ನಿರ್ದೇಶಕ ಡಿ. ರಾಜೇಂದ್ರ ಬಾಬುರ ಅಖಾಡದಲ್ಲಿ ನಟ ಶಿವರಾಜ್ಕುಮಾರ್ರ 'ಆಟ' ಶುರುವಾಗಿದೆ. ಗಾಸಿಪ್ಗಳ ನಡುವೆಯೂ 'ಆರ್ಯನ್' ಅತ್ತಿತ್ತ ಅಲ್ಲಾಡದೆ ಸೆಟ್ಟೇರಿದೆ. ನಟಿ ರಮ್ಯಾ ಶಿವರಾಜ್ಕುಮಾರ್ರಿಗೆ ಮೊದಲ ಬಾರಿಗೆ ನಾಯಕಿಯಾಗುತ್ತಿದ್ದಾಳೆ ಎಂಬುದು ಮಾತ್ರ ಸುದ್ದಿಯಲ್ಲ, ಹಲವು ವರ್ಷಗಳ ಬಳಿಕ ಸೆಂಚುರಿ ಸ್ಟಾರ್ ಮತ್ತು ಸಕ್ಸಸ್ ಡೈರೆಕ್ಟ್ರ 'ಬೊಂಬಾಟ್' ಕಾಂಬಿನೇಷನ್ ಇದಾಗಿದೆ. ಪ್ರೇಕ್ಷಕರಿಗೆ 'ಬಿಂದಾಸ್' ಎನ್ನಿಸುವ ಚಿತ್ರ ಕೊಡಬೇಕೆಂದು ಬಾಬು ಪಣ ತೊಟ್ಟಿದ್ದಾರೆ. ಮತ್ತೊಂದು ಕಡೆ 'ಆಂಕಲ್ ನಾನ್ ರೆಡಿ. ನೀವು ಏನ್ ಹೇಳ್ತಿರೋ ಹೇಳಿ' ಎಂದು ಶಿವರಾಜ್ಕುಮಾರ್ ಬಣ್ಣ ಹಾಕಿಕೊಂಡಿದ್ದಾರೆ. ನಟಿ ರಮ್ಯಾ ಕೂಡ ಇದುವರೆಗೂ ಯಾವುದೇ ಕಿರಿಕ್ ಮಾಡದೆ 'ಆರ್ಯನ್'ಗೆ ಅಸ್ತು ಎಂದಿದ್ದಾಳೆ. ಫ್ರಾನ್ಸ್ ಅಥವಾ ಸೌಥ್ ಆಫ್ರಿಕದ ಸುಂದರ ತಾಣಗಳು ಕನ್ನಡ ಚಿತ್ರವೊಂದರ ಚಿತ್ರೀಕರಣಕ್ಕೆ 30 ದಿನಗಳ ಕಾಲ ಸಾಕ್ಷಿಯಾಗಲಿವೆ. ಗಾಂಧಿನಗರದ ಮೂಲಗಳು ಚಿತ್ರಕ್ಕೆ 9 ಕೋಟಿ ಬಜೆಟ್ ಲೆಕ್ಕ ಹಾಕುತ್ತಿವೆ. ಚಿತ್ರದ ನಿರ್ಮಾಪಕ ಕಮ್ಮರ್ 'ಚಿತ್ರಕ್ಕೆ ಎಷ್ಟು ಕೋಟಿಯಾದರೂ ಪರ್ವಾಗಿಲ್ಲ' ಎಂದಿದ್ದಾರಂತೆ. ಅಲ್ಲಿಗೆ ಒಂದು ಕಾಲದ ಸಕ್ಸಸ್ ಜೋಡಿ (ಶಿವರಾಜ್ಕುಮಾರ್ ಮತ್ತು ರಾಜೇಂದ್ರ ಬಾಬು) ಮತ್ತೆ ಆನ್ ಸ್ಕ್ರೀನ್ ಆಟ ಶುರು ಮಾಡಿದೆ.
