ಚನ್ನಪಟ್ಟಣದ ಚೆಂದದ ಗೊಂಬೆ
ಅಂದುಕೊಂಡಂತೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಹೊಸ ಚಿತ್ರ ಸೆಟ್ಟೇರಿದೆ. ಆದರೆ ದರ್ಶನ್ರ ಈ ಹೊಸ ಚಿತ್ರದಷ್ಟೇ...
ಅಂದುಕೊಂಡಂತೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಹೊಸ ಚಿತ್ರ ಸೆಟ್ಟೇರಿದೆ. ಆದರೆ ದರ್ಶನ್ರ ಈ ಹೊಸ ಚಿತ್ರದಷ್ಟೇ ಹೆಚ್ಚು ಸುದ್ದಿ ಮಾಡಿದ್ದು ಇದರ ನಾಯಕಿ ನಿಶಾ. ಸಾಮಾನ್ಯವಾಗಿ ದರ್ಶನ್ ಚಿತ್ರಗಳಲ್ಲಿ ನಾಯಕಿಯರಿಗೆ ಆ ಚಿತ್ರ ಬಿಡುಗಡೆಯಾದ ನಂತರವೇ ಹೆಚ್ಚು ಸ್ಕೋಪ್ ಸಿಗುತ್ತದೆ. ಹಾಗೊಂದು ವೇಳೆ ಆರಂಭದಲ್ಲೇ ಅವರು ಸದ್ದು ಮಾಡುತ್ತಿದ್ದರೆ, ಖಂಡಿತವಾಗಿ ಅವರು ಪರಭಾಷೆಯ ಸ್ಟಾರ್ಗಳೇ ಆಗಿರುತ್ತಾರೆ. ಆದರೆ ನಿಶಾ ವಿಚಾರದಲ್ಲಿ ಆಗಾಗಲಿಲ್ಲ. 'ದರ್ಶನ್ರ 'ಅಂಬರೀಶ' ಚಿತ್ರದಲ್ಲಿ ಅಭಿನಯಿಸುತ್ತಾರೆ' ಎನ್ನುವ ಸುದ್ದಿ ಹೊರ ಬಿದ್ದಾಗಿನಿಂದಲೂ ಆ ಚಿತ್ರಕ್ಕೆ ನಿಶಾ ನಾಯಕಿ ಎಂದು ಮಾಧ್ಯಮಗಳಲ್ಲಿ ಜೋರಾಗಿ ಸದ್ದು ಮಾಡಿತು. ಕಾರಣ ನಿಶಾ ಹೆಸರಿನ ಜೊತೆಗೆ ಯೋಗೇಶ್ವರ್ ಎನ್ನುವ ನಾಮವಿದೆ. ಹೌದು, ನಟ ಮತ್ತು ಶಾಸಕ ಸಿ.ಪಿ.ಯೋಗೇಶ್ವರ್ ಮಗಳು ಎನ್ನುವ ಕಾರಣಕ್ಕೆ ಮೊದಲ ಚಿತ್ರ ಸೆಟ್ಟೇರುವ ಮುನ್ನವೇ ನಿಶಾ ಯೋಗೇಶ್ವರ್ ಮಾಧ್ಯಮಗಳಲ್ಲಿ ರಾರಾಜಿಸಿದಳು. ಈ ಹಿಂದೆ ತನ್ನ ತಂದೆಯೊಂದಿಗೆ ರಾಜಕೀಯ ಪ್ರಚಾರದ ಬೀದಿಯಲ್ಲಿ ಕಾಣಿಸಿಕೊಂಡಾಗ 'ನಿಶಾ ರಾಜಕೀಯ ಪ್ರವೇಶ ಮಾಡುತ್ತಾಳೆ' ಎನ್ನುವ ಗುಲ್ಲೂ ಹಬ್ಬಿತ್ತು. ಆದರೆ ಗ್ಲಾಮರ್ ಲೋಕಕ್ಕೆ ಬೇಕಾದ ಅಂದಚೆಂದ ಇರುವ ಈ ಚನ್ನಪಟ್ಟಣದ ಗೊಂಬೆ ಇಷ್ಟು ಬೇಗ ರಾಜಕೀಯದ ಪಡಸಾಲೆಯತ್ತ ಮುಖ ಮಾಡುವುದುಂಟೆ? ಹೀಗಾಗಿ 'ಅಪ್ಪ ನಾನೂ ನಿನ್ನಂತೆ ಬಣ್ಣ ಹಚ್ಚುವೆ. ಕ್ಯಾಮೆರಾ ಮುಂದೆ ನನ್ನ ಟ್ಯಾಲೆಂಟ್ ತೋರಿಸುವೆ. ನಿನ್ನ ಮಾಗದರ್ಶನ ಬೇಕು' ಎಂದ ಮಗಳಿಗೆ ತಥಾಸ್ತು ಎಂದಿದ್ದಾರೆ ಸಿ.ಪಿ. ಯೋಗೇಶ್ವರ್. ಅಪ್ಪ ಚಿತ್ರರಂಗದಲ್ಲಿ ಒಂದಿಷ್ಟು ಹೆಸರು ಮಾಡಿದ್ದಾರೆ. ಹೀಗಾಗಿ ತಾನು ಕೂಡ ಸುಲಭವಾಗಿ ಸಿನಿಮಾಗಳಲ್ಲಿ ಪಾರ್ಟ್ ಮಾಡಿಕೊಂಡು ಇರಬಹುದು ಎಂದುಕೊಂಡು ಬಂದವಳಲ್ಲ ನಿಶಾ. ಹಾಗೆ ಸುಮ್ಮನೆ ಒಮ್ಮೆ ಸ್ನೇಹಿತೆಯರ ಜೊತೆ ಸೇರಿ ಫೋಟೋ ಶೂಟ್ ಮಾಡಿಸಿಕೊಂಡ ನಿಶಾಳ ಸ್ಟಿಲ್ಗಳನ್ನು ನೋಡಿದ ಗೆಳತಿಯರು, 'ವ್ಹಾ...! ಸೂಪರ್. ಸಖತ್ ಫೋಟೋಜೆನಿಕ್ ಫೇಸ್ ಕಣೆ ನಿನ್ದು.
