ದೇಶ

Delimitation Bill: ಇಂಡಿ ಒಕ್ಕೂಟ ನಾಯಕರ ಕೊನೆ ಹಂತದ ಕಸರತ್ತು "ಠುಸ್", ಮನವೊಲಿಕೆಗೆ ಬಗ್ಗದ ಸ್ಟಾಲಿನ್! ಬದಲಾಗದ ಡಿಎಂಕೆ ನಿಲುವು! Video

Delimitation Bill: ಇಂಡಿ ಒಕ್ಕೂಟ ನಾಯಕರ ಕೊನೆ ಹಂತದ ಕಸರತ್ತು "ಠುಸ್",  ಮನವೊಲಿಕೆಗೆ ಬಗ್ಗದ ಸ್ಟಾಲಿನ್! ಬದಲಾಗದ ಡಿಎಂಕೆ ನಿಲುವು! Video
ಎಂಕೆ ಸ್ಟಾಲಿನ್
Published On :

ಚೆನ್ನೈ: ಕ್ಷೇತ್ರ ಮರುವಿಂಗಡಣೆ ಯನ್ನು ಬೆಂಬಲಿಸಿರುವ ಡಿಎಂಕೆ ಮುಖ್ಯಸ್ಥ ಸ್ಟಾಲಿನ್ ಅವರನ್ನು ಮನವೊಲಿಸುವ ಇಂಡಿ ಒಕ್ಕೂಟ ನಾಯಕರ ಕೊನೆಯ ಪ್ರಯತ್ನ ಠುಸ್ ಆಗಿದೆ. ಕಾಂಗ್ರೆಸ್ ನಾಯಕರಾದ ರಾಹುಲ್ ಗಾಂಧಿ ಮತ್ತು ಸೋನಿಯಾ ಗಾಂಧಿ ಅವರ ಸಂಧಾನದ ಬಳಿಕವೂ ಸ್ಟಾಲಿನ್ ಬಗಿಲ್ಲ.

'ಕ್ಷೇತ್ರ ಮರುವಿಂಗಡಣಾ ಮಸೂದೆ' (Delimitation Bill) ವಿಷಯದಲ್ಲಿ ಡಿಎಂಕೆ ಪಕ್ಷದ ನಿಲುವಿನಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಡಿಎಂಕೆ ಪಕ್ಷ ಶನಿವಾರ ಕ್ಷೇತ್ರ ಮರುವಿಂಗಡನೆಗೆ ಬೆಂಬಲ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಭಾನುವಾರ ಕಾಂಗ್ರೆಸ್ ನೇತೃತ್ವದ ಇಂಡಿಯಾ ಒಕ್ಕೂಟದ ನಾಯಕರಾದ ಸೋನಿಯಾ, ರಾಹುಲ್ ಗಾಂಧಿ, ಮಲ್ಲಿಕಾರ್ಜುನ ಖರ್ಗೆ, ತೃಣಮೂಲ ಕಾಂಗ್ರೆಸ್ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಹಾಗೂ ಮುಖ್ಯಮಂತ್ರಿಗಳಾದ ಡಿಕೆ ಶಿವಕುಮಾರ್, ವಿ. ಡಿ. ಸತೀಶನ್, ರೇವಂತಿ ರೆಡ್ಡಿ ಅವರನ್ನೊಳಗೊಂಡ ನಿಯೋಗ ಸ್ಟಾಲಿನ್ ಅವರ ನಿವಾಸಕ್ಕೆ ಒಂದೇ ಬಸ್ ನಲ್ಲಿ ಪ್ರಯಾಣ ಮಾಡಿ ಮಾತುಕತೆ ನಡೆಸಿತ್ತು. ತದನಂತರ ಅವರು ಮನಸ್ಸು ಬದಲಾಯಿಸಬಹುದೇ ಎಂಬ ಬಗ್ಗೆ ಕುತೂಹಲವಿತ್ತು.

ನಿಲುವು ಬದಲಿಸಲಾಗದು ಎಂದ ಸ್ಟಾಲಿನ್ : ಆದರೆ ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸ್ಟಾಲಿನ್, 'ಕ್ಷೇತ್ರ ಮರುವಿಂಗಡಣಾ ಮಸೂದೆ'ಯ (Delimitation Bill) ವಿಷಯದಲ್ಲಿ ತಮ್ಮ ಪಕ್ಷದ ನಿಲುವಿನಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಹೇಳಿದರು.

"ಪ್ರಸ್ತಾವಿತ ಮಸೂದೆಯು ಸೋತರೆ, ತಮಿಳುನಾಡಿಗೆ ಲಭ್ಯವಿರುವ ಕನಿಷ್ಠ ರಕ್ಷಣಾತ್ಮಕ ಅವಕಾಶಗಳನ್ನೂ ನಾವು ಕಳೆದುಕೊಳ್ಳಬೇಕಾಗುತ್ತದೆ. ಇಂತಹ ಪರಿಸ್ಥಿತಿಯಲ್ಲಿ ಈ ಮಸೂದೆಯನ್ನು ಬೆಂಬಲಿಸುವುದನ್ನು ಬಿಟ್ಟು ನಮಗೆ ಬೇರೆ ದಾರಿಯಿಲ್ಲ. 2027ರಲ್ಲಿ ನಡೆಯಲಿರುವ ಕ್ಷೇತ್ರ ಮರುವಿಂಗಡಣಾ ಪ್ರಕ್ರಿಯೆಯು ದಕ್ಷಿಣ ರಾಜ್ಯಗಳಿಗೆ ಅನನುಕೂಲವನ್ನು ಉಂಟುಮಾಡಲಿದೆ. ಭಾರತದಾದ್ಯಂತದ ನಾಯಕರು ಇಲ್ಲಿಗೆ ಆಗಮಿಸಿರುವ ಈ ಸಂದರ್ಭದಲ್ಲೂ ನಮ್ಮ ನಿಲುವು ಹಿಂದೆಯೂ, ಇಂದೂ ಮತ್ತು ಮುಂದೆಯೂ ಒಂದೇ ಆಗಿರುತ್ತದೆ. ತಮಿಳುನಾಡಿಗೆ ಮೊದಲ ಆದ್ಯತೆ ಎಂದು ತಿಳಿಸಿದರು.

