ವಿಪಕ್ಷಗಳ ಅವಿಶ್ವಾಸ ನಿರ್ಣಯಕ್ಕೆ ಸೋಲು: ಯಾರೇ ಒಪ್ಪಿದರೂ-ಒಪ್ಪದಿದ್ದರೂ ನಿಯಮಗಳ ಪ್ರಕಾರವೇ ಲೋಕಸಭೆ ಕಾರ್ಯನಿರ್ವಹಣೆ; ಸ್ಪೀಕರ್ ಓಂ ಬಿರ್ಲಾ
ನವದೆಹಲಿ: ಯಾರು ಒಪ್ಪಿದರೂ, ಒಪ್ಪದೇ ಹೋದರೂ ನಿಯಮಗಳ ಪ್ರಕಾರವೇ ಲೋಕಸಭೆ ಕಾರ್ಯನಿರ್ವಹಿಸಲಿದೆ. ಭವಿಷ್ಯದಲ್ಲೂ ಹಾಗೆಯೇ ಮುಂದುವರೆಯುತ್ತದೆ ಎಂದು ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರು ಗುರುವಾರ ಹೇಳಿದ್ದಾರೆ.
ಕಲಾಪಗಳ ಅಧ್ಯಕ್ಷತೆ ವಹಿಸುತ್ತಾ ಸದನವನ್ನುದ್ದೇಶಿಸಿ ಮಾತನಾಡಿದ ಅವರು, ಯಾರು ಒಪ್ಪಿದರೂ, ಒಪ್ಪದೇ ಹೋದರೂ, ಲೋಕಸಭೆ ಕಾರ್ಯವೈಖರಿ ನಿಯಮ ಹಾಗೂ ನಿಯಮಾವಳಿಗಳಂತೆ ಮುಂದುವರೆಯುತ್ತದೆ. ನಾನು ನನ್ನ ಕರ್ತವ್ಯವವನ್ನು ನಿಷ್ಠೆಯಿಂದ, ನ್ಯಾಯಪೂರಿತವಾಗಿ ಹಾಗೂ ಪಾರದರ್ಶವಾಗಿ ನಿರ್ವಹಿಸುತ್ತಿದ್ದೇನೆಂದು ಹೇಳಿದರು.
ಲೋಕಸಭೆಯ ಕಾರ್ಯವೈಖರಿ ನಿಯಮಾನುಸಾರ ನಡೆಯುತ್ತಿದೆ. ಮುಂದೆಯೂ ಇದೇ ರೀತಿಯಲ್ಲಿ ನಡೆಯಲಿದೆ. ನಾನು ನನ್ನ ಕರ್ತವ್ಯವನ್ನು ಪೂರ್ಣ ನಿಷ್ಠೆ, ನ್ಯಾಯಪೂರ್ಣತೆ ಮತ್ತು ಪಾರದರ್ಶಕತೆಯಿಂದ ನಿರ್ವಹಿಸುತ್ತೇನೆಂದು ತಿಳಿಸಿದರು.
ಸ್ಪೀಕರ್ ಹುದ್ದೆಯು ಲೋಕಸಭೆಯ ಘನತೆ ಮತ್ತು ಪ್ರತಿಷ್ಠೆಯನ್ನು ಪ್ರತಿನಿಧಿಸುತ್ತದೆ, ಅಧ್ಯಕ್ಷ ಸ್ಥಾನವು ಯಾವುದೇ ಒಬ್ಬ ವ್ಯಕ್ತಿಗೆ ಸೇರಿದ್ದಲ್ಲ. ಇದು ಸದನದ ಗೌರವ ಮತ್ತು ಪ್ರತಿಷ್ಠೆಯ ಸಂಕೇತವಾಗಿದೆ ಎಂದರು.
ಇದೇ ವೇಳೆ ಅವಿಶ್ವಾಸ ನಿರ್ಣಯ ಚರ್ಚೆ ಸಮಯದಲ್ಲಿ ತಮ್ಮ ಮೇಲೆ ತೋರಿಸಿದ ವಿಶ್ವಾಸಕ್ಕೆ ಸದಸ್ಯರಿಗೆ ಸ್ಪೀಕರ್ ಕೃತಜ್ಞತೆಗಳನ್ನು ಸಲ್ಲಿಸಿದರು.
