ಬಹುಮುಖ ಪ್ರತಿಭೆ, ಸಹಜ ಅಭಿನಯಕ್ಕೆ ಹೆಸರಾಗಿದ್ದ ಹಿರಿಯ ನಟ ನಾನಾ ಪಾಟೇಕರ್ ಅವರು ಇಂದು ಗುರುವಾರ ಮುಂಜಾನೆ ಗೋವಾದ ತಮ್ಮ ನಿವಾಸದಲ್ಲಿ ದಿಢೀರ್ ನಿಧನರಾದರು. ಅವರಿಗೆ 76 ವರ್ಷ ವಯಸ್ಸಾಗಿತ್ತು. ತೀವ್ರ ಹೃದಯಾಘಾತದಿಂದ ನಿಧನರಾಗಿದ್ದಾರೆ ಎಂದು ಶಂಕಿಸಲಾಗಿದೆ.
ಸುದ್ದಿಸಂಸ್ಥೆ ಪಿಟಿಐ ವರದಿ ಪ್ರಕಾರ, ಪಣಜಿಯ ಸಮೀಪದ ಡೊನಾ ಪೌಲಾದಲ್ಲಿರುವ ತಮ್ಮ ಅಪಾರ್ಟ್‌ಮೆಂಟ್‌ನಲ್ಲಿ ನಾನಾ ಪಾಟೇಕರ್ ಅವರು ಪ್ರಜ್ಞಾಹೀನ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಕೂಡಲೇ ಅವರನ್ನು ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ಬೆಳಗಿನ ಜಾವ 5.10ರ ಸುಮಾರಿಗೆ ಅವರು ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದರು ಎಂದು ಹಿರಿಯ ವೈದ್ಯ ಡಾ. ಶೇಖರ್ ಸಾಲ್ಕರ್ ತಿಳಿಸಿದ್ದಾರೆ.
ಸುಮಾರು 45 ನಿಮಿಷಗಳ ಕಾಲ ಸಿಪಿಆರ್ ನೀಡಿದರೂ ಪಾಟೇಕರ್ ಅವರನ್ನು ಬದುಕಿಸಲು ಸಾಧ್ಯವಾಗಲಿಲ್ಲ ಎಂದು ಸಾಲ್ಕರ್ ಹೇಳಿದ್ದಾರೆ. ಸಾವಿನ ನಿಖರ ಕಾರಣ ತಿಳಿಯಲು ಮೆಡಿಕೋ-ಲೀಗಲ್ ಪ್ರಕರಣ ದಾಖಲಿಸಲಾಗಿದ್ದು, ಮರಣೋತ್ತರ ಪರೀಕ್ಷೆ ನಡೆಸಲಾಗುವುದು ಎಂದು ಹೇಳಿದ್ದಾರೆ.
ಪಾಟೇಕರ್ ಅವರ ಸ್ನೇಹಿತರೊಬ್ಬರು ಆಸ್ಪತ್ರೆಯ ವೈದ್ಯರಿಗೆ ನೀಡಿದ ಮಾಹಿತಿಯ ಪ್ರಕಾರ, ನಟ ನಸುಕಿನ ಜಾವ 3.30ರ ಸುಮಾರಿಗೆ ತೀವ್ರ ಅಸ್ವಸ್ಥನಾಗಿದ್ದೇನೆ ಎಂದು ಸ್ನೇಹಿತರಿಗೆ ಸಂದೇಶ ಕಳುಹಿಸಿದ್ದರು. ಸುಮಾರು ಬೆಳಗಿನ ಜಾವ 4 ಗಂಟೆಗೆ ಸ್ನೇಹಿತರು ಆ ಸಂದೇಶವನ್ನು ನೋಡಿದ್ದು, ತಕ್ಷಣ ಪಾಟೇಕರ್ ಅವರು ಕೇರ್‌ಟೇಕರ್‌ನೊಂದಿಗೆ ವಾಸಿಸುತ್ತಿದ್ದ ಅಪಾರ್ಟ್‌ಮೆಂಟ್‌ಗೆ ಧಾವಿಸಿದ್ದರು.
ಕೇರ್‌ಟೇಕರ್ ಆಸ್ಪತ್ರೆಗೆ ಮಾಹಿತಿ ನೀಡಿದ ಬಳಿಕ, ನಿವಾಸಕ್ಕೆ ಆಂಬ್ಯುಲೆನ್ಸ್ ಕಳುಹಿಸಲಾಗಿತ್ತು. ಆಂಬ್ಯುಲೆನ್ಸ್‌ನಲ್ಲೇ ಚಿಕಿತ್ಸೆಯನ್ನು ಆರಂಭಿಸಲಾಗಿತ್ತು ಎಂದು ಸಾಲ್ಕರ್ ತಿಳಿಸಿದ್ದಾರೆ.
