ಮುಂಬೈ: ನಿತೇಶ್ ತಿವಾರಿ ನಿರ್ದೇಶನದ ಬಹುನಿರೀಕ್ಷಿತ 'ರಾಮಾಯಣ' ಸಿನಿಮಾ ಬಿಡುಗಡೆಯಾಗಿ ಕೇವಲ 8 ದಿನಗಳಲ್ಲೇ ತನ್ನ ಬಾಕ್ಸಾಫಿಸ್ ನಲ್ಲಿ ಸಾವಿರ ಕೋಟಿಗೂ ಅಧಿಕ ಗಳಿಕೆ ಮಾಡಿ ಯಶಸ್ವಿ ಪ್ರದರ್ಶನ ಮುಂದುವರೆಸಿದೆ.
ಚಿತ್ರದಲ್ಲಿ ನಟ ರಣಬೀರ್ ಕಪೂರ್ ರಾಮನಾಗಿ, ಸಾಯಿ ಪಲ್ಲವಿ ಸೀತೆಯಾಗಿ ಹಾಗೂ ಯಶ್ ರಾವಣನಾಗಿ ಕಾಣಿಸಿಕೊಂಡಿದ್ದಾರೆ. ಆದರೆ, ಈ ಸಿನಿಮಾದಲ್ಲಿ ದೇವೇಂದ್ರನ ಪಾತ್ರ ನಿರ್ವಹಿಸಿರುವ ನಟ ಕುನಾಲ್ ಕಪೂರ್ ಇದೀಗ ಥಾಯ್ಲೆಂಡ್ ಪ್ರೇಕ್ಷಕರ ಗಮನ ಸೆಳೆದಿದ್ದಾರೆ.
ಚಿತ್ರದ ಪ್ರಮುಖ ಪಾತ್ರಗಳ ಬಗ್ಗೆ ಚರ್ಚೆ ನಡೆಯುತ್ತಿರುವ ನಡುವೆಯೇ, ಕುನಾಲ್ ಕಪೂರ್ ಅವರ ನೋಟ ಮತ್ತು ತೆರೆಯ ಮೇಲಿನ ನಟನೆಗೆ ಥಾಯ್ಲೆಂಡ್ ಮಂದಿ ಮನಸೋತಿದ್ದಾರೆ.
ಸಿನಿಮಾದಲ್ಲಿ ಕೆಲವೇ ಕ್ಷಣಗಳು ಕಾಣಿಸಿಕೊಂಡರೂ ಕುನಾಲ್ ಕಪೂರ್ ಅವರ ವ್ಯಕ್ತಿತ್ವ ಮತ್ತು ಆಕರ್ಷಕ ನೋಟಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಅವರ ಸಾಮಾಜಿಕ ಜಾಲತಾಣದ ಖಾತೆಗಳ ಕಾಮೆಂಟ್ ವಿಭಾಗದಲ್ಲಿ ಥಾಯ್ಲೆಂಡ್‌ಗೆ ಬರುವಂತೆ ಅಭಿಮಾನಿಗಳು ಮನವಿ ಮಾಡುತ್ತಿದ್ದಾರೆ.
ಕುನಾಲ್ ಕಪೂರ್‌ಗೆ ಥಾಯ್ಲೆಂಡ್‌ನಲ್ಲಿ ಹೆಚ್ಚಿದ ಕ್ರೇಜ್
'ಥಾಯ್ಲೆಂಡ್‌ನ ಜನರೆಲ್ಲ ಕುನಾಲ್ ಕಪೂರ್‌ಗೆ ಫಿದಾ ಆಗಿದ್ದಾರೆ. ಅವರನ್ನು ಇಂದ್ರ ಎಂದು ಕರೆಯುತ್ತಿದ್ದಾರೆ. ಇದು ತುಂಬಾ ಮುದ್ದಾಗಿದೆ' ಎಂದು ನೆಟ್ಟಿಗರೊಬ್ಬರು ಬರೆದಿದ್ದಾರೆ. ಮತ್ತೊಬ್ಬರು, 'ಇಂದ್ರನ ಪಾತ್ರದ ಮೂಲಕ ಕುನಾಲ್ ಕಪೂರ್ ಥಾಯ್ಲೆಂಡ್ ಪ್ರೇಕ್ಷಕರ ಮನಗೆಲ್ಲುತ್ತಿದ್ದಾರೆ. ಅವರ ಪಾತ್ರವನ್ನೇ ಆಧರಿಸಿ ಸಿನಿಮಾ ಮಾಡಿದರೂ ಅದು ಬ್ಲಾಕ್‌ಬಸ್ಟರ್ ಆಗಬಹುದು' ಎಂದು ಅಭಿಪ್ರಾಯಪಟ್ಟಿದ್ದಾರೆ.
