ಗೆಲುವು ಎಂಬುದು ದಡ್ಡನಲ್ಲೂ ಉತ್ಸಾಹ ತುಂಬುತ್ತದೆ, ಸೋಲು ಬುದ್ಧಿವಂತರನ್ನೂ ಮಂಕಾಗಿಸುತ್ತದೆ ಎಂಬುದು ನಿಜ. ಚಿತ್ರರಂಗದಲ್ಲೂ ಈ ಮಾತಿಗೆ ಅನೇಕ ಉದಾಹರಣೆಗಳು ಆಗಾಗ ಸಿಗುತ್ತಲೇ ಇರುತ್ತವೆ. ಲಾಭದ ಲೆಕ್ಕ ಹಾಕುತ್ತ ಗೆದ್ದವರು ಬೀಗುತ್ತಿದ್ದರೆ, ನಷ್ಟದ ಮಾತಾಡುತ್ತಾ ಸೋತವರು ಕೊರಗುತ್ತಾರೆ. ಆದರೆ, ಇದು ಹೇಳಿ ಕೇಳಿ ಸಿನಿಮಾ ರಂಗ. ಇಲ್ಲಿ, ಇಂದು ಗೆದ್ದವರು ನಾಳೆ ಗೆಲ್ಲುತ್ತಾರೆ ಎಂಬ ಭರವಸೆ ಇಲ್ಲ. ಆದರೂ ಗೆದ್ದವರಿಗೆ ನಾಳಿನ ಭಯ ಕೊಂಚ ಕಡಿಮೆಯೇ. ಸೋತವರ ವಿಷಯದಲ್ಲಿ ಇದು ಉಲ್ಟಾ. ನಾಳೆ ಗೆಲ್ಲುವ ಸಾಮರ್ಥ್ಯವಿದ್ದರೂ ಇಂದಿನ ಸೋಲು ಕಂಗೆಡಿಸುತ್ತದೆ. ಅದರಲ್ಲೂ ಒಂದು ಮಟ್ಟಕ್ಕೆ ಒಳ್ಳೆಯ ಪ್ರಯತ್ನವನ್ನೇ ಮಾಡಿ, ಸೋತರಂತೂ ಅದು ಇನ್ನಷ್ಟು ಕಾಡುತ್ತದೆ. ಆದರೆ ಗೆದ್ದವರೆಲ್ಲಾ ಜಾಣರಲ್ಲ, ಸೋತವರೆಲ್ಲಾ ಕೋಣರಲ್ಲ ಎಂಬುದು ಚಿತ್ರರಂಗದ ಮಟ್ಟಿಗೆ ಎಂದಿಗೂ ಸಲ್ಲುವ ಮಾತು. ಹಾಗಾಗಿ, ಸೋತವರು ನಿರಾಶರಾಗುವ ಅಗತ್ಯವಿಲ್ಲ, ಸೋಲಿಗೆ ಗೋಲಿ ಮಾರೋ ಎಂದು ಹೇಳಿ, ಏಳಿ ಎದ್ದೇಳಿ.
