ಗೋವಾ ವಿಧಾನಸಭಾ ಚುನಾವಣೆ: ಸ್ಮಾಲ್ ಸ್ಟೇಟ್ ಬಟ್ ಹೈ ಸ್ಟೇಕ್ (ನೇರ ನೋಟ)

ದೇಶದಲ್ಲಿ ಗೋವಾ ಸಣ್ಣ ರಾಜ್ಯ ಇರಬಹುದು. ಆದರೆ, ಇಲ್ಲಿನ ರಾಜಕಾರಣ ಕುತೂಹಲಕಾರಿ. ರಾಜಕೀಯ ಆಯಾರಾಂ ಗಯಾರಾಂ ಸಂಸ್ಕೃತಿಯದು. ರಾಜಕೀಯ ಅಸ್ಥಿರತೆಗೆ ಹೆಸರುವಾಸಿ. ಅದಕ್ಕೆ ಗೋವಾ ರಾಜಕಾರಣ ಕುರಿತು ಒಂದು ಮಾತಿದೆ- ‘ಸ್ಮಾಲ್ ಸ್ಟೇಟ್, ಬಟ್ ಹೈ ಸ್ಟೇಕ್’.
ಗೋವಾ ವಿಧಾನಸಭೆಗೆ ಇನ್ನು ಮುರ್ನಾಲ್ಕು ತಿಂಗಳಲ್ಲಿ ಚುನಾವಣೆ. ಅಲ್ಲಿ ಒಟ್ಟು ವಿಧಾನಸಭಾ ಕ್ಷೇತ್ರಗಳು ನಲವತ್ತು. ರಾಜಕೀಯ ಚಟುವಟಿಕೆಗಳು ಗರಿಗೆದರಿವೆ. ಚುನಾವಣಾ ಪ್ರಚಾರ ಆರಂಭವಾಗಿದೆ. ಆರೋಪ- ಪ್ರತ್ಯಾರೋಪಗಳು ಸಾಗಿವೆ. ಮಿತ್ರಪಕ್ಷಗಳ ಮಧ್ಯೆ ಸ್ಥಾನ ಹೊಂದಾಣಿಕೆ ಮಾತುಕತೆಗಳು ನಡೆಯುತ್ತಿವೆ. ಬಿಜೆಪಿಗೆ ಅಧಿಕಾರ ಉಳಿಸಿಕೊಳ್ಳುವ ಕಸರತ್ತು. ಪ್ರತಿಪಕ್ಷ ಕಾಂಗ್ರೆಸ್ಸಿಗೆ ಗದ್ದುಗೆ ಕನಸು. ಇಲ್ಲಿ 2012 ರಿಂದಲೂ ಬಿಜೆಪಿ ಆಳ್ವಿಕೆ.
ಗೋವಾದಲ್ಲಿ ಕಳೆದ ಎರಡು ವಿಧಾನಸಭಾ ಚುನಾವಣೆಗಳಿಂದ ಯಾರಿಗೂ ಬಹುಮತವಿಲ್ಲ. ಕಾಂಗ್ರೆಸ್ 2017ರಲ್ಲಿ 17 ಕ್ಷೇತ್ರಗಳನ್ನು ಗೆದ್ದು ಏಕೈಕ ದೊಡ್ಡ ಪಕ್ಷವಾಯಿತು. ಬಿಜೆಪಿ ಪಡೆದಿದ್ದು 13 ಸ್ಥಾನಗಳು. ಆದರೆ, ಸರಕಾರ ರಚಿಸಿದ್ದು ಮಾತ್ರ ಬಿಜೆಪಿ. ಚುನಾವಣೆ ಫಲಿತಾಂಶದ ನಂತರ ಅನ್ಯಪಕ್ಷಗಳು, ಪಕ್ಷೇತರ ಶಾಸಕರು ಬಿಜೆಪಿ ಸೇರಿದ ಫಲ ಆ ಪಕ್ಷ ಅಧಿಕಾರಕ್ಕೆ ಏರಿತು. ಫಲಿತಾಂಶದ ನಂತರ ಮೈತ್ರಿಗೆ ಕಾಂಗ್ರೆಸ್ ತಡಮಾಡಿದ್ದರಿಂದ ಇದರ ಲಾಭವನ್ನು ಬಿಜೆಪಿ ಪಡೆದಿತ್ತು.