ಬಹು ನಿರೀಕ್ಷಿತ 'ಆರ್ಯನ್' ಚಿತ್ರಕ್ಕೆ ಈಗಾಗಲೇ ಅದ್ದೂರಿ ಮುಹೂರ್ತ ನಡೆದಿದೆ. ಬಾಬುರ ವಿಶ್ವಾಸ ಮತ್ತಷ್ಟು ಗಟ್ಟಿಯಾಗಿದೆ. ನಾಯಕನ ಅಭಿಮಾನಿಗಳು ಮತ್ತು ಗಾಂಧಿನಗರ ಈ ಎರಡೂ ಕಡೆಯ ನಿರೀಕ್ಷೆಗಳನ್ನು ಹೆಗಲೇರಿಸಿಕೊಂಡು ಬಾಬು ನಿರ್ದೇಶನದ ಕ್ಯಾಪ್ ಧರಿಸಿದ್ದಾರೆ. 'ಎಲ್ಲರಿಗೂ ಸಕ್ಸಸ್ ಬೇಕು. ನಾನಂತೂ ಇದರಲ್ಲೇ ಮುಳುಗಿದ್ದೇನೆ. ನಮ್ಮ ಮೇಲೆ ನಿರೀಕ್ಷೆ ಇದೆ. ನನಗೆ ಜವಾಬ್ದಾರಿ ಹೆಚ್ಚಾಗಿದೆ. ಗೆಲ್ಲಬೇಕು, ಗೆಲ್ತಿವಿ ಕೂಡ' ಹೀಗೆ ತಮ್ಮವಿಶ್ವಾಸದ ಮಾತುಗಳನ್ನು ಹೇಳಿಕೊಂಡಿದ್ದು ಹಿರಿಯ ನಿರ್ದೇಶಕ ಡಿ. ರಾಜೇಂದ್ರ ಬಾಬು. ಹೌದು, ಬಾಬು ಮಾತನಾಡಿದ್ದು 'ಆರ್ಯನ್' ಚಿತ್ರದ ಬಗ್ಗೆ. ತಮ್ಮ ವೃತ್ತಿ ಪಯಣದಲ್ಲಿ ಇದುವರೆಗೂ ಮಾಡಿರದಂತ ಚಿತ್ರವೊಂದನ್ನು ಪ್ರೇಕ್ಷಕರ ಮುಂದಿಡಲು ಬಾಬು ಅಖಾಡಕ್ಕಿಳಿದ್ದಾರೆ. 'ನಟ ಶಿವರಾಜ್ಕುಮಾರ್ರನ್ನು ಇಲ್ಲಿಯವರೆಗೂ ಜನ ಯಾವ ಇಮೇಜ್ನಲ್ಲಿ ನೋಡಿರಲ್ಲವೋ ಅಂಥ ಗೆಟಪ್ನಲ್ಲಿ ಅವರನ್ನು ತೋರಿಸಬೇಕೆಂಬ ಆಸೆ ನನ್ನದು' ಎನ್ನುವ ರಾಜೇಂದ್ರ ಬಾಬು, 'ಬಿಂದಾಸ್', 'ಬೊಂಬಾಟ್' ಚಿತ್ರಗಳ ನಂತರ 'ಮರೆ'ತಾರೆ ಯಾಗಿದ್ದರು. 'ಕುಚುಕು ಕುಚುಕು' ಎನ್ನುವ ಚಿತ್ರ ಆರಂಭಗೊಂಡರೂ ಅದು ಕುಂಟಲಾಂರಭಿಸಿತ್ತು.
ರಾಜೇಂದ್ರ ಬಾಬು ಕೂಡ ವೈಯಕ್ತಿಕ ಜೀವನದಲ್ಲಿ ಆಫ್ ಸೆಂಚುರಿ ಬಾರಿಸಿದರು. ಹೀಗಾಗಿ ಬಾಬು ಮತ್ತೆ ಸಿನಿಮಾ ಮಾಡುವುದು ಡೌಟು! ಎನ್ನುವ ಗುಮಾನಿಗಳು ಗಾಂಧಿನಗರದಲ್ಲಿ ಗುಲ್ಲೆಬ್ಬಿಸುತ್ತಿರುವಾಗಲೇ ಬಾಬು, 'ಆಕ್ಷನ್...' ಎಂದಿದ್ದಾರೆ. ಆ ಮೂಲಕ 'ಕುರುಬರ ರಾಣಿ', 'ಪ್ರೀತ್ಸೆ', 'ಜೋಡಿ ಹಕ್ಕಿ', 'ಯಾರೆ ನೀ ಅಭಿಮಾನಿ' ಚಿತ್ರಗಳ ನಂತರ ಬಾಬು ಮತ್ತು ಶಿವರಾಜ್ಕುಮಾರ್ ಜೋಡಿ ಒಂದಾಗುತ್ತಿದೆ. ಇಬ್ಬರಿಗೂ ಒಂದು ರೀತಿಯಲ್ಲಿ ಸೆಕೆಂಡ್ ಆಫ್ ನಂತರ 'ಆರ್ಯನ್' ಚಿತ್ರ ಮೊದಲ ಇನ್ನಿಂಗ್ಸ್. ಹಾಗೆ ನೋಡಿದರೆ ಈ ಚಿತ್ರದ ಕತೆ ಬಾಬು 15 ವರ್ಷಗಳ ಹಿಂದೆಯೇ ಸಿದ್ಧ ಮಾಡಿಕೊಂಡಿದ್ದರು. ಆಗಲೇ ಇದರ ಬಗ್ಗೆ ಶಿವರಾಜ್ಕುಮಾರ್ರಿಗೆ ಬ್ರೀಪ್ ಮಾಡಿದ್ದರು. 