ಮುಂಬೈ: ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಸಹೋದರಿ, ನಟಿ ಶಮಿತಾ ಶೆಟ್ಟಿ ಅವರು ಎಂಡೊಮೆಟ್ರಿಯೊಸಿಸ್ (Endometriosis) ಎಂಬ ಕಾಯಿಲೆಗೆ ತುತ್ತಾಗಿದ್ದು, ಮಹಿಳೆಯಲ್ಲಿ ಕಂಡುಬರುವ ಈ ವಿಚಿತ್ರ ಕಾಯಿಲೆ, ಗುಣ ಲಕ್ಷಣ ಹಾಗೂ ತಾವು ಅನುಭವಿಸಿದ ಕಷ್ಟಗಳ ಬಗ್ಗೆ ಮನಬಿಚ್ಚಿ ಮಾತನಾಡಿದ್ದಾರೆ.
ಇನ್ಸ್ಟಾಗ್ರಾಮ್ ನಲ್ಲಿ ಮಹಿಳೆಯರು, ಈ ಕಾಯಿಲೆ ಬಗ್ಗೆ ಎಚ್ಚರವಾಗಿರುವಂತೆ ಸಲಹೆ ನೀಡಿದ ನಟಿ, "ದೇಹದಲ್ಲಿ ಒಂದು ಕಾರಣಕ್ಕಾಗಿ ನೋವು ಇದ್ದಾಗ, ನಿಮ್ಮ ದೇಹವನ್ನು ಪರೀಕ್ಷಿಸಿಕೊಳ್ಳಿ. ಸಕಾರಾತ್ಮಕವಾಗಿರಿ. ಸುಮಾರು ಶೇ. 40 ರಷ್ಟು ಮಹಿಳೆಯರು ಎಂಡೊಮೆಟ್ರಿಯೊಸಿಸ್ ನಿಂದ ಬಳಲುತ್ತಿದ್ದಾರೆ ಮತ್ತು ನಮ್ಮಲ್ಲಿ ಹೆಚ್ಚಿನವರಿಗೆ ಈ ಕಾಯಿಲೆಯ ಬಗ್ಗೆ ಗೊತ್ತಿಲ್ಲ" ಎಂದು ಹೇಳಿದ್ದಾರೆ.
ಇನ್ನು ಇತ್ತೀಚೆಗೆ ಅವರು ಸೋಹಾ ಅಲಿ ಖಾನ್ ಅವರ ಪಾಡ್‌ಕ್ಯಾಸ್ಟ್, ಆಲ್ ಅಬೌಟ್ ಹರ್ ನಲ್ಲಿ ತಮ್ಮ ವೈದ್ಯರಾದ ಡಾ. ನೀತಾ ವಾರ್ಟಿ ಅವರಿಂದ ಎಂಡೊಮೆಟ್ರಿಯೊಸಿಸ್ ಗೆ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡ ಬಗ್ಗೆ, ಜೀವನಶೈಲಿಯ ಬಗ್ಗೆ ಮಾತನಾಡಿದ್ದಾರೆ.
ನನಗೆ ಇದೊಂದು ಕಾಯಿಲೆ ಎಂದೇ ಗೊತ್ತಿರಲಿಲ್ಲ, ಹೀಗಾಗಿ ಗುಣಮುಖವಾಗಲು ಬಹಳ ಸಮಯ ತೆಗೆದುಕೊಂಡಿತು. ನನಗೆ ಎಂಡೊಮೆಟ್ರಿಯೊಸಿಸ್ ಬಗ್ಗೆ ಮಾಹಿತಿ ಇರಲಿಲ್ಲ. ಇದರ ಬಗ್ಗೆ ಎಲ್ಲಿಯೂ ಕೇಳಿರಲಿಲ್ಲ, ಇದಕ್ಕೆ ತುತ್ತಾದವರ ಬಗ್ಗೆ ಗೊತ್ತು ಇರಲಿಲ್ಲ. ಹೀಗಾಗಿ ನನಗೆ ನಾನು ನಾರ್ಮಲ್ ಆಗಿ ಇದ್ದೆನೆ ಎಂಬ ಭಾವನೆ ಇತ್ತು ಎಂದಿದ್ದಾರೆ.
