ಮುಂಬೈ: ದೇಶದ ವಾಣಿಜ್ಯ ನಗರಿ ಮುಂಬೈನಲ್ಲಿ ಭಾನುವಾರ ರಾತ್ರಿ ಬಾಲಿವುಡ್ ನಟ ಟೈಗರ್ ಶ್ರಾಫ್ ಅವರ ಕಾರಿನ ಮೇಲೆ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ಗುಂಡಿನ ದಾಳಿ ನಡೆಸಿದ್ದು, ಅದೃಷ್ಟವಶಾತ್ ಯಾವುದೇ ಅಪಾಯವಿಲ್ಲದೆ ಪಾರಾಗಿದ್ದಾರೆ.
ನಟನ ಕಾರಿನ ಮೇಲೆ ಗುಂಡಿನ ದಾಳಿಯ ಸುದ್ದಿ ತಿಳಿಯುತ್ತಿದ್ದಂತೆ ಅವರ ಗೆಳತಿ ಹಾಗೂ ಬಾಲಿವುಡ್ ನಟಿ ದಿಶಾ ಪಟಾನಿ ಅವರು ಟೈಗರ್ ಶ್ರಾಫ್ ಅವರ ಮುಂಬೈನ ಜುಹು ನಿವಾಸಕ್ಕೆ ಓಡೋಡಿ ಬಂದಿದ್ದು, ಗೆಳೆಯನಿಗೆ ಸಾಂತ್ವನ ಹೇಳಿದ್ದಾರೆ.
ಟೈಗರ್ ಶ್ರಾಫ್ ಅವರ ಕಾರಿನ ಮೇಲಿನ ಗುಂಡಿನ ದಾಳಿಯಿಂದ ತೀವ್ರ ಆಘಾತಗೊಂಡಿರುವ ದಿಶಾ ಪಟಾನಿ ಅವರು, ಪಾಪರಾಜಿಗಳ ಕಡೆಗೆ ಗಮನ ನೀಡದೇ ನೇರವಾಗಿ ಟೈಗರ್ ಶ್ರಾಫ್ ಅವರ ಮನೆಯೊಳಗೆ ತೆರಳಿರುವ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಮುಂಬೈನ ಜುಹುವಿನ ಪುಷ್ಪಾ ಪಾರ್ಕ್ ಬಳಿ ಇರುವ ಕ್ಲಬ್‌ನಲ್ಲಿ ಫುಟ್‌ಬಾಲ್ ಆಟ ಮುಗಿಸಿ ವಾಪಸ್ಸಾಗುತ್ತಿದ್ದಾಗ ಬೈಕ್‌ನಲ್ಲಿ ಬಂದ ಮೂವರು ದುಷ್ಕರ್ಮಿಗಳು ಟೈಗರ್ ಶ್ರಾಫ್ ಅವರ ಕಾರಿನ ಮೇಲೆ ಮನಬಂದಂತೆ ಗುಂಡು ಹಾರಿಸಿದ್ದಾರೆ. ಈ ಅನಿರೀಕ್ಷಿತ ದಾಳಿಯಲ್ಲಿ ಟೈಗರ್ ಶ್ರಾಫ್ ಪ್ರಾಣಾಪಾಯದಿಂದ ಪಾರಾಗಿದ್ದು, ಅವರ ಚಾಲಕ ಹಾಗೂ ಆಟೋರಿಕ್ಷಾ ಚಾಲಕನಿಗೆ ಗಾಯಗಳಾಗಿವೆ. ಚಾಲಕನಿಗೆ ಗುಂಡೇಟು ತಗುಲಿದ ತಕ್ಷಣ ಎಚ್ಚೆತ್ತುಕೊಂಡ ನಟ ಟೈಗರ್ ಶ್ರಾಫ್ ತಾವೇ ಸ್ವತಃ ಸ್ಟೀರಿಂಗ್ ಹಿಡಿದು ಪರಿಸ್ಥಿತಿ ನಿಯಂತ್ರಿಸಿದ್ದಾರೆ. ಸದ್ಯ ಗಾಯಾಳುಗಳನ್ನು ನಾನಾವತಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.