ಹಾಡು ಮತ್ತು ಹಾಡುಗಾರನ ಶಕ್ತಿಯೇ ಬೇರೆ. ಒಬ್ಬ ನಟ ನಮಗೆ ದಿನವೂ ನೆನಪಿಗೆ ಬಾರದಿರಬಹುದು. ತಿಂಗಳಿಗೊಮ್ಮೆಯೂ ನೆನಪಿಗೆ ಬಾರದಿರಬಹುದು. ಆದರೆ ಗೀತೆ ಮತ್ತು ಗಾಯಕರು ಹಾಗಲ್ಲ. ಬೇಕೆಂದೋ ಬೇಡವೆಂದೋ, ನಾವು ಹಾಡು ಕೇಳದೇ ಮುಗಿಸಿದ ದಿನವಿರುವುದಿಲ್ಲ. ಹಾಗೊಮ್ಮೆ ಕೇಳದೇ ಇರುವ ದಿನವಿರಬಹುದು.. ಆದರೆ ಮನಸಲ್ಲಿ ಹಾಡೊಂದನ್ನ ಗುನುಗದೇ ಮುಗಿಸಿದ ದಿನವಿರಲು ಅಸಾಧ್ಯ. ಅಂಥ ಎಲ್ಲ ಕನ್ನಡಿಗರ ಗುನುಗಾಟಗಳಲ್ಲಿ ಯಾವಾಗಲೂ ಮಿನುಗುವ ಒಬ್ಬ ಗಾಯಕ ಪಿ.ಬಿ.ಶ್ರೀನಿವಾಸ್.
ಹಳೆಯ ಹಾಡುಗಳೇ ಸೂಪರ್. ಅವತ್ತಿನ ಹಾಡುಗಳು ಈಗೆಲ್ಲಿ ಅಂತ ಯಾರಾದರೂ ಹೇಳಿದಾಗ.. ಸುಮ್ಸುಮ್ನೆ ಜಸ್ಟ್ ಓಲ್ಡ್ ಅನ್ನೋ ಕಾರಣಕ್ಕೆ ಎಲ್ಲವೂ ಗೋಲ್ಡ್ ಆಗಿಬಿಡಲ್ಲ ಅಂತ ವಾದ ಮಾಡಿಬಿಡೋಣ ಅನಿಸಿ, ಈಗಿನ ಹಲವು ಹಾಡುಗಳನ್ನು ಉದಾಹರಿಸಿ ಈಗಲೂ ಒಳ್ಳೆ ಹಾಡುಗಳಿವೆ ಅಂತ ಹೇಳಿದರೂ ಕೂಡ ಅದ್ಯಾಕೋ ಮನಸಿಗೆ ಸಮಾಧಾನವಿರುವುದಿಲ್ಲ. ಅದು ವಾದ ಸೋಲಬಾರದೆಂಬುದಕ್ಕೆ ಆಡಿದ ಮಾತುಗಳು ಎಂದು ನಮಗೇ ಸ್ಪಷ್ಟವಿರುತ್ತದೆ. ಹಾಗೆ ವಾದ ಮಾಡದೆಯೇ ಬರೀ ಹಾಡುಗಳಿಂದಲೇ ನಮ್ಮನ್ನು ಸೋಲಿಸಿದ ಗಾಯಕ ಪ್ರತಿವಾದಿ ಭಯಂಕರ ಶ್ರೀನಿವಾಸ್.
ಈಗಿನ ಗಾಯಕರಲ್ಲಿ ಅವರ ಹಾಡುಗಳನ್ನ, ಆರಿಸಿ ಹೆಕ್ಕಿ... ಇಂಥವರ ಹಿಟ್ಸ್ ಅಂತ ಆಲ್ಬಮ್ ಮಾಡಬೇಕಾದ ಪರಿಸ್ಥಿತಿ. ಆದರೆ ಪಿ.ಬಿ.ಎಸ್ ಅವರ ಹಾಡುಗಳು ಹಾಗಲ್ಲ.. ಹಾಡಿದ್ದೆಲ್ಲವೂ ಹಿಟ್ ಸಾಂಗ್ ಥರಾನೆ. ಹಿಟ್ ಅಂದ್ರೆ ಒಂದೊಂದು ಸಂದರ್ಭಕ್ಕೆ ಒಂದೊಂದು ಹಾಡು ನೆನಪಾಗುವಂಥದ್ದು. ಅಳುವಿಗೂ, ನಗುವಿಗೂ, ಲಾಲಿಗೂ-ಜಾಲಿಗೂ, ಶೋಕಕ್ಕೂ-ಶ್ಲೋಕಕ್ಕೂ, ಹಬ್ಬಕ್ಕೂ-ಮದುವೆಗೂ, ವಿರಹಕ್ಕೂ-ವೈರಾಗ್ಯಕ್ಕೂ, ಎಲ್ಲದಕ್ಕೂ ಪಿಬಿಎಸ್ ಅವರ ಕಲೆಕ್ಷನ್ನಲ್ಲೊಂದು ಹಾಡು ನಮಗೆ ಸಿಗದಿರುವುದಿಲ್ಲ.
