

ಕರ್ನಾಟಕ ರಾಜಕಾರಣ ಅಧೋಗತಿ ತಲುಪಿರುವುದಕ್ಕೆ ಇದೊಂದು ನಿದರ್ಶನ. ರಾಜಕಾರಣಕ್ಕೆ ಇದು ಕಳಂಕ. ಚರ್ಚೆ ಮಾಡುವುದಕ್ಕೂ ಮುಜುಗರ ಪಡುವ ಸನ್ನಿವೇಶ.
ಕರ್ನಾಟಕದ ರಾಜಕಾರಣದಲ್ಲಿ ಈಗ ಸ್ಟಿಂಗ್ ಆಪರೇಷನದ್ದೇ ಸದ್ದು. ಸ್ಟಿಂಗ್ ಆಪರೇಷನ್ ಕರ್ನಾಟಕದ ರಾಜಕಾರಣದಲ್ಲಿ ಹೊಸದೇನಲ್ಲ. ಲಂಚ ಸ್ವೀಕಾರ, ಲೈಂಗಿಕ ವಿಚಾರಗಳಲ್ಲಿ ಈ ಹಿಂದೆಯೂ ಸ್ಟಿಂಗ್ ಆಪರೇಷನ್ಗಳು ನಡೆದು ಬಯಲಾಗಿವೆ. ಆದರೆ, ಈ ವಿಷಯ ಕುರಿತು ಕೇಂದ್ರ ಸಚಿವ ಹಾಗೂ ಮುಖ್ಯಮಂತ್ರಿ ನಡುವೆ ಜಟಾಪಟಿ ನಡೆದ ಉದಾಹರಣೆ ಇಲ್ಲ. ಸ್ಟಿಂಗ್ ಸುಳಿಯಲ್ಲಿ ಈ ಬಾರಿ ಸಿಲುಕಿದವರು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ.
ಸಾಮಾಜಿಕ ಜಾಲತಾಣದಲ್ಲಿ ತಮ್ಮ ವಿರುದ್ಧ ಅಪಪ್ರಚಾರ ನಡೆದಿದೆ ಎಂದು ಸ್ವತಃ ಸಿದ್ದರಾಮಯ್ಯ ಅವರು ನ್ಯಾಯಾಲಯದಿಂದ ತಡೆಯಾಜ್ಞೆ ತಂದ ನಂತರ ಈ ವಿಷಯದ ಚರ್ಚೆ ಬಿರುಸು ಪಡೆದಿದೆ. ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಹಾಗೂ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನಡುವೆ ವಾಗ್ವಾದ ತೀವ್ರಗೊಂಡಿದೆ. ಮುಂಬರುವ ದಿನಗಳಲ್ಲಿ ಆಡಳಿತಾರೂಢ ಕಾಂಗ್ರೆಸ್ಸಿನ ಒಳಗೂ ಆಂತರಿಕ ಸಂಘರ್ಷಕ್ಕೆ ಇದು ಕಾರಣವಾದರೂ ಅಚ್ಚರಿ ಇಲ್ಲ.
