2016 ರಲ್ಲಿ ನಡೆದ ಕರಿಷ್ಮಾ ಮತ್ತು ಸಂಜಯ್ ಕಪೂರ್ ನಡುವಿನ ವಿಚ್ಛೇದನ ಪ್ರಕ್ರಿಯೆಗಳ ಪ್ರಮಾಣೀಕೃತ ಪ್ರತಿಗಳನ್ನು ಕೋರಿ ಸುಪ್ರೀಂ ಕೋರ್ಟ್‌ಗೆ ಕೈಗಾರಿಕೋದ್ಯಮಿ ದಿವಂಗತ ಸಂಜಯ್ ಕಪೂರ್ ಎರಡನೇ ಪತ್ನಿ ಪ್ರಿಯಾ ಕಪೂರ್ ಮೇಲ್ಮನವಿ ಸಲ್ಲಿಸಿದ್ದಾರೆ.
ನ್ಯಾಯಮೂರ್ತಿ ಎ.ಎಸ್. ಚಂದೂರ್ಕರ್ ಅವರ ಪೀಠವು ಈ ಗೌಪ್ಯ ದಾಖಲೆಗಳನ್ನು ಪ್ರಿಯಾ ಕಪೂರ್ ಅವರಿಗೆ ನೀಡಬೇಕೆ ಎಂದು ವಿಚಾರಣೆಯಲ್ಲಿ ಪರಿಗಣಿಸಲಿದೆ. ಪ್ರಿಯಾ ತಮ್ಮ ಅರ್ಜಿಯಲ್ಲಿ, ವಿಚ್ಛೇದನ ಅರ್ಜಿಯ ಪ್ರಮಾಣೀಕೃತ ಪ್ರತಿಗಳು, ನ್ಯಾಯಾಲಯದ ಮುಂದೆ ಸಲ್ಲಿಸಲಾದ ದಾಖಲೆಗಳು, ಸುಪ್ರೀಂ ಕೋರ್ಟ್ ಅಂಗೀಕರಿಸಿದ ಆದೇಶಗಳು ಮತ್ತು ನಿರ್ದಿಷ್ಟವಾಗಿ ತಮ್ಮ ದಿವಂಗತ ಪತಿ ಮಾಡಿದ ಆರ್ಥಿಕ ಮತ್ತು ಮಕ್ಕಳ ಪಾಲನೆ ವ್ಯವಸ್ಥೆಗಾಗಿ ಮಾಡಿಕೊಂಡಿರುವ ಇತ್ಯರ್ಥ ಒಪ್ಪಂದದ ಬಗೆಗಿನ ದಾಖಲೆಗಳನ್ನು ಕೋರಿದ್ದಾರೆ.
ಇತ್ಯರ್ಥದ ನಿಯಮಗಳು ಮತ್ತು ಇತರ ವಿವರಗಳನ್ನು ಕರಿಷ್ಮಾ ಮತ್ತು ಸಂಜಯ್ ಕಪೂರ್ ಮಾತ್ರ ಪಡೆಯಬಹುದಾಗಿತ್ತು. 2016 ರಲ್ಲಿ ನಡೆದ ಉನ್ನತ ಮಟ್ಟದ ವಿಚಾರಣೆಯು ನ್ಯಾಯಾಧೀಶರ ಕೊಠಡಿಯಲ್ಲಿಯೂ ನಡೆಯಿತು. ಇತ್ಯರ್ಥವು ಸೌಹಾರ್ದಯುತವಾಗಿತ್ತು ಮತ್ತು ಪರಸ್ಪರ ಒಪ್ಪಿಗೆಯೊಂದಿಗೆ ನಡೆಸಲಾಯಿತು.
ಇಬ್ಬರೂ ಸಹಿ ಮಾಡಿದ "ಸಮ್ಮತಿಯ ನಿಯಮಗಳನ್ನು" ಸುಪ್ರೀಂ ಕೋರ್ಟ್ ದಾಖಲಿಸಿಕೊಂಡಿತು, ಇದರಲ್ಲಿ ಅವರ ಇಬ್ಬರು ಮಕ್ಕಳ ಪಾಲನೆ ನಟಿ ಕರೀಷ್ಮಾ ಕಪೂರ್ ಗೆ ಸೇರುತ್ತದೆ. ಸಂಜಯ್ ಕಪೂರ್ ಗೆ ಮಕ್ಕಳ ಭೇಟಿ ಹಕ್ಕು ಇರುತ್ತದೆ ಎಂದು ಹೇಳಲಾಗಿತ್ತು.
