ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಸಿನಿಮಾ ಲೇಖನ

ಏಳಿ ಎದ್ದೇಳಿ ಸ್ಟಾರ್‌ಗಳೇ

ಹೊಸಬರ ಚಿತ್ರಗಳು ಎಷ್ಟೇ ಹಿಟ್ ಆದರೂ ಸ್ಟಾರ್‌ಗಳು ಕಳೆ ಕಳೆದುಕೊಂಡರೆ ಅದು ಚಿತ್ರರಂಗವನ್ನು ನೀರಸವಾಗಿಸುತ್ತದೆ.

ಅಂದರ್ ಬಾಹರ್- ನಿರ್ದೇಶಕ ಫಣೀಶ್, ಶಿವರಾಜ್ ಕುಮಾರ್ ಹಾಗೂ ಸಹ ಕಲಾವಿದರು
Vishwanath S
Updated On : 5 Apr 2013, 1:22 am

ಫಸ್ಟ್ ಹಾಫ್
ಯಾರಾದರೂ ಶಿವರಾಜ್‌ಕುಮಾರ್ ಅವರ ವೃತ್ತಿಜೀವನದಲ್ಲಿ ಮೂರು ಅತ್ಯುತ್ತಮ ಚಿತ್ರಗಳ ಹೆಸರು ಹೇಳಿದರೆ ಅದರಲ್ಲಿ ನನ್ನ ಅಂದರ್ ಬಾಹರ್ ಕೂಡಾ ಇರಬೇಕು ಎಂಬ ಆಸೆ, ಇರುತ್ತದೆ ಎಂಬ ನಂಬಿಕೆ ನನ್ನದು.

ನಾನೊಬ್ಬ ಸಿನಿಮಾ ಪ್ರೇಮಿ. ನಾನು ನೋಡಿರುವ ಚಿತ್ರಗಳಲ್ಲಿ ಹತ್ತು ಬೆಸ್ಟ್ ಕ್ಲೈಮ್ಯಾಕ್ಸ್‌ಗಳನ್ನು ನಾನು ಯಾವತ್ತೂ ನೆನಪಿನಲ್ಲಿಟ್ಟುಕೊಂಡಿದ್ದೇನೆ. ಅಂದರ್ ಬಾಹರ್ ಚಿತ್ರದ ಕ್ಲೈಮ್ಯಾಕ್ಸ್ ಆ ಹತ್ತು ಕ್ಲೈಮ್ಯಾಕ್ಸ್‌ಗಳನ್ನು ಮೀರಿಸುವಂಥದ್ದಾಗಿರಬೇಕು ಅಂದುಕೊಂಡು ಕೆಲಸ ಮಾಡಿದ್ದೇನೆ.
(ಅಂದರ್ ಬಾಹರ್ ಚಿತ್ರದ ನಿರ್ದೇಶಕ ಫಣೀಶ್)

ಸೆಕೆಂಡ್ ಹಾಫ್
ಸಾಕಾಯ್ತು, ಇನ್ಮೇಲೆ ಉಪೇಂದ್ರನ್ ಸಿನಿಮಾ ನೋಡಲ್ಲ. ಯಾರಾದ್ರೂ ನೋಡ್ಕೊಂಡ್ ಬಂದು ಚೆನ್ನಾಗಿದೆ ಅಂದ್ರೆ ಮಾತ್ರ ಹೋಗ್ತೀನಿ.
(ಉಪ್ಪಿ ಅಭಿಮಾನಿ)