ಈ ಸ್ಟ್ರಿಂಗ್ ಆಪರೇಷನ್ ವಿಡಿಯೊಗೂ ತಮಗೂ ಯಾವುದೇ ಸಂಬಂಧ ಇಲ್ಲ. ಆದರೂ ಇದನ್ನು ಬಳಸಿಕೊಂಡು ಕೆಲವು ಕಿಡಿಗೇಡಿಗಳು ತಮ್ಮ ವಿರುದ್ದ ಅಪಪ್ರಚಾರದಲ್ಲಿ ತೊಡಗಿದ್ದಾರೆ. ಈ ಹಿನ್ನೆಲೆಯಲ್ಲಿ ಪ್ರಕಟಣೆ ಇಲ್ಲವೇ ಪ್ರಸಾರ ಮಾಡದಂತೆ ನ್ಯಾಯಾಲಯದಿಂದ ತಡೆಯಾಜ್ಞೆ ತಂದಿದ್ದೇನೆ. ಆಧುನಿಕ ತಂತ್ರಜ್ಞಾನದ ಯುಗದಲ್ಲಿ ಸುಳ್ಳನ್ನು ಸತ್ಯವಾಗಿ ಬಿಂಬಿಸುವುದು ಸುಲಭದ ಕೆಲಸವಾಗಿದೆ ಎಂಬುದು ಸಿದ್ದರಾಮಯ್ಯ ಅವರ ಹೇಳಿಕೆ. ಈ ಸ್ಟಿಂಗ್ ಆಪರೇಷನ್ ವಿಡಿಯೊ ಬಗ್ಗೆ ನಿಷ್ಪಕ್ಷಪಾತವಾಗಿ ತನಿಖೆ ನಡೆಸುವಂತೆ ಅವರು ಬೆಂಗಳೂರು ನಗರ ಪೊಲೀಸ್ ಆಯುಕ್ತರಿಗೂ ದೂರು ನೀಡಿದ್ದಾರೆ. ಈ ತನಿಖೆಯಿಂದ ಸತ್ಯ ಹೊರಬರುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಇದು ಸಿದ್ದರಾಮಯ್ಯ ಅವರ ಈ ತಕ್ಷಣದ ನಡೆ. ಅದು ನಿರೀಕ್ಷಿತ ಕೂಡ. ಆದರೆ, ಈ ಸ್ಟಿಂಗ್ ಆಪರೇಷನ್ ಮುಂಬರುವ ದಿನಗಳಲ್ಲಿ ಪಡೆಯಬಹುದಾದ ರಾಜಕೀಯ ಆಯಾಮಗಳು ಮತ್ತೊಂದೆಡೆ.
ಸಿದ್ದರಾಮಯ್ಯ ಅವರು ತಮ್ಮ ಸುಮಾರು 50 ವರ್ಷಗಳ ರಾಜಕೀಯ ಜೀವನದಲ್ಲಿ ಇಂತಹ ಸಂಕಷ್ಟಕ್ಕೆ ಯಾವತ್ತೂ ಸಿಲುಕಿರಲಿಲ್ಲ. ಮುಡಾ ಸೈಟು ಹಗರಣದ ಆರೋಪಕ್ಕೆ ಸಿಲುಕಿದಾಗ ಅವರ ರಾಜಕೀಯ ಜೀವನದಲ್ಲಿ ಕಳಂಕ ತಟ್ಟಿತು. ಈಗ ಸ್ಟಿಂಗ್ ಆಪರೇಷನ್ನಲ್ಲಿ ಅವರ ವಿರುದ್ಧ ಕೇಳಿ ಬಂದಿರುವ ಆರೋಪ ಅವರ ವರ್ಚಸ್ಸಿಗೆ ಧಕ್ಕೆ ತಂದಿದೆ. ಅವರು ಮುಖ್ಯಮಂತ್ರಿಯಾಗಿದ್ದಾಗ ಇಂತಹ ಆರೋಪ ಎದುರಾಗಿದ್ದರೆ ಆಗ ಅದು ರಾಜಕೀಯವಾಗಿ ಪರಿಣಾಮ ಬೀರುವ ಸಾಧ್ಯತೆ ಹೆಚ್ಚಾಗಿತ್ತು. ಈಗಲೂ ರಾಜ್ಯ ರಾಜಕಾರಣದಲ್ಲಿ ಈ ಬೆಳವಣಿಗೆ ಗೊಂದಲ ಮೂಡಿಸಿದೆ.
ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸಚಿವ ಸಂಪುಟ ಸಭೆಯೊಂದರಲ್ಲಿ, ಸ್ಟಿಂಗ್ ಆಪರೇಷನ್ ನಡೆಯುತ್ತಿದೆ. ಸಚಿವರು, ಅಧಿಕಾರಿಗಳು ಜಾಗರೂಕರಾಗಿರಿ ಎಂದು ಎಚ್ಚರಿಸಿದ ನಂತರ ಈ ಕುರಿತು ಚರ್ಚೆ ಬಿರುಸಾಗಿದೆ. ಸಿದ್ದರಾಮಯ್ಯ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಲು ಈ ಸ್ಟಿಂಗ್ ಆಪರೇಷನ್ ನಡೆಯಿತು ಎಂಬ ಕೇಂದ್ರ ಸಚಿವ ಕುಮಾರಸ್ವಾಮಿ ಅವರ ಆರೋಪ ಹಾಗೂ ತಮ್ಮ ಹಾಗೂ ಇತರ ಐವರು ಸಚಿವರ ವಿರುದ್ಧ ಸ್ಟಿಂಗ್ ಆಪರೇಷನ್ ಪ್ರಯತ್ನ ನಡೆದಿದೆ. ಈ ಕುರಿತು ತಮ್ಮ ಬಳಿ ಸಾಕ್ಷಿಗಳಿವೆ ಎಂಬ ಮುಖ್ಯಮಂತ್ರಿ ಶಿವಕುಮಾರ್ ಅವರ ಹೇಳಿಕೆ ಗಂಭೀರವಾದದ್ದು.