ಪ್ರತಿ ಬಾರಿ ನನ್ನಲ್ಲಿ ಬೇರೆ-ಬೇರೆ ರೀತಿಯ ಬದಲಾವಣೆ ಆಗುತ್ತಿದ್ದ ಹಿನ್ನಲೆಯಲ್ಲಿ, ಪ್ರತಿ ಬಾರಿ ಆಸ್ಪತ್ರೆಗೆ ಹೋದಾಗ ವೈದ್ಯರು ಕೂಡ ಇದು ಎಂಡೊಮೆಟ್ರಿಯೊಸಿಸ್ ಎಂದು ಗುರುತಿಸುವಲ್ಲಿ ವಿಫಲವಾಗಿದ್ದರು.
ನಂತರ ದಿನಗಳಲ್ಲಿ ನನಗೆ ಖುತುಸ್ರಾವದ ಸಮಯದಲ್ಲಿ ವಿಪರಿತವಾದ ನೋವು ಕಾಣಿಸಿಕೊಳ್ಳುತ್ತಿತ್ತು. ಮೊದಲು ನಾನು ಇದನ್ನು ಕೂಡ ನಾರ್ಮಲ್ ಎಂದೇ ಭಾವಿಸಿದ್ದೆ. ಕೆಲವೊಂದು ದಿನ ರಾತ್ರಿ ಮಲಗಲು ಆಗದೆ ಎಷ್ಟೋ ದಿನ ನೋವಿನಿಂದ ಒದ್ದಾಡಿದ್ದೆನೆ. ಪಾಪ ನನ್ನ ದೇಹ ಅದು ಅನುಭವಿಸುತ್ತಿರುವ ಕಷ್ಟವನ್ನು ನನಗೆ ಹೇಳುತ್ತಿತ್ತು, ಆದರೆ ನನಗೆ ಅದು ತಿಳಿಯಲೇ ಇಲ್ಲ. ನಿಜವಾದ ಅರ್ಥದಲ್ಲಿ ನಾನು ಖಿನ್ನತೆಗೆ ಒಳಗಾಗಿದ್ದೆ ಎಂದು ಶಮಿತಾ ಶೆಟ್ಟಿ ಹೇಳಿದ್ದಾರೆ.
ನಂತರದ ದಿನಗಳಲ್ಲಿ ನಾನು ಶಸ್ತ್ರ ಚಿಕಿತ್ಸೆಗೆ ಒಳಗಾದ ನಂತರ ಕಾಯಿಲೆಗೆ ಸರಿಯಾದ ಮದ್ದು ದೊರೆಯಿತು. ದೈಹಿಕ ನೋವು ಕಡಿಮೆ ಆದರೂ, ಮಾನಸಿಕವಾಗಿ ನಾನು ಸದೃಢಳಾಗಲು ಸ್ವಲ್ಪ ಸಮಯ ತೆಗೆದುಕೊಂಡಿತ್ತೆಂದು ಅವರು ಹೇಳಿದ್ದಾರೆ.
ಮಗು ಮಾಡಿಕೊಳ್ಳಿ ಎಂದು ವೈದ್ಯರು ಹೇಳಿದ್ದರು
ಶಮಿತಾ ಶೆಟ್ಟಿ ಅವರು ಎಂಡೊಮೆಟ್ರಿಯೊಸಿಸ್ ಗುಣಪಡಿಸಲು ವೈದ್ಯರು ತಮಗೆ ಮಗು ಮಾಡಿಕೊಳ್ಳುವಂತೆ ಹೇಳಿದ್ದರು ಎಂಬ ವಿಚಾರವನ್ನು ಸಹ ಬಹಿರಂಗಪಡಿಸಿದ್ದಾರೆ.
