ನಾನು ಸಿನಿಮಾ ಮಾಡಬಾರದು ಎನ್ನುವವರೂ ಇದ್ದಾರೆ
ಉತ್ತಮ ತಂಡ ಸಿಕ್ಕರೆ ವರ್ಷಕ್ಕೆ ಮೂರು ಸಿನಿಮಾ ಮಾಡುತ್ತೇನೆ, ಇಲ್ಲವಾದರೆ ದೂರ ಉಳಿಯುತ್ತೇನೆ - ಇದು ಎಸ್. ನಾರಾಯಣ್ ನಿಲವು.
ಉತ್ತಮ ತಂಡ ಸಿಕ್ಕರೆ ವರ್ಷಕ್ಕೆ ಮೂರು ಸಿನಿಮಾ ಮಾಡುತ್ತೇನೆ, ಇಲ್ಲವಾದರೆ ದೂರ ಉಳಿಯುತ್ತೇನೆ
- ಇದು ಎಸ್. ನಾರಾಯಣ್ ನಿಲವು. ಮೈಸೂರಿನಲ್ಲಿ ನಡೆದ 'ಛತ್ರಿಗಳು ಸಾರ್ ಛತ್ರಿಗಳು' ಚಿತ್ರದ ಪ್ರಚಾರದ ಸಮಯದಲ್ಲಿ ಮಾತನಾಡುತ್ತ, ಕಲಾವಿದರಿಗೆ ಬದ್ಧತೆ ಮುಖ್ಯ. ನಾಳೆ ಯಾವ ಪಾತ್ರ ಮಾಡಬೇಕು ಎಂಬ ಬಗ್ಗೆ ಪೂರ್ವ ತಯಾರಿ ಇರಬೇಕು. ಸ್ಕ್ರಿಪ್ಟ್ ಓದಬೇಕು. ಆದರೆ ಬಹಳ ಮಂದಿಗೆ ಬದ್ಧತೆ ಇಲ್ಲ. ಅಭಿನಯವನ್ನು ಕೂಲಿ ಕೆಲಸ ಎಂದು ತಿಳಿದುಕೊಂಡಿದ್ದಾರೆ. ಇಂಥ ಕೆಟ್ಟ ಪರಿಸ್ಥಿತಿಯಿಂದ ಬೇಸತ್ತು ಚಿತ್ರರಂಗದಿಂದ ದೂರ ಉಳಿದಿದ್ದೆ ಎಂದರು ನಾರಾಯಣ್.
ಚಿಕ್ಕವರಿಂದಲೂ ಮಾತು ಕೇಳುವಂತಾಗಿ ಬೇಸರವಾಗಿದ್ದೇನೆ. ಕತೆ ಬರೆಯುವುದನ್ನೇ ನಿಲ್ಲಿಸಿದ್ದೆ. ರಮೇಶ್ ಅರವಿಂದ್ ಈ ಕತೆ ತಂದಾಗ ಅವರಿಗೆ ನಿರ್ದೇಶಿಸಲು ಹೇಳಿ, ನಾನು ನಿರ್ಮಾಪಕನಾಗಿ ಇರಲು ನಿರ್ಧರಿಸಿದ್ದೆ. ಆದರೆ ಚಿತ್ರೀಕರಣ ಆರಂಭವಾಗುವ ವೇಳೆಗೆ ರಮೇಶ್, ನಿರ್ದೇಶನದ ಜವಾಬ್ದಾರಿಯನ್ನು ನನ್ನ ಹೆಗಲಿಗೆ ಹಾಕಿದರು ಎಂದರು.