ಒಂದು ಸಿನಿಮಾ ಗೆಲ್ಲುವಂತೆ ಮಾಡಲು ಏನು ಮಾಡಬೇಕು ಎಂಬ ಪ್ರಶ್ನೆಗೆ ಎಲ್ಲರೂ ಹೇಳುವ ಮಾತು, ಯಶಸ್ಸಿಗೆ ಸೂತ್ರವಿಲ್ಲ. ಅದು ನಿಜ. ಆದರೆ 'ಯಶಸ್ವೀ ಸೋಲು'ಗಳಿಗೆ ಕೆಲವೊಂದು ಕಾರಣಗಳಿರಬಹುದು. ಜನಕ್ಕೆ ಏನು ಬೇಕೋ ಅದನ್ನು ಕೊಡುತ್ತೇವೆ ಎನ್ನುವುದು ಸಾಮಾನ್ಯ ನಿರ್ದೇಶಕರ ಮಾತು. ಆದರೆ ನಾವು ಕೊಟ್ಟಿದ್ದನ್ನು ಜನ ನೋಡುವಂತೆ ಮಾಡುತ್ತೇವೆ ಎಂಬುದು ಕೆಲವು ಉತ್ಸಾಹಿ ನಿರ್ದೇಶಕರ ಗತ್ತು. ಸಾಮಾನ್ಯರು ತಮ್ಮ ಚಿತ್ರಕ್ಕೆ ಸಿಗುವ ಸಾಮಾನ್ಯ ಸಕ್ಸಸ್ನಿಂದ ಸಮಾಧಾನ ಪಟ್ಟುಕೊಳ್ಳುತ್ತಾರೆ. ಹೊಸದೇನೋ ಮಾಡಬೇಕು ಎನ್ನುವ ತುಡಿತ ಇರುವವರು ಒಂದು ಸೋಲಿಗೆ ಬಲಿಯಾಗುವ ಸಂಭವವೇ ಹೆಚ್ಚು. ಇತ್ತೀಚಿನ ದಿನಗಳಲ್ಲಿ, ಒಳ್ಳೆಯ ಸಿನಿಮಾಕ್ಕೂ, ಕೆಟ್ಟ ಸಿನಿಮಾಕ್ಕೂ ನಡುವೆ ಒಂದು ಸಣ್ಣ ಗ್ಯಾಪ್ ಇದೆ ಎನಿಸುವಂಥ ಕೆಲವು ಚಿತ್ರಗಳು ಸೋತಿವೆ. ಆದರೆ ಅದು ಹಿಂದೆಂದೂ ಆಗದಂತ ಹೊಸ ಇತಿಹಾಸವೇನಲ್ಲ. ಅದು ಆಗಾಗ ಮರುಕಳಿಸುವ ಹಳೆಯ ಇತಿಹಾಸವೇ.
ಎದ್ದೇಳು ಮಂಜುನಾಥನ ಹೆಸರನ್ನೇ ಜಪಿಸುತ್ತಿದ್ದ ಗುರುಪ್ರಸಾದ್ ಅಭಿಮಾನಿಗಳು, ಸ್ಟಾರ್ಗಳಿಂದಲೇ ನಡೆಯುತ್ತಿರುವ ಈ ಚಿತ್ರಸಾಮ್ರಾಜ್ಯದಲ್ಲಿ ನಿರ್ದೇಶಕನ ತಾಕತ್ತು ಸಾಬೀತಾಗುತ್ತದೆ ಎಂದು ಡೈರೆಕ್ಟರ್ ಸ್ಪೆಷಲ್ಗಾಗಿ ಕಾದು ಕುಳಿತಿದ್ದರು. ಕಾಡಿಸಿ, ಸತಾಯಿಸಿದ ಗುರು ಕೊನೆಗೂ ತಮ್ಮ ಚಿತ್ರವನ್ನು ಬಿಡುಗಡೆ ಮಾಡಿದರು. ಆದರೆ, ಬಾಕ್ಸ್ ಆಫೀಸ್ನಲ್ಲಿ ಅದು ಜಾಕ್ಪಾಟ್ ಹೊಡೆಯಲಿಲ್ಲ ಎಂಬುದರ ಜೊತೆಗೆ 'ನಮ್ಮಲ್ಲೂ ಸ್ಪೆಷಲ್ ನಿರ್ದೇಶಕರಿದ್ದಾರೆ' ಎಂದು ಎದೆಯುಬ್ಬಿಸಿ ಹೇಳುವಾಗಲೆಲ್ಲಾ, ಆ ಪಟ್ಟಿಯಲ್ಲಿ ಗುರು ಹೆಸರನ್ನು ಸೇರಿಸಿ ಹೇಳುತ್ತಿದ್ದ ಅಪ್ಪಟ ಕನ್ನಡಿಗರಿಗೂ ಈ ಚಿತ್ರ ಹೊಸ ಹುಮ್ಮಸ್ಸು ಕೊಡಲಿಲ್ಲ. ಹಾಗೆ ನೋಡಿದರೆ ಡೈರೆಕ್ಟರ್ ಸ್ಪೆಷಲ್ ಚಿತ್ರ ಗುರು ಅವರ ಮಠ, ಎದ್ದೇಳು ಮಂಜುನಾಥನ ಧಾಟಿಯಲ್ಲೇ ಇತ್ತು. ಆದರೆ ಆ ಜನಪ್ರಿಯ ಧಾಟಿ ಕೊನೆಯವರೆಗೂ ಉಳಿಯಲಿಲ್ಲ. ಮಧ್ಯಂತರದ ನಂತರ ಗುರು, ನಾನು ನನಗೆ ಬೇಕಾದುದನ್ನು ಮಾಡುತ್ತೇನೆ ಎಂದು ಎದ್ದು ಕೂತರು. ಆದರೆ ಜನ ಅರ್ಧಂಬರ್ಧ ಉಂಡವರಂತೆ ಎದ್ದು ಹೋದರು. ಹಾಗಾಗಿ, ಡೈರೆಕ್ಟರ್ ಸ್ಪೆಷಲ್ ಎಂಬ ಸಿನಿಮಾ ಎದ್ದು ನಿಲ್ಲಲಿಲ್ಲ. ಅದಾದ ನಂತರ ಗುರು ಮತ್ತೆ ಹೊಸ ಚಿತ್ರದ ಬಗ್ಗೆ ಮಾತಾಡಿಲ್ಲ. ಗುರುಪ್ರಸಾದ್ ನಾಲ್ಕೈದು ವರ್ಷಕ್ಕೊಮ್ಮೆ ಸಿನಿಮಾ ಮಾಡುತ್ತಾರೆ ಎಂಬುದು ಅದಕ್ಕೆ ಕಾರಣವಿರಲಿಕ್ಕಿಲ್ಲ. ಅವರ ಸಿನಿಮಾ ಸೋತಿದ್ದರೂ ಗುರುಬಲದ ಮೇಲೆ ಉಳಿದವರಿಗೂ ಮತ್ತು ಅವರಿಗೂ ನಂಬಿಕೆ ಇದ್ದೇ ಇರುತ್ತದೆ. ಹಾಗಾಗಿ ನಿರ್ದೇಶನದ ವಿಷಯದಲ್ಲಿ ಸದ್ಯಕ್ಕೆ ಸಶೇಷ ಹಾಕಿರುವ ಗುರುಪ್ರಸಾದ್ ಆದಷ್ಟು ಬೇಗ ಎದ್ದು ನಿಲ್ಲಲಿ ಎಂಬುದು ಮಂಜುನಾಥನ ಮಾತು.
ಶಿವರಾಜ್ಕುಮಾರ್ ಅಭಿನಯದ ಅಂದರ್ ಬಾಹರ್ ಇಂಥ ಇನ್ನೊಂದು ಚಿತ್ರ. ಮೊದಲ ಚಿತ್ರ ನಿರ್ದೇಶನ ಮಾಡಿದ ಫಣೀಶ್ಗೆ, ತಮ್ಮ ಮೇಲೆ ಸಂಪೂರ್ಣ ಭರವಸೆ ಇತ್ತು. ಆದರೆ ಅವರಿಗೆ ಗಾಂಧಿನಗರದ ಸೂತ್ರ ಸಿದ್ಧಿಸಿಲ್ಲ ಎಂಬುದು ಸಿನಿಮಾ ತೆರೆಕಂಡ ಮೇಲೆ ಗೊತ್ತಾದ ಸತ್ಯ.
