ಖ್ಯಾತ ಸಂಗೀತ ಸಂಯೋಜಕ ಎ ಆರ್ ರೆಹಮಾನ್ ಅವರು ತಮ್ಮ ಸೋಷಿಯಲ್ ಮೀಡಿಯಾದಲ್ಲಿ ವೀಡಿಯೊ ಪೋಸ್ಟ್ ನ್ನು ಹಂಚಿಕೊಂಡಿದ್ದಾರೆ. ಅದರಲ್ಲಿ ಅವರು ಇತ್ತೀಚೆಗೆ ಸಂದರ್ಶನವೊಂದರಲ್ಲಿ ತಮ್ಮ ಹೇಳಿಕೆಗಳಿಗೆ ಬಂದ ಪ್ರತಿಕ್ರಿಯೆ ಬಗ್ಗೆ ಮಾತನಾಡಿದ್ದಾರೆ.
ನಮ್ಮ ಉದ್ದೇಶಗಳನ್ನು'ಕೆಲವೊಮ್ಮೆ ತಪ್ಪಾಗಿ ಅರ್ಥೈಸಿಕೊಳ್ಳಬಹುದು', ಆದರೆ ನನ್ನ ಮಾತುಗಳಿಂದ ಯಾರಿಗೂ ನೋವುಂಟುಮಾಡುವ ಉದ್ದೇಶ ನನ್ನದಾಗಿರಲಿಲ್ಲ ಎಂದಿದ್ದಾರೆ.
ರೋಜಾ, ಬಾಂಬೆ ಮತ್ತು ದಿಲ್ ಸೇ ಮುಂತಾದ ಚಲನಚಿತ್ರಗಳಲ್ಲಿ ಸಂಗೀತ ನಿರ್ದೇಶನ ಮಾಡಿ ಹೆಸರುವಾಸಿಯಾದ ಎ ಆರ್ ರೆಹಮಾನ್, ತಮ್ಮ ಇನ್‌ಸ್ಟಾಗ್ರಾಮ್ ಹ್ಯಾಂಡಲ್‌ನಲ್ಲಿ ಪೋಸ್ಟ್ ನ್ನು ಹಂಚಿಕೊಂಡಿದ್ದಾರೆ.
59 ವರ್ಷದ ಸಂಗೀತ ಸಂಯೋಜಕ ರೆಹಮಾನ್ ಅವರು ಅದರಲ್ಲಿ, ಸಂಗೀತವು ಯಾವಾಗಲೂ 'ಭಾರತದ ಸಂಸ್ಕೃತಿಯನ್ನು ಸಂಪರ್ಕಿಸಲು, ಆಚರಿಸಲು ಮತ್ತು ಗೌರವಿಸಲು ಮಾರ್ಗವಾಗಿದೆ' ಎಂದು ಹೇಳಿದ್ದಾರೆ.
ಭಾರತ ನನ್ನ ಸ್ಫೂರ್ತಿ, ನನ್ನ ಗುರು ಮತ್ತು ನನ್ನ ಮನೆ. ಉದ್ದೇಶಗಳನ್ನು ಕೆಲವೊಮ್ಮೆ ತಪ್ಪಾಗಿ ಅರ್ಥೈಸಿಕೊಳ್ಳಬಹುದು. ಆದರೆ ನನ್ನ ಉದ್ದೇಶ ಯಾವಾಗಲೂ ಸಂಗೀತದ ಮೂಲಕ ಉನ್ನತಿ, ಗೌರವ ಮತ್ತು ಈ ದೇಶದ ಸೇವೆ ಮಾಡುವುದು. ನಾನು ಎಂದಿಗೂ ನೋವುಂಟುಮಾಡಲು ಬಯಸಲಿಲ್ಲ, ನನ್ನ ಪ್ರಾಮಾಣಿಕತೆ ಅನುಭವಿಸಲ್ಪಡುತ್ತದೆ ಎಂದು ನಾನು ಭಾವಿಸುತ್ತೇನೆ ಎಂದು ಅವರು ವೀಡಿಯೊದಲ್ಲಿ ಹೇಳಿದ್ದಾರೆ.
ನಾನು ಭಾರತೀಯನಾಗಿರುವುದಕ್ಕೆ ಧನ್ಯನಾಗಿದ್ದೇನೆ. ಇದು ಯಾವಾಗಲೂ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಮತ್ತು ಬಹುಸಂಸ್ಕೃತಿಯ ಧ್ವನಿಗಳನ್ನು ಆಚರಿಸುವ ಜಾಗವನ್ನು ರಚಿಸಲು ನನಗೆ ಅನುವು ಮಾಡಿಕೊಡುತ್ತದೆ ಎಂದಿದ್ದಾರೆ.
ಬಿಬಿಸಿ ಏಷ್ಯನ್ ನೆಟ್‌ವರ್ಕ್‌ಗೆ ನೀಡಿದ ಸಂದರ್ಶನದ ಕೆಲವು ದಿನಗಳ ನಂತರ ಅವರು ಈ ಹೇಳಿಕೆ ನೀಡಿದ್ದಾರೆ. ಕಳೆದ ವರ್ಷಗಳಲ್ಲಿ ಹಿಂದಿ ಚಲನಚಿತ್ರೋದ್ಯಮದೊಳಗಿನ ಅಧಿಕಾರ ಬದಲಾವಣೆಯಿಂದಾಗಿ ತಮಗೆ ಕಡಿಮೆ ಕೆಲಸಗಳು ಬರುತ್ತಿವೆ, ಅದು 'ಕೋಮುವಾದದ ವಿಷಯ'ದಿಂದಲೂ ಆಗಿರಬಹುದು ಎಂದು ಹೇಳಿದ್ದರು.