ಪಾಟೇಕರ್ ಅವರ ನಿವಾಸ ಆಸ್ಪತ್ರೆಯಿಂದ ಕೇವಲ ಐದು ನಿಮಿಷಗಳ ದೂರದಲ್ಲಿದೆ. ಅವರನ್ನು ಆಸ್ಪತ್ರೆಗೆ ಕರೆದೊಯ್ದ ಬಳಿಕ ವೈದ್ಯರು ಹೃದಯ ಮತ್ತು ಶ್ವಾಸಕ್ಕೆ ಪುನಶ್ಚೇತನ ತುಂಬಲ ಪ್ರಯತ್ನಿಸಿದರು. ಆದರೆ ಬೆಳಗಿನ ಜಾವ 5.10ಕ್ಕೆ ಅವರು ಮೃತಪಟ್ಟಿರುವುದಾಗಿ ಘೋಷಿಸಿದರು.
ಮರಣೋತ್ತರ ಪರೀಕ್ಷೆಗಾಗಿ ಅವರ ಪಾರ್ಥಿವ ಶರೀರವನ್ನು ಬಾಂಬೋಲಿಂನಲ್ಲಿರುವ ಗೋವಾ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಗೆ ಕಳುಹಿಸಲಾಗಿದೆ. ನಾನಾ ಪಾಟೇಕರ್ ಅವರ ಹಠಾತ್ ನಿಧನಕ್ಕೆ ಅಭಿಮಾನಿಗಳು ಮತ್ತು ಚಿತ್ರರಂಗದ ಸಹೋದ್ಯೋಗಿಗಳು ಆಘಾತ ವ್ಯಕ್ತಪಡಿಸಿದ್ದಾರೆ. ಇತ್ತೀಚೆಗಷ್ಟೇ ನಡೆದ ಕಾರ್ಯಕ್ರಮವೊಂದರಲ್ಲಿ ಅವರು ಭಾಗವಹಿಸಿದ್ದಾಗ ಆರೋಗ್ಯವಾಗಿಯೇ ಕಾಣಿಸಿಕೊಂಡಿದ್ದರು.
ನಾನಾ ಪಾಟೇಕರ್ ಅವರ ನಿಧನಕ್ಕೆ ಸಂತಾಪ ಸೂಚಿಸಿರುವ ಪ್ರಧಾನಿ ನರೇಂದ್ರ ಮೋದಿ, ಅವರ ಅಗಲಿಕೆಯಿಂದ ದೊಡ್ಡ ಶೂನ್ಯ ಉಂಟಾಗಿದೆ ಎಂದು ಹೇಳಿದ್ದಾರೆ.
ಬ್ಲಾಕ್‌ಬಸ್ಟರ್ ಹಾಸ್ಯ ಚಿತ್ರ ವೆಲ್‌ಕಮ್’ನಲ್ಲಿ ಪಾಟೇಕರ್ ಅವರೊಂದಿಗೆ ನಟಿಸಿದ್ದ ಅಕ್ಷಯ್ ಕುಮಾರ್, ಅವರೊಂದಿಗೆ ಚಿತ್ರೀಕರಣದ ಸಂದರ್ಭದಲ್ಲಿ ಕಳೆದ ಸಮಯದ ಹಲವು ಅಮೂಲ್ಯ ನೆನಪುಗಳು ತಮ್ಮಲ್ಲಿವೆ ಎಂದು ಹೇಳಿದ್ದಾರೆ.
ನಾನಾ ಅವರ ನಿಧನದ ಸುದ್ದಿ ಕೇಳಿ ನಿಜಕ್ಕೂ ತುಂಬಾ ದುಃಖವಾಗಿದೆ. ನೀವು ಎದ್ದು ಕುಳಿತು ಅವರ ಅಭಿನಯವನ್ನು ಗಮನಿಸುವಂತೆ ಮಾಡಲು ಹೆಚ್ಚು ಏನನ್ನೂ ಮಾಡಬೇಕಾಗಿರದ ಅಪರೂಪದ ನಟರಲ್ಲಿ ಅವರೂ ಒಬ್ಬರು. ಆ ಧ್ವನಿ, ಆ ತೀವ್ರತೆ, ಪ್ರತಿಯೊಂದು ಅಭಿನಯದಲ್ಲಿದ್ದ ಆ ಪ್ರಾಮಾಣಿಕತೆ, ಅವರು ತಮ್ಮದೇ ಆದ ವಿಶಿಷ್ಟ ವ್ಯಕ್ತಿತ್ವ ಹೊಂದಿದ್ದರು ಎಂದು ಅಕ್ಷಯ್ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.
“ನಾನಾ ನಿಜಕ್ಕೂ ಅಪರೂಪದ ವ್ಯಕ್ತಿ. ನೀವು ನಮ್ಮನ್ನು ಅಗಲಿದ್ದೀರಿ ಎಂಬುದನ್ನು ನಂಬುವುದು ಕಷ್ಟ. ಎಲ್ಲ ನೆನಪುಗಳಿಗೂ ಧನ್ಯವಾದಗಳು. ಪದಗಳಲ್ಲಿ ಹೇಳಲಾಗದಷ್ಟು ನಿಮ್ಮನ್ನು ನಾವು ಕಳೆದುಕೊಳ್ಳಲಿದ್ದೇವೆ ಎಂದು ಅವರು ಹೇಳಿದ್ದಾರೆ. 2025ರಲ್ಲಿ ಬಿಡುಗಡೆಯಾದ ‘ಹೌಸ್‌ಫುಲ್ 5’ ಚಿತ್ರದಲ್ಲಿ ಪಾಟೇಕರ್ ಅವರೊಂದಿಗೆ ಅಕ್ಷಯ್ ಕುಮಾರ್ ಕೊನೆಯ ಬಾರಿಗೆ ಒಟ್ಟಿಗೆ ಕೆಲಸ ಮಾಡಿದ್ದರು.
ನಟ ಆರ್. ಮಾಧವನ್ ಅವರು 1991ರಲ್ಲಿ ಬಿಡುಗಡೆಯಾಗಿ ವಿಮರ್ಶಕರ ಮೆಚ್ಚುಗೆಗೆ ಪಾತ್ರವಾಗಿದ್ದ ‘ಪ್ರಹಾರ್: ದಿ ಫೈನಲ್ ಅಟ್ಯಾಕ್’ ಚಿತ್ರದಲ್ಲಿನ ಪಾಟೇಕರ್ ಅವರ ಅಭಿನಯದಿಂದ ತಾವು ಆಳವಾಗಿ ಪ್ರಭಾವಿತರಾಗಿ ಸ್ಫೂರ್ತಿ ಪಡೆದಿದ್ದಾಗಿ ಹೇಳಿದ್ದಾರೆ. ತಮ್ಮ ನಿರ್ದೇಶನದ ಚೊಚ್ಚಲ ಚಿತ್ರಕ್ಕಾಗಿ ಪಾಟೇಕರ್ ಎರಡು ವರ್ಷಗಳ ಕಾಲ ಸೇನೆಯೊಂದಿಗೆ ತರಬೇತಿ ಪಡೆದಿದ್ದರು.
ಒಬ್ಬ ದಿಗ್ಗಜ ನಮ್ಮನ್ನು ಅಗಲಿದ್ದಾರೆ. ಚಿತ್ರಮಂದಿರಗಳಲ್ಲಿ ನೀಡಿದ ಮರೆಯಲಾಗದ ಕ್ಷಣಗಳಿಗಾಗಿ ಹಾಗೂ ನಟರಿಗೆ ನೀಡಿದ ಅಮೂಲ್ಯ ಪಾಠಗಳಿಗಾಗಿ ಧನ್ಯವಾದಗಳು. ‘ಪ್ರಹಾರ್’ ಚಿತ್ರವನ್ನು ನೋಡಿದ ಬಳಿಕ ನಾನು ಎಷ್ಟು ಪ್ರಭಾವಿತನಾಗಿ, ಸ್ಫೂರ್ತಿ ಪಡೆದಿದ್ದೆ ಎಂಬುದು ಈಗಲೂ ನನಗೆ ಸ್ಪಷ್ಟವಾಗಿ ನೆನಪಿದೆ. ನಿಮ್ಮಂತಹ ಮತ್ತೊಬ್ಬರು ಇರಲಾರರು. ನಿಮ್ಮ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಮಾಧವನ್ ಹೇಳಿದ್ದಾರೆ.