ಹಾಗಂತ ಫಣೀಶ್ಗೆ ಗೊತ್ತಿರದೇ ಇದ್ದುದು ಸಿನಿಮಾ ಮಾಡುವ ಕಲೆಯಲ್ಲ, ತಾವು ಎಂಥ ಚಿತ್ರ ಮಾಡಿದ್ದೇವೆ ಎಂಬುದನ್ನು ಪ್ರಚಾರದ ಸಮಯದಲ್ಲಿ ಸಮರ್ಥವಾಗಿ ಜನರಿಗೆ ಮುಟ್ಟಿಸುವ ಕಲೆ. ಫಣೀಶ್ ಅಂದುಕೊಂಡಿದ್ದೇ ಒಂದಾದರೆ, ಅಂದರ್ ಬಾಹರ್ ಚಿತ್ರದ ಪೋಸ್ಟರ್ಗಳನ್ನು ನೋಡಿದ ಜನ ಅಂದುಕೊಂಡಿದ್ದೇ ಒಂದು. ಅವೆರಡೂ ಬೇರೆ ಬೇರೆ ಎಂದು ಗೊತ್ತಾಗಿದ್ದು ಶುಕ್ರವಾರ ಮಾರ್ನಿಂಗ್ ಶೋನಲ್ಲಿ. ಅದರ ಹೊರತಾಗಿಯೂ ಫಣೀಶ್ರ ಅಂದರ್ ಬಾಹರ್ ಗಾಂಧಿನಗರದ ಮಟ್ಟಿಗೆ ಸ್ವಲ್ಪ ಹೆವಿ ಸಿನಿಮಾ ಎನಿಸಿದ್ದೂ ನಿಜ. ಹಾಗಾಗಿ ಸಿನಿಮಾ ಗೆಲ್ಲಲಿಲ್ಲ. ಅದರ ಪರಿಣಾಮ ಪರಿಸ್ಥಿತಿ ಎರಡೇ ದಿನದಲ್ಲಿ ಬದಲಾಗಿ ಹೋಯಿತು. ಅಂದರ್ಬಾಹರ್ ಬಿಡುಗಡೆಯ ವೇಳೆಯಲ್ಲಿ ಪಣೀಶ್ ಬಗ್ಗೆ ಎಲ್ಲೆಡೆ ಕೇಳಿಬರುತ್ತಿದ್ದ ಪ್ರಶಂಸೆಯ ಮಾತುಗಳು ತಣ್ಣಗಾದವು. ಅಂದರ್ಬಾಹರ್ನ ನಂತರ ಫಣೀಶ್, ಶಿವರಾಜ್ಕುಮಾರ್ ಅವರಿಗಾಗಿ ರೈತ ಎಂಬ ಸಿನಿಮಾ ಮಾಡುತ್ತಿದ್ದಾರೆ ಎಂಬ ಸುದ್ದಿ ಕೂಡ. ಆದರೆ ಒಂದು ಸೋಲಿನಿಂದ ಕಂಗೆಟ್ಟರೆ ಇಲ್ಲಿ ಕೆಲಸ ನಡೆಯುವುದಿಲ್ಲ. ಏಕೆಂದರೆ, ಒಂದು ಸಿನಿಮಾ ಮಾಡಿ ಮರೆಯಾದ ನಿರ್ದೇಶಕರ ದೊಡ್ಡ ಪಟ್ಟಿಯೇ ಚಿತ್ರರಂಗದಲ್ಲಿದೆ. ಫಣೀಶ್ ಆ ಪಟ್ಟಿಗೆ ಸೇರದಿರಲಿ. ಚಿತ್ರರಂಗದ ಬಗ್ಗೆ ಸರಿಯಾಗಿ ತಿಳಿದುಕೊಳ್ಳಲು, ಅವರ ಚಿತ್ರದ ಹೆಸರಿಗಿಂತ ಸೂಕ್ತ ಉದಾಹರಣೆ ಅವರಿಗೆ ಬೇಡ.