ನನ್ನನ್ನು ಬೆಂಬಲಿಸಿದ ಸಂಸದರು ಹಾಗೂ ಚರ್ಚೆ ಸಮಯದಲ್ಲಿ ಟೀಕೆಗಳನ್ನು ವ್ಯಕ್ತಪಡಿಸಿದವರೆಲ್ಲರಿಗೂ ಧನ್ಯವಾದಗಳನ್ನು ಅರ್ಪಿಸುತ್ತೇನೆಂದು ಹೇಳಿದರು.
ಇದೇ ವೇಳೆ ಚರ್ಚೆಯ ವೇಳೆ ವಿರೋಧ ಪಕ್ಷದ ನಾಯಕ ತಾನು ಬಯಸಿದಾಗ ಮತ್ತು ಯಾವುದೇ ವಿಷಯದ ಬಗ್ಗೆ ಮಾತನಾಡಲು ಅವಕಾಶ ನೀಡಬೇಕೆಂದು ಕೆಲ ಸದಸ್ಯರು ವಾದಿಸಿದ್ದನ್ನು ಉಲ್ಲೇಖಿಸಿ ಮಾತನಾಡಿದ ಅವರು, ಇಲ್ಲಿರುವ ಪ್ರತೀಯೊಬ್ಬ ಸದಸ್ಯರಿಗೂ ಸಂಸತ್ತಿನಲ್ಲಿ ಮಾತನಾಡುವ ಹಕ್ಕಿದೆ. ಆದರೆ, ಅದು ನಿಯಮಾವಳಿಗಳ ಚೌಕಟ್ಟಿನಲ್ಲಿ ಮಾತ್ರ ನಡೆಯಬೇಕು ಎಂದು ತಿಳಿಸಿದರು.
ಯಾವುದೇ ವ್ಯಕ್ತಿ ಅದು ಪ್ರಧಾನಮಂತ್ರಿಗಳಾಗಲೀ ಅಥವಾ ಸಚಿವರೇ ಆಗಲಿ ಅನುಮತಿಸಿದಾಗ ಮಾತ್ರವೇ ಮಾತನಾಡಬಹುದು. ಅಧ್ಯಕ್ಷರು ಅನುಮತಿಸದ ಹೊರತು ಯಾವುದೇ ಸದಸ್ಯರಿಗೆ ಯಾವುದೇ ಸಮಯದಲ್ಲಿ ಅಥವಾ ಯಾವುದೇ ವಿಷಯದ ಬಗ್ಗೆ ಮಾತನಾಡುವ ಅವಕಾಶ ಇರುವುದಿಲ್ಲ ಎಂದರು.
ಸಂಸದರ ಮೈಕ್ರೋಫೋನ್ ನಿರ್ವಹಣೆ ಕುರಿತು ಮಾತನಾಡಿ, “ಮೈಕ್ರೋಫೋನ್ ಸಕ್ರಿಯಗೊಳಿಸುವ ಅಥವಾ ನಿಷ್ಕ್ರಿಯಗೊಳಿಸುವ ಸ್ವಿಚ್ ನನ್ನಲ್ಲಿ ಇಲ್ಲ. ಸದಸ್ಯರಿಗೆ ಅಧ್ಯಕ್ಷರು ಮಾತನಾಡಲು ಅನುಮತಿ ನೀಡಿದಾಗ ಮಾತ್ರ ಮೈಕ್ರೊಫೋನ್ ಆನ್ ಆಗುತ್ತದೆ ಎಂದು ಹೇಳಿದರು.
ಸಂಸತ್ತಿನ ಸದಸ್ಯರು ಸದನದ ಒಳಗೆ ವಾಕ್ ಸ್ವಾತಂತ್ರ್ಯವನ್ನು ಆನಂದಿಸಬಹುದು. ಆದರೆ, ಅದು ನಿಯಮಾವಳಿ ಮತ್ತು ಪ್ರಕ್ರಿಯೆಗಳ ಅಡಿಯಲ್ಲಿ ಮಾತ್ರ ಬಳಕೆಯಾಗಬೇಕು ಎಂದು ಪುನರುಚ್ಚರಿಸಿದರು. ಹೇಳಿಕೆಗಳ ನಂತರ, ಸ್ಪೀಕರ್ ಸದನವನ್ನು ಮಧ್ಯಾಹ್ನ 2 ಗಂಟೆಯವರೆಗೆ ಮುಂದೂಡಿದರು.