ನ್ಯಾಯಮೂರ್ತಿಗಳಾದ ಎ.ಕೆ. ಸಿಕ್ರಿ ಮತ್ತು ಆರ್.ಕೆ. ಅಗರವಾಲ್ ಅವರ ಪೀಠದ ಮುಂದೆ ನಡೆದ ವಿಚಾರಣೆಯ ನಂತರ, ಕರಿಷ್ಮಾ ಪರ ಹಾಜರಾದ ವಕೀಲರು, ದಂಪತಿಗಳ ನಡುವಿನ ಬಾಕಿ ಇರುವ ಎಲ್ಲಾ ವಿವಾದಗಳು ಸೌಹಾರ್ದಯುತವಾಗಿ ಬಗೆಹರಿದಿವೆ ಎಂದು ಹೇಳಿದರು.
ಕಳೆದ ವರ್ಷ ಜುಲೈನಲ್ಲಿ ಕೈಗಾರಿಕೋದ್ಯಮಿ ನಿಧನರಾದ ನಂತರ, ಕರಿಷ್ಮಾ ಕಪೂರ್ ಅವರ ಮಕ್ಕಳಾದ ಸಮೈರಾ ಮತ್ತು ಕಿಯಾನ್ ಕಪೂರ್ ಅವರು ಪಿತ್ರಾರ್ಜಿತ ಆಸ್ತಿಯ ವಿವಾದದಲ್ಲಿ ಸಿಲುಕಿದ್ದಾರೆ. ದಿವಂಗತ ಕೈಗಾರಿಕೋದ್ಯಮಿ ಅವರ ವಿವಾದಿತ ವಿಲ್ ಅವರ ಬಹುತೇಕ ಎಲ್ಲಾ ಸಂಪತ್ತನ್ನು ಅವರ ಪತ್ನಿ ಪ್ರಿಯಾ ಕಪೂರ್ ಅವರಿಗೆ ನೀಡುತ್ತದೆ ಎಂದು ವರದಿಯಾಗಿದೆ.
ಸಮೈರಾ ಮತ್ತು ಕಿಯಾನ್ ಕಪೂರ್ ಹೈಕೋರ್ಟ್‌ಗೆ ಸಲ್ಲಿಸಿದ ಅರ್ಜಿಯಲ್ಲಿ, ವಿಲ್‌ನಲ್ಲಿರುವ ಸಹಿಗಳು ತಮ್ಮ ತಂದೆಯದ್ದಲ್ಲ ಎಂದು ಆರೋಪಿಸಿದ್ದಾರೆ. ಪ್ರಿಯಾ ಸುಳ್ಳು ದಾಖಲೆಗಳನ್ನು ಮಾಡಿದ್ದಾರೆ ಎಂದು ಅವರು ಆರೋಪಿಸಿದ್ದಾರೆ. ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ಮೊಹರು ಮಾಡಿದ ಲಕೋಟೆಯಲ್ಲಿ ಹೈಕೋರ್ಟ್ ಮುಂದೆ ಇಡಲಾದ ಮೂಲ ವಿಲ್ ಅನ್ನು ಪರಿಶೀಲಿಸುವಂತೆ ಅವರು ಕೋರಿದ್ದಾರೆ. ಸಂಜಯ್ ಕಪೂರ್ ಅವರಿಗೆ ಸೇರಿದ ಆಸ್ತಿಗಳನ್ನು ನಿರ್ವಹಿಸದಂತೆ ಅಥವಾ ಪರಭಾರೆ ಮಾಡದಂತೆ ಪ್ರಿಯಾ ಕಪೂರ್ ಅವರನ್ನು ತಡೆಯಲು ಅವರು ಮಧ್ಯಂತರ ತಡೆಯಾಜ್ಞೆ ಕೋರಿದ್ದಾರೆ.