ಇತ್ತೀಚೆಗೆ ಪ್ರತಿಯೊಂದು ಸ್ಟಾರ್‌ಗಳ ಸಿನಿಮಾ ಬಿಡುಗಡೆಯಾಗುವ ಮೊದಲು ಮತ್ತು ನಂತರ ಕೇಳಿಬರುತ್ತಿರುವ ಮಾತುಗಳಿವು. ಚಿತ್ರದ ನಿರ್ದೇಶಕರು, ಸ್ವತಃ ಆ ಚಿತ್ರದ ಸ್ಟಾರ್‌ಗಳು ಪತ್ರಿಕೆ ಮತ್ತು ಟಿವಿ ಚಾನೆಲ್‌ಗಳ ಮುಂದೆ ತಮ್ಮ ಚಿತ್ರದ ಬಗ್ಗೆ ಎಂಥಹ ಚಿತ್ರನಿರಾಸಕ್ತರಿಗೂ ಆಸಕ್ತಿ ಹುಟ್ಟುವಂತೆ ಹೇಳುವ ಮಾತುಗಳು ಮತ್ತು ಮೊದಲ ದಿನ ಚಿತ್ರ ನೋಡಿ ಹೊರಬಂದ ಪ್ರೇಕ್ಷಕರ ಮಾತುಗಳು ರಿಪೀಟ್ ಆಗುತ್ತಲೇ ಇವೆ. ಆದರೆ, ಅವೆರಡರ ನಡುವಿನ ಗ್ಯಾಪ್ ಮಾತ್ರ ಫಿಲ್ ಆಗುತ್ತಿಲ್ಲ. ಚಿತ್ರನಿರ್ಮಾತೃಗಳು ತಾವು ಹೇಳಿದ ಮಾತನ್ನು ಉಳಿಸಿಕೊಂಡಿದ್ದು ಕಡಿಮೆ. ಹಾಗೆಯೇ ಬೇಸತ್ತ ಅಭಿಮಾನಿಗಳೂ ಕೂಡ!. ಅವನ ಬೇಸರ ಏನಿದ್ದರೂ ತನ್ನ ನೆಚ್ಚಿನ ಸ್ಟಾರ್‌ನ ಇನ್ನೊಂದು ಚಿತ್ರ ಬಿಡುಗಡೆಯಾಗುವವರೆಗೆ ಮಾತ್ರ. ಮತ್ತೆಂದೂ ಅವನ ಸಿನಿಮಾ ನೋಡುವುದಿಲ್ಲ ಎಂದಿದ್ದ ಅದೇ ಪ್ರೇಕ್ಷಕ ತನ್ನ 'ಗುರು'ವಿನ ಹೊಸ ಚಿತ್ರ ಬಿಡುಗಡೆಯ ಶುಕ್ರವಾರದ ಮಾರ್ನಿಗ್ ಶೋನ ಕ್ಯೂನಲ್ಲಿ ಟಿಕೆಟ್ ಪಡೆಯಲು ಎಲ್ಲರಿಗಿಂತ ಮುಂದೆ ನಿಂತಿರುತ್ತಾನೆ. ಸಚಿನ್ ಮುಂದಿನ ಪಂದ್ಯದಲ್ಲಿ ಖಂಡಿತಾ ಸೆಂಚುರಿ ಹೊಡೀತಾನೆ ಎಂಬಂಥ ನಂಬಿಕೆ ಅವನದು.