ಒಬ್ಬ ಮುಖ್ಯಮಂತ್ರಿಯನ್ನು ಅಧಿಕಾರದಿಂದ ಕೆಳಗಿಳಿಸಲು ಸ್ಟಿಂಗ್ ಆಪರೇಷನ್ ನಡೆದಿದ್ದರೆ ಅದು ತನಿಖೆಯಾಗಲೇಬೇಕು. ಮುಖ್ಯಮಂತ್ರಿ ಹಾಗೂ ಸಚಿವರ ವಿರುದ್ಧ ಸ್ಟಿಂಗ್ ಆಪರೇಷನ್ ಪ್ರಯತ್ನ ನಡೆಯಿತು ಎಂಬುದೂ ತನಿಖೆ ಆಗಬೇಕಾಗುತ್ತದೆ. ತಮ್ಮ ವಿರುದ್ಧ ನಡೆದ ಇಂತಹ ಪ್ರಯತ್ನದ ಬಗ್ಗೆ ತನಿಖೆಗೆ ಆದೇಶಿಸುವುದೂ ಕೂಡ ಈಗ ಶಿವಕುಮಾರ್ ಅವರಮು ಕೈಯಲ್ಲೇ ಇದೆ. ಮುಖ್ಯಮಂತ್ರಿ ಹಾಗೂ ಸಚಿವರ ವಿರುದ್ಧ ಸ್ಟಿಂಗ್ ಆಪರೇಷನ್ ಪ್ರಯತ್ನ ನಡೆಯಿತು ಎಂಬುದನ್ನು ಲಘುವಾಗಿ ಪರಿಗಣಿಸಲು ಸಾಧ್ಯವಿಲ್ಲ. ತನಿಖೆ ನಡೆದು ಸತ್ಯ ಹೊರಬರಬೇಕು. ಸ್ಟಿಂಗ್ ಆಪರೇಷನ್ಗಳ ಬಗ್ಗೆಯೇ ಸಮಗ್ರ ತನಿಖೆ ನಡೆಸುವುದೊಂದೇ ರಾಜ್ಯ ಸರಕಾರಕ್ಕೆ ಈಗ ಉಳಿದಿರುವ ದಾರಿ. ಈ ಪ್ರಕರಣಕ್ಕೆ ತಾರ್ಕಿಕ ಅಂತ್ಯ ಹಾಡುವುದು ರಾಜ್ಯ ಸರಕಾರದ ಕೈಯಲ್ಲೇ ಇದೆ. ಎಲ್ಲ ಪಕ್ಷಗಳೂ ತನಿಖೆಗೆ ಒತ್ತಾಯಿಸುತ್ತಿರುವಾಗ ರಾಜ್ಯ ಸರಕಾರ ಈ ವಿಚಾರದಲ್ಲಿ ಗಟ್ಟಿ ನಿರ್ಧಾರ ಮಾಡಬೇಕಾಗುತ್ತದೆ. ಷಡ್ಯಂತ್ರ ನಡೆದಿದ್ದರೆ ಬಯಲಿಗೆಳೆಯಬೇಕಾಗುತ್ತದೆ.