ಚಿತ್ರರಂಗಕ್ಕೆ ಹಳಬರಾದರೂ, ಅನೇಕ ಯಶಸ್ಸುಗಳ ಸವಿ ಉಂಡವರಾದರೂ ರಾಜೇಂದ್ರ ಕಾರಂತ್ ಮೊದಲ ನಿರ್ದೇಶನದಲ್ಲಿ ಯಶಸ್ಸು ಗಳಿಸಲಿಲ್ಲ. ಮಂಗನ ಕೈಲಿ ಮಾಣಿಕ್ಯ ಅವರ ಕೈ ಹಿಡಿಯಲಿಲ್ಲ. ಆದರೆ, ಈ ವಿಷಯದಲ್ಲಿ ಕಾರಂತ್ ಅವರ ತಪ್ಪು ಕಡಿಮೆಯೇ. ರಮೇಶ್ ಅರವಿಂದ್ ಮೊದಲೇ ಫಾರ್ಮ್ನಲ್ಲಿಲ್ಲ. ಅವರ ಸಿನಿಮಾವೊಂದು ಅಂಥ ಲೋ ಬಜೆಟ್ನಲ್ಲಿ ತಯಾರಾದರೆ ಅದು ತಮ್ಮ ಸಿನಿಮಾದ ಮೇಲೆ ಅವರಿಗೇ ನಂಬಿಕೆಯಿಲ್ಲ ಎಂಬ ಅನಿಸಿಕೆಯನ್ನು ಪ್ರೇಕ್ಷಕರಲ್ಲಿ ಹುಟ್ಟುಹಾಕಬಹುದು. ಅದರ ಜೊತೆಗೆ ಯಾರಿಗೂ ಗೊತ್ತಾಗದಂತೆ, ಬಿಡುಗಡೆಯಾಗಿದ್ದು ಕೂಡ ಚಿತ್ರಕ್ಕೆ ಮುಳುವಾಯಿತು. ಹಾಗಾಗಿ ಚಿತ್ರ ಮುಳುಗಿತು. ಸ್ಕ್ರಿಪ್ಟ್ ವಿಷಯದಲ್ಲಿ ಎದ್ದು ಕಾಣುವ ಬರಹಗಾರರ ಶ್ರದ್ಧೆ, ನಿರ್ಮಾಪಕ ಸಂದೇಶ್ ನಾಗರಾಜ್ ಅವರಲ್ಲಿ ಕಾಣಲಿಲ್ಲ. ಕಡಿಮೆ ಬಜೆಟ್ನ ಚಿತ್ರ ಎಂದರೆ ಅದು ಕೆಟ್ಟ ಚಿತ್ರ ಎನ್ನುವಷ್ಟರ ಮಟ್ಟಿಗೆ ಬದಲಾವಣೆಯಾಗುತ್ತಿರುವ ಇಂದಿನ ಸಂದರ್ಭದಲ್ಲಿ ಈ ಸಿನಿಮಾ ಓಡುತ್ತದೆ ಎಂಬ ನಂಬಿಕೆ ಇಟ್ಟುಕೊಳ್ಳುವುದೇ ಕಷ್ಟವಾಗಿತ್ತು. ಹಾಗೆ ನೋಡಿದರೆ ಇಂಥ ಟೈಟ್ ಸ್ಕ್ರಿಪ್ಟ್ಗಳನ್ನಿಟ್ಟುಕೊಂಡಿದ್ದರೂ ಹಿಂದಿಯಲ್ಲಿ ಪ್ರಿಯದರ್ಶನ್ರಂಥ ನಿರ್ದೇಶಕರು ಅಕ್ಷಯ್ಕುಮಾರ್ರಂಥ ಸ್ಟಾರ್ಗಳನ್ನು ಹಾಕಿಕೊಂಡು ಅದಕ್ಕೆ ಕೋಟಿಗಟ್ಟಲೆ ಸುರಿದೇ ಸಿನಿಮಾ ಮಾಡುತ್ತಾರೆ. ಆದರೆ ನಮ್ಮ ನಿರ್ಮಾಪಕರು ಕಥೆ, ಚಿತ್ರಕಥೆ ಚೆನ್ನಾಗಿದೆಯಲ್ಲ, ಹಾಗಾದ್ರೆ ಅದರಿಂದಲೇ ಸಿನಿಮಾ ಗೆಲ್ಲಲಿ ಬಿಡಿ ಎಂದು ತಮ್ಮ ಸಿನಿಮಾವನ್ನು ಕೈ ಬಿಡುತ್ತಾರೆ. ಅಲ್ಲಿಗೆ ಮಂಗನ ಕೈಲಿ ಮಾಣಿಕ್ಯ ಎಂಬ ಹೆಸರು ಸಾರ್ಥಕವಾಗಿಬಿಡುತ್ತದೆ. ಆದರೆ, ಮೊದಲ ಚಿತ್ರದ ಫಲಿತಾಂಶದ ಬಗ್ಗೆ ತಲೆಕೆಡಿಸಿಕೊಳ್ಳದೆ, ಇದು ನನ್ನ ಸೋಲಲ್ಲ ಎಂದುಕೊಂಡು, ರಾಜೇಂದ್ರ ಕಾರಂತ್, ಮತ್ತೆ ಸಿನಿಮಾ ಮಾಡಬೇಕಿದೆ.