ನಟಿ ಕಂಗನಾ ರಣಾವತ್, ವಿಶೇಷವಾಗಿ ನಾನಾ ತುಂಬಾ ಆರೋಗ್ಯವಾಗಿಯೂ ದೈಹಿಕವಾಗಿ ಸದೃಢವಾಗಿಯೂ ಕಾಣಿಸುತ್ತಿದ್ದ ಕಾರಣ, ಇದು ಅತ್ಯಂತ ದುಃಖದ ಮತ್ತು ದುರಂತದ ಸುದ್ದಿ. ಓಂ ಶಾಂತಿ,” ಎಂದು ಬರೆದಿದ್ದಾರೆ.
ಚಿತ್ರರಂಗದಲ್ಲಿ ನಾನಾ ಪಾಟೇಕರ್
ಹಿಂದಿ ಮತ್ತು ಮರಾಠಿ ಚಿತ್ರರಂಗದ ಪ್ರಮುಖ ನಟರಲ್ಲಿ ನಾನಾ ಪಾಟೇಕರ್ ಕೂಡ ಒಬ್ಬರಾಗಿದ್ದರು. 1978ರಲ್ಲಿ ಬಿಡುಗಡೆಯಾದ ‘ಗಮನ್’ ಚಿತ್ರದ ಮೂಲಕ ಅವರು ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದರು. ಬಳಿಕ ‘ಪರಿಂಧಾ’, ‘ಪ್ರಹಾರ್’, ‘ಅಂಗಾರ್’, ‘ಕ್ರಾಂತಿವೀರ್’, ‘ತಿರಂಗಾ’, ‘ಖಾಮೋಶಿ’ ಮತ್ತು ‘ಅಬ್ ತಕ್ ಛಪ್ಪನ್’ ಸೇರಿದಂತೆ ಹಲವು ಚಿತ್ರಗಳಲ್ಲಿನ ಅಭಿನಯದ ಮೂಲಕ ಜನಪ್ರಿಯ ನಟರಾಗಿ ತಮ್ಮದೇ ಛಾಪು ಮೂಡಿಸಿದ್ದರು.
ಇತ್ತೀಚಿನ ವರ್ಷಗಳಲ್ಲೂ ಪಾಟೇಕರ್ ಹಲವು ಚಿತ್ರಗಳಲ್ಲಿ ಅಭಿನಯಿಸಿದ್ದರು. ಅಕ್ಷಯ್ ಕುಮಾರ್, ಅಭಿಷೇಕ್ ಬಚ್ಚನ್, ರಿತೇಶ್ ದೇಶಮುಖ್ ಸೇರಿದಂತೆ ಹಲವರು ನಟಿಸಿದ್ದ ‘ಹೌಸ್‌ಫುಲ್ 5’ ಚಿತ್ರದಲ್ಲೂ ಅವರು ಕಾಣಿಸಿಕೊಂಡಿದ್ದರು.
75 ವರ್ಷದ ಪಾಟೇಕರ್ ಅವರು ಶಾಹಿದ್ ಕಪೂರ್ ಮತ್ತು ತೃಪ್ತಿ ಡಿಮ್ರಿ ಅಭಿನಯದ ವಿಶಾಲ್ ಭಾರದ್ವಾಜ್ ನಿರ್ದೇಶನದ ‘ಒ'ರೋಮಿಯೋ’ ಚಿತ್ರದಲ್ಲಿ ಪೊಲೀಸ್ ಅಧಿಕಾರಿಯ ಪಾತ್ರದಲ್ಲೂ ಕಾಣಿಸಿಕೊಂಡಿದ್ದರು. ಇದರ ಜೊತೆಗೆ ಅನಿಲ್ ಕಪೂರ್ ಮತ್ತು ರಾಧಿಕಾ ಮದನ್ ಅಭಿನಯದ ‘ಸುಬೇದಾರ್’ ಚಿತ್ರದಲ್ಲೂ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು.
ತಮ್ಮ ತೀವ್ರ ಅಭಿನಯ ಮತ್ತು ವಿಶಿಷ್ಟ ಸಂಭಾಷಣೆ ಹೇಳುವ ಶೈಲಿಗೆ ಹೆಸರಾಗಿದ್ದ ಪಾಟೇಕರ್, ಸಣ್ಣ ಪಾತ್ರಗಳಿಂದ ಆರಂಭಿಸಿ ತಮ್ಮ ಕಾಲಘಟ್ಟದ ಅತ್ಯಂತ ಬಹುಮುಖ ನಾಯಕ ನಟರಲ್ಲಿ ಒಬ್ಬರಾಗಿ ಬೆಳೆದಿದ್ದರು.
