ಸ್ಟಿಂಗ್‌ ಆಪರೇಷನ್‌ ಪ್ರಕರಣ: ಮುಂದಿನ ನಿರ್ಧಾರ ಸಿಎಂ ಡಿಕೆ ಶಿವಕುಮಾರ್`ಗೆ ಬಿಟ್ಟ ಸಂಪುಟ, ಸಾಕ್ಷ್ಯಾಧಾರ ಮೇಲೆ ಮುಂದಿನ ಕ್ರಮ!

ಈಗಾಗಲೇ ನಡೆಯುತ್ತಿರುವ ತನಿಖೆ ಮುಂದುವರಿಯಲಿದ್ದು, ಸಂಗ್ರಹಿಸಿರುವ ಸಾಕ್ಷ್ಯಾಧಾರಗಳ ಆಧಾರದ ಮೇಲೆ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವ ಪ್ರಿಯಾಂಕ್‌ ಖರ್ಗೆ ತಿಳಿಸಿದರು.
Karnataka Cabinet leaves sting operation probe decision to CM Shivakumar
ಸಚಿವ ಸಂಪುಟ ಸಭೆ (ಸಂಗ್ರಹ ಚಿತ್ರ)
Updated on: 

ಬೆಂಗಳೂರು: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಗುರಿಯಾಗಿಸಿಕೊಂಡಿದೆ ಎನ್ನಲಾದ ಸ್ಟಿಂಗ್‌ ಆಪರೇಷನ್‌ ಪ್ರಕರಣದ ಕುರಿತು ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಒಂದು ಗಂಟೆಗೂ ಹೆಚ್ಚು ಕಾಲ ಗಂಭೀರ ಚರ್ಚೆ ನಡೆಯಿತು.

ಪ್ರಕರಣದ ಮುಂದಿನ ಕ್ರಮದ ನಿರ್ಧಾರವನ್ನು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಅವರಿಗೆ ಬಿಡಲಾಗಿದ್ದು, ಸದ್ಯಕ್ಕೆ ಪ್ರತ್ಯೇಕ ವಿಶೇಷ ತನಿಖಾ ತಂಡ (ಎಸ್‌ಐಟಿ) ರಚಿಸದಿರಲು ಸರ್ಕಾರ ನಿರ್ಧರಿಸಿದೆ. ಸಭೆಯ ಬಳಿಕ ಮಾತನಾಡಿದ ಸಚಿವ ಪ್ರಿಯಾಂಕ್‌ ಖರ್ಗೆ, ಈಗಾಗಲೇ ನಡೆಯುತ್ತಿರುವ ತನಿಖೆ ಮುಂದುವರಿಯಲಿದ್ದು, ಸಂಗ್ರಹಿಸಿರುವ ಸಾಕ್ಷ್ಯಾಧಾರಗಳ ಆಧಾರದ ಮೇಲೆ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

“ತನಿಖೆ ಮುಕ್ತವಾಗಿ ಮತ್ತು ಪಾರದರ್ಶಕವಾಗಿ ನಡೆಯಲಿದೆ. ಯಾರನ್ನೂ ರಕ್ಷಿಸುವ ಪ್ರಶ್ನೆಯೇ ಇಲ್ಲ. ಅಗತ್ಯ ಬಿದ್ದರೆ ಪ್ರಕರಣವನ್ನು ಸೂಕ್ತ ತನಿಖಾ ಸಂಸ್ಥೆಗೆ ವಹಿಸಲು ಸರ್ಕಾರ ಹಿಂಜರಿಯುವುದಿಲ್ಲ” ಎಂದು ಹೇಳಿದರು. ಅಂತೆಯೇ ವಿಡಿಯೋ ನಕಲಿ ಎಂದು ಸಿದ್ದರಾಮಯ್ಯ ಹೇಳಿದ್ದು, ಅದರ ಹಿಂದಿನ ಪರಿಸ್ಥಿತಿಗಳ ಬಗ್ಗೆ ತನಿಖೆ ನಡೆಸುವಂತೆ ಒತ್ತಾಯಿಸಿದ್ದಾರೆ ಎಂದು ಖರ್ಗೆ ತಿಳಿಸಿದರು. “ನಮ್ಮ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಘನತೆ ಮತ್ತು ಗೌರವಕ್ಕಿಂತ ಮುಖ್ಯವಾದುದು ಯಾವುದೂ ಇಲ್ಲ” ಎಂದರು.

