ಖ್ಯಾತ ಬಾಲಿವುಡ್ ನಟಿ ಕರೀನಾ ಕಪೂರ್ ಖಾನ್ ಅವರು ತಮ್ಮ ಪುತ್ರರಾದ ತೈಮೂರ್ ಮತ್ತು ಜೆಹ್ ಬಗ್ಗೆ ಸ್ವಾರಸ್ಯಕರ ವಿಷಯವೊಂದನ್ನು ಹಂಚಿಕೊಂಡಿದ್ದಾರೆ.
ವಿಮಾನ ನಿಲ್ದಾಣದಲ್ಲಿ ತಮ್ಮ ಒಂದು ಜಾಹೀರಾತಿನ ಬಗ್ಗೆ ಹಿರಿಯ ಮಗ ತೈಮೂರ್ ಪ್ರಶ್ನಿಸಿದ್ದನ್ನು ನೋಡಿ ಬೇಸ್ತು ಬಿದ್ದ ನಟಿ ಕರೀನಾ ಕಪೂರ್ ಅವರು, ಮಕ್ಕಳ ಪ್ರಶ್ನೆಗಳಿಗೆ ಉತ್ತರಿಸಲು ಆಗದೆ ತಾವು ಪರದಾಡಿದ ಪರಿಸ್ಥಿತಿಯ ಬಗ್ಗೆ ಸಂದರ್ಶನದಲ್ಲಿ ಮುಕ್ತವಾಗಿ ಹೇಳಿಕೊಂಡಿದ್ದಾರೆ.
ರಸ್ತೆ ಹಾಗೂ ವಿಮಾನ ನಿಲ್ದಾಣಗಳಲ್ಲಿ ಇರುವ ತಮ್ಮ ಬೃಹತ್ ಜಾಹೀರಾತುಗಳನ್ನು ಮಕ್ಕಳು ನೋಡಿದಾಗ ತಮಗೆ ಸಂಕಟ ಮತ್ತು ಮುಜುಗರವಾಗುತ್ತದೆ ಎಂದು ಬಾಲಿವುಡ್ ನಟಿ ಹೇಳಿದ್ದಾರೆ.
‘ನನ್ನ ಮಕ್ಕಳು ಈಗ ಜಾಹೀರಾತುಗಳನ್ನು ಜಾಸ್ತಿ ಗಮನಿಸುತ್ತಿದ್ದಾರೆ. ನನ್ನ ಜಾಹೀರಾತುಗಳು ಅವರ ಕಣ್ಣಿಗೆ ಬಿದ್ದಾಗ ನನಗೆ ಏನು ಮಾಡಬೇಕೆಂದು ತೋಚುವುದಿಲ್ಲ. ಅವರು ಅದನ್ನು ನೋಡಬೇಕೋ ಬೇಡವೋ ಎಂಬ ಗೊಂದಲ ನನ್ನಲ್ಲಿ ಸದಾ ಇರುತ್ತದೆ’ ಎಂದು ಕರೀನಾ ಕಪೂರ್ ತಿಳಿಸಿದ್ದಾರೆ.
‘ವಿಮಾನ ನಿಲ್ದಾಣದಲ್ಲಿರುವ ನನ್ನ ಜಾಹೀರಾತಿನಲ್ಲಿ ನಾನು ನಾನು ಗಂಟಿಕ್ಕುತ್ತಿರುವುದನ್ನು ನೋಡಿದ ತೈಮೂರ್, ‘ಅಮ್ಮ ನೀನ್ಯಾಕೆ ಆ ರೀತಿ ಮಾಡುತ್ತಿದ್ದೀಯಾ?’ ಎಂದು ಕೇಳಿದನು. ಅದು ಜಾಹೀರಾತು, ಅದನ್ನು ಬಿಟ್ಟು ಮುಂದಕ್ಕೆ ನಡೆಯಲು ಹೇಳಿದೆ. ಆದರೂ ಅವನು ಮತ್ತೆ ಮತ್ತೆ ಅದನ್ನೇ ಕೇಳುತ್ತಿದ್ದನು’ ಎಂದು ನಟಿ ವಿವರಿಸಿದ್ದಾರೆ.
ಇನ್ನು ಮಕ್ಕಳ ಮೊಬೈಲ್ ಮತ್ತು ಲ್ಯಾಪ್‌ಟಾಪ್ ಬಳಕೆಯ ಬಗ್ಗೆಯೂ ಕರೀನಾ ಕಪೂರ್ ಮಾತನಾಡಿದ್ದಾರೆ. ‘ನನ್ನ ಮಕ್ಕಳಿಗೆ ಸ್ವಂತ ಫೋನ್ ಇಲ್ಲ. ಆದರೆ ಅವರು ತಮ್ಮ ನ್ಯಾನಿ (ಸಾಕುವಾಕೆ) ಫೋನ್ ಅನ್ನೇ ತಮ್ಮದೆಂದು ಭಾವಿಸುತ್ತಾರೆ. ಗೇಮ್ಸ್ ಆಡುವಾಗ ನಾನು ಫೋನ್ ಕಸಿದುಕೊಳ್ಳುತ್ತೇನೆ. ಆಗ ‘ನೀವು ಮತ್ತು ಅಪ್ಪ ಕೂಡ ಫೋನ್‌ನಲ್ಲೇ ಮಾತನಾಡುತ್ತೀರಲ್ಲ’ ಎಂದು ತೈಮೂರ್ ಎದುರು ಪ್ರಶ್ನೆ ಹಾಕುತ್ತಾನೆ’ ಎಂದಿದ್ದಾರೆ.