ಫಿಲ್ಮ್ನಲ್ಲಿ ಟ್ರೈ ಮಾಡಿ ನೋಡು' ಎಂದಿದ್ದೇ ನಿಶಾಗೆ ನಟನಾ ಕನಸು ಮೂಡಲು ಕಾರಣವಾಯಿತು. ವಿಶೇಷ ಎಂದರೆ ಮೊದಲ ಚಿತ್ರದಲ್ಲೇ ದೊಡ್ಡ ಸ್ಟಾರ್ ನಟನೊಂದಿಗೆ ಹೆಜ್ಜೆ ಹಾಕುವ ಅವಕಾಶ ಗಿಟ್ಟಿಸಿಕೊಂಡಿದ್ದು ಮಾತ್ರವಲ್ಲ, ತನ್ನ ಅಪ್ಪನ ಚಿತ್ರಗಳನ್ನು ನಿರ್ದೇಶನ ಮಾಡಿದ ಮಹೇಶ್ ಸುಖಧರೆ ಅವರ ಮೂಲಕವೇ ಚಿತ್ರರಂಗಕ್ಕೆ ಪರಿಚಯವಾಗುತ್ತಿದ್ದಾಳೆ. ಇದು ನಿಶಾಗೆ ಡಬಲ್ ಖುಷಿ ಕೊಟ್ಟಿದೆ.
ಇತ್ತೀಚೆಗಷ್ಟೆ ಚಿತ್ರದ ಮುಹೂರ್ತ ನಡೆಯಿತು. ಅಮ್ಮನ ಜೊತೆ ಕಂಠೀರವ ಸ್ಟುಡಿಯೋಗೆ ಬಂದಿದ್ದ ನಿಶಾ ಯೋಗೇಶ್ವರ್ ತೀರಾ ಸಿಂಪಲ್ ಆಗಿ ಕಾಣುತ್ತಿದ್ದರೂ ಪಕ್ಕಾ ಗ್ಲಾಮರ್ ಡಾಲ್ ಎಂಬುದು ಕ್ಯಾಮೆರಾ ಕಣ್ಣಿನ ಅನುಭವದ ಮಾತು. ಚಿಕ್ಕ ವಯಸ್ಸಿನಿಂದಲೇ ಸ್ವತಂತ್ರವಾಗಿ ಹಾರಾಡಿಕೊಂಡಿದ್ದ ನಿಶಾಗೆ ಆರು ವರ್ಷಗಳ ಹಿಂದೆಯಷ್ಟೆ ನಟನೆಯ ಕನಸು ಬಿತ್ತು. ಆದರೆ ಸೂಕ್ತ ಯೋಚನೆ ಇರಲಿಲ್ಲ. ಆದರೂ ಒಂದಿಷ್ಟು ಅವಕಾಶಗಳು ನಿಶಾಳನ್ನು ಹುಡುಕಿಕೊಂಡು ಬರುತ್ತಿದ್ದವು. ಮೊದಲು ತೆಲುಗಿನಲ್ಲಿ ಒಂದೆರಡು ಚಿತ್ರಗಳಲ್ಲಿ ನಟಿಸುವ ಅವಕಾಶ ಬಂತು. ಆಗಲೂ ಬಣ್ಣದ ಜಗತ್ತನ್ನು ಗಂಭೀರವಾಗಿ ತೆಗೆದುಕೊಳ್ಳದ ನಿಶಾಗೆ ಕಳೆದ ವರ್ಷ ದಿ ಬೆಸ್ಟ್ ಎನ್ನುವ ನಿರ್ದೇಶಕರಿಬ್ಬರ ಸಿನಿಮಾದಲ್ಲಿ ನಟಿಸುವ ಅಹ್ವಾನ ಬಂದಾಗ, 'ಅರೇ ನಾನು ಯಾಕೆ ಸಿನಿಮಾ ನಟಿಯಾಗಬಾರದು?' ಎಂದುಕೊಂಡು ಒಂದು ತಿಂಗಳ ಹಿಂದೆ ಅಪ್ಪ, ಅಮ್ಮನಿಂದಲೂ ಗ್ರೀನ್ ಸಿಗ್ನಲ್ ತೆಗೆದುಕೊಂಡರು. 