ಕರಣ್ ವಾಹಿ 
ಬಾಲಿವುಡ್

'ಮಹಿಳೆಯರು ಬೇಕಿದ್ದರೆ ಗೃಹಿಣಿಯರಾಗಿರಬಹುದು, ಆದರೆ ಪುರುಷರಿಗೆ 'ಹೌಸ್ ಹಸ್ಬೆಂಡ್' ಆಯ್ಕೆಯೇ ಇಲ್ಲ': ನಟ ಕರಣ್ ವಾಹಿ

ತಮ್ಮ ಹೇಳಿಕೆಗಳು ವೈಯಕ್ತಿಕ ಅನುಭವಗಳು ಮತ್ತು ಅವಲೋಕನಗಳ ಮೇಲೆ ಆಧಾರಿತವಾಗಿದ್ದವೇ ಹೊರತು, ಎಲ್ಲ ಪುರುಷರು ಅಥವಾ ಮಹಿಳೆಯರನ್ನು ಉದ್ದೇಶಿಸಿ ಸಾಮಾನ್ಯೀಕರಿಸಿದ್ದಲ್ಲ ಎಂದು ನಟ ಒತ್ತಿ ಹೇಳಿದ್ದಾರೆ.

ನಟ ಹಾಗೂ ಟೆಲಿವಿಷನ್ ನಿರೂಪಕ ಕರಣ್ ವಾಹಿ, ನಟಿ ಛಾವಿ ಮಿತ್ತಲ್ ಅವರೊಂದಿಗಿನ ಇತ್ತೀಚಿನ ಪಾಡ್‌ಕಾಸ್ಟ್ ಸಂಭಾಷಣೆಯ ತುಣುಕೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಆನ್‌ಲೈನ್‌ನಲ್ಲಿ ಚರ್ಚೆಯೊಂದಕ್ಕೆ ನಾಂದಿ ಹಾಡಿದ್ದಾರೆ. ಈ ಸಂಭಾಷಣೆಯ ವೇಳೆ ವಾಹಿ ಅವರು ಆಧುನಿಕ ಸಂಬಂಧಗಳು, ಡೇಟಿಂಗ್ ಸಂಸ್ಕೃತಿ, ಬದ್ಧತೆ ಮತ್ತು ವಿವಾಹದ ಕುರಿತಾದ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡರು. ಜೊತೆಗೆ, ಹಿಂದಿಗಿಂತಲೂ ಇಂದು ಸಂಬಂಧಗಳ ವಿಷಯದಲ್ಲಿ ತಮಗೆ ಏಕೆ ಹೆಚ್ಚು ಆತಂಕ ಅಥವಾ ಹಿಂಜರಿಕೆ ಉಂಟಾಗುತ್ತಿದೆ ಎಂಬುದನ್ನೂ ವಿವರಿಸಿದರು.

ತಮ್ಮ ಹೇಳಿಕೆಗಳು ವೈಯಕ್ತಿಕ ಅನುಭವಗಳು ಮತ್ತು ಅವಲೋಕನಗಳ ಮೇಲೆ ಆಧಾರಿತವಾಗಿದ್ದವೇ ಹೊರತು, ಎಲ್ಲ ಪುರುಷರು ಅಥವಾ ಮಹಿಳೆಯರನ್ನು ಉದ್ದೇಶಿಸಿ ಸಾಮಾನ್ಯೀಕರಿಸಿದ್ದಲ್ಲ ಎಂದು ನಟ ಒತ್ತಿ ಹೇಳಿದ್ದಾರೆ.

ಬದಲಾಗುತ್ತಿರುವ ಸಾಮಾಜಿಕ ಸನ್ನಿವೇಶಗಳ ಕುರಿತು ಮಾತನಾಡಿದ ವಾಹಿ, ಇಂದಿನ 'ಡೇಟಿಂಗ್' ವ್ಯವಸ್ಥೆಯು ಹಿಂದೆಂದಿಗಿಂತಲೂ ಹೆಚ್ಚಿನ ಆಯ್ಕೆಗಳನ್ನು ಒದಗಿಸುತ್ತಿದೆ ಮತ್ತು ಇದು ಜನರ ತಾಳ್ಮೆ ಹಾಗೂ ಬದ್ಧತೆಯ ಮೇಲೆ ಪರಿಣಾಮ ಬೀರಿದೆ ಎಂದು ಅಭಿಪ್ರಾಯಪಟ್ಟರು.

