ಗಿಮಿಕ್ ಕ್ಲಿಕ್ ಆಗಿದೆ
ಒಳ್ಳೆ ಸಿನಿಮಾ ಮಾಡಿದ್ರೂ ಸರಿಯಾದ ಚಿತ್ರಮಂದಿರ ಸಿಗದೆ, ಸಿನಿಮಾ ಅಂದ್ರೆ 'ಥೇಟರ್ ಇರೋರಿಗೆ ಮಾತ್ರ' ಎನ್ನುವಂಥ ಪರಿಸ್ಥಿತಿಯಲ್ಲಿ 'ಮೀಟರ್ ಇರೋರಿಗೆ ಮಾತ್ರ' ಎನ್ನುವಂಥ ಸುದ್ದಿ ಮಾಡುತ್ತಿರುವ 6-52 ಎಂಬ ಸಿನಿಮಾವೊಂದು ಕಳೆದವಾರ ತೆರೆಕಂಡಿದೆ. ಆದರೆ ಈ ಸಿನಿಮಾಗಿಂತ, ಅದಕ್ಕೆ ಮಾಡಿದ ಗಿಮಿಕ್ಕೇ ಹೆಚ್ಚು ಜನರನ್ನು ಸೆಳೆಯುತ್ತಿದೆ.
ಚಿತ್ರರಂಗದಲ್ಲಿ ಗಿಮಿಕ್ ಮಾಡುವ ಮಿಕಗಳಿಗೇನೂ ಕಡಿಮೆ ಇಲ್ಲ. ನಮ್ಮ ರಿಯಲ್ ಸ್ಟಾರ್ ಎಂದೇ ಹೆಸರಾದ ಉಪೇಂದ್ರ, ಜೋಗಿ ಪ್ರೇಮ್ ಇವರೆಲ್ಲ ಈ ಗಿಮಿಕ್ ಕಲೆಯನ್ನು ಅರೆದು ಕುಡಿದವರೇ. ಲೂಸಿಯಾದಂಥ ಸಾಧಾರಣ ಚಿತ್ರ ಕೂಡ ಅಲ್ಪ ಸ್ವಲ್ಪ ಓಡಿದ್ದು, 'ಒಂದ್ಸಲ ನೋಡಿದ್ರೆ ಅರ್ಥ ಆಗಲ್ಲ, ಇದು ಇಂಟಲೆಕ್ಚುವಲ್ ಸಿನಿಮಾ' ಎಂಬಂಥ ಗಿಮಿಕ್ಗಳಿಂದಲೇ. ಜೋಗಿ ಪ್ರೇಮ್ ಗಿಮಿಕ್ ಮಾಡಿದರೂ ಅದು ಸಿನಿಮಾದ ಪ್ರಚಾರದ ವಿಷಯದಲ್ಲೇ ಹೆಚ್ಚು, ಉಪ್ಪಿ ಗಿಮಿಕ್ ಮಾಡಿದರೂ ಅದು ಊಟಕ್ಕೆ ಉಪ್ಪಿನಕಾಯಿ ಥರಾ ಗಿಮಿಕ್. ನಾವು ಅದನ್ನೇ ತಪ್ಪು ಅಂತೀವಿ. ಆದ್ರೆ ಇಂಥಹ ಗಿಮಿಕ್ಗಳು 'ಸಾಮಾನ್ಯ' ಪ್ರೇಕ್ಷಕನ ಮೇಲೆ ಎಷ್ಟು ಚೆನ್ನಾಗಿ ವರ್ಕ್ ಔಟ್ ಆಗುತ್ತೆ ಅನ್ನೋದಕ್ಕೆ ಉದಾಹರಣೆ 6-52 ಸಿನಿಮಾ. ಹಾಗೆ ನೋಡಿದರೆ ಇದನ್ನ ಸಿನಿಮಾ ಅನ್ಬೇಕೋ ಬೇಡ್ವೋ ಗೊತ್ತಿಲ್ಲ.
ಏಕೆಂದರೆ ಇಲ್ಲಿ ಸಿನಿಮಾಗಿಂತ ಗಿಮಿಕ್ಗೇ ಪ್ರಾಧಾನ್ಯತೆ. ಇದು 90 ಪರ್ಸೆಂಟ್ ಗಿಮಿಕ್, 10 ಪರ್ಸೆಂಟ್ ಸಿನಿಮಾ.
2010ರಲ್ಲಿ ಚಾರಣಕ್ಕೆ ಹೋದ 6 ಜನರ ಕಥೆ ಇದು. ಅದರಲ್ಲಿ ಬದುಕುಳಿದಿದ್ದು ಒಬ್ಬ ಮನುಷ್ಯ ಮತ್ತು ಒಂದು ಕ್ಯಾಮೆರಾ ಅಷ್ಟೆ. ಆ ಕ್ಯಾಮೆರಾದಲ್ಲಿ ಸಿಕ್ಕಿದ ವಿಡಿಯೋ ಅನ್ನೇ ಈಗ ನಾವು ಚಿತ್ರಮಂದಿರಗಳಲ್ಲಿ ಪ್ಲೇ ಮಾಡ್ತಾ ಇದೀವಿ ಎಂಬ ಪ್ರಚಾರ ತಂತ್ರ ಈ ಚಿತ್ರದ್ದು. ಅಷ್ಟು ಜನರ ಸಾವಿನ ನಂತರ ಉಳಿದ ಕ್ಯಾಮರಾ ಇಲ್ಲಿ ಕಥೆ ಹೇಳುತ್ತದೆ. ಆ ಲೆಕ್ಕದಲ್ಲಿ ಈ ಚಿತ್ರಕ್ಕೆ 'ಉಳಿದದ್ದು ಕಂಡಂತೆ' ಎಂಬ ಹೆಸರೂ ಸೂಕ್ತ. ಹಾಗಂತ ಇದು ಹೊಸ ಗಿಮಿಕ್ ಏನಲ್ಲ. ಹಾಲಿವುಡ್ನಲ್ಲಿ ಇದೇ ಗಿಮಿಕ್ ಮಾಡಿ ಬಿಡುಗಡೆ ಮಾಡಿದ್ದ ಸಿನಿಮಾವೊಂದರ ಟೆಕ್ನಿಕ್
ಅನ್ನೇ ಈ ತಂಡವೂ ಬಳಸಿಕೊಂಡಿದೆ. ಹಾಗಾಗಿ ಲೇಟ್ ಆದರೂ ಲೇಟೆಸ್ಟ್ ಆಗಿ ಕನ್ನಡಕ್ಕೆ ಬಂದಿರುವ ಈ ಚಿತ್ರದ ನಿರ್ದೇಶಕ ಕೂಡ ಲೇಟ್ ರಮೇಶ್.
ಈ ಸಿನಿಮಾಕ್ಕೆ ಒಂದು ಪ್ರೆಸ್ಮೀಟ್ ಮಾಡುವ ಹಾಗೂ ಇಲ್ಲ. ಏಕೆಂದರೆ, ಪ್ರೆಸ್ಮೀಟ್ನಲ್ಲಿ ಮಾತಾಡೋರು ಯಾರು? ಟಿವಿ ಚಾನೆಲ್ಗಳಿಗೆ ಬೈಟ್ಸ್ ಕೊಡೋರು ಯಾರು? ಅವರ ಗಿಮಿಕ್ ಪ್ರಕಾರ ಒಬ್ಬನ್ನ ಬಿಟ್ರೆ ಉಳಿದ ಆ್ಯಕ್ಟರ್ಗಳೆಲ್ಲಾ ದೆವ್ವ ಕೊಟ್ಟ ಬೈಟ್ನಿಂದಲೇ ಸತ್ತು ಹೋಗಿದ್ದಾರೆ. ಅವನ ಜೊತೆ ನಿರ್ಮಾಪಕರೊಬ್ಬರೇ. ಸಿನಿಮಾಕ್ಕೆ ಕ್ಯಾಮೆರಾಮನ್ನೂ ಇಲ್ಲ.
ಅದಕ್ಕೋ ಏನೋ ಸಿನಿಮಾ ನೋಡಿದ ಪ್ರೇಕ್ಷಕನೇ ಈ ಚಿತ್ರದ ಬಗ್ಗೆ ಹೆಚ್ಚು ಮಾತನಾಡುತ್ತಿದ್ದಾನೆ. ಆದರೆ ಅವನು ಮಾತನಾಡುತ್ತಿರುವುದು ಸಿನಿಮಾದ ಬಗ್ಗೆ ಅಲ್ಲ. ಕೇವಲ ಗಿಮಿಕ್ನ ಬಗ್ಗೆ ಎಂಬುದು ವಿಪರ್ಯಾಸ. ಚಿತ್ರದ ಪೋಸ್ಟರ್ ನೋಡಿ ಕುತೂಹಲದಿಂದಲೇ ಚಿತ್ರಮಂದಿರಕ್ಕೆ ಹೋಗುವ ಪ್ರೇಕ್ಷಕರು ಸಿನಿಮಾ ಆರಂಭಕ್ಕೂ ಮುನ್ನ, ಇಂಟರ್ವಲ್ನಲ್ಲಿ, ಇದು ನಿಜವಾಗ್ಲೂ ಸಿಕ್ಕ ವಿಡಿಯೋನಾ ಅಥವಾ ಗಿಮಿಕ್ಕಾ ಎನ್ನುವುದರ ಬಗ್ಗೆಯೇ ಮಾತನಾಡುತ್ತಿದ್ದಾರೆ. ಆದರೆ ಸಿನಿಮಾ ಮುಗಿದ ನಂತರವೂ ಕೇವಲ ಅದನ್ನೇ ಮಾತನ್ನಾಡುತ್ತಾರೆ ಎಂಬುದು ಈ ಸಿನಿಮಾದ ಮಿತಿ.
