'ನನಗೆ ಜೀವ ಬೆದರಿಕೆಗಳಿದ್ದ ಕಾರಣಕ್ಕೆ ನಾನು ಭಾರತ ತೊರೆದೆ, ಕಾನೂನಿನಿಂದ ತಪ್ಪಿಸಿಕೊಂಡು ಓಡಿ ಹೋಗಿಲ್ಲ': ಲಲಿತ್ ಮೋದಿ

'ಶ್ರೀನಿವಾಸನ್ ಏಕಕಾಲದಲ್ಲಿ ಬಿಸಿಸಿಐ ಪದಾಧಿಕಾರಿಯಾಗಿ, ಐಪಿಎಲ್ ಆಡಳಿತ ಮಂಡಳಿಯ ಸದಸ್ಯರಾಗಿ ಮತ್ತು CSK ತಂಡದ ಮಾಲೀಕರಾಗಿ ಕಾರ್ಯನಿರ್ವಹಿಸುತ್ತಿದ್ದುದರಿಂದ ಉಂಟಾದ 'ಹಿತಾಸಕ್ತಿ ಸಂಘರ್ಷ'ವನ್ನು ವಿರೋಧಿಸಿದ್ದೆ. ಹೀಗಾಗಿ, ನನ್ನನ್ನು ಐಪಿಎಲ್‌ನಿಂದ ಹೊರಹಾಕುವ ಉದ್ದೇಶದಿಂದಲೇ ದೂರು ದಾಖಲಿಸಲಾಯಿತು' ಎಂದರು.
Lalit Modi
ಲಲಿತ್ ಮೋದಿ
Updated on: 

ಲಂಡನ್: ಕಾನೂನು ಕ್ರಮಗಳಿಂದ ತಪ್ಪಿಸಿಕೊಳ್ಳಲು ಭಾರತವನ್ನು ತೊರೆದಿದ್ದಾರೆ ಎಂಬ ಊಹೆಗಳನ್ನು ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಸಂಸ್ಥಾಪಕ ಲಲಿತ್ ಮೋದಿ ತಳ್ಳಿಹಾಕಿದ್ದು, ತಮ್ಮ ಜೀವಕ್ಕೆ 'ನಂಬಲರ್ಹ ಬೆದರಿಕೆಗಳು' ಇದ್ದಿದ್ದರಿಂದಲೇ 2010ರಲ್ಲಿ ದೇಶ ತೊರೆಯಲು ನಿರ್ಧರಿಸಿದ್ದಾಗಿ ಹೇಳಿದ್ದಾರೆ.

'ನನ್ನ ಸಶಸ್ತ್ರ ಪೊಲೀಸ್ ರಕ್ಷಣೆಯನ್ನು ಯಾವುದೇ ಮುನ್ಸೂಚನೆಯಿಲ್ಲದೆ ಹಿಂತೆಗೆದುಕೊಂಡ ಮೂರು ದಿನಗಳ ನಂತರ, ಭೂಗತ ಜಗತ್ತಿನಿಂದ ನನ್ನ ಜೀವಕ್ಕೆ ಗಂಭೀರ ಬೆದರಿಕೆಗಳಿದ್ದ ಕಾರಣ ನಾನು 2010ರಲ್ಲಿ ಭಾರತವನ್ನು ತೊರೆದೆ. ನಾನು ಭಾರತದಿಂದ ಹೊರಟ ಸಮಯದಲ್ಲಿ, ನನ್ನ ವಿರುದ್ಧ ಯಾವುದೇ ಎಫ್‌ಐಆರ್ ದಾಖಲಾಗಿರಲಿಲ್ಲ' ಎಂದು ಅವರು 'X'ನಲ್ಲಿ ಪೋಸ್ಟ್ ಮಾಡಿದ ಹೇಳಿಕೆಯಲ್ಲಿ ತಿಳಿಸಿದ್ದಾರೆ.