'ನಾನೇ ಬರೆದ ಕತೆ ಇದು. ಒಂದು ದಿನ ಶಿವರಾಜ್ಕುಮಾರ್ರಿಗೆ ಕತೆಯ ಒಂದು ಸಾಲನ್ನು ಹೇಳಿದ್ದೆ. ಆದರೆ ಆಗ ಸಿನಿಮಾ ಮಾಡುವ ಕಾಲ ಕೂಡಿ ಬರಲಿಲ್ಲ. ಇತ್ತೀಚೆಗೆ ನಿರ್ಮಾಪಕ ಕಮ್ಮರ್ರೊಂದಿಗೆ ಶಿವರಾಜ್ಕುಮಾರ್ ಜೊತೆ ಮಾನಾಡಲು ಹೋದಾಗ 'ಮಾತನಾಡೋದು ಏನೂ ಇಲ್ಲ. ಈ ಹಿಂದೆ ನನಗೆ ನೀವು ಹೇಳಿದ ಕತೆಯನ್ನೇ ಈಗ ಸಿನಿಮಾ ಮಾಡಿ. ನನಗೆ ಆ ಕತೆ ತುಂಬಾ ಇಷ್ಟವಾಗಿದೆ' ಎಂದು ಸ್ವತಃ ಶಿವರಾಜ್ಕುಮಾರ್ ಅವರೇ ನಾನು ಹೇಳಿದ ಕತೆ ನೆನಪಿಸಿದರು. ನಿರ್ಮಾಪಕರು ಕೂಡ ಆಯ್ತು ಅದೇ ಕತೆ ಮಾಡಿ ಅಂದ್ರು.
ಐದಾರು ತಿಂಗಳು ಸಮಯ ತೆಗೆದುಕೊಂಡು ಚಿತ್ರಕಥೆ ಮಾಡಿಕೊಂಡೆ. 8-9 ವರ್ಷಗಳ ನಂತರ ಮತ್ತೆ ಒಟ್ಟಿಗೆ ನಾವು ಸಿನಿಮಾ ಮಾಡುತ್ತಿದ್ದೇವೆ. ಫ್ರಾನ್ಸ್ ಅಥವಾ ಸೌಥ್ ಆಫ್ರಿಕದಲ್ಲೇ ಚಿತ್ರದ ಮುಕ್ಕಾಲು ಪಾಲು ಚಿತ್ರೀಕರಣ ಮಾಡಲಿದ್ದೇವೆ' ಎನ್ನುತ್ತಾರೆ ಬಾಬು.
ಅಂದಹಾಗೆ ಚಿತ್ರದಲ್ಲಿ ಶಿವರಾಜ್ಕುಮಾರ್ರದ್ದು ರನ್ನಿಂಗ್ ರೇಸ್ ಕೋಚ್ ಪಾತ್ರ. ಅಂತಾರಾಷ್ಟ್ರೀಯ ಕ್ರೀಡಾ ಆಕಾಡೆಮಿಯಲ್ಲಿ ಕೋಚ್ ಆಗಿ ಹೋಗುವ ನಾಯಕನಿಗೆ ನಾಯಕಿ ಸಿಗುತ್ತಾಳೆ. ಈಕೆ ಗೋಲ್ಡ್ ಮೆಡಲ್ ಗೆಲ್ಲಬೇಕೆಂದುಕೊಂಡ ಕ್ರೀಡಾ ವಿದ್ಯಾರ್ಥಿ. ಮುಂದೆ ನಾಯಕ ಈ ವಿದ್ಯಾರ್ಥಿಗೆ ಕೋಚ್ ಆಗುತ್ತಾರೆ. ಕ್ರೀಡಾ ತರಬೇತಿಯ ನಡುವೆ ಲವ್ ತರಬೇತಿಯೂ ನಡೆಯುತ್ತದೆ. ಇದು ಚಿತ್ರದ ಒಂದು ಸಾಲಿನ ಕತೆ. ವಿಶೇಷ ಅಂದರೆ ಚಿತ್ರದಲ್ಲಿ ರಿಯಲ್ ಕ್ರೀಡಾ ತರಬೇತುದಾರರು ಕೂಡ ಅಭಿನಯಿಸಲಿದ್ದಾರಂತೆ. ಈಗಾಗಲೇ ಬಾಂಬೆ ಮೂಲದ ಏಜೆನ್ಸಿ ಮೂಲಕ ಕೋಚ್ಗಳನ್ನು ಸಂಪರ್ಕ ಮಾಡುವ ಸಿದ್ಧತೆಯಲ್ಲಿದ್ದಾರೆ ಬಾಬು. 