 ಅದು ಚಿತ್ರರಂಗದ ಅದೃಷ್ಟ. ಸ್ಟಾರ್‌ಗಳ ಚಿತ್ರಗಳು ಎಷ್ಟೇ ಫ್ಲಾಪ್ ಆದರೂ ಹೊಸ ಚಿತ್ರದ ಬಿಡುಗಡೆಯ ದಿನ ಎಲ್ಲಾ ಸಿನಿಮಾಗಳೂ ಒಳ್ಳೆಯ ಓಪನಿಂಗ್ ಸಿಗುತ್ತದೆ. ಆದರೆ, ಹಾಗಂತ 'ಸಾಕಾಯ್ತು, ಇನ್ಮೇಲೆ ಉಪೇಂದ್ರನ್ ಸಿನಿಮಾ ನೋಡಲ್ಲ' ಎಂದ ಕಟ್ಟಾ ಅಭಿಮಾನಿಯೊಬ್ಬನ ಮಾತನ್ನು ಯಾರಾದರೂ ಹಗುರವಾಗಿ ಪರಿಗಣಿಸಿದರೆ ತಪ್ಪಾದೀತು. ಈ ಸಂದರ್ಭದಲ್ಲಿ ಈ ಮಾತು ಕೇವಲ ಉಪೇಂದ್ರರೊಬ್ಬರಿಗೇ ಅಲ್ಲ, ಅದು ಎಲ್ಲರಿಗೂ ಅನ್ವಯವಾಗುವ ಪಬ್ಲಿಕ್ ಟಾಕ್.
  ಹೊಸಬರ ಚಿತ್ರಗಳು ಎಷ್ಟೇ ಹಿಟ್ ಆದರೂ ಸ್ಟಾರ್‌ಗಳು ಕಳೆ ಕಳೆದುಕೊಂಡರೆ ಅದು ಚಿತ್ರರಂಗವನ್ನು ನೀರಸವಾಗಿಸುತ್ತದೆ. 'ಯಾರೋ ಹೊಸಬರು ಸಿನಿಮಾ ಮಾಡಿದ್ದಾರೆ, ಚೆನ್ನಾಗಿದೆಯಂತೆ' ಎಂದು ಸಿನಿಮಾ ನೋಡುವುದಕ್ಕೂ 'ಈ ವಾರ ನಮ್ ಗುರು ಸಿನಿಮಾ ಬರ್ತಿದೆ' ಎನ್ನುವುದಕ್ಕೂ ಸಾಕಷ್ಟು ವ್ಯತ್ಯಾಸ. ತಮ್ಮ ನೆಚ್ಚಿನ ಸ್ಟಾರ್ ಡಾಕ್ಯುಮೆಂಟರಿ ಮಾಡಿದರೂ ನೋಡುತ್ತೇವೆ ಎಂಬ ಉತ್ಸಾಹ ಅಭಿಮಾನಿಗಳದ್ದು. ಅವರು ನೋಡುತ್ತಾರೆ ಕೂಡ. ಆದರೆ, 'ಒಮ್ಮೆ ನೋಡಿದರೆ ಮತ್ತೊಮ್ಮೆ, ಮತ್ತೊಮ್ಮೆ ನೋಡಿದರೆ ಮಗದೊಮ್ಮೆ' ಎನ್ನುವಂಥ ಖುಷಿ ಅವನಿಗೆ ಸಿಗುತ್ತಿಲ್ಲ. ಅವನನ್ನು ಸಂಪೂರ್ಣವಾಗಿ ತೃಪ್ತಿಪಡಿಸುವುದು ಆಯಾ ಸ್ಟಾರ್‌ಗಳ ಆದ್ಯ ಕರ್ತವ್ಯ. ಒಬ್ಬ ಸ್ಟಾರ್‌ನ ಚಿತ್ರ ಆರ್ಥಿಕವಾಗಿ ನಿರ್ಮಾಪಕನಿಗೆ ಯಾವ ಲಾಸನ್ನು ಮಾಡದಿದ್ದರೂ ಅಭಿಮಾನಿಗಳನ್ನು ಸಂತೈಸುವ ಕೆಲಸವನ್ನೂ ಮಾಡಲೇಬೇಕು.