'ಜಾರಿ ನಿರ್ದೇಶನಾಲಯಕ್ಕೆ (Enforcement Directorate) ಬರೆದ ಪತ್ರದಲ್ಲಿ, ಮುಂಬೈ ಪೊಲೀಸ್‌ನ ಹೆಚ್ಚುವರಿ ಆಯುಕ್ತರು, ನನ್ನ ಜೀವಕ್ಕೆ ಇರುವ ಬೆದರಿಕೆಗಳ ಕುರಿತು ಕೇಂದ್ರ ಸಂಸ್ಥೆಗಳಿಂದ ಪಡೆದ ಗುಪ್ತಚರ ಮಾಹಿತಿಯ ಆಧಾರದ ಮೇಲೆ ನನಗೆ ಭದ್ರತಾ ರಕ್ಷಣೆ ಒದಗಿಸಲಾಗಿತ್ತು ಎಂದು ದೃಢಪಡಿಸಿದ್ದಾರೆ' ಎಂದು ಮೋದಿ ಪ್ರತಿಪಾದಿಸಿದರು.

ನಂತರ ಜಾರಿ ನಿರ್ದೇಶನಾಲಯದ ಕೋರಿಕೆ ಮೇರೆಗೆ ನನ್ನ ಭಾರತೀಯ ಪಾಸ್‌ಪೋರ್ಟ್ ರದ್ದುಗೊಳಿಸಲಾಯಿತು. ಆಗ ದೆಹಲಿ ಹೈಕೋರ್ಟ್ ಈ ಸನ್ನಿವೇಶಗಳನ್ನು ಪರಿಶೀಲಿಸಿ, 2014ರಲ್ಲಿ ಆ ರದ್ದತಿಯನ್ನು ರದ್ದುಗೊಳಿಸಿತು ಮತ್ತು ನನ್ನ ಪಾಸ್‌ಪೋರ್ಟ್ ಅನ್ನು ಮರುಸ್ಥಾಪಿಸಿತು. ಭಾರತದಿಂದ ತಾನು ನಿರ್ಗಮಿಸಿದ ಕುರಿತು ಭಾರತೀಯ ಮಾಧ್ಯಮಗಳು ಪ್ರಕಟಿಸಿದ ವರದಿಗಳು 'ಸುಳ್ಳು ಮತ್ತು ಮಾನಹಾನಿಕರ', ಅಂತಹ ವರದಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದರು.

'ಭಾರತೀಯ ಮಾಧ್ಯಮಗಳ ಒಂದು ವರ್ಗವು, ನಾನು ಬ್ರಿಟಿಷ್ ಪೌರತ್ವ ಪಡೆದಿರುವುದನ್ನು, ಆರೋಪಗಳಿಂದ ತಪ್ಪಿಸಿಕೊಂಡು ಓಡಿಹೋದ ವ್ಯಕ್ತಿ ಮತ್ತು ಆ ವ್ಯಕ್ತಿಯನ್ನು ಭಾರತವು ಈಗ ವಾಪಸ್ ಕರೆತರಲು ಪ್ರಯತ್ನಿಸುತ್ತಿದೆ ಎಂಬಂತೆ ಬಿಂಬಿಸಿದೆ. ಇಂತಹ ವರದಿಗಳ ಸಂಪೂರ್ಣ ಆಧಾರವೇ ಸುಳ್ಳು. ಸುಳ್ಳು ಮತ್ತು ಮಾನಹಾನಿಕರ ವರದಿಗಳ ವಿರುದ್ಧ, ನನಗೆ ಲಭ್ಯವಿರುವ ಎಲ್ಲ ನ್ಯಾಯವ್ಯಾಪ್ತಿಗಳಲ್ಲಿ ಸೂಕ್ತ ಕಾನೂನು ಕ್ರಮಗಳನ್ನು ಕೈಗೊಳ್ಳಲು ನಾನು ಉದ್ದೇಶಿಸಿದ್ದೇನೆ' ಎಂದು ಮೋದಿ ತಿಳಿಸಿದ್ದಾರೆ.

