ನವದೆಹಲಿ: ಅಮೀರ್ ಖಾನ್ ಅವರನ್ನು ತಾವು ನಿರ್ಲಕ್ಷ್ಯಿಸಿರುವುದಾಗಿ ಹೇಳುವ ವೈರಲ್ ವಿಡಿಯೋವನ್ನು ನಟಿ ಪ್ರೀತಿ ಜಿಂಟಾ ಟೀಕಿಸಿದ್ದು, ಇಂತಹ ವಿಷಯಗಳು ಕೇವಲ 'ಕ್ಲಿಕ್‌ಬೈಟ್' (ಜನರನ್ನು ಸೆಳೆಯುವ ತಂತ್ರ) ಅಷ್ಟೇ ಎಂದು ಹೇಳಿದ್ದಾರೆ.
ಆನ್‌ಲೈನ್‌ನಲ್ಲಿ ಹಂಚಿಕೊಳ್ಳಲಾದ ಈ ವಿಡಿಯೋದಲ್ಲಿ, ನಟಿ ತಮ್ಮ 'ವ್ಯಾನಿಟಿ ವ್ಯಾನ್'ನಿಂದ ಹೊರಬರುತ್ತಾ, 'ಎಲ್ಲಿಗೆ ಹೋಗಬೇಕು?' ಎಂದು ಕೇಳುತ್ತಾ ಛಾಯಾಗ್ರಾಹಕರಿಂದ ದಾರಿ ವಿಚಾರಿಸುತ್ತಿರುವುದು ಕಂಡುಬಂದಿದೆ. ನಂತರ, ಅವರು ಖಾನ್ ಅವರನ್ನು ಗಮನಿಸದೆ ಮುಂದೆ ಹೋಗಿದ್ದಾರೆ.
'ಓಹ್ ನೋ, ಪ್ರೀತಿ ಜಿಂಟಾ ಅವರು ಅಮೀರ್ ಖಾನ್ ಅವರನ್ನು ನಿರ್ಲಕ್ಷ್ಯಿಸಿದರು' ಎಂದು ಶೀರ್ಷಿಕೆ ನೀಡಿರುವ ವಿಡಿಯೋ ವೈರಲ್ ಆಗಿದೆ.
ಜಿಂಟಾ ಅವರು ಕಾಮೆಂಟ್ ವಿಭಾಗದಲ್ಲಿ ಆ ಕ್ಲಿಪ್‌ಗೆ ಪ್ರತಿಕ್ರಿಯಿಸುತ್ತಾ, ತಾವು ಆ ನಟನನ್ನು ಗಮನಿಸಲಿಲ್ಲ. 'ಇಂತಹ 'ಕ್ಲಿಕ್‌ಬೈಟ್' ವಿಷಯಗಳು ಸರಿಯಲ್ಲ. ನಾನು ಒಳಗೆ ಕೆಲವು ದೃಶ್ಯಗಳ ಚಿತ್ರೀಕರಣದ ಧಾವಂತದಲ್ಲಿದ್ದೆ ಮತ್ತು ನಂತರ 'ಬಟ್ವಾರಾ 1947'ರ ಪ್ರಚಾರ ಕಾರ್ಯಕ್ರಮಕ್ಕಾಗಿ ವಿಮಾನವನ್ನು ಹಿಡಿಯಬೇಕಿದ್ದರಿಂದ ಅಮೀರ್ ಅವರನ್ನು ನೋಡಲಿಲ್ಲ' ಎಂದಿದ್ದಾರೆ.
'ಮುಂದಿನ ಬಾರಿ, ಯಾವುದೇ ರೀತಿಯ ನಕಾರಾತ್ಮಕತೆಯನ್ನು ಪ್ರಚಾರ ಮಾಡುವುದು ನಿಮ್ಮ ಉದ್ದೇಶವಾಗಿದ್ದರೆ, ನಾನು ನಿಂತು ಫೋಟೊ ತೆಗೆಸಿಕೊಳ್ಳುವುದನ್ನು ದಯವಿಟ್ಟು ನಿರೀಕ್ಷಿಸಬೇಡಿ! ಅಮೀರ್ ಬಗ್ಗೆ ನನಗೆ ಅಪಾರ ಪ್ರೀತಿ ಮತ್ತು ಗೌರವವಿದೆ, ಹಾಗಾಗಿ ಇದು ಸರಿಯಾದ ಕ್ರಮವಲ್ಲ' ಎಂದು ಅವರು ಬರೆದಿದ್ದಾರೆ.
ನಟಿ 'ಬಟ್ವಾರಾ 1947' ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಚಿತ್ರವನ್ನು ರಾಜ್‌ಕುಮಾರ್ ಸಂತೋಷಿ ನಿರ್ದೇಶಿಸಿದ್ದಾರೆ ಮತ್ತು ಇದನ್ನು ಖಾನ್ ಅವರ ನಿರ್ಮಾಣ ಸಂಸ್ಥೆಯಾದ 'ಅಮೀರ್ ಖಾನ್ ಪ್ರೊಡಕ್ಷನ್ಸ್' ಅಡಿಯಲ್ಲಿ ನಿರ್ಮಿಸಲಾಗಿದೆ. ಇದು 1947ರ ವಿಭಜನೆಯ ಹಿನ್ನೆಲೆಯನ್ನು ಹೊಂದಿದ್ದು, ಇದರಲ್ಲಿ ಸನ್ನಿ ಡಿಯೋಲ್ ಮತ್ತು ಶಬಾನಾ ಆಜ್ಮಿ ಕೂಡ ನಟಿಸಿದ್ದಾರೆ.
ಈ ಚಿತ್ರವು ಆಗಸ್ಟ್ 14 ರಂದು ಬಿಡುಗಡೆಯಾಗಲಿದ್ದು, ಎಂಟು ವರ್ಷಗಳ ನಂತರ ಜಿಂಟಾ ಅವರು ನಟನೆಗೆ ಮರಳುತ್ತಿರುವುದನ್ನು ಇದು ಸೂಚಿಸುತ್ತದೆ. ಈ ಚಿತ್ರದಲ್ಲಿ ಮತ್ತೆ ಜಿಂಟಾ ಮತ್ತು ಡಿಯೋಲ್ ಅವರನ್ನು ಮತ್ತೆ ಒಂದಾಗಿಸುತ್ತಿದೆ; ಇವರಿಬ್ಬರೂ ಈ ಹಿಂದೆ 'ದಿ ಹೀರೋ: ಲವ್ ಸ್ಟೋರಿ ಆಫ್ ಎ ಸ್ಪೈ', 'ಫರ್ಜ್' ಮತ್ತು 'ಹೀರೋಸ್' ಮುಂತಾದ ಚಿತ್ರಗಳಲ್ಲಿ ಒಟ್ಟಿಗೆ ಕೆಲಸ ಮಾಡಿದ್ದಾರೆ.
ಸಂಗೀತ ಸಂಯೋಜಕ ಎಆರ್ ರೆಹಮಾನ್ ಅವರು ಈ ಚಿತ್ರಕ್ಕೆ ಸಂಗೀತ ಸಂಯೋಜನೆ ಮಾಡಿದ್ದಾರೆ.