ಇತ್ತೀಚಿನ ಚಲನಚಿತ್ರಗಳಲ್ಲಿ ಯಾವುದೇ ರೀತಿಯ ಉತ್ತಮ ಸಂದೇಶ ಇಲ್ಲ. ಸದಭಿರುಚಿಯ ಉದ್ದೇಶ ಇಲ್ಲವೆ ಇಲ್ಲ. ಕೇವಲ ಸೋಲು ಮತ್ತು ಗೆಲುವು ಮುಖ್ಯವಾಗಿಸಿಕೊಂಡು ಚಿತ್ರಗಳು ಬಿಡುಗಡೆಯಾಗುತ್ತಿವೆ. ಕನ್ನಡ ಭಾಷೆಯ ಬಗ್ಗೆ ಬಹಳ ಮಂದಿ ಬಾಯಿ ಮಾತಿನಲ್ಲಿ ಬದ್ಧತೆ ತೋರಿಸುತ್ತಾರೆ. ಆದರೆ ಅವರ ಮನಸ್ಸಿನಲ್ಲಿ ಅದು ಇಲ್ಲ. ಸಿನಿಮಾದಲ್ಲಿನ ಭಾಷೆ ಕೆಟ್ಟಿದೆ. ಉತ್ತಮ ಸಂಭಾಷಣೆ ಕಾಣಿಸುತ್ತಿಲ್ಲ. ಆದರೆ ನಮ್ಮ ಛತ್ರಿಗಳು ಸಾರ್ ಛತ್ರಿಗಳು ಚಿತ್ರದಲ್ಲಿ ಹಾಸ್ಯಕ್ಕೆ ಹೆಚ್ಚು ಪ್ರಾಧಾನ್ಯತೆ ನೀಡಲಾಗಿದೆ. ಇದರಲ್ಲಿ ಕಿರು ಸಂದೇಶವೂ ಇದೆ. ಅರ್ಥ ಮಾಡಿಕೊಳ್ಳಬೇಕಷ್ಟೆ ಎಂದರು ನಾರಾಯಣ್.
ಚಿತ್ರೀಕರಣದ ವೇಳೆ ನಾನು ಪಾಲಿಸುವ ಶಿಸ್ತು, ಸಮಯ ಪಾಲನೆನೆಯೇ ನನಗೆ ಮುಳುವಾಯಿತು ಎನಿಸುತ್ತದೆ. ಈ ಸಂದರ್ಭದಲ್ಲಿ ಚಿತ್ರರಂಗವನ್ನು ದೂಷಿಸುವ ಬದಲು ಈ ವ್ಯವಸ್ಥೆ ನನಗೆ ಹೊಂದಾಣಿಕೆ ಆಗದ ಕಾರಣಕ್ಕೆ ದೂರ ಉಳಿದಿದ್ದೆ ಎನ್ನಬಹುದು. ಪುಟ್ಟಣ್ಣ ಕಣಗಾಲ್ ಯಶಸ್ಸನ್ನು ಕಂಡಷ್ಟೇ ಸೋಲನ್ನು ಸಹ ಅನುಭವಿಸಿದ್ದು ನಿಜ. ಆದರೆ ಅವರ ಕಾಲದಲ್ಲಿ ಅವರು ಇಷ್ಟೊಂದು ನೋವು ಅನುಭವಿಸಿರಲಿಕ್ಕಿಲ್ಲ. ನಾನು ಎಷ್ಟೇ ಉತ್ತಮ ಚಿತ್ರಗಳನ್ನು ನೀಡಿದ್ದರೂ, ಎಸ್. ನಾರಾಯಣ್ ನಿರ್ದೇಶನ ಮಾಡಬಾರದು ಎನ್ನುವ ಗುಂಪು ಚಿತ್ರರಂಗದಲ್ಲಿದೆ ಎಂದು ಬೇಸರ ಮಾಡಿಕೊಂಡರು ನಾಣಿ.
ಸದ್ಯಕ್ಕೆ ನಿರ್ದೇಶಕರಾದ ಎಸ್. ನಾರಾಯಣ್, ರಮೇಶ್ ಅರವಿಂದ್, ಮೋಹನ್ ತಂಡವು ಈಗ ಛತ್ರಿಗಳು ಸಾರ್ ಯಶಸ್ಸಿನ ಸಂಭ್ರಮದಲ್ಲಿದೆ. ಮುಂದೆ ಇಂಥ ಸರಣಿಯ ಚಿತ್ರ ಮುಂದುವರೆಸುವ ವಿಶ್ವಾಸವೂ ತಂಡಕ್ಕಿದೆ.
- ಡಿ.ಎನ್. ಮಹೇಂದ್ರ