"1971ರ ಜನಗಣತಿಯ ಆಧಾರದ ಮೇಲೆ ಕ್ಷೇತ್ರ ಮರುವಿಂಗಡಣೆ (delimitation) ನಡೆದರೆ, ತಮಿಳುನಾಡಿಗೆ ತೀವ್ರ ಹಿನ್ನಡೆಯಾಗುತ್ತದೆ. ಒಟ್ಟಾರೆಯಾಗಿ ದಕ್ಷಿಣದ ರಾಜ್ಯಗಳೆಲ್ಲವೂ ಬಾಧಿತವಾಗುತ್ತವೆ. ವಿಶೇಷವಾಗಿ ದಕ್ಷಿಣ ರಾಜ್ಯಗಳ ರಾಜಕೀಯ ಪಕ್ಷಗಳಿಗೆ, ಇದು ಅಸ್ತಿತ್ವ ಉಳಿಸಿಕೊಳ್ಳುವ ಹೋರಾಟವಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಈ ಮಸೂದೆಯನ್ನು ಬೆಂಬಲಿಸುವುದನ್ನು ಬಿಟ್ಟು ಬೇರೆ ದಾರಿಯಿಲ್ಲ. ಬೇರೆ ಯಾವುದೇ ಪರ್ಯಾಯ ಪ್ರಸ್ತಾಪವೂ ಇಲ್ಲ ಎಂದು ಹೇಳಿದರು.

ಸಂಸತ್ತಿನಲ್ಲಿ ನಮಗಿರುವ ಬಲವನ್ನು ಬಳಸಿಕೊಂಡು, ಮುಂದಿನ 25 ವರ್ಷಗಳ ಕಾಲ ತಮಿಳುನಾಡಿನ ರಾಜಕೀಯ ಭವಿಷ್ಯವನ್ನು ನಾವು ಸುರಕ್ಷಿತಗೊಳಿಸಿದ್ದೇವೆ. ಈ ವಿಷಯದಲ್ಲಿ ಭಾವನಾತ್ಮಕವಾಗಿ ಅಥವಾ ಆತುರದಿಂದ ನಿರ್ಧಾರ ತೆಗೆದುಕೊಳ್ಳಲು ಎಳ್ಳಷ್ಟೂ ಅವಕಾಶವಿಲ್ಲ. ಅಣ್ಣಾ ಅವರಿಂದ ಹಿಡಿದು ಸ್ಟಾಲಿನ್ ವರೆಗೂ, ನಾವು ರಾಜ್ಯದ ಹಕ್ಕುಗಳಿಗಾಗಿ ಹೋರಾಡಿದ್ದೇವೆ ಮತ್ತು ಈ ಹೋರಾಟದಲ್ಲಿ ನಾವು ಖಂಡಿತವಾಗಿಯೂ ಜಯಶಾಲಿಯಾಗುತ್ತೇವೆ ಎಂಬ ಆಶಾಭಾವನೆ ವ್ಯಕ್ತಪಡಿಸಿದರು.

ಡಿಎಂಕೆಯ ಐಟಿ ವಿಭಾಗ ಹಂಚಿಕೊಂಡ ಹೇಳಿಕೆಯಲ್ಲಿ, ಒಂದು ದಿನದ ಹಿಂದೆ ನಡೆದ ತಮ್ಮ ಸಂಸದರ ಸಭೆಯಲ್ಲಿ ಅಂಗೀಕರಿಸಲಾದ ನಿರ್ಣಯವನ್ನು ಸ್ಟಾಲಿನ್ ಕಾಂಗ್ರೆಸ್ ನಾಯಕರಿಗೆ ತಿಳಿಸಿದ್ದಲ್ಲದೆ, ಈ ವಿಷಯಕ್ಕಾಗಿ ತಾವು ನಡೆಸುತ್ತಿರುವ ಹೋರಾಟದ ಬಗ್ಗೆಯೂ ವಿವರಿಸಿದ್ದಾಗಿ ಅವರು ಮಾಹಿತಿ ನೀಡಿದ್ದಾರೆ. ಸಭೆಯಲ್ಲಿ ಇತರ ವಿಷಯಗಳ ಬಗ್ಗೆಯೂ ಚರ್ಚೆ ನಡೆದಿದ್ದರೂ, ಡಿಎಂಕೆಯ ನಿಲುವನ್ನು ಕಾಂಗ್ರೆಸ್ ನಾಯಕರು ಒಪ್ಪಿಕೊಂಡಿದ್ದಾರೆ ಎಂದು ತಿಳಿಸಿದ್ದಾರೆ."ಡಿಎಂಕೆ ತನ್ನ 'ನ್ಯಾಯಯುತ ಕ್ಷೇತ್ರ ಮರುವಿಂಗಡಣೆ' ಎಂಬ ನಿಲುವಿನಲ್ಲಿ ಈಗಲೂ ದೃಢವಾಗಿದೆ" ಎಂದು ಪಕ್ಷವು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.