Lalit Modi
'ಹೆಮ್ಮೆಯ ಕ್ಷಣ, ಒಂದು ಹೊಸ ಅಧ್ಯಾಯ': ಬ್ರಿಟಿಷ್ ಪೌರತ್ವ ಪಡೆದಿರುವುದಾಗಿ IPL ಸಂಸ್ಥಾಪಕ ಲಲಿತ್ ಮೋದಿ ಘೋಷಣೆ!

'ಕಳೆದ 16 ವರ್ಷಗಳಲ್ಲಿ ಭಾರತದ ಯಾವುದೇ ನ್ಯಾಯಾಲಯದಲ್ಲಿ ತಮ್ಮ ವಿರುದ್ಧ ಯಾವುದೇ ದೋಷಾರೋಪ ಪಟ್ಟಿ (ಚಾರ್ಜ್‌ಶೀಟ್) ದಾಖಲಾಗಿಲ್ಲ. ಈ ವಿಷಯಗಳಿಗೆ ಸಂಬಂಧಿಸಿದಂತೆ ನನ್ನ ವಿರುದ್ಧ ಯಾವುದೇ ಕ್ರಿಮಿನಲ್ ಮೊಕದ್ದಮೆ ಹೂಡಲಾಗಿಲ್ಲ. ಬಿಸಿಸಿಐನ ಅಂದಿನ ಕಾರ್ಯದರ್ಶಿ ಎನ್. ಶ್ರೀನಿವಾಸನ್ ಅವರು ನೀಡಿದ ದೂರಿನ ಮೇರೆಗೆ, 2010ರ ಅಕ್ಟೋಬರ್‌ನಲ್ಲಿ ಚೆನ್ನೈನಲ್ಲಿ ಎಫ್‌ಐಆರ್ (FIR) ದಾಖಲಾಗಿತ್ತು' ಎಂದರು.

'ಶ್ರೀನಿವಾಸನ್ ಅವರು ಏಕಕಾಲದಲ್ಲಿ ಬಿಸಿಸಿಐ ಪದಾಧಿಕಾರಿಯಾಗಿ, ಐಪಿಎಲ್ ಆಡಳಿತ ಮಂಡಳಿಯ ಸದಸ್ಯರಾಗಿ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ತಂಡದ ಮಾಲೀಕರಾಗಿ ಕಾರ್ಯನಿರ್ವಹಿಸುತ್ತಿದ್ದುದರಿಂದ ಉಂಟಾದ 'ಹಿತಾಸಕ್ತಿ ಸಂಘರ್ಷ'ವನ್ನು (conflict of interest) ನಾನು ವಿರೋಧಿಸಿದ್ದೆ. ಈ ವಿರೋಧದ ಹಿನ್ನೆಲೆಯಲ್ಲಿ, ನನ್ನನ್ನು ಐಪಿಎಲ್‌ನಿಂದ ಹೊರಹಾಕುವ ಉದ್ದೇಶದಿಂದಲೇ ಈ ದೂರು ದಾಖಲಿಸಲಾಯಿತು; ಇದೊಂದು ಸೇಡು ತೀರಿಸಿಕೊಳ್ಳುವ ಕ್ರಮವಾಗಿತ್ತು ಎಂದು ನಾನು ಪ್ರತಿಪಾದಿಸುತ್ತೇನೆ. 2015ರ ಜನವರಿಯಲ್ಲಿ, ಶ್ರೀನಿವಾಸನ್ ಅವರು 'ಹಿತಾಸಕ್ತಿ ಸಂಘರ್ಷ'ಕ್ಕೆ ಒಳಗಾಗಿದ್ದಾರೆ ಎಂದು ಸುಪ್ರೀಂ ಕೋರ್ಟ್ ಅಭಿಪ್ರಾಯಪಟ್ಟಿತು ಮತ್ತು ಅವರನ್ನು ಬಿಸಿಸಿಐನಲ್ಲಿ ಹುದ್ದೆ ಹೊಂದುವ ಅರ್ಹತೆಯಿಂದ ಅನರ್ಹಗೊಳಿಸಿತು' ಎಂದು ಮೋದಿ ಹೇಳಿದರು.