ಸ್ಟಿಂಗ್ ಆಪರೇಷನ್ಗಳ ಸುತ್ತಲೇ ರಾಜ್ಯ ರಾಜಕಾರಣದಲ್ಲಿ ಚರ್ಚೆ ನಡೆಯುತ್ತಿರುವುದು ಸರಕಾರದ ಇಮೇಜಿಗೂ ಧಕ್ಕೆ ತಂದಿದೆ. ಸ್ಟಿಂಗ್ ಆಪರೇಷನ್ಗಳ ವಿಚಾರದಲ್ಲಿ ಗುಟ್ಟಾಗಿಟ್ಟಷ್ಟೂ ರಟ್ಟಾಗುವುದೇ ಹೆಚ್ಚು. ಸ್ಟಿಂಗ್ ಆಪರೇಷನ್ಗಳನ್ನು ನಡೆಸುತ್ತಿರುವವರು ಯಾರು? ಇದರ ಹಿಂದೆ ಯಾರಿದ್ದಾರೆ? ಬಹಿರಂಗವಾದ ದೃಶ್ಯಗಳು ಅಸಲಿಯೇ? ನಕಲಿಯೇ? ಅಪಪ್ರಚಾರ ಮಾಡುತ್ತಿರುವವರು ಯಾರು? ಇವೆಲ್ಲವೂ ತನಿಖೆಯಿಂದ ಹೊರಬರಬೇಕಿದೆ.
ಸ್ಟಿಂಗ್ ಆಪರೇಷನ್ ವಿಚಾರದಲ್ಲಿ ರಾಜ್ಯ ಸರಕಾರ ತನ್ನ ಕ್ರಮವನ್ನು ನಿಧಾನ ಮಾಡಿದಷ್ಟೂ ಸರಕಾರದ ಮೇಲೆಯೇ ಇದರ ಪ್ರತಿಕೂಲ ಪರಿಣಾಮ ಹೆಚ್ಚು. ಸರಕಾರ ಈ ವಿಚಾರದಲ್ಲಿ ಪಾರದರ್ಶಕವಾಗಿ ಕ್ರಮ ವಹಿಸದಿದ್ದರೆ ಸರಕಾರದ ಇಮೇಜಿಗೂ ಹಾನಿ. ಅದರಲ್ಲೂ ಮುಖ್ಯವಾಗಿ ಸಿದ್ದರಾಮಯ್ಯ ಅವರ ವಿರುದ್ಧದ ಸ್ಟಿಂಗ್ ಆಪರೇಷನ್ ಕುರಿತು ತನಿಖೆ ನಡೆಸಬೇಕಿದೆ. ಸಿದ್ದರಾಮಯ್ಯ ಮಾಜಿ ಮುಖ್ಯಮಂತ್ರಿಗಳು. ಜನಸಮೂಹದ ನಾಯಕ. ರಾಜ್ಯದಲ್ಲಿ ಅತಿ ಹೆಚ್ಚು ಅವಧಿಗೆ ಮುಖ್ಯಮಂತ್ರಿಯಾಗಿ ಆಡಳಿತ ನಡೆಸಿರುವ ಕೀರ್ತಿ ಅವರದ್ದು. ಸರಕಾರದ ಮೇಲೆ ಅವರ ಪ್ರಭಾವ ಹೆಚ್ಚು. ಕಳೆದ 2023ರಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಲು ಅವರ ಪಾತ್ರ ಪ್ರಮುಖವಾದುದು. ಶಿವಕುಮಾರ್ ಸರಕಾರದಲ್ಲಿ ಈಗಲೂ ಅನೇಕ ಮಂತ್ರಿಗಳು ಸಿದ್ದರಾಮಯ್ಯ ಅವರ ಕಟ್ಟಾ ಬೆಂಬಲಿಗರೇ ಆಗಿದ್ದಾರೆ. ಸಿದ್ದರಾಮಯ್ಯ ಸರಕಾರದ ನಡೆಯನ್ನು ಕಾದು ಮುಂದಿನ ಹೆಜ್ಜೆ ಇಡಬಹುದು. ಏಕೆಂದರೆ, ಈಗ ಅವರು ಸರಕಾರದ ಮುಖ್ಯಸ್ಥರಲ್ಲ. ಶಾಸಕರಷ್ಟೇ. ಸರಕಾರಕ್ಕೆ ಮನವಿ ಮಾಡಬಹುದು. ಸಲಹೆಗಳನ್ನು ನೀಡಬಹುದು. ತಮ್ಮ ವಿರುದ್ಧವೇ ಆರೋಪ ಬಂದಿರುವಾಗ ಕಾನೂನು ಹೋರಾಟದ ಮಾರ್ಗ ತುಳಿದಿದ್ದಾರೆ.