'ಒಬ್ಬ ಪುರುಷನಾಗಿ ನನಗೆ ಹೆಚ್ಚು ಭಯವೆನಿಸುತ್ತದೆ; ಏಕೆಂದರೆ ಸಂಬಂಧದಲ್ಲಿ ನಾನೇ ಹೆಚ್ಚು ನೀಡುವವನಾಗಿರುತ್ತೇನೆ ಮತ್ತು ಹೆಚ್ಚು ನಿಷ್ಠಾವಂತನಾಗಿರುತ್ತೇನೆ ಎಂಬ ಭಾವನೆ ನನಗಿದೆ. ಆದರೆ, ಇಂದಿನ ಕಾಲದ ಮಹಿಳೆಯರು ದಾರಿ ತಪ್ಪಬಹುದು. ಯಾರಾದರೂ 10-15 ವರ್ಷಗಳ ಹಿಂದೆ ನನ್ನನ್ನು ಈ ಬಗ್ಗೆ ಕೇಳಿದ್ದರೆ, ನಾನು ಪುರುಷರೇ ತಪ್ಪು ಮಾಡುವವರು ಎಂದು ಹೇಳುತ್ತಿದ್ದೆ; ಹಾಗಂತ ಎಲ್ಲ ಮಹಿಳೆಯರೂ ಕೆಟ್ಟವರು ಅಥವಾ ಎಲ್ಲ ಪುರುಷರೂ ಒಳ್ಳೆಯವರು ಎಂದು ನಾನು ಹೇಳುತ್ತಿಲ್ಲ. ಆದರೆ, ಕೆಲವು ಮಹಿಳೆಯರು ಸ್ವಾತಂತ್ರ್ಯದ ಪರಿಕಲ್ಪನೆಯನ್ನು ಬಹಳ ವಿಭಿನ್ನವಾಗಿ ಅರ್ಥೈಸಿಕೊಂಡಿದ್ದಾರೆ. ಹಿಂದೆ, ನನ್ನ ತಾಯಿಗೆ ಯಾವುದಾದರೂ ವಿಷಯ ಇಷ್ಟವಾಗದಿದ್ದರೆ, ಅವರು ಅದನ್ನು ತಮ್ಮದೇ ಆದ ರೀತಿಯಲ್ಲಿ ನಿಭಾಯಿಸಿ ಮುಂದೆ ಸಾಗುತ್ತಿದ್ದರು; ಇದಕ್ಕೆ ನಾನೇ ಒಂದು ಉದಾಹರಣೆ ನೀಡಬಲ್ಲೆ' ಎಂದರು.

ನಂತರ ವಾಹಿ ತಮ್ಮ ವೈಯಕ್ತಿಕ ಡೇಟಿಂಗ್ ಅನುಭವದ ಬಗ್ಗೆ ವಿವರಿಸುತ್ತಾ, 'ನಾನು ಒಬ್ಬ ಯುವತಿಯೊಂದಿಗೆ ಡೇಟಿಂಗ್‌ಗೆ ಹೋಗಿದ್ದೆ; ಅದೇ ಸಮಯದಲ್ಲಿ ಇನ್ನೊಬ್ಬ ಮಹಿಳೆಯೊಂದಿಗೂ ಡೇಟಿಂಗ್‌ಗೆ ಹೋಗುವ ಅವಕಾಶವಿತ್ತು. ಆದರೆ, ನಾನು ಹಾಗೆ ಮಾಡಲಿಲ್ಲ, ಏಕೆಂದರೆ ಗೊಂದಲಕ್ಕೀಡಾದರೆ ಯಾವುದರಲ್ಲೂ ಸ್ಪಷ್ಟತೆ ಸಿಗುವುದಿಲ್ಲ ಎಂದು ನನಗೆ ಅನ್ನಿಸಿತ್ತು. ಆದರೆ, ನಾನು ಡೇಟಿಂಗ್‌ಗೆ ಹೋಗಿದ್ದ ಆ ಯುವತಿ ಅದೇ ಸಮಯದಲ್ಲಿ ಏಳು ಮಂದಿಯೊಂದಿಗೆ ಡೇಟಿಂಗ್ ಮಾಡುತ್ತಿದ್ದಳು ಎಂಬುದು ನನಗೆ ಅರಿವಾಯಿತು. ಆಗ ನಾನು, 'ಸರಿ, ನಾನು ನಿನ್ನನ್ನು ತಪ್ಪು ಎಂದು ಹೇಳುತ್ತಿಲ್ಲ, ಆದರೆ ನೀನು ಇದನ್ನು ಹೇಗೆ ನಿಲ್ಲಿಸುತ್ತೀಯ?' ಎಂದು ಕೇಳಿದೆ.

