂಟ್ ಗಳು ಬಂದ ಬಳಿಕ ಅವರು ಸೋಶಿಯಲ್ ಮೀಡಿಯಾಗೆ ಗುಡ್ಬೈ ಹೇಳಿದ್ದರು.
ಈಗ ಪ್ರಶಾಂತ್ ನೀಲ್ ಹೆಸರಲ್ಲಿ ಸಾಕಷ್ಟು ಫೇಕ್ ಖಾತೆಗಳು ಸೃಷ್ಟಿ ಆಗಿವೆ. ಈಗ ‘ಕೆಜಿಎಫ್ 3 ಫೈನಲ್ ಡ್ರಾಫ್ಟ್’ ಎಂದು ಪೋಸ್ಟ್ ಆಗಿರೋದು ಕೂಡ ಫೇಕ್ ಖಾತೆಯಿಂದಲೇ ಎಂದು ಹೇಳಲಾಗಿದೆ. ಹೀಗಾಗಿ, ಇದನ್ನು ಯಾರೂ ನಂಬದಂತೆ ಅನೇಕರು ಮನವಿ ಮಾಡಿದ್ದಾರೆ.
ಅಂದಹಾಗೆ ನಿರ್ದೇಶಕ ಪ್ರಶಾಂತ್ ನೀಲ್ ಸದ್ಯ ಜೂನಿಯರ್ ಎನ್ಟಿಆರ್ ಸಿನಿಮಾ ಕೆಲಸಗಳಲ್ಲಿ ತೊಡಗಿಕೊಂಡಿದ್ದಾರೆ. ಆ ಬಳಿಕ ‘ಸಲಾರ್ 2’ ಕೂಡ ಮಾಡಬೇಕಿದೆ. ಇನ್ನು, ಯಶ್ ಅವರು ‘ರಾಮಾಯಣ’ ಹಾಗೂ ‘ಟಾಕ್ಸಿಕ್’ ಸಿನಿಮಾ ಕೆಲಸಗಳಲ್ಲಿ ತೊಡಗಿಕೊಂಡಿದ್ದಾರೆ.
Advertisement