ಎಂಡೊಮೆಟ್ರಿಯೊಸಿಸ್ ಇದ್ದರೆ, ಗರ್ಭಧರಿಸಲು ತೊಂದರೆಯಾಗಬಹುದು ಎಂದು ಅನೇಕ ಮಹಿಳೆಯರು ಚಿಂತೆ ಮಾಡುತ್ತಾರೆ. ನಿಮಗೆ "ಆ ಭಯ ಇತ್ತಾ? ಅದು ನಿಮಗೆ ಚಿಂತೆಯಾಗಿತ್ತೇ ಸೋಹಾ ಪ್ರಶ್ನಿಸಿದ್ದಾರೆ.
ಪಿಸಿಓಎಸ್ ಅಥವಾ ಎಂಡೊಮೆಟ್ರಿಯೊಸಿಸ್ ಇರುವ ಮಹಿಳೆಯರಿಗೆ ಮಗುವನ್ನು ಹೊಂದಲು ಅನೇಕ ವೈದ್ಯರು ಸಲಹೆ ನೀಡುತ್ತಾರೆ ಮತ್ತು ಅದು ನಮ್ಮ ಸ್ಥಿತಿಯನ್ನು ಗುಣಪಡಿಸುತ್ತದೆ ಎಂದು ಹೇಳಿಕೊಳ್ಳುತ್ತಾರೆ. "ಎಂಡೊಮೆಟ್ರಿಯೊಸಿಸ್ ಗೆ ಮಗುವನ್ನು ಹೆರುವುದೂ ಒಂದು ಚಿಕಿತ್ಸೆ. ವೈದ್ಯರು ನನಗೆ ಹಾಗೆ ಹೇಳಿದ್ದರು. ಆಧರೆ ನಾನು ಹುಡುಗನನ್ನು ಎಲ್ಲಿ ಹುಡುಕಬೇಕು?' ಎಂದು ಕೇಳಿದೆ" ಎಂದು ಶಮಿತಾ ಹೇಳಿದ್ದಾರೆ.
ಡಾ. ವಾರ್ಟಿ ಅವರು ಹಳೆಯ ಶೈಲಿಯ ಚಿಂತನೆಯನ್ನು ಅನುಸರಿಸುತ್ತಾರೆ ಮತ್ತು ಮದುವೆ ಹಾಗೂ ಮಗುವಿನೊಂದಿಗೆ ಪ್ರತಿಯೊಂದು ಸಮಸ್ಯೆಯನ್ನು ಪರಿಹರಿಸಬಹುದು ಎಂದು ನಂಬುತ್ತಾರೆ ಎಂದು ಹೇಳಿದರು.
ಸೋಹಾ ನಗುತ್ತಾ, "ಭಯಾನಕ ಸಲಹೆ. ಅದು ಒಳ್ಳೆಯ ಸಲಹೆಯಲ್ಲ ಎಂದು ನಾನು ಹೇಳಲು ಬಯಸುತ್ತೇನೆ" ಎಂದರು.
ಏನಿದು ಎಂಡೊಮೆಟ್ರಿಯೊಸಿಸ್?
ಎಂಡೊಮೆಟ್ರಿಯೊಸಿಸ್ ಇದು ಮಹಿಳೆಯರಲ್ಲಿ ಕಂಡುಬರುವ ಆರೋಗ್ಯ ಸಮಸ್ಯೆಯಾಗಿದೆ. ಗರ್ಭಾಶಯದ ಒಳಪದರವನ್ನು ಹೋಲುವ ಅಂಗಾಂಶವು ಗರ್ಭಾಶಯದ ಹೊರಗೆ, ಅಂದರೆ ಅಂಡಾಶಯಗಳು (ovaries), ಫಾಲೋಪಿಯನ್ ಟ್ಯೂಬ್‌ಗಳು (fallopian tubes) ಮತ್ತು ಶ್ರೋಣಿ ಕುಹರದ (pelvis) ಇತರ ಭಾಗಗಳಲ್ಲಿ ಬೆಳೆಯಲು ಪ್ರಾರಂಭಿಸಿದಾಗ ಈ ಸ್ಥಿತಿ ಉಂಟಾಗುತ್ತದೆ.