ಸಂಬಂಧಗಳ ವಿಷಯದಲ್ಲಿ ಜನರ ತಾಳ್ಮೆ ಕುಸಿಯುತ್ತಿರುವುದನ್ನು ತಾವು ಹೇಗೆ ಕಾಣುತ್ತೇವೆ ಎಂಬುದರ ಕುರಿತು ಮಾತನಾಡಿದ ಅವರು, ಪುರುಷರು ಮತ್ತು ಮಹಿಳೆಯರ ಮೇಲೆ ಸಮಾಜವು ಹೊರಿಸುವ ಭಿನ್ನ ನಿರೀಕ್ಷೆಗಳ ಬಗ್ಗೆಯೂ ಅಭಿಪ್ರಾಯ ವ್ಯಕ್ತಪಡಿಸಿದರು.

'ಈಗ ಸಹನೆ ಎಂಬುದು ಮಾಯವಾಗಿದೆ ಎಂದು ನನಗೆ ಅನ್ನಿಸುತ್ತದೆ. ಪುರುಷರಲ್ಲಿ ಸಹನೆ ಮೊದಲೇ ಕಡಿಮೆ ಇತ್ತು. ದುಡಿದು ಹಣ ಸಂಪಾದಿಸಲೇಬೇಕು ಎಂಬುದನ್ನು ಕೇಳುತ್ತಲೇ ನಾವು ಬೆಳೆದಿದ್ದೇವೆ. ಇಂದಿಗೂ ಕೂಡ, ನನಗೆ ಕೆಲಸ ಮಾಡಲು ಇಷ್ಟವಿಲ್ಲ ಎಂದು ನನ್ನ ತಂದೆಯ ಬಳಿ ಹೇಳುವಂತಿಲ್ಲ; ಆದರೆ ಒಬ್ಬ ಮಹಿಳೆ ತಾನು ಗೃಹಿಣಿಯಾಗಿರಲು ಬಯಸುವುದಾಗಿ ಹೇಳಬಹುದು. ಆದರೆ ನಾನು 'ಹೌಸ್ ಹಸ್ಬೆಂಡ್' (ಮನೆಯ ಜವಾಬ್ದಾರಿ ನೋಡಿಕೊಳ್ಳುವ ಪತಿ) ಆಗಲು ಬಯಸುತ್ತೇನೆ ಎಂದು ಹೇಳಿದರೆ, ಜನ ನನ್ನನ್ನು ಹುಚ್ಚು ಹಿಡಿದಿದೆಯೇ ಎಂದು ಕೇಳುತ್ತಾರೆ. ಹಾಗಾಗಿ, ಪ್ರತಿಯೊಬ್ಬರ ಆಯ್ಕೆ ಅವರವರಿಗೆ ಸೇರಿದ್ದು ಎಂಬುದು ನನ್ನ ಭಾವನೆ' ಎಂದರು.

ಇಂದಿನ ದಿನಗಳಲ್ಲಿ ಜನರಿಗೆ ಲಭ್ಯವಿರುವ ಆಯ್ಕೆಗಳ ಹೆಚ್ಚಳವು ದೀರ್ಘಕಾಲೀನ ಸಂಬಂಧಗಳು ಮತ್ತು ವಿವಾಹದ ಕುರಿತಾದ ತನ್ನ ಆತಂಕಗಳಿಗೆ ಕಾರಣವಾಗಿದೆ. ತಮ್ಮ ಆಪ್ತ ವಲಯದಲ್ಲಿನ ವಿಚ್ಛೇದನಗಳ ಉದಾಹರಣೆಯನ್ನು ಪ್ರಸ್ತಾಪಿಸುತ್ತಾ, ಅವರು ತಮ್ಮ ವೈಯಕ್ತಿಕ ಅನುಭವಗಳ ಆಧಾರದ ಮೇಲಿನ ಒಂದು ಅಭಿಪ್ರಾಯವನ್ನು ಹಂಚಿಕೊಂಡರು.

'ಈಗ ಎಷ್ಟೋ ಅವಕಾಶಗಳಿವೆ. ನನಗೇಕೆ ಭಯ? ಏಕೆಂದರೆ ನಾನು ವಿಚ್ಛೇದನದ ಪ್ರಮಾಣವನ್ನು ಗಮನಿಸುತ್ತಿದ್ದೇನೆ. ವಿಚ್ಛೇದನ ಪಡೆದ ಸ್ನೇಹಿತರು ನನಗಿದ್ದಾರೆ; ಆದರೆ ಒಂದು ಕುತೂಹಲಕಾರಿ ವಿಷಯವೇನೆಂದರೆ, ನನಗೆ ತಿಳಿದಿರುವ ಪುರುಷ ಸ್ನೇಹಿತರ ಪೈಕಿ ಶೇ 80ರಷ್ಟು ಮಂದಿ ವಿಚ್ಛೇದನ ಪಡೆಯಲು ಕಾರಣವೇನೆಂದರೆ, ಅವರ ಸಂಗಾತಿ ಬೇರೊಬ್ಬರೊಂದಿಗೆ ಸಂಬಂಧ ಬೆಳೆಸಿದ್ದು' ಎಂದರು.

ಈ ಹೇಳಿಕೆಗಳು ಆನ್‌ಲೈನ್‌ನಲ್ಲಿ ತ್ವರಿತವಾಗಿ ಗಮನ ಸೆಳೆದವು; ಆಧುನಿಕ ಡೇಟಿಂಗ್, ಸ್ವಾತಂತ್ರ್ಯ ಮತ್ತು ಸಂಬಂಧಗಳ ಕುರಿತಾದ ವಾಹಿಯವರ ಅಭಿಪ್ರಾಯಗಳ ಬಗ್ಗೆ ಸಾಮಾಜಿಕ ಜಾಲತಾಣ ಬಳಕೆದಾರರು ಪರ-ವಿರೋಧದ ಚರ್ಚೆಯಲ್ಲಿ ತೊಡಗಿಕೊಂಡಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

Delhi protest crackdown: ಪ್ರಧಾನಿ ಮೋದಿ ನಿವಾಸದ ಹೊರಗೆ ಪ್ರತಿಭಟನೆ ನಿಲ್ಲಿಸಲು ರಾಹುಲ್ ನಕಾರ; ಕಾಂಗ್ರೆಸ್ ನ ಆರು ಬೇಡಿಕೆಗಳೇನು?

ಪ್ರಧಾನಿ ನಿವಾಸದ ಮುಂದೆ ರಾಹುಲ್ ನೇತೃತ್ವದಲ್ಲಿ ಕಾಂಗ್ರೆಸ್ ಉಗ್ರ ಪ್ರತಿಭಟನೆ; ಮೋದಿ, ಅಮಿತ್‌ ಶಾ, ಪ್ರಧಾನ್‌ ರಾಜೀನಾಮೆಗೆ ಪಟ್ಟು; Video

CJP Protest LIVE Updates | ಪ್ರತಿಭಟನೆ ಮುಂದುವರಿಯಲಿದೆ; ಭರವಸೆ ಕಳೆದುಕೊಳ್ಳಬೇಡಿ: ಸಿಜೆಪಿಯ ಅಭಿಜೀತ್ ದೀಪ್ಕೆ ವಿನಂತಿ

NEET ಮರು ಪರೀಕ್ಷೆಯಲ್ಲೂ ಗೊಂದಲ: 522 ಅಂಕ ಬರಬೇಕಿದ್ದ ವಿದ್ಯಾರ್ಥಿಗೆ ಬಂದಿದ್ದು ಕೇವಲ 95, ಹೈಕೋರ್ಟ್ ಮೆಟ್ಟಿಲೇರಿದ ವಿದ್ಯಾರ್ಥಿ!

'Surrender Or Lose Bail': ಮೇಘಾಲಯ ಹನಿಮೂನ್ ಮರ್ಡರ್, ಆರೋಪಿಗೆ ಆಪ್ಷನ್ ಕೊಟ್ಟ ಸುಪ್ರೀಂಕೋರ್ಟ್!