ಮೂಷಿಕ ವಾಹನ ಮೋದಕ ಹಸ್ತಾ..... ಅಂತ ಶುರುವಾಗುವ ಭಕ್ತಿಗೀತೆಯಷ್ಟು ಜನಪ್ರಿಯ ಇನ್ನೊಂದ್ಯಾವುದಿದೆ ಕನ್ನಡದಲ್ಲಿ. ಆ ಹಾಡನ್ನು ಅಥವಾ ಅವರ ಯಾವುದೇ ಹಾಡನ್ನು ಇನ್ಯಾರೇ ಹಾಡಿದರೂ ಅದು ಪಿಬಿಎಸ್ ಅಲ್ಲ, ಅವರ ಅನುಕರಣೆ ಅಂತ ಗೊತ್ತಾಗೋಷ್ಟು ವಿಶಿಷ್ಠ ಧ್ವನಿ ಇನ್ಯಾರದಿದೆ?
ಆ ಕಾಲದ ಸಾಹಿತ್ಯ-ಕತೆಗಳು-ಸಂಗೀತ ಅವರ ಹಾಡಿಗೆ ಪೂರಕವಾಗಿದ್ದರೂ ಕೂಡ ಅವರ ಗಾಯನದಲ್ಲಿದ್ದ ಪರಿಪೂರ್ಣತೆ ಬೇರೆಲ್ಲೂ ಕಾಣಸಿಗುತ್ತಿರಲಿಲ್ಲ. ಅದೇ ಕಾರಣಕ್ಕೆ ಅವರು ಡಾ.ರಾಜ್ಕುಮಾರ್ರಂಥ ಪರಿಪೂರ್ಣ ನಟನೊಬ್ಬನ ಶಾರೀರವಾಗಲು ಸಾಧ್ಯವಾದದ್ದು.
ಎಲ್ಲಕ್ಕಿಂತ ಹೆಚ್ಚಾಗಿ.... ಇಳಿವಯಸ್ಸು, ಅನಾರೋಗ್ಯ, ಸಾಕಷ್ಟು ಹಾಡಿಬಿಟ್ಟಿದ್ದೀನಿ ಎಂಬ ಸ್ಯಾಚುರೇಷನ್, ನಾನೊಬ್ಬ ಮಹಾನ್ ಗಾಯಕ, ಎಲ್ಲರೂ ಒತ್ತಾಯಿಸಿದಾಗ್ಯೂ ನಾನು ನಖ್ರಾ ಮಾಡಬೇಕು ಎಂಬ ಅಹಂಭಾವ
ಇದ್ಯಾವುದನ್ನೂ ಪಿಬಿಎಸ್ ಲೆಕ್ಕಿಸಲೇ ಇಲ್ಲ. ಯಾವುದೇ ಸಮಾರಂಭಕ್ಕೆ ಹೋದರೂ ತಮ್ಮ ಹಾಡಿನ ಪುಸ್ತಕದೊಂದಿಗೇ ಹೋಗುತ್ತಿದ್ದ ಅವರು, ತಾವೇ ಅವಕಾಶ ಸೃಷ್ಟಿಮಾಡಿಕೊಂಡು ಹಾಡುತ್ತಿದ್ದರು. ದನಿ, ದೇಹ ಸಹಕರಿಸದಿದ್ದರೂ ಆ ಚೈತನ್ಯ ಮಾತ್ರ ಕಡಿಮೆಯಾಗಿರಲೇ ಇಲ್ಲ. ಈ ವಯಸ್ಸಿನಲ್ಲೂ ಕಾರ್ಯಕ್ರಮಕ್ಕೆ ಅತಿಥಿಗಳಾಗಿ ಹೋದಾಗ ಅಲ್ಲಿಗೆ ಸಂದರ್ಭೋಚಿತವೆಂಬಂತೆ ಒಂದು ಗೀತೆ ರಚಿಸಿ ಹಾಡಿ ಎಲ್ಲರನ್ನೂ ಚಕಿತಗೊಳಿಸುತ್ತಿದ್ದರು. ಒಂದು ಹಾರವನ್ನೋ ಪೇಟವನ್ನೋ ಎರಡು ಸೆಕೆಂಡುಗಳು ಕೂಡ ಇಟ್ಟುಕೊಳ್ಳಲು ಕಷ್ಟ ಪಡುವ ಸನ್ಮಾನಿತರ ನಡುವೆ... ಸದಾ ಮೈಸೂರು ಪೇಟದಂಥ ಪೇಟ ಧರಿಸಿ ಶಾಲೊಂದನ್ನು ಹೊದ್ದು ಅದೆಷ್ಟು ಒಪ್ಪವಾಗಿ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿದ್ದರು. ಇದು ಖಂಡಿತವಾಗಿಯೂ ಆ ವಯಸ್ಸಿನಲ್ಲೂ ಎಷ್ಟು ಜೀವನೋತ್ಸಾಹದಲ್ಲಿ ಬದುಕಲು ಸಾಧ್ಯ ಎಂಬುದಕ್ಕೆ ಮಾದರಿ.
ಹಾಡೊಂದ ಹಾಡುವೆ ನೀ ಕೇಳು ಮಗುವೆ.. ಬರಿದಾದ ಮನೆ ಬೆಳಗೆ ನೀನೆಂದು ಬರುವೆ... ಎಂದು ಇಷ್ಟು ದಿನ ಎಲ್ಲರನ್ನು ಸಂತೈಸಿ ಮಲಗಿಸುತ್ತಿದ್ದ ಪಿಬಿಎಸ್ರನ್ನು ಅದೇ ಸಾಲುಗಳಿಂದ ನಾವು ಪ್ರಶ್ನೆ ಮಾಡಬೇಕಿದೆ.... ಬರಿದಾದ ಮನೆ ಬೆಳಗ ನೀನೆಂದು ಬರುವೆ...
- ನವೀನ್ ಸಾಗರ್