ಶಿವರಾಜ್ಕುಮಾರ್ ಅವರ ಇತ್ತೀಚಿನ ಕಡ್ಡಿಪುಡಿ ಚಿತ್ರ, ಖಂಡಿತಾ ಈ ಚಿತ್ರಗಳ ಪಟ್ಟಿಗೆ ಸೇರುವಂತದ್ದೇನಲ್ಲ. ಚಿತ್ರ ಗಳಿಕೆಯ ವಿಷಯದಲ್ಲಿ ಸಮಾಧಾನಕರ ಬಹುಮಾನ ಗಳಿಸಿದರೂ ಸಿನಿಮಾ ನೋಡಿ ಥ್ರಿಲ್ ಆಗಿ, ಇದು ಸೂಪರ್ ಹಿಟ್ ಆಗಬೇಕು ಎಂದು ನಿರೀಕ್ಷಿಸಿದ್ದ ಹಲವು ಸಿನಿಪ್ರಿಯರಿಗೆ ಸಮಾಧಾನವಾಗಲಿಲ್ಲ. ಕೋಟಿ ಕೋಟಿ ಬಾಚಬಹುದು ಎಂದುಕೊಂಡಿದ್ದ ನಿರ್ಮಾಪಕರಿಗೂ ಕೊಂಚ ನಿರಾಶೆಯಾಗಿರಬಹುದು. ಆದರೆ ಆ ನಿರಾಶೆಯ ಬಿಸಿ, ನಿರ್ಮಾಪಕ ಚಂದ್ರು ಅವರಿಗಾಗಲೀ, ಒಂದೊಳ್ಳೆ ಸಿನಿಮಾ ಕೊಟ್ಟ ಸೂರಿ, ಶಿವಣ್ಣ ಅವರಿಗಾಗಲೀ ತಟ್ಟದಿರಲಿ. ಏಕೆಂದರೆ ಕಡ್ಡಿಪುಡಿಯದ್ದು ದೊಡ್ಡ ಗೆಲುವಲ್ಲದಿದ್ದರೂ, ಖಂಡಿತಾ ಸೋಲಂತೂ ಅಲ್ಲವಲ್ಲ. ಕಡ್ಡಿಪುಡಿಯಂಥ ಸಿನಿಮಾ ಮಾಡಿದ ಖುಷಿ ಅವರ ಪಾಲಿಗೆ ಎಂದೆಂದೂ ಇರುವಂಥದ್ದು. ಇದೇ ಚಿತ್ರ ತಮಿಳಿನಲ್ಲಿ ಬಂದಿದ್ದರೆ, ಇಷ್ಟು ಹೊತ್ತಿಗೆ 'ಅಯ್ಯೋ, ತಮಿಳಲ್ಲಿ ಕಡ್ಡಿಪುಡಿ ಅಂತ ಒಂದ್ ಸಿನಿಮಾ ಬಂದಿದೆ ಮಗಾ, ಈ ನಮ್ ಕನ್ನಡದವರೂ ಇದಾರೆ, ಅದನ್ ನೋಡಿ ಇವ್ರೆಲ್ಲ ಸಿನಿಮಾ ಮಾಡೋದ್ ಹೆಂಗೆ ಅಂತ ಕಲೀಬೇಕು' ಎಂದು ಅಪ್ಪಟ ಕನ್ನಡ ಪ್ರೇಕ್ಷಕರೇ ಮಾತಾಡಿಕೊಳ್ಳುತ್ತಿದ್ದರು ಎಂಬುದು ಕಡ್ಡಿಪುಡಿ ತಯಾರಕರಿಗೆ ಗೊತ್ತಿರಲಿ.