ಇನ್ನು ಸ್ಟಿಂಗ್ ಆಪರೇಷನ್ ವಿಚಾರದಲ್ಲಿ ಕುಮಾರಸ್ವಾಮಿ ಹಾಗೂ ಶಿವಕುಮಾರ್ ಮಧ್ಯೆ ನಡೆದಿರುವ ವಾಗ್ವಾದಗಳು ತಾರಕಕ್ಕೇರಿದೆ. ಸಿದ್ದರಾಮಯ್ಯ ಅವರನ್ನು ಬ್ಲಾಕ್ ಮೇಲ್ ಮಾಡಿದ್ದಾರೆ ಎಂಬುದು ಕುಮಾರಸ್ವಾಮಿ ಅವರ ಗಂಭೀರ ಆರೋಪ. ಕುಮಾರಸ್ವಾಮಿ ಈ ವಿಚಾರದಲ್ಲಿ ಶಿವಕುಮಾರ್ ಅವರನ್ನು ಬಹಿರಂಗ ಸಮರಕ್ಕೆ ಪಂಥಾಹ್ವಾನ ನೀಡಿದ್ದಾರೆ. ಸಿದ್ದರಾಮಯ್ಯ ವಿರುದ್ಧ ಸ್ಟಿಂಗ್ ಮಾಡಿದವರನ್ನು ಬಂಧಿಸಬೇಕು, ಜೆಡಿಎಸ್ ಸಾಮಾಜಿಕ ಜಾಲತಾಣದಲ್ಲಿ ಕೆಲಸ ಮಾಡುವವರಿಗೆ ಕಿರುಕುಳ ನೀಡುವುದನ್ನು ನಿಲ್ಲಿಸಬೇಕೆಂದು ಬೆಂಗಳೂರು ನಗರ ಪೊಲೀಸ್ ಆಯುಕ್ತರ ಕಚೇರಿ ಎದುರು ಧರಣಿ ನಡೆಸಿದ್ದಾರೆ. ಸ್ಟಿಂಗ್ ಆಪರೇಷನ್ ಪ್ರಕರಣವನ್ನು ಕುಮಾರಸ್ವಾಮಿ ಗಂಭೀರವಾಗಿ ತೆಗೆದುಕೊಂಡು ಶಿವಕುಮಾರ್ ಹಾಗೂ ಗೃಹ ಸಚಿವ ಪ್ರಿಯಾಂಕ್ ಖರ್ಗೆ ವಿರುದ್ಧ ಮುಗಿಬಿದ್ದಿದ್ದಾರೆ.
ಸಂಶಯ ಬಂದರೆ ಕುಮಾರಸ್ವಾಮಿ ಅವರನ್ನೂ ತನಿಖೆ ಮಾಡುತ್ತೇವೆ ಎಂಬ ಪ್ರಿಯಾಂಕ್ ಖರ್ಗೆ ಹೇಳಿಕೆಗೆ ಕುಮಾರಸ್ವಾಮಿ ಕೆಂಡಾಮಂಡಲರಾಗಿದ್ದಾರೆ. ತಮ್ಮ ವಿರುದ್ಧವೂ ತನಿಖೆ ನಡೆಸಿ. ಯುದ್ಧಕ್ಕೆ ತಯಾರಾಗಿದ್ದೇನೆ. ಅಖಾಡಕ್ಕೆ ಬನ್ನಿ. ಯಾರನ್ನು ಮುಟ್ತೀರಾ ನೋಡ್ತೀನಿ. ಹೋರಾಟ ಆರಂಭವಾಗಿದೆ ಎಂದು ಕುಮಾರಸ್ವಾಮಿ ಕೆರಳಿದ್ದಾರೆ. ಇದು ಮುಂಬರುವ ದಿನಗಳಲ್ಲಿ ಸ್ಟಿಂಗ್ ಆಪರೇಷನ್ ವಿವಾದ ರಾಜಕೀಯವಾಗಿ ಮತ್ತಷ್ಟು ಪ್ರಾಮುಖ್ಯತೆ ಪಡೆದುಕೊಳ್ಳುವ ಸೂಚನೆಯನ್ನು ನೀಡಿದೆ.