ತನ್ನ ಹಸ್ತಾಂತರದ ಕುರಿತಾದ ಊಹಾಪೋಹಗಳನ್ನು ತಳ್ಳಿಹಾಕಿದ ಅವರು, ಈ ಪ್ರಕ್ರಿಯೆಯು ಅಪರಾಧ ಆರೋಪಗಳನ್ನು ಎದುರಿಸುತ್ತಿರುವ ಅಥವಾ ಅಪರಾಧಗಳಿಗಾಗಿ ಶಿಕ್ಷೆಗೊಳಗಾದ ವ್ಯಕ್ತಿಗಳಿಗೆ ಸಂಬಂಧಿಸಿದ್ದಾಗಿದೆ. ಈ ಎರಡೂ ಷರತ್ತುಗಳು ತಮಗೆ ಅನ್ವಯಿಸುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.

'ನನ್ನ ವಿರುದ್ಧ ಯಾವುದೇ ಅಪರಾಧ ಸಂಬಂಧಿತ ಎಚ್ಚರಿಕೆಗಳು, ಸೂಚನೆಗಳು ಅಥವಾ ದಾಖಲೆಗಳನ್ನು ಹೊರಡಿಸಲಾಗಿಲ್ಲ ಎಂದು ಇಂಟರ್‌ಪೋಲ್ ಲಿಖಿತವಾಗಿ ದೃಢಪಡಿಸಿದೆ.

'ತಮ್ಮ ಬ್ರಿಟಿಷ್ ಪೌರತ್ವದ ಕುರಿತು ಮೋದಿ, '2010 ರಿಂದ ಯುನೈಟೆಡ್ ಕಿಂಗ್‌ಡಮ್ ನನ್ನ ಮನೆಯಾಗಿದೆ. ನನ್ನ ಪರಿಸ್ಥಿತಿಯನ್ನು ಸಂಪೂರ್ಣವಾಗಿ ಪರಿಶೀಲಿಸಿದ ನಂತರ, ಬ್ರಿಟಿಷ್ ಅಧಿಕಾರಿಗಳು ಹಲವು ವರ್ಷಗಳ ಹಿಂದೆಯೇ ನನಗೆ ಅಲ್ಲಿ ನೆಲೆಸಲು ಅನುಮತಿ ನೀಡಿದ್ದರು. ನಂತರ ನಾನು ಬ್ರಿಟಿಷ್ ಪೌರತ್ವಕ್ಕಾಗಿ ಅರ್ಜಿ ಸಲ್ಲಿಸಿದೆನು, ನಿಗದಿತ ಕಾನೂನು ಪ್ರಕ್ರಿಯೆಯನ್ನು ಪೂರ್ಣಗೊಳಿಸಿದೆನು ಮತ್ತು ಜುಲೈ 2026 ರಲ್ಲಿ 'ಹೋಮ್ ಆಫೀಸ್'ನಿಂದ ಅನುಮೋದನೆ ಪಡೆದುಕೊಂಡೆನು. ನಾನು ಎಂದಿಗೂ ಯಾವುದೇ ರೀತಿಯ ವಿನಾಯಿತಿಯನ್ನು (immunity) ಕೋರಿಲ್ಲ, ಮತ್ತು ನನಗೆ ಅದರ ಅಗತ್ಯವೂ ಇಲ್ಲ. ನನ್ನ ಬ್ರಿಟಿಷ್ ಪೌರತ್ವದ ಬಗ್ಗೆ ನನಗೆ ಹೆಮ್ಮೆಯಿದೆ. ಹದಿನಾರು ವರ್ಷಗಳಿಗೂ ಹೆಚ್ಚು ಕಾಲ ನನ್ನ ಮನೆಯಾಗಿರುವ ಯುನೈಟೆಡ್ ಕಿಂಗ್‌ಡಮ್‌ಗೆ ನಾನು ಕೃತಜ್ಞನಾಗಿದ್ದೇನೆ' ಎಂದು ಮೋದಿ ಹೇಳಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X