'ನಿಜಕ್ಕೂ ಎಷ್ಟು ಸುಂದರವಾಗಿ ಕಾಣಿಸುತ್ತಾರೆ. ಸ್ವರ್ಗದಿಂದ ದೇವರೇ ಭೂಮಿಗೆ ಇಳಿದು ಬಂದಂತಿದೆ' ಎಂದು ಮತ್ತೊಬ್ಬ ಅಭಿಮಾನಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. 'ರಣಬೀರ್ ಅಲ್ಲ, ಯಶ್ ಅಲ್ಲ. ರಾಮಾಯಣ ಸಿನಿಮಾದ ಮತ್ತೊಬ್ಬ ನಟನಿಗೆ ಥಾಯ್ಲೆಂಡ್ ಮಂದಿ ಮನಸೋತಿದ್ದಾರೆ. ಇಂದ್ರನ ಪಾತ್ರದಲ್ಲಿರುವ ಕುನಾಲ್ ಕಪೂರ್‌ಗಾಗಿ ಅಭಿಮಾನಿಗಳು ಪ್ರೀತಿಯ ಕವಿತೆಗಳನ್ನೇ ಬರೆಯುತ್ತಿದ್ದಾರೆ' ಎಂಬ ಪೋಸ್ಟ್ ಕೂಡ ಗಮನ ಸೆಳೆದಿದೆ.
ಇಂದ್ರನ ಪಾತ್ರದ ಬಗ್ಗೆ ಕುನಾಲ್ ಕಪೂರ್ ಹೇಳಿದ್ದೇನು?
'ವೆರೈಟಿ ಇಂಡಿಯಾ'ಗೆ ನೀಡಿದ ಸಂದರ್ಶನದಲ್ಲಿ ಕುನಾಲ್ ಕಪೂರ್ ತಮ್ಮ ಪಾತ್ರದ ಬಗ್ಗೆ ಮಾತನಾಡಿದ್ದಾರೆ. ಇಂದ್ರನ ಪಾತ್ರದ ಸುತ್ತಲೇ ಪ್ರತ್ಯೇಕ ಸಿನಿಮಾ ನಿರ್ಮಾಣವಾದರೆ ಖುಷಿಯಾಗುತ್ತದೆ. ಆ ಪಾತ್ರದಲ್ಲಿ ತಾನೇ ನಟಿಸಬೇಕು ಎಂದೇನಿಲ್ಲ, ಬೇರೆ ನಟರು ನಿರ್ವಹಿಸಿದರೂ ಸಂತೋಷ ಎಂದು ಹೇಳಿದ್ದಾರೆ.
ಇತ್ತೀಚಿನ ವರ್ಷಗಳಲ್ಲಿ ಇಂದ್ರನ ಪಾತ್ರವನ್ನು ಸರಿಯಾಗಿ ಚಿತ್ರಿಸಿಲ್ಲ ಎಂಬ ಅಭಿಪ್ರಾಯವನ್ನೂ ಅವರು ಹಂಚಿಕೊಂಡಿದ್ದಾರೆ. ಇಂದ್ರ ಕೇವಲ ದೇವತೆ ಮಾತ್ರವಲ್ಲ, ಶಕ್ತಿಶಾಲಿ ಯೋಧ ಮತ್ತು ಸ್ವರ್ಗದ ರಾಜ. ಇಂತಹ ವ್ಯಕ್ತಿತ್ವವನ್ನು ತೆರೆಮೇಲೆ ತೋರಿಸಿದಾಗ ಪ್ರೇಕ್ಷಕರಿಗೆ ಅದು ಇಷ್ಟವಾಗಿದೆ ಎಂದು ಅವರು ಹೇಳಿದ್ದಾರೆ.