ಕಳೆದ 2022ರ ವಿಧಾನಸಭಾ ಚುನಾವಣೆಯಲ್ಲಿ ಮತ್ತೆ ಅತಂತ್ರ ವಿಧಾನಸಭೆ. ಬಿಜೆಪಿ 20, ಕಾಂಗ್ರೆಸ್ 11, ಆಮ್ ಆದ್ಮಿ 2, ಮಹಾರಾಷ್ಟ್ರವಾದಿ ಗೋಮಾಂತಕ ಪಕ್ಷ 2, ಗೋವಾ ಫಾರ್ವರ್ಡ್ ಪಾರ್ಟಿ 1, ಆರ್ಜಿಪಿ 1 ಸ್ಥಾನಗಳನ್ನು ಪಡೆದಿತ್ತು. ಆಗ ಕಾಂಗ್ರೆಸ್ಸಿನ 8 ಶಾಸಕರು ಬಿಜೆಪಿಗೆ ಪಕ್ಷಾಂತರ ಮಾಡಿದರು. ಬಿಜೆಪಿ ಮತ್ತೆ ಗದ್ದುಗೆ ಏರಿತು. ಬಿಜೆಪಿ 2022ರಲ್ಲಿ ಪಡೆದ ಮತಗಳು ಶೇ. 33.31. ಮಹಾರಾಷ್ಟ್ರವಾದಿ ಗೋಮಾಂತಕ ಪಕ್ಷವು ಬಿಜೆಪಿಯ ಮಿತ್ರ ಪಕ್ಷ.
ಗೋವಾದಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ಪರಸ್ಪರ ಪ್ರಮುಖ ಎದುರಾಳಿಗಳು. ಆಮ್ ಆದ್ಮಿ ನೆಲೆಯೂರಲು ಕಸರತ್ತು ನಡೆಸಿದೆ. ಮಹಾರಾಷ್ಟ್ರವಾದಿ ಗೋಮಾಂತಕ ಪಾರ್ಟಿ (ಎಂಜಿಪಿ) ಕೆಲವು ಬಾರಿ ಕಿಂಗ್ ಮೇಕರ್ ಪಾತ್ರ ನಿರ್ವಹಿಸಿದೆ. ಗೋವಾ ಫಾರ್ವರ್ಡ್ ಪಾರ್ಟಿ (ಜಿಎಫ್ಪಿ), ರೆವಲ್ಯೂಶನರಿ ಗೋವನ್ಸ್ ಪಾರ್ಟಿ ( ಆರ್ಜಿಪಿ) ಪ್ರಾದೇಶಿಕ ಪಕ್ಷಗಳು. ಗೋವಾದ ಅನೇಕ ವಿಧಾನಸಭಾ ಕ್ಷೇತ್ರಗಳಲ್ಲಿ ಅತ್ಯಲ್ಪ ಮತಗಳ ಅಂತರದಿಂದ ಗೆಲ್ಲುವವರೇ ಅಧಿಕ.
ಬಿಜೆಪಿ ಸತತ 14 ವರ್ಷಗಳಿಂದ ಅಧಿಕಾರದಲ್ಲಿರುವುದರಿಂದ ಬಿಜೆಪಿ ಸರಕಾರದ ವಿರುದ್ಧ ಸಹಜವಾಗಿಯೇ ಸಾಕಷ್ಟು ನಕಾರಾತ್ಮಕ ಅಂಶಗಳಿವೆ. ಈ ಪರಿಸ್ಥಿತಿಯನ್ನು ತನ್ನ ಕಡೆಗೆ ತಿರುಗಿಸಿಕೊಳ್ಳಲು ಆಮ್ ಆದ್ಮಿ ಪ್ರಯತ್ನ ನಡೆಸಿದೆ. ಕಾಂಗ್ರೆಸ್ ಗೆ ವೋಟು ಹಾಕಿದರೆ ಗೆದ್ದ ಶಾಸಕರು ಬಿಜೆಪಿಗೆ ಪಕ್ಷಾಂತರ ಮಾಡುತ್ತಾರೆ. ಹೀಗಾಗಿ, ಬಿಜೆಪಿಗೆ ನಿಜವಾದ ಎದುರಾಳಿ ತಾನೇ ಎಂಬುದು ಆಮ್ ಆದ್ಮಿ ಪ್ರಚಾರ. ಬಿಜೆಪಿ ವಾಷಿಂಗ್ ಮಷೀನ್ ಅಲ್ಲ, ದೋಭಿ ಘಾಟ್ ಆಗಿದೆ ಎಂದು ಬಿಜೆಪಿ ವಿರೋಧಿಗಳ ಕಟು ಟೀಕೆ.
