ಆಮದು ಪ್ರತಿಭೆ ಎಂಬುದು ನಮ್ಮ ಸಿನಿಮಾಗಳ ವಿಷಯದಲ್ಲಿ ಆಗಾಗ ಕೇಳಿಬರುವ ಮಾತು. ಆದರೆ, ಈಗೀಗ ಪ್ರತಿಕ್ಷಣದ ಬ್ರೇಕಿಂಗ್ ನ್ಯೂಸ್ ಎಂಬಂತೆ ಅದರ ಹಾವಳಿ ಹೆಚ್ಚುತ್ತಲೇ ಇದೆ. ಮೊದಲೆಲ್ಲ ಆಮದು ಪ್ರತಿಭೆಗಳ ಫೇವರಿಟ್ ಏರಿಯಾ ಎಂಬಂತೆ ಅದು ಕೇವಲ ನಾಯಕಿಯರಿಗೆ ಸಂಬಂಧಪಟ್ಟಿದ್ದಾಗಿರುತ್ತಿತ್ತು. ಆದರೆ, ಈಗೀಗ ನಮ್ಮ ನಿರ್ಮಾಪಕ, ನಿರ್ದೇಶಕರ ದೃಷ್ಠಿಯಲ್ಲಿ ಕನ್ನಡದ ಖಳನಾಯಕರು ಕೂಡಾ ನಾಲಾಯಕ್ ಎನಿಸಿಕೊಂಡು ಕನ್ನಡ ಚಿತ್ರರಂಗದಲ್ಲಿ ಪರಭಾಷಾ ಖಳನಾಯಕರ ಹಾವಳಿಯೂ ಹೆಚ್ಚಾಗಿದೆ. ಇದರ ಜೊತೆಗೆ ಇತರ ಪೋಷಕ ನಟರ ಕೆಲಸಕ್ಕೂ ಸಂಚಕಾರ ಬಂದು ಬಹಳ ದಿನಗಳಾಗಿವೆ. ಆದರೆ ಈ ಸಂಕಟಕ್ಕೆ ಹೊರತಾಗಿರುವವರು ಎಂದರೆ ಹಾಸ್ಯನಟರು ಮಾತ್ರ.
ನರಸಿಂಹರಾಜು, ಬಾಲಕೃಷ್ಣರ ಕಾಲದಿಂದ ಕಳೆದ ವಾರ ಬಿಡುಗಡೆಯಾದ ಪರಾರಿ ಮತ್ತು ಛತ್ರಿಗಳು ಸಾರ್ ಛತ್ರಿಗಳುವರೆಗೆ ಕನ್ನಡದ ಹಾಸ್ಯನಟರೇ ನಮ್ಮ ಚಿತ್ರಗಳ ಆಸ್ತಿಗಳು. ಪ್ರೇಮಕಥೆಯಿರಲಿ, ಆ್ಯಕ್ಷನ್ ಸಿನಿಮಾ ಇರಲಿ, ನಾಯಕನಿಗೆ ಎಷ್ಟೇ ಚೆಂದದ ನಾಯಕಿ ಜೊತೆಗಿರಲಿ, ಅವನಿಗೊಬ್ಬ ಲೋಕಲ್ ಜೊತೆಗಾರ ಬೇಕೇ ಬೇಕು. ಕರುಳು ಕತ್ತರಿಸುವ ಕಣ್ಣೀರ ಕಥೆ ಇದ್ದರೂ, ಅತ್ತು ಅತ್ತು ಡೆಸ್ಪರೇಟ್ ಆದ ಪ್ರೇಕ್ಷಕರಿಗೆ ರಿಲೀಫ್ ಕೊಡಲು ಸೆಪರೇಟ್ ಟ್ರ್ಯಾಕ್ನಲ್ಲಾದರೂ ಹಾಸ್ಯನಟರಿಗೆ ಜಾಗವುಂಟು. ಹೀರೋ ಎಷ್ಟೇ ದೊಡ್ಡ ಸ್ಟಾರ್ ಇರಲಿ, ಅಲ್ಲಿ ಕಾಮಿಡಿಯನ್ಗಳೂ ಕೂಡ ಸ್ಟಾರುಗಳು ಸಾರ್ ಸ್ಟಾರುಗಳು. ಹಾಗಾಗಿ, ಬಚ್ಚನ್, ಆರ್ಯನ್ಗಳಿಂದ ಹಿಡಿದು ಕೊಚಾಡಿಯನ್ಗಳಿಗೂ ಕಾಮಿಡಿಯನ್ಗಳು ಮಾತ್ರ ಲೋಕಲ್ ಎನಿಸಿಕೊಂಡವರೇ ಬೇಕು.
