ಹುಡುಕಿಕೊಂಡು ಓದುವಂಥ ಪುಸ್ತಕಗಳು
ಉಮಾಶ್ರೀ ಒಡಲಾಳದಲ್ಲಿ
ಎಲ್ಲವನ್ನೂ ಬಿಟ್ಟುಕೊಟ್ಟು ಉಳಿಯುವುದೇನು? ಖಾಲಿತನ ಬಾಧಿಸದೇ ಎಂದು ಕೇಳಬಹುದು, ನಾನು ಹೇಳುತ್ತೇನೆ ಮನುಷ್ಯ ಜನ್ಮ ಬರೀ ಪಡೆಯಲಷ್ಟೇ ಅಲ್ಲ. ಕೊಡುವುದನ್ನೂ ಅಭ್ಯಾಸ ಮಾಡಿಕೊಳ್ಳಬೇಕು. ಪಂಡರಿಬಾಯಿ ವಿಷಯ ಏನು ಹೇಳುವಿರಿ? ಆಕೆಯೂ ಎಲ್ಲವನ್ನೂ ಕೊಟ್ಟುಹೋದರಲ್ಲ, ಏನನ್ನು ತೆಗೆದುಕೊಂಡು ಹೋದರು? ನಾನಾದರೂ ಹಡೆದ ಮಕ್ಕಳನ್ನು ಸಾಕಿದೆ. ಆಕೆ ತನ್ನದಲ್ಲದ ಮಕ್ಕಳಿಗೆ ಎಷ್ಟೆಲ್ಲ ಮಾಡಿದರು. ಇಂಥವರ ಬದುಕಿನೊಂದಿಗೆ ನಮ್ಮ ಬದುಕು ಹೋಲಿಸಿಕೊಂಡು ಸಾರ್ಥಕತೆ ಹೊಂದಬೇಕು. ಜೀವನವೇ ಒಂದು ಕಲೆ. ಹೇಗೆ ಬೇಕಾದರೂ ಜೀವಿಸುವೆ ಅನ್ನುವುದಕ್ಕಿಂತ ಅದನ್ನು ಸುಂದರವಾಗಿಸಿಕೊಂಡರೆ, ಅದರಿಂದ ನನ್ನ ಬದುಕಿಗೂ ನನ್ನ ಜೊತೆಯವರ ಬದುಕಿಗೂ ಕಳೆ ತುಂಬುತ್ತದೆ. ಎಲ್ಲ ಹೆಣ್ಣುಮಕ್ಕಳಿಗೂ ಪ್ರತಿಭೆ ಇರುತ್ತದೆ. ಆದರೆ ಅವರು ತತ್ಕಾಲದ ಸ್ವಾರ್ಥ, ಆಮಿಷಗಳಿಗೆ ಸೋತು ಹೋಗುತ್ತಾರೆ. ಆ ಚೌಕಟ್ಟಿನ ಚಿಂತನೆಗಳೇ ಬೇರೆ. ನಾನು ಆ ಚೌಕಟ್ಟಿನ ಚಿಂತನೆಗಳಿಗೆ ಹೆಚ್ಚು ಮಾನ್ಯತೆ ಕೊಡಲಿಲ್ಲ. ನನ್ನಂಥ ಸಾಕಷ್ಟು ಉದಾಹರಣೆಗಳು ಜಗತ್ತಿನಲ್ಲಿ ಇದ್ದಿರಬಹುದು. ಆದರೆ ನನ್ನ ಸಾಧನೆಯ ಹಿಂದೆ ಬೇಕಾದಷ್ಟು ದುಃಖ ನೋವು, ಸೋಲುಗಳು ಮಡುಗಟ್ಟಿರುತ್ತವೆ ಎಂದು ನಾನು ಹೇಳಲು ಮರೆಯಲಾರೆ. ಬದುಕು ಒಂದು ತಪಸ್ಸು ಎಂದೂ ಬೇಕಾದರೆ ಹೇಳಬಹುದು. ಬಟಾಬಯಲಿನಲ್ಲಿ ಕುಳಿತವನ ಮೇಲೆ ಗಾಳಿ ಮಳೆ ಗುಡುಗು ಸಿಡಿಲು ಎಲ್ಲವೂ ದಾಳಿ ಮಾಡುವಂತೆ. ಆದರೆ ಅಂಥವನಿಗೆ ತನ್ನ ಗುರಿ ಮಾತ್ರ ಮುಖ್ಯವಾಗಿರುತ್ತದೆ. ಅಂಥವರು ಮಾತ್ರ ಏನನ್ನಾದರೂ ಸಾಧಿಸಬಲ್ಲರು. ಸದ್ಯಕ್ಕಂತೂ ಓದು ಬರಹ, ಕೈಲಾದಷ್ಟು ಹೊರಜಗತ್ತಿನೊಂದಿಗಿನ ನನ್ನ ಸಂಬಂಧದ ಸ್ಥಾಪನೆ. ಕಲೆ, ಅಭಿನಯ ಇದರಾಚೆ ನನಗಿನ್ನೇನೂ ತೋಚುವುದಿಲ್ಲ.
ಪತ್ರಕರ್ತ ಬಿ. ಗಣಪತಿ ಅವರು ಬರೆದಿರುವ 'ಬೆಂಕಿ ಬೆಡಗು, ಉಮಾಶ್ರೀ ಒಡಲಾಳ' ಪುಸ್ತಕದ ಆಯ್ದ ಭಾಗಗಳಿವು. ರೂಪತಾರಾ ಪತ್ರಿಕೆಯಲ್ಲಿ ಹಿಂದೆ ಪ್ರಕಟವಾದ ಬರಹಗಳ ಕಟ್ಟು ಈ ಪುಸ್ತಕ. ಗಣಪತಿ ಅವರೇ ಹೇಳುವಂತೆ ಇದು ಉಮಾಶ್ರೀ ಅವರ ಆತ್ಮಚರಿತ್ರೆ ಅಲ್ಲ, ಆತ್ಮನಿವೇದನೆ. ಅಂತರಾಳದ ಸ್ವ ಅವಲೋಕನ.
ಪುಸ್ತಕದ ಬೆಲೆ ರು. 100. ಕೊಳ್ಳಲು ಸಂಪರ್ಕಿಸಿ, ಅಹರ್ನಿಶಿ ಪ್ರಕಾಶನ 9449174486.
ಬ್ರೈಲ್ನಲ್ಲಿ ಶಂಕರನ ನೆನಪುಗಳು
ಗಣೇಶ್ ಕಾಸರಗೋಡು ಅವರು ಬರೆದಿರುವ 'ನೆನಪಿನಂಗಳದಲ್ಲಿ ಶಂಕರ್ನಾಗ್' ಪುಸ್ತಕ ಯಾರಿಗೆ ಗೊತ್ತಿಲ್ಲ? ಶಂಕರ್ನಾಗ್ರನ್ನು ಪ್ರೀತಿಸುವ ಎಲ್ಲ ಕನ್ನಡಿಗರ ಪಾಲಿಗೂ ಅದು ವಿಶೇಷ ಪುಸ್ತಕವೇ. ಆದರೆ ಈಗ ಅದು ಇನ್ನಷ್ಟು 'ವಿಶೇಷ'ವಾಗಿದೆ ಎಂಬುದು ಸದ್ಯದ ವಿಶೇಷ. ಬೆಂಗಳೂರಿನ ರಾಜಾಜಿನಗರದಲ್ಲಿರುವ ಕರ್ನಾಟಕ ಅಂಥರ ವಿಮೋಚನ ವೇದಿಕೆ ಗಣೇಶ್ ಕಾಸರಗೋಡು ಅವರ ಈ ಪುಸ್ತಕವನ್ನು ಅಂಧರ ಕಣ್ಣಿಗೂ ನಿಲುಕಿಸುವಂಥ ಕೆಲಸ ಮಾಡಿದೆ. ಕರ್ನಾಟಕ ಅಂಧರ ವಿಮೋಚನ ವೇದಿಕೆಯ ಸದಸ್ಯರೊಬ್ಬರು ನೆನಪಿನಂಗಳದಲ್ಲಿ ಸಂಕರ್ನಾಗ್ ಪುಸ್ತಕ ಓದಿ ಇದನ್ನು ಅಂಧರೂ ಒದುವಂತಾಗಬೇಕೆಂಬ ಆಶಯ ವ್ಯಕ್ತಪಡಿಸಿದ್ದರಿಂದ ಈಗ ಬ್ರೈಲ್ ಪ್ರಕಾಶನದ ಮೂಲಕ ಈ ಅಪರೂಪದ ಕೃತಿ ಕಣ್ಣಿಲ್ಲದವರ ಮನಸ್ಸನ್ನೂ ತಟ್ಟುತ್ತಿದೆ. ಈ ಬ್ರೈಲ್ ಕೃತಿಯ ಬೆಲೆ 1800 ಇದ್ದು, ಕರ್ನಾಟಕದ 500 ಲೈಬ್ರರಿಗಳಲ್ಲಿ ಲಭ್ಯವಿದೆ.
- ಹ್ಯಾರಿ