ಮುಂಬೈ: ತಮ್ಮ ವಿವಾದಾತ್ಮಕ ಪಾತ್ರ ಮತ್ತು ಹೇಳಿಕೆಗಳಿಂದಲೇ ಸುದ್ದಿಗೆ ಗ್ರಾಸವಾಗುವ ಬಾಲಿವುಡ್ ನಟಿ ರಾಧಿಕಾ ಆಪ್ಟೆ ಇದೀಗ ಮತ್ತೊಂದು ವಿವಾದವನ್ನು ಮೈಮೇಲೆ ಎಳೆದುಕೊಂಡಿದ್ದಾರೆ.
ದಕ್ಷಿಣ ಭಾರತದ ಚಿತ್ರರಂಗದಲ್ಲಿ ಪುರುಷ ಪ್ರಧಾನ ಮನಸ್ಥಿತಿ ಮತ್ತು ಬಣ್ಣದ ಆಧಾರದ ತಾರತಮ್ಯದ ಬಗ್ಗೆ ಈ ಹಿಂದೆಯೂ ಬಹಿರಂಗವಾಗಿ ಮಾತನಾಡಿದ್ದ ನಟಿ ರಾಧಿಕಾ ಆಪ್ಟೆ, ಇದೀಗ ತೆಲುಗು ಚಿತ್ರವೊಂದರಲ್ಲಿ ತಮಗಿಂತ ವಯಸ್ಸಿನಲ್ಲಿ ಸಾಕಷ್ಟು ಹಿರಿಯ ನಟನೊಂದಿಗೆ ಪ್ರಣಯ ದೃಶ್ಯಗಳಲ್ಲಿ ನಟಿಸಬೇಕಾದ ಅನಿವಾರ್ಯತೆ ಎದುರಾಗಿತ್ತು ಎಂದು ಹೇಳಿಕೊಂಡಿದ್ದಾರೆ.
ಅದರಲ್ಲೂ ತಮ್ಮ ಪಾತ್ರ ಮಾವನನ್ನೇ ಮದುವೆಯಾಗಬೇಕಾದ ಸನ್ನಿವೇಶವಿತ್ತು. ಈ ಪಾತ್ರದ ಪ್ರತಿಯೊಂದು ಅಂಶವನ್ನೂ ತಾವು ದ್ವೇಷಿಸಿದ್ದಾಗಿ ರಾಧಿಕಾ ಹೇಳಿದ್ದಾರೆ.
'ಮಾವನನ್ನೇ ಮದುವೆಯಾಗಬೇಕಾದ ಪಾತ್ರ ನನ್ನ ಪಾಲಿಗೆ ಸವಾಲಾಗಿತ್ತು'
ತಮ್ಮ ಸಹನಟಿ ಕೀರ್ತಿ ಸುರೇಶ್ ಜೊತೆ 'ಅಕ್ಕ' ವೆಬ್ ಸರಣಿಯ ಪ್ರಚಾರದ ವೇಳೆ ಜೂಮ್ ಸಂದರ್ಶನದಲ್ಲಿ ಪಾಲ್ಗೊಂಡಿದ್ದ ರಾಧಿಕಾ ಆಪ್ಟೆ ಅವರಿಗೆ, ವೃತ್ತಿಜೀವನದಲ್ಲಿ ಅತ್ಯಂತ ಸವಾಲಿನ ಪಾತ್ರ ಯಾವುದು ಎಂದು ಪ್ರಶ್ನಿಸಲಾಯಿತು.
ಇದಕ್ಕೆ ಉತ್ತರಿಸಿದ ಅವರು, "ನಾನು ನಟಿಸಿದ್ದ ಒಂದು ತೆಲುಗು ಸಿನಿಮಾದಲ್ಲಿ ನನ್ನ ಮಾವನನ್ನೇ (ತಾಯಿಯ ಸಹೋದರ) ಮದುವೆಯಾಗಬೇಕಿತ್ತು. ಅದು ನನ್ನ ಪಾಲಿಗೆ ಅತ್ಯಂತ ಸವಾಲಿನ ಪಾತ್ರವಾಗಿತ್ತು. ಆ ಪಾತ್ರದ ಪ್ರತಿಯೊಂದು ಅಂಶವನ್ನೂ ನಾನು ದ್ವೇಷಿಸಿದ್ದೆ" ಎಂದು ಹೇಳಿದರು.
ರಾಧಿಕಾ ಮಾತು ಕೇಳಿ ಮೊದಲಿಗೆ ಅಚ್ಚರಿಗೊಂಡ ಕೀರ್ತಿ ಸುರೇಶ್ ಬಳಿಕ ನಗಲಾರಂಭಿಸಿದರು. ನಂತರ ಸಂದರ್ಶನದ ನಿರೂಪಕ ಹಾಗೂ ಪ್ರೇಕ್ಷಕರಿಗೆ ವಿವರಿಸಿದ ಅವರು, "ತಮಿಳು ಮತ್ತು ತೆಲುಗು ಸಂಸ್ಕೃತಿಯಲ್ಲಿ ಮಾವನನ್ನು ಮದುವೆಯಾಗುವ ಪದ್ಧತಿ ಇದೆ" ಎಂದರು.
'ಯಾವಾಗ ಸಾಯುತ್ತೇನೋ ಅಂತ ಕಾಯುತ್ತಿದ್ದೆ'
ಆದರೆ ರಾಧಿಕಾ ತಕ್ಷಣ ಮಧ್ಯಪ್ರವೇಶಿಸಿ, "ಹೌದು, ಆದರೆ ನನಗಿಂತ ತುಂಬಾ ವಯಸ್ಸಾದ ನಟನೊಂದಿಗೆ ಪ್ರಣಯ ದೃಶ್ಯಗಳಲ್ಲಿ ನಟಿಸಬೇಕಿತ್ತು. ಅದು ಸಂಪೂರ್ಣ ಪುರುಷ ಪ್ರಧಾನ ವ್ಯವಸ್ಥೆ ಮತ್ತು ವಾತಾವರಣ. ನನಗೆ ಅದೇ ಅತ್ಯಂತ ಕಷ್ಟಕರವಾಗಿತ್ತು. ಅಷ್ಟೇ ಅಲ್ಲ, ಸಿನಿಮಾದ ಮಧ್ಯಭಾಗದಲ್ಲೇ ನನ್ನ ಪಾತ್ರ ಸಾಯುತ್ತದೆ. ಅವರು ನನ್ನನ್ನು ಹೆಗಲ ಮೇಲೆ ಎತ್ತಿ ಎಸೆಯಬೇಕು, ಬಳಿಕ ಆಕ್ಷನ್ ದೃಶ್ಯಗಳಲ್ಲಿ ತೊಡಗಿಸಿಕೊಳ್ಳಬೇಕು. ನಾನು ಯಾವಾಗ ಸಾಯುತ್ತೇನೆ ಎಂದು ಕಾಯುತ್ತಿದ್ದೆ" ಎಂದು ತಮ್ಮ ಅನುಭವವನ್ನು ಹಂಚಿಕೊಂಡಿದ್ದಾರೆ.
'ಲೆಜೆಂಡ್' ಸಿನಿಮಾದ ಪಾತ್ರದ ಬಗ್ಗೆ ಮಾತು
ರಾಧಿಕಾ ಸಿನಿಮಾದ ಹೆಸರನ್ನು ನೇರವಾಗಿ ಹೇಳದಿದ್ದರೂ, ಅವರು ವಿವರಿಸಿದ ದೃಶ್ಯಗಳು ಬೋಯಪಾಟಿ ಶ್ರೀನು ನಿರ್ದೇಶನದ 2014ರ ತೆಲುಗು ಸಿನಿಮಾ 'ಲೆಜೆಂಡ್'ಗೆ ಸಂಬಂಧಿಸಿದ್ದಾಗಿವೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಆದರೆ ಸಿನಿಮಾದಲ್ಲಿ ರಾಧಿಕಾ ನಿರ್ವಹಿಸಿದ ಪಾತ್ರವು ತನ್ನ ಮಾವನನ್ನಲ್ಲ, ಮಾವನ ಮಗನಾದ ಬಾವನನ್ನು ಪ್ರೀತಿಸುವ ಪಾತ್ರವಾಗಿತ್ತು. ತೆಲುಗು ಮತ್ತು ತಮಿಳು ರಾಜ್ಯಗಳ ಕೆಲವು ಸಮುದಾಯಗಳಲ್ಲಿ ಇಂತಹ ವಿವಾಹ ಪದ್ಧತಿಯೂ ಇದೆ.
ಅಂದಹಾಗೆ 'ಲೆಜೆಂಡ್' ಸಿನಿಮಾ ಬಿಡುಗಡೆಯಾದಾಗ ಬಾಲಕೃಷ್ಣ ಅವರಿಗೆ 54 ವರ್ಷವಾಗಿದ್ದರೆ, ರಾಧಿಕಾ ಆಪ್ಟೆ ಅವರಿಗೆ 29 ವರ್ಷ ವಯಸ್ಸಾಗಿತ್ತು.
ನಾಲ್ಕು ತೆಲುಗು ಸಿನಿಮಾಗಳಲ್ಲಿ ನಟಿಸಿರುವ ರಾಧಿಕಾ
ರಾಧಿಕಾ ಆಪ್ಟೆ ಈ ವರೆಗೂ 4 ತೆಲುಗು ಸಿನಿಮಾಗಳಲ್ಲಿ 2010ರಲ್ಲಿ ರಾಮ್ ಗೋಪಾಲ್ ವರ್ಮಾ ನಿರ್ದೇಶನದ 'ರಕ್ತ ಚರಿತ್ರ' ಸಿನಿಮಾಗಳ ಮೂಲಕ ತೆಲುಗು ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ್ದರು. ಈ ಸಿನಿಮಾಗಳು ಹಿಂದಿಯಲ್ಲೂ ಬಿಡುಗಡೆಯಾಗಿದ್ದವು.
2012ರಲ್ಲಿ ಪ್ರಕಾಶ್ ರಾಜ್ ಅಭಿನಯದ 'ಧೋನಿ' ಸಿನಿಮಾದಲ್ಲಿ ನಟಿಸಿದ್ದರು. ಮೂಲತಃ ತಮಿಳಿನಲ್ಲಿ ನಿರ್ಮಾಣವಾಗಿದ್ದ ಈ ಸಿನಿಮಾ ತೆಲುಗಿನಲ್ಲೂ ಬಿಡುಗಡೆಯಾಗಿತ್ತು. ನಂತರ 2014ರಲ್ಲಿ ಬಾಲಕೃಷ್ಣ ಅಭಿನಯದ 'ಲೆಜೆಂಡ್' ಸಿನಿಮಾದಲ್ಲಿ ಕಾಣಿಸಿಕೊಂಡಿದ್ದರು. 2015ರಲ್ಲಿ ಸತ್ಯದೇವ್ ನಿರ್ದೇಶನದ 'ಲಯನ್' ಸಿನಿಮಾದಲ್ಲೂ ಬಾಲಕೃಷ್ಣ ಜೊತೆ ನಟಿಸಿದ್ದರು. ಇದು ರಾಧಿಕಾ ನಟಿಸಿದ ಕೊನೆಯ ತೆಲುಗು ಸಿನಿಮಾ.
ದಕ್ಷಿಣ ಚಿತ್ರರಂಗದ ಬಣ್ಣದ ತಾರತಮ್ಯದ ವಿರುದ್ಧವೂ ಧ್ವನಿ
ಇತ್ತೀಚೆಗೆ ಗಲಾಟ್ಟಾ ಜೊತೆಗಿನ ಸಂದರ್ಶನದಲ್ಲಿ ದಕ್ಷಿಣ ಭಾರತದ ಚಿತ್ರರಂಗದಲ್ಲಿ ಬಣ್ಣದ ಆಧಾರದ ಮೇಲೆ ಕಲಾವಿದರನ್ನು ಆಯ್ಕೆ ಮಾಡುವ ಪದ್ಧತಿಯ ಬಗ್ಗೆಯೂ ರಾಧಿಕಾ ಆಪ್ಟೆ ಅಸಮಾಧಾನ ವ್ಯಕ್ತಪಡಿಸಿದ್ದರು.
"ಆರಂಭದಲ್ಲಿ ಉತ್ತರ ಭಾರತದ ಸಾಕಷ್ಟು ನಟಿಯರನ್ನು ದಕ್ಷಿಣ ಭಾರತದ ಸಿನಿಮಾಗಳಿಗೆ ಆಯ್ಕೆ ಮಾಡುತ್ತಿದ್ದುದಕ್ಕೆ ಅವರು ಬೆಳ್ಳಗಿದ್ದರು ಎಂಬುದೇ ಕಾರಣ ಎಂದು ನಾನು ಭಾವಿಸುತ್ತೇನೆ. ಇದು ನನಗೆ ಆಘಾತಕಾರಿ ಎನಿಸುತ್ತದೆ. ನನ್ನನ್ನೇ ನಿರ್ದಿಷ್ಟವಾಗಿ ಆಯ್ಕೆ ಮಾಡಲು ಸೂಕ್ತ ಕಾರಣವಿರುವ ಸಿನಿಮಾ ಸಿಗದ ಹೊರತು, ನಾನು ದಕ್ಷಿಣ ಭಾರತದ ಸಿನಿಮಾದಲ್ಲಿ ನಟಿಸುವುದಿಲ್ಲ. ಅದಕ್ಕೆ ನಾನು ಅರ್ಹಳಲ್ಲ ಎಂದಲ್ಲ" ಎಂದು ಹೇಳಿದ್ದರು.
ಇತ್ತೀಚೆಗೆ ರಾಧಿಕಾ ಆಪ್ಟೆ ನೆಟ್‌ಫ್ಲಿಕ್ಸ್‌ನ 'ಲಸ್ಟ್ ಸ್ಟೋರೀಸ್ 3'ನಲ್ಲಿ ಕಾಣಿಸಿಕೊಂಡಿದ್ದರು. ಅವರ ವೆಬ್ ಸರಣಿ 'ಅಕ್ಕ' ಕೂಡ ಇದೇ ಒಟಿಟಿ ವೇದಿಕೆಯಲ್ಲಿ ಪ್ರಸಾರವಾಗುತ್ತಿದೆ.