ಈ ವಿಚಾರದಲ್ಲಿ ಕುಮಾರಸ್ವಾಮಿ ಅವರದು ಆಕ್ರಮಣಕಾರಿ ಧೋರಣೆ. ಈ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿಯಾಗಿ ಚರ್ಚಿಸಿ ದೂರು ನೀಡುತ್ತೇನೆ. ಸಿಬಿಐ ತನಿಖೆಗೆ ಮನವಿ ಮಾಡುತ್ತೇನೆ ಎಂದಿರುವುದು ಮುಂಬರುವ ದಿನಗಳಲ್ಲಿ ಇದು ಯಾವ ತಿರುವು ಪಡೆಯುತ್ತದೆಯೋ ಕಾದು ನೋಡಬೇಕು.
ಕುಮಾರಸ್ವಾಮಿ ಈ ವಿಚಾರದಲ್ಲಿ ಸಿದ್ದರಾಮಯ್ಯ ಪರ ಅನುಕಂಪ ತಳೆದಿದ್ದಾರೆ. ಇದು ಶಿವಕುಮಾರ್ ಅವರನ್ನು ಗುರಿಯಾಗಿಸುವ ರಾಜಕೀಯ ತಂತ್ರ. ಸ್ಟಿಂಗ್ ಆಪರೇಷನ್ನಲ್ಲಿ ಸಿಲುಕಿ ಬಿದ್ದವರ ವಿರುದ್ಧ ರಾಜಕೀಯ ಎದುರಾಳಿಗಳು ಟೀಕೆಗಳನ್ನು ಮಾಡುತ್ತಾರೆ. ರಾಜೀನಾಮೆ ಕೇಳುತ್ತಾರೆ. ಆದರೆ, ಇಲ್ಲಿ ಸಿದ್ದರಾಮಯ್ಯ ಸ್ಟಿಂಗ್ ಆಪರೇಷನ್ನಲ್ಲಿ ಸಿಲುಕಿದ್ದಾರೆ ಎಂದು ವರದಿಯಾಗುತ್ತಿದ್ದಂತೆ ಪ್ರತಿಪಕ್ಷಗಳಾದ ಬಿಜೆಪಿ ಹಾಗೂ ಜೆಡಿಎಸ್ ಅವರ ಪರ ಅನುಕಂಪ ತೋರಿ ಸರಕಾರ ಹಾಗೂ ಶಿವಕುಮಾರ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಇದು ಪ್ರತಿಪಕ್ಷಗಳ ರಾಜಕೀಯ ನಡೆ ಅಷ್ಟೇ. ಅವರ ಗುರಿ ಏನಿದ್ದರೂ ಮುಖ್ಯಮಂತ್ರಿ ಶಿವಕುಮಾರ್.
ರಾಜ್ಯದಲ್ಲಿ ಬರಗಾಲ. ಕೇಂದ್ರ ಅಧ್ಯಯನ ತಂಡ ಬರಪೀಡಿತ ಪ್ರದೇಶಗಳಿಗೆ ತೆರಳಿ ಅಧ್ಯಯನ ನಡೆಸಿದೆ. ಕೇಂದ್ರ ಸರಕಾರದಿಂದ ಹೆಚ್ಚಿನ ಆರ್ಥಿಕ ನೆರವನ್ನು ಪಡೆಯಲು ಪಕ್ಷಾತೀತವಾಗಿ ಪ್ರಯತ್ನಿಸಬೇಕಾದ ಇಂತಹ ಹೊತ್ತಲ್ಲಿ ಸ್ಟಿಂಗ್ ಆಪರೇಷನ್ಗಳ ಬಗ್ಗೆ ಸರಕಾರ ಹಾಗೂ ಪ್ರತಿಪಕ್ಷಗಳು ಚರ್ಚಿಸುತ್ತಿರುವುದು ದುರಂತ.
- ಕೂಡ್ಲಿ ಗುರುರಾಜ, ಹಿರಿಯ ಪತ್ರಕರ್ತರು
kudliguru@gmail.com