ಒಟ್ಟಿನಲ್ಲಿ, ಜನಕ್ಕೆ ಇಷ್ಟವಾಗುವಂಥ ಸಿನಿಮಾ ಮಾಡಬೇಕೆ ಅಥವಾ ನಮಗೆ ಇಷ್ಟವಾಗುವಂಥ ಸಿನಿಮಾ ಮಾಡಬೇಕೆ ಎಂಬ ಪ್ರಶ್ನೆ ಇಂದಿಗೂ ಚಾಲ್ತಿಯಲ್ಲಿದೆ. ಜನಕ್ಕೆ ಇಷ್ಟವಾಗುವಂಥ ಸಿನಿಮಾ ಮಾಡಿ ನೆಮ್ಮದಿಯಾಗಿ ಹಣ ಮಾಡುತ್ತಿರುವ ಅನೇಕ ಸ್ಟಾರ್ಗಳು ನಮ್ಮಲ್ಲಿದ್ದಾರೆ. ಆದರೆ, ಸೋ ಕಾಲ್ಡ್ ಜನಕ್ಕೆ ಇಷ್ಟವಾಗುವಂಥ ಸಿನಿಮಾಗಳನ್ನೇ ಮಾಡುತ್ತಿದ್ದರೆ, ಸಿನಿಮಾಗಳು ಬೆಳೆಯುವುದು ಹೇಗೆ, ಎಂಬ ನಿಟ್ಟಿನಲ್ಲಿ ಕೆಲವರು ಯೋಚಿಸುತ್ತಾರೆ. ಆದರೆ ಅವರು ಕೇವಲ ತಮಗಿಷ್ಟವಾಗುವ ರೀತಿಯಲ್ಲೇ ಸಿನಿಮಾ ಬಂದಿದೆ ಎಂಬ ತೃಪ್ತಿ ಅನುಭವಿಸಿದರೇ ಹೊರತು, ಕಮರ್ಷಿಯಲ್ ಆದ ಯಶಸ್ಸನ್ನಲ್ಲ. ನಮ್ಮಿಷ್ಟವನ್ನು ಪ್ರೇಕ್ಷಕರ ಮೇಲೆ ಹೇರುವಂಥ ಸಿನಿಮಾ ಮಾಡಿದರೆ, ಯಶಸ್ಸು ಸಿಗುವುದು ಕಷ್ಟವೇ. ಹಾಗಾಗಿ, ಕೊನೆಗೂ ಉಳಿದಿರುವ ಒಂದು ದಾರಿ ಎಂದರೆ, ನಮಗೆ ಬೇಕಾದಂಥ ಚಿತ್ರವನ್ನು ಪ್ರೇಕ್ಷಕರಿಗೆ ಇಷ್ಟವಾಗುವ ರೀತಿಯಲ್ಲಿ ಮಾಡಿಕೊಡಬೇಕು ಎಂಬುದು. ಕನ್ನಡ ಚಿತ್ರರಂಗದಲ್ಲಿ ಹಾಗೆ ಮಾಡಲು, ನಾವು ಒಳ್ಳೆಯ ಸಿನಿಮಾ ಮಾಡಿದ್ದೇವೆ ಎಂಬುದು ಪ್ರೇಕ್ಷಕನ ಅರಿವಿಗೆ ಬಾರದಂತೆ ಒಳ್ಳೆಯ ಸಿನಿಮಾ ಕೊಡುವ ಚಾಲಾಕಿತನ ಬೇಕು.
- ಹರಿ