Karnataka Cabinet leaves sting operation probe decision to CM Shivakumar
'ಬಲಿತ ದಲಿತ'ನೇ, ನಿಮಗೆ, ನಿಮ್ಮಪ್ಪನಿಗೆ ಇನ್ನೆಷ್ಟು ವರ್ಷ ಮೀಸಲು ಕ್ಷೇತ್ರಗಳು ಬೇಕು?: ಖರ್ಗೆ ವಿರುದ್ಧ ಕುಮಾರಸ್ವಾಮಿ ಕೆಂಡಾಮಂಡಲ

ಕೇಂದ್ರ ಸಚಿವ ಎಚ್‌.ಡಿ. ಕುಮಾರಸ್ವಾಮಿ ಅವರು ಪ್ರಕರಣದ ತನಿಖೆ ಕುರಿತು ಮಾಡಿರುವ ಹೇಳಿಕೆಗಳನ್ನೂ ಪ್ರಿಯಾಂಕ್ ಖರ್ಗೆ ಪ್ರಶ್ನಿಸಿದರು. ಸರ್ಕಾರ ವಿಚಾರಣೆಗೆ ಯಾರನ್ನು ಕರೆದಿದೆ, ಯಾರನ್ನು ಕರೆದಿಲ್ಲ ಎಂಬ ಮಾಹಿತಿ ಕುಮಾರಸ್ವಾಮಿ ಅವರಿಗೆ ಹೇಗೆ ತಿಳಿಯಿತು ಎಂದು ಪ್ರಶ್ನಿಸಿದ ಅವರು, ಈ ವಿವಾದದ ಮೂಲಕ ರಾಜಕೀಯ ಲಾಭ ಪಡೆಯಲು ಪ್ರಯತ್ನಿಸುತ್ತಿದ್ದಾರೆ ಎಂದು ಆರೋಪಿಸಿದರು.

“ರೈತರ ಸಂಕಷ್ಟ ಸೇರಿದಂತೆ ಜನರ ಹಲವು ಸಮಸ್ಯೆಗಳ ಕುರಿತು ಚರ್ಚಿಸಲು ಸಂಪುಟ ಸಭೆ ಸೇರಿತ್ತು. ಸ್ಟಿಂಗ್‌ ಆಪರೇಷನ್‌ ಮತ್ತು ಎಚ್‌.ಡಿ. ಕುಮಾರಸ್ವಾಮಿ ಅವರ ಆರೋಪಗಳನ್ನೇ ಚರ್ಚಿಸಲು ನಾವೇನೂ ಕೆಲಸವಿಲ್ಲದ ಸಂಪುಟವಲ್ಲ” ಎಂದು ಪ್ರಿಯಾಂಕ್ ಖರ್ಗೆ ತಿರುಗೇಟು ನೀಡಿದರು.

ಶೇ. 56ರ ಮೀಸಲಾತಿ ರದ್ದತಿ ಪ್ರಶ್ನಿಸಿ ಸುಪ್ರೀಂ ಕೋರ್ಟ್‌ಗೆ ಸರ್ಕಾರ

ಇದೇ ವೇಳೆ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳಿಗೆ ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ಹೆಚ್ಚಳ ಸೇರಿದಂತೆ ಒಟ್ಟು ಶೇ. 56ರ ಮೀಸಲಾತಿಯನ್ನು ರದ್ದುಗೊಳಿಸಿದ ಹೈಕೋರ್ಟ್‌ ಆದೇಶವನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ಗೆ ವಿಶೇಷ ಮೇಲ್ಮನವಿ ಅರ್ಜಿ (ಎಸ್‌ಎಲ್‌ಪಿ) ಸಲ್ಲಿಸಲು ಸಚಿವ ಸಂಪುಟ ನಿರ್ಧರಿಸಿದೆ.

ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್‌ ಈ ನಿರ್ಧಾರವನ್ನು ಖಚಿತಪಡಿಸಿದ್ದಾರೆ. ಹೈಕೋರ್ಟ್‌ ಆದೇಶವು ರಾಜ್ಯದ ಸರ್ಕಾರಿ ಹುದ್ದೆಗಳು ಮತ್ತು ವಿವಿಧ ಸಂಸ್ಥೆಗಳ ನೇಮಕಾತಿ ಪ್ರಕ್ರಿಯೆಗಳ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿದೆ ಎಂದು ಅವರು ತಿಳಿಸಿದ್ದಾರೆ. ಹಿಂದಿನ ಬಿಜೆಪಿ ಸರ್ಕಾರ ಹೆಚ್ಚುವರಿ ಮೀಸಲಾತಿಯನ್ನು ಜಾರಿಗೆ ತಂದಿತ್ತು. ಕರ್ನಾಟಕ ಆಡಳಿತ ಸೇವೆ (ಕೆಎಎಸ್‌) ಸೇರಿದಂತೆ ಹಲವು ಹುದ್ದೆಗಳ ನೇಮಕಾತಿ ಅಧಿಸೂಚನೆಗಳಲ್ಲೂ ಈ ಮೀಸಲಾತಿಯನ್ನು ಆಧಾರವಾಗಿ ಬಳಸಲಾಗಿತ್ತು. ಹೈಕೋರ್ಟ್‌ ನೇಮಕಾತಿ ಪ್ರಕ್ರಿಯೆ ಮುಂದುವರಿಸಲು ಅವಕಾಶ ನೀಡಿದ್ದರೂ, ಅಂತಿಮ ಆಯ್ಕೆಯನ್ನು ತನ್ನ ಆದೇಶಗಳಿಗೆ ಒಳಪಡಿಸಿತ್ತು.

ಹೆಚ್ಚುವರಿ ಮೀಸಲಾತಿ ರದ್ದಾಗಿರುವ ಹಿನ್ನೆಲೆಯಲ್ಲಿ, ಸುಪ್ರೀಂ ಕೋರ್ಟ್‌ನಿಂದ ಪರಿಹಾರ ದೊರೆಯದಿದ್ದರೆ ಈಗಿರುವ ಶೇ. 50ರ ಮೀಸಲಾತಿ ಮಿತಿಯೇ ಅನ್ವಯವಾಗಲಿದೆ. ಇದರಿಂದ ನಡೆಯುತ್ತಿರುವ ಮತ್ತು ಮುಂದಿನ ನೇಮಕಾತಿಗಳ ಮೇಲೆ ಆಗಬಹುದಾದ ಪರಿಣಾಮಗಳ ಬಗ್ಗೆ ಸರ್ಕಾರ ಕಳವಳ ವ್ಯಕ್ತಪಡಿಸಿದೆ.

ಹೆಚ್ಚುವರಿ ಎಸ್‌ಸಿ, ಎಸ್‌ಟಿ ಮೀಸಲಾತಿಯನ್ನು ಸಂವಿಧಾನದ ಒಂಬತ್ತನೇ ಅನುಸೂಚಿಗೆ ಸೇರಿಸುವ ಸಾಧ್ಯತೆಯ ಬಗ್ಗೆಯೂ ಸಂಪುಟ ಸಭೆಯಲ್ಲಿ ಚರ್ಚೆಯಾಗಿದೆ. ಆದರೆ, ಈ ವಿಚಾರವನ್ನು ಡಿ.ಕೆ. ಶಿವಕುಮಾರ್‌ ನೇತೃತ್ವದ ರಾಜಕೀಯ ವ್ಯವಹಾರಗಳ ಸಮಿತಿಯಲ್ಲಿ ಮುಂದಿನ ಹಂತಕ್ಕೆ ಕೊಂಡೊಯ್ಯಲು ನಿರ್ಧರಿಸಲಾಗಿದೆ. ಈ ಸಂಬಂಧ ಕೇಂದ್ರ ಸರ್ಕಾರವೂ ನಿರ್ಧಾರ ಕೈಗೊಳ್ಳಬೇಕಾಗುತ್ತದೆ.

ಎಸ್‌ಸಿ, ಎಸ್‌ಟಿ ಸಮುದಾಯಗಳ ಹಿತಾಸಕ್ತಿ ಕಾಪಾಡುವುದರ ಜೊತೆಗೆ ಹೆಚ್ಚುವರಿ ಮೀಸಲಾತಿ ಆಧಾರಿತ ನೇಮಕಾತಿಗಳಲ್ಲಿನ ಅನಿಶ್ಚಿತತೆಯನ್ನು ನಿವಾರಿಸಲು ರಾಜ್ಯ ಸರ್ಕಾರ ಕಾನೂನು ಹೋರಾಟಕ್ಕೆ ಮುಂದಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com