ಒಂದು ಭಾಷೆಯ ಗಂಧಗಾಳಿಯೂ ಇಲ್ಲದ ಒಬ್ಬ ನಟಿ ಇನ್ಯಾವ ಭಾಷೆಗೆ ಬೇಕಾದರೂ ಹೋಗಿ ತಳವೂರಬಹುದು. ಕಂಠದಾನ ಕಲಾವಿದರಿಗೆ ಕೊರತೆಯಿಲ್ಲದ ಸಮಯದಲ್ಲಿ, ತನಗೆ ಅರ್ಥವಾಗದ ಸಂಭಾಷಣೆಯನ್ನೂ ತನ್ನ ಆರ್ಭಟದಿಂದಲೇ ಡೆಲಿವರ್ ಮಾಡುವ ಖಳನಾಯಕರೂ ಉಂಟು. ಒಮ್ಮೊಮ್ಮೆ ಅಲ್ಲಿ ಸಲ್ಲುವವರು, ಇಲ್ಲಿಯೂ ಸಲ್ಲುತ್ತಾರೆ ಎಂಬಂಥ ಕೆಲವು ನಾಯಕ ನಟರಿಗೂ ಕೂಡಾ ಪರಭಾಷೆಗಳ ರುಚಿ ನೋಡುವ ಅವಕಾಶ ಸಿಗುತ್ತದೆ.
ಆದರೆ, ಅಲ್ಲಿದೆ ನಮ್ಮನೆ ಇಲ್ಲಿ ಬಂದೆ ಸುಮ್ಮನೆ ಎನ್ನುವುದು ಹಾಸ್ಯನಟರಿಗೆ ಒಪ್ಪದ ಮಾತು. ಎಲ್ಲಿಂದಲೋ ಬಂದವರ ದಾಳಿಗೆ ಲೋಕಲ್ ಪ್ರತಿಭೆಗಳು ತುತ್ತಾಗುವ ಸಾಧ್ಯತೆ ಇಲ್ಲ. ಏನಿದ್ದರೂ ಇಲ್ಲಿ ಆಂತರಿಕ ಸ್ಫರ್ಧೆ ಇರಬಹುದಷ್ಟೆ.
ಇದೇ ಕಾರಣಕ್ಕೆ, ಏಕಕಾಲಕ್ಕೆ ಎರಡು, ಮೂರು ಭಾಷೆಗಳಲ್ಲಿ ತಯಾರಾಗುವ ಚಿತ್ರಗಳು ಮತ್ತು ಡಬ್ಬಿಂಗ್ ಸಿನಿಮಾಗಳಲ್ಲಿ ಹೆಚ್ಚು ಪ್ರಾಮುಖ್ಯತೆ ಸಿಗುವುದು ಹಾಸ್ಯನಟರಿಗೇ. ಎಂಥದೇ ದೊಡ್ಡ ನಾಯಕ, ನಾಯಕಿ ಇರಲಿ, ಕಾಮಿಡಿ ಪಾತ್ರಗಳಿರುವ ಪೋರ್ಷನ್ ಅನ್ನು ಮಾತ್ರ ಲೋಕಲ್ ಟ್ಯಾಲೆಂಟ್ಗಳನ್ನೇ ಹಾಕಿಕೊಂಡು ರೀ ಶೂಟ್ ಮಾಡಲಾಗುತ್ತದೆ. ಹಾಗಾಗಿ, ಅಲ್ಲಿ ಬ್ರಹ್ಮಾನಂದಂ ಮಾಡಿರುವ ಪಾತ್ರವನ್ನು ಇಲ್ಲಿ ಬುಲೆಟ್ ಪ್ರಕಾಶ್ ಮಾಡಿದ್ದಾರೆ, ಅಲ್ಲಿ ಸುನಿಲ್ ಮಾಡಿದ ಪಾತ್ರವನ್ನು ಶರಣ್ ಮಾಡಿದ್ದಾರೆ ಎನ್ನುವಂಥ ಮಾತುಗಳು ಸಿನಿಮಾ ಪತ್ರಿಕಾಗೋಷ್ಠಿಗಳಲ್ಲಿ ಇನ್ನೂ ಕೇಳಿಬರಲು ಸಾಧ್ಯವಾಗಿದೆ.