ಯಾರೋ ನಿರ್ದೇಶಕ, ಇನ್ಯಾರೋ ನಿರ್ಮಾಪಕ, ನನ್ನ ಗೆಳೆಯ ಎಂಬ ಕಾರಣಕ್ಕೆ ಅವರೊಂದಿಗೆ ಸತ್ವವಿಲ್ಲದ ಸಿನಿಮಾಗಳನ್ನು ಮಾಡಿ, ಅದನ್ನು ಅದ್ಭುತ ಸಿನಿಮಾ ಎಂದು ಅಭಿಮಾನಿಗಳನ್ನು ನಂಬಿಸಲು ಪ್ರಯತ್ನ ಪಟ್ಟರೆ ಅದು ಆ ಸ್ಟಾರ್ ತನ್ನನ್ನು 'ನಂಬಿಕೊಂಡವರಿಗೆ' ಮಾಡುವ ಮೋಸ.
ಶಿವಣ್ಣ, ಉಪೇಂದ್ರರಂಥ ಸೀನಿಯರ್ ನಟರ ಚಿತ್ರಗಳು ಇತ್ತೀಚೆಗೆ ಮಾರ್ಕೆಟ್‌ನಲ್ಲಿ ಧಾಂ ಧೂಂ ಎನಿಸುವಂಥ ಯಶಸ್ಸು ಕಂಡಿಲ್ಲ. ಒಂದೆರಡು ರಿಮೇಕ್ ಸಿನಿಮಾಗಳ ನಂತರ 'ಕ್ರೇಜಿ ಸ್ಟಾರ್‌' ರವಿಚಂದ್ರನ್ ಸಿಕ್ಕಾಪಟ್ಟೆ ಕಾಯಿಸುತ್ತಿದ್ದಾರೆ. ಅವರ 'ಮಂಜಿನ ಹನಿ'ಯಂತೂ ಸದ್ಯಕ್ಕೆ ಫ್ರೀಝ್ ಆಗಿಬಿಟ್ಟಿದೆ. ಅವರು ಹೊಸಬರನ್ನು ಪ್ರೋತ್ಸಾಹಿಸುತ್ತಿರುವುದು ಖುಷಿಯ ವಿಷಯವಾದರೂ, ಅಭಿಮಾನಿಗಳು, ಅವರ ಸಿನಿಮಾ ನೋಡಬೇಕೆಂದು ಆಸೆಪಡುತ್ತಾರೆ. ರವಿಚಂದ್ರನ್ ಅವರನ್ನು, ಕೇವಲ ಯಾರದೋ ಸಿನಿಮಾಕ್ಕೆ ಕ್ಲಾಪ್ ಮಾಡಿ, ಯಾವುದೋ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಹಿತವಚನಗಳನ್ನು ಹೇಳಿ, ಯಾವುದೋ ಸಿನಿಮಾ ನೋಡಿ 'ಚೆನ್ನಾಗಿದೆ ಎಲ್ಲರೂ ನೋಡಿ' ಎಂದು ಪ್ರೋತ್ಸಾಹ ನೀಡುವುದಷ್ಟಕ್ಕೆ ಮಾತ್ರ ಸೀಮಿತಗೊಳಿಸಿಕೊಂಡು ನೋಡಲು ಅವರ ಅಭಿಮಾನಿಗಳು ಒಪ್ಪುವುದಿಲ್ಲ. ಕನಸುಗಾರನ ಕನಸುಗಳ ರೀಲು ತೆರೆಯ ಮೇಲೆ ಬಿಚ್ಚಿಕೊಳ್ಳಬೇಕೆಂಬುದು ಅಭಿಮಾನಿಗಳ ಕನಸು. ಎಷ್ಟೇ ಆದರೂ ಅವರೂ ಕನಸುಗಾಗರೇ. ಅದು ಅವರ 'ಗುರು'ಗಳು ಹೇಳಿಕೊಟ್ಟ ಪಾಠ.
ಇನ್ನು ಪುನೀತ್‌ರ ಕಳೆದ ಮೂರು ಚಿತ್ರಗಳು ಅವರ ಇಮೇಜಿಗೆ ತಕ್ಕಂಥ ಗೆಲುವು ತಂದುಕೊಟ್ಟಿಲ್ಲ ಎಂಬುದು ಗಾಯದ ಮೇಲೆ ಬರೆ ಎಳೆದಂತಾಗಿದೆ. ಸುದೀಪ್ ಕೂಡ 'ಈಗ'ದಂಥ ಚಿತ್ರದಲ್ಲಿ ತೋರಿದ ಖದರ್ ಅನ್ನು ಕನ್ನಡ ಚಿತ್ರಗಳಲ್ಲಿ ತೋರಿಸಿಲ್ಲ. ಹಾಗೆ ನೋಡಿದರೆ ದರ್ಶನ್ ಮಾತ್ರ 'ಕ್ರಾಂತಿವೀರ ಸಂಗೊಳ್ಳಿರಾಯಣ್ಣ' ಚಿತ್ರದ ಮೂಲಕ ತಕ್ಕ ಮಟ್ಟಿಗೆ ತಮ್ಮ ಅಭಿಮಾನಿಗಳ ದಾಹ ತೀರಿಸಿದ್ದಾರೆ ಎನ್ನಬಹುದು. ಗಣೇಶ್, ವಿಜಿ ಅಂತೂ ಇದೇ ರೀತಿ ಮುಂದುವರಿದರೆ ಅವರನ್ನು ಸ್ಟಾರ್‌ಗಳು ಎಂದು ಕರೆಯಬೇಕೆ ಎಂಬ ಅನುಮಾನ ಮೂಡಿಸುವಂತ ದಾರಿಯಲ್ಲಿದ್ದಾರೆ.
ದೊಡ್ಡ ಸ್ಟಾರ್‌ಗಳ ಚಿತ್ರಗಳು ಸೋತರೆ ಅದು ಚಿತ್ರರಂಗಕ್ಕೆ ಆರ್ಥಿಕವಾಗಿ ದೊಡ್ಡ ಆಘಾತ. ಸರಿಯಾದ ಐಡಿಯಾಲಜಿ ಹೋಗಲಿ, ಸರಿಯಾದ ಐಡಿಯಾ ಕೂಡ ಇಲ್ಲದೆ, ಜನ ನೋಡುವ ಚಿತ್ರಗಳಿಗೆ ಅವಾರ್ಡ್ ಕೊಟ್ಟರೆ ಏನಾಗುತ್ತದೆ ಎಂದು ಆಡಿಕೊಳ್ಳುವ ಬುದ್ಧಿವಂತರಿಗೆ ಮಾತ್ರ ಅದು ಮಾತನಾಡಲು ಸಿಗುವ ಸುವರ್ಣಾವಕಾಶ.  'ಸ್ಟಾರುಗಳನ್ನು ನಂಬಬೇಡಿ' ಎನ್ನುವ ಸಮಯ ಬಾರದೇ ಇರಲಿ...ಏಳಿ ಎದ್ದೇಳಿ  ಸ್ಟಾರ್‌ಗಳೇ.   ಸದ್ಯಕ್ಕೆ ಈ ವಾರ ಬಿಡುಗಡೆಯಾಗುತ್ತಿರುವ ಶಿವಣ್ಣನ 'ಅಂದರ್ ಬಾಹರ್‌' ಚಿತ್ರ ಇದಕ್ಕೆ ನಾಂದಿಯಾಗಲಿ.

-ಹರಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement