ಬಾಲಿವುಡ್ ನಟಿ ರಾಧಿಕಾ ಆಪ್ಟೆ ಅವರು ತಮ್ಮ ವೃತ್ತಿಜೀವನದಲ್ಲಿ ಹಲವು ಬೋಲ್ಡ್ ದೃಶ್ಯಗಳಲ್ಲಿ ನಟಿಸುವುದು ಸೇರಿದಂತೆ ಧೈರ್ಯಶಾಲಿ ಹಾಗೂ ಸಾಂಪ್ರದಾಯಿಕವಲ್ಲದ ಪಾತ್ರಗಳನ್ನು ನಿರ್ವಹಿಸಿದ್ದಾರೆ. ಆದರೆ, ಇದರಿಂದಾಗಿ ಚಿತ್ರಕಥೆಗೆ ಅಗತ್ಯವಿಲ್ಲದಿದ್ದರೂ ಸಹ ನಾನು ಅಂತಹ ದೃಶ್ಯಗಳಲ್ಲಿ ನಟಿಸಲು ಸಿದ್ಧಳಿದ್ದೇನೆ ಎಂದು ಕೆಲವು ನಿರ್ದೇಶಕರು ಭಾವಿಸುತ್ತಿದ್ದಾರೆ ಎಂದು ನಟಿ ಹೇಳಿದ್ದಾರೆ.
ಇತ್ತೀಚಿನ ಸಂದರ್ಶನವೊಂದರಲ್ಲಿ, ಯಾವುದೇ ಸ್ಪಷ್ಟ ಕಾರಣವಿಲ್ಲದೆ ಸಹ-ನಟರಿಗೆ ಕಿಸ್ ಮಾಡುವಂತೆ ಮತ್ತು ಒಳ ಉಡುಪಿನಲ್ಲೇ ಸಾಹಸ ದೃಶ್ಯವೊಂದನ್ನು(ಆಕ್ಷನ್ ಸೀಕ್ವೆನ್ಸ್) ಮಾಡುವಂತೆ ತಮಗೆ ಒತ್ತಡ ಹೇರಲಾಗಿತ್ತು ಎಂಬುದನ್ನು ರಾಧಿಕಾ ನೆನಪಿಸಿಕೊಂಡಿದ್ದಾರೆ.
'ಜೂಮ್' (Zoom) ಜೊತೆಗಿನ ಸಂದರ್ಶನದಲ್ಲಿ, ನಾನು ಕೆಲವು ಸಿನಿಮಾಗಳಲ್ಲಿ ಬೋಲ್ಡ್ ದೃಶ್ಯ ಮಾಡಿದ ನಂತರ ಚಿತ್ರರಂಗದಲ್ಲಿ ನನ್ನ ಬಗ್ಗೆ ತಪ್ಪು ಅಭಿಪ್ರಾಯ ಮೂಡಿತು. ನಾನು ಯಾವುದೇ ದೃಶ್ಯದಲ್ಲಾದರೂ ಸುಲಭವಾಗಿ ನಟಿಸುತ್ತೇನೆ ಎಂದು ಹಲವರು ಭಾವಿಸಿದರು.
"ಆರಂಭದಲ್ಲಿ, ನಾನು ಸಂಪೂರ್ಣವಾಗಿ ನಗ್ನವಾಗಿ ಕಾಣಿಸಿಕೊಂಡಿದ್ದ ಸುಮಾರು ನಾಲ್ಕೈದು ಚಿತ್ರಗಳನ್ನು ಮಾಡಿದ್ದೆ. ಆಗ ಅನೇಕರು, ಈಕೆ ಹೇಗೆ ಬೇಕಿದ್ದರೂ ನಟಿಸುತ್ತಾಳೆ ಎಂಬ ಹಗುರವಾದ ಧೋರಣೆ ಅವರಲ್ಲಿತ್ತು. ಇದು ನನಗೆ ಆರಂಭದಲ್ಲಿ ದೊಡ್ಡ ಕಿರಿಕಿರಿಯನ್ನು ಉಂಟುಮಾಡಿತು' ಎಂದಿದ್ದಾರೆ.
‘ಅನಗತ್ಯವಾಗಿ ಸಹನಟನಿಗೆ ಕಿಸ್ ಮಾಡಲು ಹಲವು ಬಾರಿ ಒತ್ತಾಯಿಸುತ್ತಿದ್ದರು. ಸ್ವಲ್ಪ ಕಿಸ್ ಮಾಡಿ, 15 ಸೆಕೆಂಡ್ ನಟಿಸಿ ಎಂದು ಹಗುರವಾಗಿ ಹೇಳುತ್ತಿದ್ದರು. ಕಥೆಗೆ ಇದರ ಅಗತ್ಯವೇನು ಎಂದು ಕೇಳಿದರೆ ಅವರ ಬಳಿ ಉತ್ತರವೇ ಇರುತ್ತಿರಲಿಲ್ಲ. ಇಂತಹ ಅನುಭವಗಳು ನನಗೆ ಚಿತ್ರರಂಗದಲ್ಲಿ ಪದೇ ಪದೇ ಎದುರಾಗಿದ್ದವು’ ಎಂದು ರಾಧಿಕಾ ಬೇಸರ ಹೊರಹಾಕಿದ್ದಾರೆ.
ಒಮ್ಮೆ ಆ್ಯಕ್ಷನ್ ದೃಶ್ಯವೊಂದರಲ್ಲಿ ನಟಿಸುವಾಗ ಶರ್ಟ್ ಬಟನ್ ಹಾಕಬೇಡಿ ಎಂದು ಕೇಳಿಕೊಂಡಿದ್ದರು. ನಂತರ ಶರ್ಟ್ ತೆಗೆದು ಒಳಉಡುಪಿನಲ್ಲಿಯೇ ಫೈಟ್ ದೃಶ್ಯ ಮಾಡಿ ಎಂದು ವಿಚಿತ್ರ ಬೇಡಿಕೆ ಇಟ್ಟಿದ್ದರು. ಇದನ್ನು ಕೇಳಿ ನನಗೆ ತೀವ್ರ ಆಘಾತವಾಗಿತ್ತು. ನಾನು ತಕ್ಷಣವೇ ಆ ಬೇಡಿಕೆಯನ್ನು ನಿರಾಕರಿಸಿದೆ ಎಂದು ನಟಿ ಹೇಳಿದ್ದಾರೆ.