ಅದು ನಿಜವೇ ಬಿಡಿ. ಏಕೆಂದರೆ ಸಿನಿಮಾದ ಬಗ್ಗೆ ಮಾತಾಡೋಕೆ ಹೆಚ್ಚೇನಿಲ್ಲ. ಆರು ಜನ ಚಾರಣಕ್ಕೆ ಹೋಗಿ ಮಸಣ ಸೇರಿದವರ ಮರಣದ ಕಥೆ ಇದು. ಒಂದಷ್ಟು ಜನ ಗೆಳೆಯರು ಎಲ್ಲೋ ಕಾಡಿನೊಳಗೆ ಚಾರಣ ಹೋಗುತ್ತಾರೆ. ಅಲ್ಲಿ ದೆವ್ವದ ಕಾಟದಿಂದ ಸಾಯ್ತಾರೆಂಬುದು ಅನೇಕ ಹಾರರ್ ಚಿತ್ರಗಳಲ್ಲಿ ಬಂದಿರುವ ಕಥೆಯೇ. ಇಲ್ಲೂ ಅಷ್ಟೇ ಮೊದಲರ್ಧದಲ್ಲಿ ಏನೂ ಇಲ್ಲ. ಸಿನಿಮಾ ಶುರುವಾಗುವುದೇ ಇಂಟರ್ವಲ್ ನಂತರ. ಸಿನಿಮಾದ ಕೊನೆಯಲ್ಲಿ ದೆವ್ವದ ಕಾಟಕ್ಕೆ ಗೆಳೆಯರು ಕೊನೆಯುಸಿರೆಳೆಯುತ್ತಾರೆ. ದೆವ್ವದ ಎಫೆಕ್ಟ್ ತೋರಿಸುವ ಒಂದಷ್ಟು ದೃಶ್ಯಗಳು ಪರಿಣಾಮಕಾರಿಯಾಗಿವೆ. ಆದರೆ ಚಿತ್ರತಂಡ ಗಿಮಿಕ್ ಮೊರೆ ಹೋಗಿದ್ದಕ್ಕೆ ಹಾರರ್ ಚಿತ್ರವೊಂದಕ್ಕೆ ಇರುವ ವಿಶೇಷ ಕ್ಯಾಮೆರಾ ಆ್ಯಂಗಲ್ಗಳ, ಎಫೆಕ್ಟ್ಗಳ ಸಾಧ್ಯತೆಗಳನ್ನು ಬಳಸಿಕೊಳ್ಳಲು ಸಾಧ್ಯವಾಗಿಲ್ಲ. ಇನ್ನು ನಿಜವಾಗ್ಲೂ ಸಿಕ್ಕಿರುವ ವಿಡಿಯೋದಂತೆ ಕಾಣಬೇಕು ಎಂಬ ಕಾರಣಕ್ಕೆ ಮಾಡಲಾಗಿರುವ ಪ್ರಜ್ಞಾಪೂರ್ವಕ ಪ್ರಯತ್ನಗಳು ಅಲ್ಲಲ್ಲಿ ಕೈ ಹಿಡಿದಿವೆ. ಕೆಲವೊಮ್ಮೆ ಕೈ ಕೊಟ್ಟಿವೆ. ಹಾಗಾಗಿ ಪ್ರೇಕ್ಷಕರು ಸಿನಿಮಾ ನೋಡುವುದಕ್ಕಿಂತ ತಪ್ಪು ಹುಡುಕುವುದರಲ್ಲೇ ತೊಡಗುತ್ತಾರೆ.