ಗೋವಾ ಮುಖ್ಯಮಂತ್ರಿ 53 ವರ್ಷದ ಪ್ರಮೋದ್ ಸಾವಂತ್ ಆರ್ಎಸ್ಎಸ್ ಹಿನ್ನೆಲೆಯವರು. ಆಯುರ್ವೇದ ವೈದ್ಯರು. ವೃತ್ತಿ ತೊರೆದು ರಾಜಕಾರಣಕ್ಕೆ ಧುಮುಕಿದವರು. ತಮ್ಮ ಸರಕಾರದ ಸಾಧನೆ, ಮೂಲಸೌಕರ್ಯಗಳ ಅಭಿವೃದ್ಧಿಯೇ ಪ್ರಮೋದ್ ಸಾವಂತ್ ಅವರ ಚುನಾವಣಾ ಪ್ರಚಾರದ ಸರಕು. ಅವರ ಘೋಷಣೆ ‘ಸ್ವಯಂಪೂರ್ಣ ಗೋವಾ’
ಬಿಜೆಪಿ ಸರಕಾರದ ವಿರುದ್ಧದ ಭಾವನೆಯನ್ನು ತನ್ನ ಪರವಾಗಿ ತಿರುಗಿಸಿಕೊಳ್ಳಲು ಕಾಂಗ್ರೆಸ್ ಹಾಗೂ ಆಮ್ಆದ್ಮಿ ತಂತ್ರಗಳನ್ನು ಹೆಣೆಯುತ್ತಿವೆ. ಯುವಜನರಲ್ಲಿರುವ ಅಸಮಾಧಾನ, ಭೂ ಸಂರಕ್ಷಣೆಯ ವಿಷಯಗಳು ಸದ್ದು ಮಾಡುತ್ತಿವೆ. ಗೋವಾದ ಭೂಮಿ ಉಳಿಸುವ, ಪರಿಸರ ಕಾಪಾಡುವ, ಭ್ರಷ್ಟಾಚಾರ, ನಿರುದ್ಯೋಗದ ವಿಷಯಗಳನ್ನು ಕಾಂಗ್ರೆಸ್ ಪ್ರಸ್ತಾಪಿಸುತ್ತಿದೆ. ಗೋವಾ ಸರಕಾರ ರಿಯಲ್ ಎಸ್ಟೇಟ್ ಹಾಗೂ ವಾಣಿಜ್ಯ ಉದ್ದೇಶಗಳಿಂದಾಗಿ ಪರಿಸರಕ್ಕೆ ಧಕ್ಕೆ ತಂದಿದೆ ಎಂಬುದು ಪ್ರಮುಖವಾಗಿ ಚರ್ಚೆಯಾಗುತ್ತಿರುವ ಸಂಗತಿ.
ಗೋವಾದಲ್ಲಿ ಒಂದು ಕಡೆ ಬಿಜೆಪಿ ಗಟ್ಟಿಯಾಗಿ ನಿಂತಿದ್ದರೆ ಪ್ರತಿಪಕ್ಷಗಳ ಪಾಳೆಯ ಒಡೆದ ಮನೆ. ಬಿಜೆಪಿಯನ್ನು ಮಣಿಸಲು ಪ್ರತಿಪಕ್ಷಗಳು ಒಗ್ಗೂಡಬೇಕೆಂಬ ಪ್ರಯತ್ನಗಳು ನಡೆದಿದ್ದರೂ ಕೈಗೂಡಿಲ್ಲ. ಬಿಜೆಪಿ ವಿರೋಧಿ ಪಕ್ಷಗಳಲ್ಲಿ ವಿಶಾಲ ತಳಹದಿಯ ಮೇಲೆ ಮೈತ್ರಿ ಇಲ್ಲ. ಬಿಜೆಪಿಗೆ ಹೆಚ್ಚು ಎದುರಾಳಿ ಪಕ್ಷಗಳು ಇದ್ದಷ್ಟು ವಿರೋಧಿ ವೋಟುಗಳು ವಿಭಜನೆಗೊಂಡು ಬಿಜೆಪಿಗೆ ವರವಾಗಲಿದೆ. ಬಿಜೆಪಿ 2024ರ ಲೋಕಸಭಾ ಚುನಾವಣೆಯಲ್ಲಿ ಗೋವಾದಲ್ಲಿ ಶೇ.51 ರಷ್ಟು ಮತಗಳನ್ನು ಗಳಿಸಿತ್ತು. 27 ಅಸೆಂಬ್ಲಿ ಕ್ಷೇತ್ರಗಳಲ್ಲಿ ಇತರರಿಗಿಂತ ಮುನ್ನಡೆ ಸಾಧಿಸಿತ್ತು.