'ಮನೆಯಲ್ಲಿ ಓಕೆ ಅಂತ ಹೇಳಿದ ಮೇಲೆ ಮತ್ತೆ ಹೊಸದಾಗಿ ಫೋಟೋ ಶೂಟ್ ಮಾಡಿಸಿಕೊಂಡೆ. ನಟನೆ ಪಾಠ ಕಲಿಯಲು ಆರಂಭಿಸಿದೆ. ಈ ನಡುವೆ ಮಹೇಶ್ ಸುಖಧರೆ ಅವರು ಅಪ್ಪನ ಜೊತೆ ಮಾತನಾಡಲು ಮನೆಗೆ ಬರುತ್ತಿದ್ದರು. ಅವರು ನಟ ದರ್ಶನ್ ಜೊತೆ ಸಿನಿಮಾ ಮಾಡುವ ಯೋಚನೆಯಲ್ಲಿದ್ದರು. ಮಹೇಶ್ ಅವರಾಗಿಯೇ 'ನಿಮ್ಮ ಮಗಳನ್ನೇ 'ಅಂಬರೀಶ' ಚಿತ್ರಕ್ಕೆ ನಾಯಕಿಯನ್ನಾಗಿ ಮಾಡೋಣ ಎಂದರು. ಚಿತ್ರದ ಕಥೆ, ನಾಯಕ, ನಿರ್ದೇಶಕರನ್ನು ನೋಡಿದ ಮೇಲೆ ನನ್ನ ಮೊದಲ ಚಿತ್ರ ಹೇಗಿರಬೇಕೆಂದು ನಿರೀಕ್ಷೆ ಮಾಡಿದ್ದನೋ ಅದೇ ರೀತಿ 'ಅಂಬರೀಶ' ಚಿತ್ರ ಇತ್ತು. ನನಗೆ ಸೂಕ್ತ ಎನಿಸಿತು. ಹೀಗಾಗಿ ಒಪ್ಪಿಕೊಂಡೆ' ಎನ್ನುತ್ತಾರೆ ನಿಶಾ.
ತಂದೆಯ ಹೆಸರು, ಭವಿಷ್ಯದ ಕನಸುಗಳು, ಚಿತ್ರರಂಗದವರ ಕುರಿತ ಹೊರಗಿನವರ ಮಾತುಗಳು... ಹೀಗೆ ಎಲ್ಲದರ ಬಗ್ಗೆಯೂ ಯೋಚನೆ ಮಾಡಿಯೇ ಬಣ್ಣ ಹಾಕುತ್ತಿರುವ ನಿಶಾ, ಮುಹೂರ್ತದಲ್ಲಿ ಮೊದಲ ಬಾರಿಗೆ ನಟ ದರ್ಶನ್ ಪಕ್ಕ ನಿಂತಾಗ ತುಂಬಾ ಥ್ರಿಲ್ ಆಗಿದ್ದರಂತೆ. ತನ್ನ ದೊಡ್ಡ ಕನಸು ಈಗ ಈಡೇರುತ್ತಿದೆ ಎಂದು ಸಂಭ್ರಮಿಸಿದ ನಿಶಾಗೆ ಚಿತ್ರರಂಗದಲ್ಲಿ ತಾನೊಬ್ಬ ಪರಿಪೂರ್ಣ ಕಲಾವಿದೆ ಎನಿಸಿಕೊಳ್ಳಬೇಕಂತೆ. ಅದಕ್ಕಾಗಿ ಈಗಿನಿಂದಲೇ ಡಬ್ಬಿಂಗ್ ಮಾಡುವುದು, ನೃತ್ಯ ಅಭ್ಯಾಸ, ನಟನೆಯ ಪಾಠಗಳನ್ನು ಕಲಿಯುತ್ತಿದ್ದಾರೆ. 5.9 ಎತ್ತರದ ಈ ಚಿನಕುರಳಿಗೆ ಗ್ಲಾಮರ್ ಮತ್ತು ಗ್ರಾಮರ್ ಎರಡೂ ಇದೆ. ಜೊತೆಗೆ ಪಡ್ಡೆ ಹುಡುಗರ ಕನಸಿಗೆ ಕನ್ನ ಹಾಕುವ ಹಾಟ್ ಎನಿಸುವ ಮೈಮಾಟ ಉಂಟು. ಚನ್ನಪಟ್ಟಣದ ಗೊಂಬೆಯನ್ನು ನೋಡಲು ಇನ್ನೇನು ಬೇಕು? ನಿಶಾಗೆ ಆಲ್ ದಿ ಬೆಸ್ಟ್...
- ಆರ್. ಕೇಶವಮೂರ್ತಿ