'ಚಿತ್ರದಲ್ಲಿ ಪಂಚ್ ಅಥವಾ ಪೋಲಿ, ಪೋರ್ಕಿ ಡೈಲಾಗ್ಸ್ ಇಲ್ಲ. ನಾನು ಕ್ರೀಡಾಪಟು. ಶಿವರಾಜ್ಕುಮಾರ್ ಕೂಡ ಕ್ರಿಕೆಟರ್ ಆಗಬೇಕೆಂದು ಕನಸು ಕಂಡವರು. ಹೀಗಾಗಿ ಈ ಚಿತ್ರವನ್ನು ತುಂಬಾ ಆಸಕ್ತಿಯಿಂದ ಮಾಡುತ್ತಿದ್ದೇವೆ. ಎಲ್ಲ ರೀತಿಯ ಕ್ರೀಡೆಗಳನ್ನು ತೋರಿಸುವ ಜೊತೆಗೆ ಅಲ್ಲಿ ನಡೆಯುವ ಅರಾಜಕತೆ, ಹಿಂಸೆಯನ್ನೂ ತೆರೆ ಮೇಲೆ ತರುತ್ತೇನೆ' ಎನ್ನುವ ಬಾಬು, ಇದುವರೆಗೂ ಕ್ರೀಡೆಯನ್ನು ಆಧರಿಸಿದ ಇಂಥ ಚಿತ್ರ ಬಂದೇ ಇಲ್ಲ ಎನ್ನುವಷ್ಟರ ಮಟ್ಟಿಗೆ 'ಆರ್ಯನ್' ಚಿತ್ರ ಮಾಡುವುದಾಗಿ ಹೇಳುತ್ತಾರೆ. ಚಿತ್ರಕ್ಕೆ ಬಿ.ಎ. ಮಧು ಸಂಭಾಷಣೆ, ಶೇಖರ್ ಚಂದ್ರು ಛಾಯಾಗ್ರಹಣ, ಜೆಸ್ಸಿಗಿಫ್ಟ್ ಸಂಗೀತ, ಜಯಂತ್ ಕಾಯ್ಕಿಣಿ, ವಿ. ನಾಗೇಂದ್ರ ಪ್ರಸಾದ್, ಕವಿರಾಜ್ ಸಾಹಿತ್ಯ ಇದೆ. ಚಿತ್ರದಲ್ಲಿ 6 ಹಾಡುಗಳಿವೆ. ನಾಲ್ಕು ಸಾಹಸಗಳಿವೆ.
ಕ್ರೀಡಾ ಲೋಕಕ್ಕೂ ಮತ್ತು ಸಿನಿಮಾ ಜಗತ್ತಿಗೂ ಎಲ್ಲಿಲ್ಲದ ನಂಟು. ಇದು ಆನ್ ಸ್ಕ್ರೀನ್ ಮಾತ್ರವಲ್ಲ ಆಫ್ ಸ್ಕ್ರೀನ್ ಕೂಡ ಹೌದು. ಹೀಗಾಗಿ ಕ್ರೀಡಾ ಮೈದಾನದಿಂದ ಮೂಕಿ ಚಿತ್ರ 'ದಿ ಫ್ರೆಶ್ ಮ್ಯಾನ್' ನಿಂದ ಹಿಡಿದು ಇಲ್ಲಿಯವರೆಗೂ ಕ್ರೀಡೆಯನ್ನು ಆಧರಿಸಿ ನೂರಾರು ಚಿತ್ರಗಳು ಬಂದಿವೆ. ನಿರ್ದೇಶಕರು ಕೂಡ ಆಯಾ ಕಾಲದಲ್ಲಿ ಕ್ರೀಡಾಲೋಕಕ್ಕೆ ತಮ್ಮ ಕ್ಯಾಮೆರಾ ನೋಟ ಬೀರಿದ್ದಾರೆ. ಕ್ರೀಡೆ ಮತ್ತು ಸಿನಿಮಾ ಪರಸ್ಪರ ಅಂಟಿಕೊಂಡೇ ಇರುವ ಆಟ ಮತ್ತು ನೋಟ ಎಂಬುದನ್ನು ಸ್ಯಾಂಡಲ್ವುಡ್ ಕೂಡ 'ಆರ್ಯನ್' ಚಿತ್ರದ ಮೂಲಕ ಸಾರಿ ಸಾರಿ ಹೇಳಲು ಹೊರಟಿದೆ. ಬಾಬು ಕಮಾಲ್, ಶಿವರಾಜ್ಕುಮಾರ್ರ ಸ್ಟಾರ್ಗಿರಿ, ರಮ್ಯಾ ಗ್ಲಾಮರ್, ಸೌಥ್ ಆಫ್ರಿಕದ ನೆಲೆ ನೋಡಲು ಕಾಯಬೇಕಿದೆ.
- ಆರ್. ಕೇಶವಮೂರ್ತಿ