ಕಾಂಗ್ರೆಸ್ ಹಾಗೂ ವಿಜಯ್ ಸರ್ದೇಸಾಯಿ ನೇತೃತ್ವದ ಗೋವಾ ಫಾರ್ವರ್ಡ್ ಪಾರ್ಟಿ ಮಧ್ಯೆ 2022ರ ಚುನಾವಣೆಯಲ್ಲಿ ಮೈತ್ರಿ ಇತ್ತು. ಆಗ ಕಾಂಗ್ರೆಸ್ 11, ಗೋವಾ ಫಾರ್ವರ್ಡ್ ಪಾರ್ಟಿ ಒಂದು ಕ್ಷೇತ್ರಗಳಲ್ಲಿ ಗೆದ್ದಿತ್ತು. ಈಗ ಗೋವಾ ಫಾರ್ವರ್ಡ್ ಪಕ್ಷಕ್ಕೆ ಆಮ್ ಆದ್ಮಿ ಪಕ್ಷದೊಂದಿಗೆ ಸಖ್ಯವಿದೆ. ಬಿಜೆಪಿಯನ್ನು ಎದುರಿಸಲು ವಿಶಾಲ ತಳಹದಿ ಮೇಲೆ ಪ್ರತಿಪಕ್ಷಗಳು ಸ್ಥಾನ ಹೊಂದಾಣಿಕೆ ಮಾಡಿಕೊಳ್ಳಬೇಕು ಎಂಬುದು ಗೋವಾ ಫಾರ್ವರ್ಡ್ ಪಕ್ಷದ ನಿಲುವು. ಆದರೆ, ಇದು ಕೈಗೂಡುವುದು ಕಷ್ಟ. ಬಿಜೆಪಿ ಹಾಗೂ ಕಾಂಗ್ರೆಸ್ಸಿಗೆ ಪರ್ಯಾಯವಾಗಿ ತೃತೀಯಶಕ್ತಿಯಾಗಿ ಹೊರಹೊಮ್ಮಲು ಆಮ್ ಆದ್ಮಿ ಹಾಗೂ ಗೋವಾ ಫಾರ್ವರ್ಡ್ ಪಾರ್ಟಿ ಪ್ರಯತ್ನ ನಡೆಸಿದೆ. ಇದು ಗೋವಾ ರಾಜಕಾರಣಕ್ಕೆ ಹೊಸತಿರುವು ನೀಡಬಹುದು. ಅಂದ ಹಾಗೆ ಈ ಮೈತ್ರಿಕೂಟದ ಹೆಸರು ಗೋವಾ ಫಸ್ಟ್. ಇದು ಬಿಜೆಪಿ, ಕಾಂಗ್ರೆಸ್ಸೇತರ ಮೈತ್ರಿ.
ಆಮ್ ಆದ್ಮಿ ಪಕ್ಷವು ಪಕ್ಷಾಂತರವನ್ನೇ ಚುನಾವಣೆಯಲ್ಲಿ ಪ್ರಮುಖವಾಗಿ ಪ್ರಸ್ತಾಪಿಸುತ್ತಿದೆ. ಕಾಂಗ್ರೆಸ್ಸಿನ 10 ಶಾಸಕರು 2019ರಲ್ಲಿ ಬಿಜೆಪಿಗೆ ಜಿಗಿದರು. 2022ರಲ್ಲಿ ಕಾಂಗ್ರೆಸ್ಸಿನ 11 ಶಾಸಕರಲ್ಲಿ 8 ಮಂದಿ ಬಿಜೆಪಿಗೆ ವಲಸೆ ಹೋದರು. ಬಿಜೆಪಿಯ ಶೇ.50 ರಷ್ಟು ಶಾಸಕರು ಕಾಂಗ್ರೆಸ್ ಹಿನ್ನೆಲೆಯವರು. ಆಮ್ ಆದ್ಮಿ ಪಕ್ಷವು ಕಾಂಗ್ರೆಸ್ಸಿಗೆ ತನ್ನ ಶಾಸಕರು ಗೆದ್ದ ನಂತರ ಬಿಜೆಪಿಗೆ ಸಾಮೂಹಿಕವಾಗಿ ವಲಸೆ ಹೋಗದಂತೆ ತಡೆಗಟ್ಟಿ ಎಂದು ಸವಾಲು ಹಾಕಿದೆ.