ಹಾಸ್ಯ ಎನ್ನುವ ರಸವೇ ಅಂಥದ್ದು. ಭಾಷೆ ಬಾರದೇ ಇದ್ದರೆ ಅಲ್ಲಿ ಎಂಥ ಪ್ರತಿಭೆಯೂ ಸೊನ್ನೆ. ಭಾಷೆಯ ಜೊತೆಗೆ ಆಯಾ ನಟರ ಕಂಠದ ಜೊತೆಗಿನ ಪ್ರೇಕ್ಷಕರ ನಂಟು ಕೂಡ ದೊಡ್ಡದು. ಹಾಗಾಗಿ, ಹಾಸ್ಯನಟರ ವಿಷಯದಲ್ಲಿ ಯಾವುದೇ ಚಿತ್ರರಂಗವನ್ನು ತೆಗೆದುಕೊಂಡರೂ ಇದೇ ಸೂತ್ರ. ಜಾನಿಲಿವರ್ರಂಥ ಹಿಂದಿ ಚಿತ್ರರಂಗದಲ್ಲಿ ಎಷ್ಟೇ ಜನಪ್ರಿಯ ನಟರಾದರೂ ಅವರು ಗಡಿದಾಟುವುದು ಕಷ್ಟ. ವಡಿವೇಲ್ ತಮಿಳಿಗೆ, ಸುನಿಲ್, ಬ್ರಹ್ಮಾನಂದಂ ತೆಲುಗಿಗೆ ಮಾತ್ರ ಸೀಮಿತ. ಹಾಗೆ ನಮ್ಮ ಚಿತ್ರಗಳಿಗೂ ಕೇವಲ ಕನ್ನಡದ ಕಂದಮ್ಮಗಳ ನಗುಮೊಗವೇ ಶ್ರೀರಕ್ಷೆ.
ನಮ್ಮ ಪ್ರೇಕ್ಷಕರಿಗೂ ನಗಿಸಲು ನಮ್ಮವರೇ ಇದ್ದರೆ ಚೆಂದ. ಇದೇ ಕಾರಣಕ್ಕೆ ಟೆನ್ನಿಸ್ ಕೃಷ್ಣ, ಸಾಧುಕೋಕಿಲಾ ಕಂಠ, ದೊಡ್ಡಣ್ಣ, ಬುಲೆಟ್ ಪ್ರಕಾಶ್ರ ದೈತ್ಯ ಪ್ರತಿಭೆ, ಬಿರಾದಾರ್ ಅವರ ಭಿಕಾರಿ ಗೆಟಪ್, ಮನ್ದೀಪ್ರಾಯ್ ಮ್ಯಾನರಿಸಂ, ಶರಣ್ರ ಸ್ಮಾರ್ಟ್ ಥಿಂಕಿಂಗ್, ಮಿತ್ರರ ಮಳ್ಳು, ಗಾಬರಿ, ರಾಜು ತಾಳಿಕೋಟೆ ಅವರ 'ಉತ್ತರ'ದ ಟೈಮಿಂಗ್, ಕೋಮಲ್ರ ಕನವರಿಕೆ, ತಬಲಾ ನಾಣಿ ಮಾತಿನ ತಡವರಿಕೆಯನ್ನು ಇನ್ಯಾರೋ ಬಂದು ರೀಪ್ಲೇಸ್ ಮಾಡುವುದು ಸಾಧ್ಯವೇ ಇಲ್ಲ ಎಂಬಂಥ ಪರಿಸ್ಥಿತಿ ಇದೆ. ಈ ವಿಷಯದಲ್ಲಿ ಇತರ ನಟ, ನಟಿಯರಿಗೆ ಹೋಲಿಸಿದರೆ, ನಮ್ಮ ಹಾಸ್ಯನಟರಾದರೂ ಅದೃಷ್ಠವಂತರು ಎಂಬುದು ದೊಡ್ಡ ಸಮಾಧಾನ.
-ಹರಿ