ಅದು ಸಿಕ್ಕಿರುವ ವಿಡಿಯೋ ಅಂತಾದರೆ, ಕೊನೆಯವರೆಗೂ ರೆಕಾರ್ಡಿಂಗ್, ಡೇಟ್ ಟೈಮ್ಗಳೆಲ್ಲ ಯಾಕೆ ತೆರೆ ಮೇಲೆ ಕಾಣುತ್ತವೆ? ಅದೇನು ಲೈವ್ ಪ್ರೋಗ್ರಾಮಾ? ನಾವು ಮೊಬೈಲ್ನಲ್ಲೋ ಕ್ಯಾಮೆರಾದಲ್ಲೋ ತೆಗೆದ ವಿಡಿಯೋ ಓಪನ್ ಮಾಡಿ ಪ್ಲೇ ಮಾಡಿದರೆ ಅದರಲ್ಲಿ ರೆಕಾರ್ಡಿಂಗ್, ಡೇಟ್ ಟೈಮ್ ಅಂತೆಲ್ಲ ಬರುತ್ತಾ? ಒಂದು ಸೀನ್ನಲ್ಲಿ ಜಲಪಾತದ ಸೌಂಡ್ ಇದೆ, ಹಾಗಾಗಿ ಪಾತ್ರಗಳು ಮಾತೋಡೋದು ಕೇಳ್ಸಲ್ಲ ಅಂತ ಹೇಳ್ತಾರೆ, ಆದ್ರೆ ಕೆಳಗೆ ಅವರು ಬೊಗಸೆಯಲ್ಲಿ ನೀರು ಎತ್ತಿ ಎರಚೋ ಸೌಂಡ್ ಮಾತ್ರ ಹೇಗೆ ಕೇಳುತ್ತೆ? ಅದ್ಸರಿ, ಆದ್ರೆ ಎಲ್ಲರೂ ಮಲಗಿರುವಾಗಲೂ ಕ್ಯಾಮೆರಾ ಮಾತ್ರ ಯಾಕೆ ಎದ್ದೇ ಇರುತ್ತೆ? ಪ್ರಾಣ ಹೋಗೋ ಟೈಮಲ್ಲಿ ಯಾರಾದ್ರೂ ಕ್ಯಾಮೆರಾ ಇಟ್ಕೊಂಡು ಶೂಟ್ ಮಾಡ್ತಾರಾ? ಎನ್ನುತ್ತಾ ಪಾತ್ರಗಳ ಲೈಫ್ ಹೋಗೋ ಟೈಮಲ್ಲೂ ಪ್ರೇಕ್ಷಕ ಅಷ್ಟು ದಿನ ಜೀವಂತವಾಗಿರುವ ಕ್ಯಾಮೆರಾದ ಬ್ಯಾಟರಿ ಲೈಫ್ ಬಗ್ಗೆಗೂ ಮಾತನಾಡುವಂತೆ ಮಾಡುತ್ತದೆ. ಚಿತ್ರದಲ್ಲಿ ಕೆಲವೊಂದು ಪರಿಚಿತ ಮುಖಗಳಿರುವುದೂ ಚಿತ್ರತಂಡದ ಗಿಮಿಕ್ಗೆ ಅಡ್ಡಿಯಾಗಿದೆ. ಆದರೆ, ಇದನ್ನೇ ನಿರ್ದೇಶಕರು ತಮಗೆ ಸಿಕ್ಕ ಗೆಲುವು ಎಂದು ಕೊಂಡರೆ ಅಡ್ಡಿಯಿಲ್ಲ.
ಒಟ್ಟಿನಲ್ಲಿ, ಕಥೆಯ ವಿಷಯದಲ್ಲಿ ಇದು ಉಳಿದದ್ದು ಕಂಡಂತೆ ಎನ್ನುವಂಥ ಚಿತ್ರವಾದರೂ ಥಿಯೇಟರ್ಗಳು ಮಾತ್ರ ತುಂಬಿ ತುಳುಕುತ್ತಿವೆ. ಹಾಗಾಗಿ, ಇದು ಚಾರಣಕ್ಕೆ ಹೋಗಿ ಸತ್ತವರ ಕ್ಯಾಮೆರಾದಲ್ಲಿ ಸಿಕ್ಕ ವಿಡಿಯೋ ಕ್ಲಿಪ್ ಎಂಬ ಕಾರಣಕ್ಕೆ 6-52 ಸಿನಿಮಾ 'ಕ್ಲಿಕ್' ಆಗಿದೆ ಎನ್ನಬಹುದು.
- ಹ್ಯಾರಿ