ಕಾಂಗ್ರೆಸ್ ಶಾಸಕರು ಬಿಜೆಪಿಗೆ ಸಾಮೂಹಿಕವಾಗಿ ಪಕ್ಷಾಂತರ ಮಾಡುತ್ತಿರುವುದು ಕಾಂಗ್ರೆಸ್ಸಿಗೆ ದೊಡ್ಡ ಚಿಂತೆ. ಕಾಂಗ್ರೆಸ್ 2017ರಲ್ಲಿ 17 ಸ್ಥಾನಗಳನ್ನು ಗೆದ್ದಿತ್ತು. ನಾಲ್ಕು ವರ್ಷಗಳಲ್ಲಿ ಈ ಶಾಸಕರ ಸಂಖ್ಯೆ ಇಬ್ಬರಿಗೆ ಇಳಿದಿತ್ತು. ಕಾಂಗ್ರೆಸ್ಸಿಗೆ ವೋಟು ಹಾಕಿ ಗೆಲ್ಲಿಸಿದ ನಂತರ ಆ ಶಾಸಕರು ಬಿಜೆಪಿಗೆ ವಲಸೆ ಹೋಗುವುದಿಲ್ಲ ಎಂಬುದಕ್ಕೆ ಗ್ಯಾರಂಟಿ ಏನು ಎಂಬುದೇ ಕಾಂಗ್ರೆಸ್ ವಿರೋಧಿಗಳ ಪ್ರಶ್ನೆ. ಈ ಪ್ರಶ್ನೆಗೆ ಕಾಂಗ್ರೆಸ್ ಬಳಿ ಉತ್ತರವಿಲ್ಲ. ಪಕ್ಷಾಂತರ ಒಂದು ಪಿಡುಗು. ಗೋವಾದ 40 ಶಾಸಕರಲ್ಲಿ 24 ಶಾಸಕರು 2017 ರಿಂದ 22 ರವರೆಗೆ ಪಕ್ಷಾಂತರ ಮಾಡಿದವರೇ ಎಂಬುದನ್ನು ದಿ ಅಸೋಸಿಯೇಷನ್ ಆಫ್ ಡೆಮಾಕ್ರಟಿಕ್ ರಿಫಾರ್ಮ್ಸ್ ( ಎಡಿಆರ್) ಗುರುತಿಸಿದೆ.
ಗೋವಾ ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾಗಿ ಕೆಲವು ತಿಂಗಳ ಹಿಂದೆ ಗಿರೀಶ್ ಚೋದನ್ಕರ್ ಅವರನ್ನು ನೇಮಿಸಲಾಗಿದೆ. ಇದು ಪಕ್ಷದಲ್ಲಿ ಹಿರಿಯ ನಾಯಕರ ಅಸಮಾಧಾನಕ್ಕೆ ಕಾರಣವಾಗಿದೆ. ಗಿರೀಶ್ ಚೋದನ್ಕರ್ ಈ ಹಿಂದೆಯೂ ಗೋವಾ ಕಾಂಗ್ರೆಸ್ ಅಧ್ಯಕ್ಷರಾಗಿದ್ದವರು. ನೈತಿಕ ಹೊಣೆ ಹೊತ್ತು ಮೂರು ಬಾರಿ ತಮ್ಮ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿದ್ದವರು. ಗೋವಾದಲ್ಲಿ ಕಾಂಗ್ರೆಸ್ಸಿನ ಸಮಸ್ಯೆ ಎಂದರೆ ಇಲ್ಲಿ ತಯಾರಾದ ನಾಯಕರು ನಂತರ ಅನ್ಯಪಕ್ಷಗಳಿಗೆ ಜಿಗಿದಿದ್ದಾರೆ. ಗಿರೀಶ್ ಚೋದನ್ಕರ್ ಅಧ್ಯಕ್ಷರಾಗಿದ್ದ ಅವಧಿಯಲ್ಲಿ ಶಾಸಕರ ಪಕ್ಷಾಂತರ ಹೆಚ್ಚಾಗಿತ್ತು. ಅಂಥವರನ್ನೇ ಈಗ ಪಕ್ಷದ ಅಧ್ಯಕ್ಷರಾಗಿ ನೇಮಿಸಿರುವುದು ಎಷ್ಟರಮಟ್ಟಿಗೆ ಸರಿ ಎಂಬುದು ಕಾಂಗ್ರೆಸ್ನಲ್ಲಿರುವ ಅಸಮಾಧಾನ.
ಕಡಲತೀರದ ಗೋವಾದಲ್ಲಿ ಈಗ ಚುನಾವಣೆಯ ಅಲೆ ಅಲೆಗಳು ತೇಲಿ ಬರುತ್ತಿವೆ.
- ಕೂಡ್ಲಿ ಗುರುರಾಜ, ಹಿರಿಯ ಪತ್ರಕರ್ತರು
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.