ಮಹಾರಾಷ್ಟ್ರದ ರಾಯಗಢ ಜಿಲ್ಲೆಯ ಮುರುಡ್-ಜಂಜೀರಾದಲ್ಲಿ ಮರಾಠಿ ಕುಟುಂಬದಲ್ಲಿ ವಿಶ್ವನಾಥ ಪಾಟೇಕರ್ ಆಗಿ ಜನಿಸಿದ ಅವರು, ತಮ್ಮ ಪ್ರತಿಭೆಯನ್ನು ಕಲಾವಿದನಾಗಿ ಬೆಳೆಸಲು ತಂದೆ ಪ್ರೋತ್ಸಾಹ ನೀಡಿದ್ದರು ಎಂದು ಹಲವು ಬಾರಿ ಸ್ಮರಿಸಿದ್ದರು.
ಹಿಂದಿ ಮತ್ತು ಮರಾಠಿ ಭಾಷೆಯ ಹಲವು ಚಿತ್ರಗಳಲ್ಲಿ ಪಾಟೇಕರ್ ಗಮನಾರ್ಹ ಪಾತ್ರಗಳಲ್ಲಿ ಅಭಿನಯಿಸಿದ್ದರು. ಅವರ ಪ್ರಮುಖ ಹಿಂದಿ ಚಿತ್ರಗಳಲ್ಲಿ ‘ಪರಿಂಧಾ’, ‘ಪ್ರಹಾರ್: ದಿ ಫೈನಲ್ ಅಟ್ಯಾಕ್’, ‘ತಿರಂಗಾ’, ‘ಕ್ರಾಂತಿವೀರ್’ ಮತ್ತು ‘ಖಾಮೋಶಿ: ದಿ ಮ್ಯೂಸಿಕಲ್’ ಸೇರಿವೆ.
ಪಾಟೇಕರ್ ಅವರು ಮೂರು ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳು, ಹಲವು ಫಿಲ್ಮ್‌ಫೇರ್ ಪ್ರಶಸ್ತಿಗಳು, ಮಹಾರಾಷ್ಟ್ರ ರಾಜ್ಯ ಚಲನಚಿತ್ರ ಪ್ರಶಸ್ತಿ ಹಾಗೂ ಫಿಲ್ಮ್‌ಫೇರ್ ಅವಾರ್ಡ್ಸ್ ಮರಾಠಿ ಸೇರಿದಂತೆ ಹಲವು ಪ್ರಶಸ್ತಿಗಳನ್ನು ಪಡೆದಿದ್ದರು.
ದೇಶದ ನಾಲ್ಕನೇ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಪದ್ಮಶ್ರೀ ಗೌರವಕ್ಕೂ ಭಾಜನರಾಗಿದ್ದರು. 2018ರಲ್ಲಿ ನಟಿ ತನುಶ್ರೀ ದತ್ತಾ ಅವರು ಚಿತ್ರೀಕರಣದ ವೇಳೆ ನಾನಾ ಪಾಟೇಕರ್ ವಿರುದ್ಧ ಲೈಂಗಿಕ ಕಿರುಕುಳದ ಆರೋಪ ಮಾಡಿದ್ದರು. ಈ ಆರೋಪದ ಬಳಿಕ ಭಾರತದಲ್ಲಿ ‘ಮೀಟೂ’ ಚಳವಳಿ ಆರಂಭಕ್ಕೆ ವೇಗ ದೊರೆಯಿತು. ಪಾಟೇಕರ್ ವಿರುದ್ಧ ಎಫ್‌ಐಆರ್ ಕೂಡ ದಾಖಲಾಗಿತ್ತು. ಆದರೆ ಅವರು ಆರೋಪಗಳನ್ನು ನಿರಂತರವಾಗಿ ನಿರಾಕರಿಸಿದ್ದರು. ಬಳಿಕ ಸಾಕಷ್ಟು ಸಾಕ್ಷ್ಯಾಧಾರಗಳಿಲ್ಲ ಎಂಬ ಕಾರಣಕ್ಕೆ ಪ್ರಕರಣವನ್ನು ಮುಚ್ಚಲಾಯಿತು.
ನಾನಾ ಪಾಟೇಕರ್ ಅವರು ಪತ್ನಿ ಮತ್ತು ಪುತ್ರ ಮಲ್ಹಾರ್ ಅವರನ್ನು ಅಗಲಿದ್ದಾರೆ.