ಇಂದ್ರನ ಪಾತ್ರದ ವಿಶೇಷತೆಯ ಬಗ್ಗೆ ಮಾತನಾಡಿದ ಕುನಾಲ್, ಅಪಾರ ಶಕ್ತಿ ಹೊಂದಿರುವ ಸ್ವರ್ಗದ ರಾಜನಲ್ಲೂ ಅಭದ್ರತೆ ಮತ್ತು ದೌರ್ಬಲ್ಯಗಳಿರುತ್ತವೆ. ಹೊರನೋಟಕ್ಕೆ ಬಲಿಷ್ಠವಾಗಿ ಕಂಡರೂ ಒಳಗಿನಿಂದ ಸೂಕ್ಷ್ಮ ಭಾವನೆಗಳನ್ನು ಹೊಂದಿರುವ ಪಾತ್ರಗಳನ್ನು ನಿರ್ವಹಿಸುವುದು ತಮಗೆ ಇಷ್ಟ ಎಂದು ತಿಳಿಸಿದ್ದಾರೆ.
ಲಕ್ಷಾಂತರ ಜನರ ನಂಬಿಕೆಗೆ ಸಂಬಂಧಿಸಿದ ಪಾತ್ರವನ್ನು ನಿರ್ವಹಿಸುವಾಗ ಹೆಚ್ಚಿನ ಜವಾಬ್ದಾರಿ ಇರುತ್ತದೆ. ಈ ಪಾತ್ರವನ್ನು ಗೌರವದಿಂದ ನಿರ್ವಹಿಸಿರುವುದಾಗಿ ಹೇಳಿದ ಅವರು, ನಿರ್ದೇಶಕ ನಿತೇಶ್ ತಿವಾರಿ ಮತ್ತು ನಿರ್ಮಾಪಕ ನಮಿತ್ ಮಲ್ಹೋತ್ರಾ ಅವರ ಸಹಕಾರವನ್ನೂ ಶ್ಲಾಘಿಸಿದ್ದಾರೆ.
4,000 ಕೋಟಿ ರೂ. ಬಜೆಟ್‌ನ 'ರಾಮಾಯಣ'
ಸುಮಾರು 4,000 ಕೋಟಿ ರೂ. ಬಜೆಟ್‌ನಲ್ಲಿ ನಿರ್ಮಾಣವಾಗುತ್ತಿದೆ ಎನ್ನಲಾಗಿರುವ 'ರಾಮಾಯಣ' ಭಾರತೀಯ ಚಿತ್ರರಂಗದ ಅತ್ಯಂತ ಮಹತ್ವಾಕಾಂಕ್ಷೆಯ ಸಿನಿಮಾಗಳಲ್ಲಿ ಒಂದಾಗಿದೆ. ನಿತೇಶ್ ತಿವಾರಿ ನಿರ್ದೇಶನದ ಈ ಚಿತ್ರದಲ್ಲಿ ರಣಬೀರ್ ಕಪೂರ್, ಸಾಯಿ ಪಲ್ಲವಿ, ಯಶ್, ಸನ್ನಿ ಡಿಯೋಲ್, ರವಿ ದುಬೆ, ಲಾರಾ ದತ್ತಾ ಸೇರಿದಂತೆ ದೊಡ್ಡ ತಾರಾಗಣವೇ ಇದೆ.
ಅಕ್ಟೋಬರ್ 27ರಂದು ಚಿತ್ರದ ನಿರ್ಮಾಪಕರು ಅಮೆರಿಕದ ಲಾಸ್ ಏಂಜಲೀಸ್‌ನಲ್ಲಿ ವಿಶೇಷ ಪ್ರದರ್ಶನವನ್ನೂ ಆಯೋಜಿಸಿದ್ದರು. ಜಾಗತಿಕ ಮಟ್ಟದಲ್ಲಿ ಪ್ರಚಾರ ಪಡೆದಿರುವ ಈ ಸಿನಿಮಾದಲ್ಲಿ ಈಗ ಕುನಾಲ್ ಕಪೂರ್ ಅವರ ಇಂದ್ರನ ಪಾತ್ರವೂ ಅಂತರರಾಷ್ಟ್ರೀಯ ಮಟ್ಟದಲ್ಲಿ ಚರ್ಚೆಯಾಗುತ್ತಿದೆ.